ಮಂಗಳವಾರ, ಮೇ 24, 2022
27 °C

30ನೇ ದಿನಕ್ಕೆ ಕಾಲಿಟ್ಟ ಪ್ರತ್ಯೇಕ ತೆಲಂಗಾಣ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಐಎಎನ್ಎಸ್): ಆಂಧ್ರಪ್ರದೇಶದಿಂದ ಬಿಡಿಸಿ ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ರಚಿಸಬೇಕೆಂದು ಆಗ್ರಹಿಸಿ ತೆಲಂಗಾಣ ಪ್ರದೇಶದ ಜನತೆ ಆರಂಭಿಸಿರುವ ಅನಿರ್ದಿಷ್ಟ ಕಾಲದ ಹೋರಾಟ ಬುಧವಾರ 30 ದಿನಕ್ಕೆ ಕಾಲಿಟ್ಟಿದೆ. ಕೆಲವೆಡೆ ರಾಜ್ಯಸಾರಿಗೆ ಸಂಸ್ತೆ ಬಸ್ಸುಗಳು ರಸ್ತೆಗಿಳಿದಿದ್ದರೂ, ತೆಲಂಗಾಣದ ಬಹುತೇಕ ಜಿಲ್ಲೆಗಳಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ತೆಲಂಗಾಣ ಪ್ರದೇಶದ ಸರ್ಕಾರಿ ಉದ್ಯೋಗಿಗಳು ಚಳವಳಿಯಲ್ಲಿ ನಿರತರಾಗಿರುವುದರಿಂದ ಆಡಳಿತ ವ್ಯವಸ್ಥೆ ಕುಸಿದಿದೆ, ಜೊತೆಗೆ ಸಾರ್ವಜನಿಕ ಸ್ವಾಮ್ಯದ ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ಮಿಕರು ಪ್ರತ್ಯೇಕ ತೆಲಂಗಾಣ ಹೋರಾಟವನ್ನು ಬೆಂಬಲಿಸುತ್ತಿರುವುದರಿಂದ ಅಲ್ಲಿನ ಕಲ್ಲಿದ್ದಲಿನ ಉತ್ಪಾದನೆ ಸ್ಥಗಿತಗೊಂಡಿದೆ.

ಸರ್ಕಾರ ಚಳವಳಿ ನಿರತರೊಂದಿಗೆ ಮಾತುಕತೆ ನಡೆಸಲು ಮುಂದಾದರೂ, ಚಳವಳಿಯ ನೇತಾರರ ಮೇಲಿರುವ ಮೊಕದ್ದಮೆಗಳನ್ನು ವಾಪಾಸು ಪಡೆಯುವವರೆಗೆ ಮಾತುಕತೆಗೆ ತಾನು ಸಿದ್ಧವಿಲ್ಲ ಎಂದು  ತೆಲಂಗಾಣ ಉದ್ಯೋಗಿಗಳ ಜಂಟಿ ಕ್ರಿಯಾ ಸಮಿತಿ ಪಟ್ಟು ಹಿಡಿದಿದೆ.

~ಒಂದು ಕಡೆ ನಮ್ಮನ್ನು ಮಾತುಕತೆಗೆ ಆಹ್ವಾನಿಸುವ ಸರ್ಕಾರ ಇನ್ನೊಂದು ಕಡೆ ನಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದೆ. ಸದ್ಯದ ಪರಿಸ್ಥಿತಿ ಮಾತುಕತೆಗೆ ಪುರಕವಾಗಿಲ್ಲ~ ಎಂದು ಜಂಟಿ ಕ್ರಿಯಾ ಸಮಿತಿಯ ನಾಯಕ ಸ್ವಾಮಿ ಗೌಡ ಅವರು ಬುಧವಾರ ಇಲ್ಲಿ ಹೇಳಿಕೊಂಡಿದ್ದಾರೆ.

ಬುಧವಾರ ಮಧ್ಯಾಹ್ನ 12 ಗಂಟೆಗೆ ಮಾತುಕತೆಗೆ ಬನ್ನಿ ಎಂದು ಸರ್ಕಾರವು ಆಹ್ವಾನಿ ನೀಡಿತ್ತು. ಆದರೆ, ಬುಧವಾರ ಬೆಳಿಗ್ಗೆಯೇ ಸಭೆ ಸೇರಿದ್ದ ಜಂಟಿ ಕ್ರಿಯಾ ಸಮಿತಿಯು ಸರ್ಕಾರದ ಆಹ್ವಾನವನ್ನು ಸಾರಾಸಗಟಾಗಿ ತಿರಸ್ಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.