ಬುಧವಾರ, ಮಾರ್ಚ್ 3, 2021
31 °C
ಬಿಇಎಲ್‌ನಿಂದ ಹೊಸ ಮತಯಂತ್ರ

384 ಅಭ್ಯರ್ಥಿಗಳು ಸ್ಪರ್ಧಿಸಿದರೂ ಸಮಸ್ಯೆಯಿಲ್ಲ!

ಬಿ.ಎನ್.ಶ್ರೀಧರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

384 ಅಭ್ಯರ್ಥಿಗಳು ಸ್ಪರ್ಧಿಸಿದರೂ ಸಮಸ್ಯೆಯಿಲ್ಲ!

ಬೆಂಗಳೂರು: ಕಣದಲ್ಲಿರುವ ಅಭ್ಯರ್ಥಿ­ಗಳ ಸಂಖ್ಯೆ 384 ತಲುಪಿದರೂ ಚುನಾ­ವಣಾ­ಧಿಕಾರಿಗಳು ಇನ್ನು ಮುಂದೆ ಹೆಚ್ಚು ತಲೆಕೆ­ಡಿಸಿಕೊಳ್ಳುವುದಿಲ್ಲ! ಕಾರಣ, ಅದಕ್ಕೆ ಸರಿಹೊಂದುವಂತಹ ಸುಧಾರಿತ ತಂತ್ರಜ್ಞಾನದ ಎಲೆಕ್ಟ್ರಾನಿಕ್‌ ಮತ­ಯಂತ್ರಗಳನ್ನು (ಇವಿಎಂ) ಭಾರತ್‌ ಎಲೆ­ಕ್ಟ್ರಾನಿಕ್ಸ್‌ ಲಿಮಿಟೆಡ್ (ಬಿಇಎಲ್‌) ತಯಾರಿಸಿದೆ.ಪ್ರಸ್ತುತ ಒಂದು ನಿಯಂತ್ರಣ ಘಟಕಕ್ಕೆ (ಕಂಟ್ರೋಲ್ ಯೂನಿಟ್‌) ಕೇವಲ 4 ಮತ­-ಯಂತ್ರಗಳನ್ನು ಜೋಡಿಸಲು ಅವ­ಕಾಶ ಇದೆ. ಅಂದರೆ, ಗರಿಷ್ಠ 64 ಅಭ್ಯರ್ಥಿ­ಗಳಿಗೆ ಮಾತ್ರ ಅದು ಸರಿ­ಹೊಂದುತ್ತಿತ್ತು. ಅದಕ್ಕಿಂತ ಹೆಚ್ಚು ಮಂದಿ ಕಣದಲ್ಲಿ ಇದ್ದ ಸಂದರ್ಭಗಳಲ್ಲಿ ಮತ್ತೊಂದು ಕಂಟ್ರೋಲ್‌ ಯೂನಿಟ್‌ ಮೊರೆ ಹೋಗುವುದು ಅನಿವಾರ್ಯ­ವಾಗಿತ್ತು. ಇದು ಒಂದು ರೀತಿ ಚುನಾ­ವಣಾ­ಧಿ­ಕಾರಿಗಳಿಗೂ ಕಷ್ಟ ಆಗಿತ್ತು.

ಇದನ್ನು ತಪ್ಪಿಸುವ ಉದ್ದೇಶದಿಂದ ಒಂದೇ ಕಂಟ್ರೋಲ್ ಯೂನಿಟ್‌ಗೆ 24 ಎಲೆ­­ಕ್ಟ್ರಾನಿಕ್‌ ಮತಯಂತ್ರಗಳನ್ನು ಜೋಡಿ­ಸಲು ಅನುಕೂಲವಾಗುವ ಸುಧಾ­ರಿತ ಸಾಫ್ಟ್‌್‌ವೇರ್‌ ಅಭಿವೃದ್ಧಿ­ಪಡಿಸಲಾಗಿದೆ.ಒಂದು ಮತಯಂತ್ರದಲ್ಲಿ 16 ಅಭ್ಯರ್ಥಿ­ಗಳ ಹೆಸರು ಮತ್ತು ಚಿಹ್ನೆಗೆ ವ್ಯವಸ್ಥೆ ಇರುತ್ತದೆ. ಅದಕ್ಕಿಂತ ಹೆಚ್ಚಾ­ಗುತ್ತಾ ಹೋದ ಹಾಗೆ ಪ್ರತಿ 16 ಅಭ್ಯರ್ಥಿ­ಗಳಿಗೆ ಒಂದರಂತೆ ಹೆಚ್ಚುವರಿ ಮತ­ಯಂತ್ರಗಳ ಸಂಪರ್ಕ ಕಲ್ಪಿಸಬೇಕು. ಇಂತಹ 24 ಮತಯಂತ್ರಗಳನ್ನು ಒಂದೇ ಕಂಟ್ರೋಲ್‌ ಯೂನಿಟ್‌ಗೆ ಸಂಪರ್ಕ ಕಲ್ಪಿಸ­ಬಹುದು. ಅಂದರೆ ಒಂದು ಕ್ಷೇತ್ರ­ದಲ್ಲಿ ಗರಿಷ್ಠ 384 ಮಂದಿ ಸ್ಪರ್ಧಿ­ಸಿ­ದರೂ ಒಂದೇ ಕಂಟ್ರೋಲ್‌ ಯೂನಿಟ್‌­ನಲ್ಲಿ ಎಲ್ಲರ ಮತಗಳು ದಾಖಲಾಗುವ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ಮುಖ್ಯ ಚುನಾವಣಾಧಿಕಾರಿ ಅನಿಲ್‌ ಕುಮಾರ್‌ ಝಾ.‘ಇಂತಹ ವಿನೂತನ ಮತಯಂತ್ರ­ಗಳನ್ನು ಇದೇ ಮೊದಲ ಬಾರಿಗೆ ರಾಜ್ಯದ 21 ಜಿಲ್ಲೆಗಳಲ್ಲಿ ಬಳಸಲಾಗುತ್ತಿದೆ. ಲೋಕ­ಸಭಾ ಚುನಾವಣೆಗಾಗಿ ಒಟ್ಟು 78,890 ಮತಯಂತ್ರಗಳನ್ನು ಬಳಸ­ಲಾಗುತ್ತಿದೆ. ಅವುಗಳಲ್ಲಿ 48,970 ಹೊಸ ಮತಯಂತ್ರಗಳು ಸೇರಿವೆ. ಉಳಿದ ಕಡೆ ಹಳೇ ಮತಯಂತ್ರಗಳನ್ನು ಬಳಸ­ಲಾಗುವುದು. ಹಳೆ ಯಂತ್ರ ಬಳಸಿ­ದರೂ ಯಾವುದೇ ಸಮಸ್ಯೆ ಇಲ್ಲ’ ಎಂದು ಅವರು ಸ್ಪಪ್ಟಪಡಿಸಿದರು.ಸುರಕ್ಷತಾ ಕ್ರಮಗಳು: ಈಗಿರುವುದರ ಜತೆಗೆ ಇನ್ನೂ ಹೆಚ್ಚಿನ ಸುರಕ್ಷತಾ ಕ್ರಮ­ಗಳನ್ನು ಹೊಸ ಕಂಟ್ರೋಲ್‌ ಯೂನಿಟ್‌ ತಯಾರಿಸು­ವಾಗ ಕೈಗೊಳ್ಳಲಾಗಿದೆ. ಕಂಟ್ರೋಲ್‌ ಯೂನಿಟ್‌ನ ಸ್ಕ್ರೂ ಬಿಚ್ಚಿದರೂ ಸ್ಥಗಿತಗೊಳ್ಳುವ ಹಾಗೂ ಬೇರೆ ಯಾವುದೇ (ಬಿಇಎಲ್‌ನ ನಿರ್ದಿಷ್ಟ  ಉಪ­ಕರಣಗಳನ್ನು ಹೊರತುಪಡಿಸಿ) ಪಿನ್‌ ಅಥವಾ ಉಪಕರಣಗಳ ಮೂಲಕ ಅದನ್ನು ತೆರೆಯಲು ಪ್ರಯತ್ನಿಸಿದರೂ ಕಾರ್ಯ ನಿಲ್ಲಿಸುವ  ವ್ಯವಸ್ಥೆ ಈ ಅತ್ಯಾ­ಧುನಿಕ ಯಂತ್ರದಲ್ಲಿದೆ.ಇವಿಷ್ಟೇ ಅಲ್ಲದೆ, ಯಾವುದೇ ವಸ್ತು­ವಿನಿಂದ ಅದಕ್ಕೆ ರಂಧ್ರ ಕೊರೆದರೂ ಅದು ತನ್ನ ಕಾರ್ಯನಿರ್ವಹಣೆಯನ್ನು ಸ್ಥಗಿತ­ಗೊಳಿಸುತ್ತದೆ. ಅದರ ನಂತರ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ.ಪ್ರತಿ ಬಾರಿ ಆನ್‌ ಮಾಡಿದಾಗಲೂ ಸುಸ್ಥಿತಿ­ಯಲ್ಲಿ ಇದೆಯೇ ಅಥವಾ ಇಲ್ಲವೇ ಎಂಬು­ದನ್ನು ತನ್ನಷ್ಟಕ್ಕೆ ತಾನೇ ಅದು ಪರೀಕ್ಷಿ­ಸುತ್ತದೆ. ಒಂದು ವೇಳೆ ದೋಷ ಇದ್ದರೂ ತೋರಿಸುತ್ತದೆ.ಇವಿಎಂಗಳ ಬ್ಯಾಟರಿ ಸಾಮರ್ಥ್ಯ­ವನ್ನು 48 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಹಾಗೆಯೇ ಅದರ ಸಾಮರ್ಥ್ಯವನ್ನು ಶೇಕಡಾ­ವಾರು ಪ್ರಮಾಣದ ಮೂಲಕ ತೋರಿ­ಸುವ ವ್ಯವಸ್ಥೆ ಕೂಡ ಹೊಸದರಲ್ಲಿ ಅಳ­ವಡಿಸಲಾಗಿದೆ ಎನ್ನುತ್ತಾರೆ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಜೀಯಾವುಲ್ಲಾ.

ಕೇಂದ್ರ ಚುನಾವಣಾ ಆಯೋಗದ ಸಲಹೆ ಮೇರೆಗೆ ಬಿಇಎಲ್‌ ಈ ಮತ ಯಂತ್ರ­ಗಳನ್ನು ಅಭಿವೃದ್ಧಿಪಡಿಸಿದ್ದು, ಕಂಟ್ರೋ­ಲ್‌ ಯೂನಿಟ್‌ನ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ.ಹೊಸ ಕಂಟ್ರೋಲ್‌ ಯೂನಿಟ್‌ಗಳ ಕಾರ್ಯ­ನಿರ್ವಹಣೆ ಬಗ್ಗೆ ಚುನಾವಣಾಧಿ­ಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದು­ ಅವರು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.