ಬುಧವಾರ, ಏಪ್ರಿಲ್ 14, 2021
23 °C

25 ದಿನದಲ್ಲಿ ಕೇಂದ್ರಕ್ಕೆ ಯೋಜನಾ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಂಪಿಯಲ್ಲಿ `ಪಾರಂಪರಿಕ ನಗರ~ ನಿರ್ಮಾಣ, ಹೊಸಪೇಟೆಯ ಜೋಳದ ರಾಶಿಗುಡ್ಡಕ್ಕೆ `ಕೇಬಲ್ ಕಾರ್~ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ರಾಜ್ಯದ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆರ್ಥಿಕ ನೆರವು ನೀಡುವಂತೆ ಕೋರಿ 25 ದಿನಗಳ ಒಳಗೆ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು.ವಿಜಯನಗರ ಪ್ರತಿಷ್ಠಾನ ಟ್ರಸ್ಟ್‌ನವರು 80 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ `ಥೀಮ್ ಪಾರ್ಕ್~ ಪ್ರಸ್ತಾವ ರದ್ದಾಗಿದೆ. ಆ ಜಾಗದಲ್ಲಿ `ಪಾರಂಪರಿಕ ನಗರ~ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕೆ 50ರಿಂದ 100 ಕೋಟಿ ರೂಪಾಯಿ ವೆಚ್ಚವಾಗಲಿದೆ. ಶೇ 20ರಷ್ಟು ಹಣವನ್ನು ಕೇಂದ್ರ ನೀಡಲಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಇದು ಮನರಂಜನಾ ತಾಣದ ಮಾದರಿಯಲ್ಲಿ ಇರುತ್ತದೆ. ಶಾಪಿಂಗ್ ಕಾಂಪ್ಲೆಕ್ಸ್‌ಗೂ ಅವಕಾಶ ಕಲ್ಪಿಸಲಾಗುತ್ತದೆ. ಕೇಂದ್ರದ ಪ್ರವಾಸೋದ್ಯಮ ಸಚಿವ ಸುಬೋಧ್ ಕಾಂತ್ ಸಹಾಯ್ ಅವರನ್ನು ಈಚೆಗೆ ಭೇಟಿ ಮಾಡಿ, ರಾಜ್ಯದ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಸ್ತೃತ ಯೋಜನಾ ವರದಿ ಸಲ್ಲಿಸಲು ಸೂಚಿಸಿದ್ದಾರೆ ಎಂದು ಅವರು ಹೇಳಿದರು.ಜೋಳದ ರಾಶಿಗುಡ್ಡವನ್ನು ವಿವೇಕಾನಂದ ಟ್ರಸ್ಟ್‌ನಿಂದ ವಾಪಸ್ ಪಡೆದು, ಇಲಾಖೆ ವತಿಯಿಂದಲೇ ಅದನ್ನು ಅಭಿವೃದ್ಧಿಪಡಿಸಲಾಗುವುದು. ಅಲ್ಲಿ 36 ಅಡಿ ಎತ್ತರದ ವಿವೇಕಾನಂದರ ಪ್ರತಿಮೆ, ಧ್ಯಾನಮಂದಿರ ನಿರ್ಮಿಸುವುದರ ಜೊತೆಗೆ ಗುಡ್ಡಕ್ಕೆ `ಕೇಬಲ್ ಕಾರ್~ ಕಲ್ಪಿಸಲು ಚಿಂತನೆ ನಡೆದಿದೆ. ಇದನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ. ಇದಕ್ಕೆ 15 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದರು.ಕರಾವಳಿ ಭಾಗದ ಬೀಚ್‌ಗಳು, ರಾಜ್ಯದ ವಿವಿಧೆಡೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೂ ನೆರವು ಕೋರಲಾಗುವುದು. ಮೈಸೂರು ಅರಮನೆ, ಮುದ್ದೇನಹಳ್ಳಿ, ಬೇಲೂರು, ಶ್ರವಣಬೆಳಗೊಳ, ಹೊರನಾಡು, ಕಳಸ, ಕಾರ್ಕಳ, ಧರ್ಮಸ್ಥಳ, ಮೂಡುಬಿದಿರೆ, ವೇಣೂರು, ಗುಲ್ಬರ್ಗದ ಕೋಟೆ ಮತ್ತು ಖಾಜಾ ಬಂದೆ ನವಾಜ್ ದರ್ಗಾಗೆ ಮೂಲಸೌಕರ್ಯಗಳನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಗುಲ್ಬರ್ಗದ ಬುದ್ಧವಿಹಾರಕ್ಕೆ ಧ್ವನಿ ಮತ್ತು ಬೆಳಕಿನ ವ್ಯವಸ್ಥೆ ಮಾಡಲಾಗುವುದು. ವಿಜಾಪುರದಲ್ಲಿ `ಹೆಲಿ ಟ್ಯೂರಿಸಂ~ ಆರಂಭಿಸುವ ಉದ್ದೇಶವಿದೆ ಎಂದರು.ಕಬಿನಿ, ಬಂಡೀಪುರ, ಭೀಮೇಶ್ವರಿ ಮತ್ತು ದುಬಾರೆಯಲ್ಲಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು. ಶ್ರೀರಂಗಪಟ್ಟಣ, ಮೇಲುಕೋಟೆ ದೇವಾಲಯಗಳ ಪರಂಪರೆಯನ್ನು ಕಾಪಾಡುವುದರ ಜೊತೆಗೆ ಅಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು. ಗಗನಚುಕ್ಕಿ ಭಾಗದಲ್ಲೂ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.ಖಾಸಗಿಯವರಿಗೆ ಹೋಟೆಲ್‌ಗಳ ಗುತ್ತಿಗೆ

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 31 ಹೋಟೆಲ್‌ಗಳನ್ನು ಈಗಾಗಲೇ ಖಾಸಗಿಯವರಿಗೆ ಗುತ್ತಿಗೆಗೆ ನೀಡಿದೆ. ಸದ್ಯ 18 ಹೋಟೆಲ್‌ಗಳು ಕೆಎಸ್‌ಟಿಡಿಸಿ ಅಧೀನದಲ್ಲಿದ್ದು, ಕೆಲವೊಂದು ಸರಿಯಾಗಿ ನಡೆಯುತ್ತಿಲ್ಲ. ಅಂತಹ ಹೋಟೆಲ್‌ಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.31 ಹೋಟೆಲ್‌ಗಳನ್ನು ಖಾಸಗಿಯವರಿಗೆ ಗುತ್ತಿಗೆಗೆ ನೀಡಿದಾಗ ಮಾಡಿಕೊಂಡಿರುವ ಒಪ್ಪಂದದಲ್ಲಿ ಏನಾದರೂ ಲೋಪಗಳು ಆಗಿದ್ದರೆ, ಒಪ್ಪಂದವನ್ನು ರದ್ದುಪಡಿಸಲಾಗುವುದು. ಅಂತಹ ಪ್ರಕರಣಗಳು ಕಂಡುಬಂದರೆ ಒಪ್ಪಂದದ ಬಗ್ಗೆ ಪುನರ್ ಪರಿಶೀಲನೆ ನಡೆಸಲಾಗುವುದು ಎಂದರು.15 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಗುತ್ತಿಗೆಗೆ ನೀಡುವುದಿಲ್ಲ. ಕಾನೂನು ಇಲಾಖೆಯ ಸಲಹೆ ಪಡೆದು ಒಪ್ಪಂದದ ಕರಾರುಗಳನ್ನು ಅಂತಿಮಗೊಳಿಸಲಾಗುವುದು. ಎರಡೂವರೆ ತಿಂಗಳಲ್ಲಿ ಈ ಎಲ್ಲ ಪ್ರಕ್ರಿಯೆಗಳನ್ನು ಅಂತಿಮಗೊಳಿಸಿ ಒಪ್ಪಿಗೆಗಾಗಿ ಸಚಿವ ಸಂಪುಟದ ಮುಂದೆ ತರಲಾಗುವುದು ಎಂದು ತಿಳಿಸಿದರು.ಕೆಲವೊಂದು ಹೋಟೆಲ್‌ಗಳು ಸರಿಯಾಗಿ ನಡೆಯುತ್ತಿಲ್ಲ. ನಿರ್ವಹಣೆಯೂ ಸಮರ್ಪಕವಾಗಿಲ್ಲ. ಊಟಿಯಲ್ಲಿರುವ ಕೆಎಸ್‌ಟಿಡಿಸಿ ಹೋಟೆಲ್‌ನಿಂದ ವಾರ್ಷಿಕ 65 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಅದನ್ನು ಖಾಸಗಿಯವರಿಗೆ ನೀಡಿದರೆ ಆದಾಯ ದ್ವಿಗುಣವಾಗಲಿದೆ ಎಂದರು. `ಥೀಮ್ ಪಾರ್ಕ್~

ಮೈಸೂರು ಬಳಿಯ ಸುತ್ತೂರಿನಲ್ಲಿ `ಥೀಮ್ ಪಾರ್ಕ್~ ನಿರ್ಮಿಸುವಂತೆ ಸುತ್ತೂರು ಮಠದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಬಂದಿತ್ತು. ಇದಕ್ಕೆ ನೆರವು ಕೋರಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರ ನೆರವು ನೀಡಲು ಸಿದ್ಧವಿದೆ. ಆದರೆ ಇದಕ್ಕಾಗಿ ಗುರುತಿಸಿರುವ ಭೂಮಿಯನ್ನು ಹಸ್ತಾಂತರಿಸಬೇಕು ಎಂಬ ಷರತ್ತನ್ನು ಕೇಂದ್ರ ಸರ್ಕಾರ ವಿಧಿಸಿದೆ.ಈ ವಿಷಯವನ್ನು ಸುತ್ತೂರು ಮಠದ ಗಮನಕ್ಕೆ ತರಲಾಗಿದೆ. ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದಕ್ಕೆ 28 ಎಕರೆ ಜಾಗ ಬೇಕಾಗುತ್ತದೆ. ಥೀಮ್ ಪಾರ್ಕ್ ನಿರ್ಮಾಣಕ್ಕೆ 25ರಿಂದ 30 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.