ಶುಕ್ರವಾರ, ಜುಲೈ 30, 2021
21 °C

5 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

5 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆ ಗುರಿ

ತುಮಕೂರು: ರಾಯಚೂರಿನ ಯೆರಮರಸ್, ಎಡ್ಲಾಪುರ್ ಹಾಗೂ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ಮುಂದಿನ 5 ವರ್ಷಗಳಲ್ಲಿ 5 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ರಾಜ್ಯದ ವಿದ್ಯುತ್ ಬೇಡಿಕೆ ಪೂರೈಸುವ ಸಲುವಾಗಿ ಬೃಹತ್ ಪ್ರಮಾಣದ ಶಾಖೋತ್ಪನ್ನ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿಎಲ್) ಮುಖ್ಯ ಎಂಜಿನಿಯರ್ ಎಂ.ಶಿವಮಲ್ಲು ತಿಳಿಸಿದರು.ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ ಹಮ್ಮಿಕೊಂಡಿದ್ದ ವಿದ್ಯುಚ್ಛಕ್ತಿ ಉತ್ಪಾದನೆ ಕುರಿತ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.`ಸೂಪರ್ ಕ್ರಿಟಿಕಲ್' ತಂತ್ರಜ್ಞಾನದ ಮೂಲಕ ಯೆರಮರಸ್‌ನಲ್ಲಿ 800 ಮೆಗಾವಾಟ್ ಸಾಮರ್ಥ್ಯದ ಎರಡು, ಬಿಟಿಪಿಎಸ್‌ನಲ್ಲಿ (ಬೊಕಾರೋ ಥರ್ಮಲ್ ಪವರ್ ಸ್ಟೇಷನ್) 700 ಮೆಗಾವಾಟ್ ಸಾಮರ್ಥ್ಯದ ಒಂದು ಘಟಕ ನಿರ್ಮಿಸಲಾಗುವುದು. ರಾಮನಗರ ಜಿಲ್ಲೆ ಬಿಡದಿ ಸಮೀಪ 700 ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ಸ್ಥಾವರ ನಿರ್ಮಾಣಕ್ಕೆ ಪರವಾನಗಿ ದೊರೆತಿದೆ. ಶೀಘ್ರವೇ ಯೋಜನೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.ರಾಜ್ಯದ ಶಾಖೋತ್ಪನ್ನ ಘಟಕಗಳಿಂದ ಅಲ್ಲದೇ ಛತ್ತೀಸ್‌ಗಡದಲ್ಲಿ 800 ಮೆಗಾವಾಟ್ ಸಾಮರ್ಥ್ಯದ 2 `ಪಿಟ್ ಹೆಡ್' ಘಟಕಗಳ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದೆ. ರಾಯಚೂರಿನ ಎಡ್ಲಾಪುರದಲ್ಲಿ 800 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ಆರಂಭಿಸಲು ಪರಿಸರ ಹಾಗೂ ಅರಣ್ಯ ಸಚಿವಾಲಯದ ಪರವಾನಗಿಗೆ ಕಾಯಲಾಗುತ್ತಿದೆ. ಅನುಮತಿ ಸಿಕ್ಕ ಕೂಡಲೇ ಯೋಜನೆ ಆರಂಭಿಸಲಾಗುವುದು ಎಂದರು.ಜಲವಿದ್ಯುತ್ ಯೋಜನೆಗಳ ಪೈಕಿ ಗುಂಡ್ಯಾದಲ್ಲಿ 200, ಶಿವನಸಮುದ್ರದಲ್ಲಿ 345 ಮೆಗಾವಾಟ್ ಸಾಮರ್ಥ್ಯದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ ಈ ಯೋಜನೆಗಳಿಗೆ ವಿವಿಧ ಸಂಸ್ಥೆಗಳಿಂದ ಇನ್ನೂ ಪರವಾನಗಿ ದೊರೆತಿಲ್ಲ ಎಂದು ಹೇಳಿದರು.1970ರಲ್ಲಿ ಕರ್ನಾಟಕ ವಿದ್ಯುತ್ ನಿಗಮವು 746 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿತ್ತು. ಪ್ರಸ್ತುತ ಇದು 6500 ಮೆಗಾವಾಟ್‌ಗೆ ಹೆಚ್ಚಳವಾಗಿದೆ ಎಂದರು.ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ವಿದ್ಯುತ್ ಗುಣಮಟ್ಟದಲ್ಲಿ ಬದಲಾವಣೆ ತರಲಾಗುವುದು. ಹೀಗಿರುವ ಹಳೆಯ ಯಂತ್ರೋಪಕರಣ ಬದಲಾಯಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಮೊದಲ ಹಂತದಲ್ಲಿ ಶರಾವತಿ ವಿದ್ಯುತ್ ಕೇಂದ್ರದಲ್ಲಿ 891 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದ್ದು, ಇದನ್ನು 1035 ಮೆಗಾವಾಟ್ ಉತ್ಪಾದನೆಗೆ ಏರಿಕೆ ಮಾಡಲಾಗುವುದು. ನಾಗ್‌ಝರಿ ವಿದ್ಯುತ್ ಕೇಂದ್ರದಲ್ಲಿ 810ರ ಬದಲಿಗೆ 900 ಮೆಗಾವಾಟ್‌ಗೆ ಹೆಚ್ಚಿಸಲಾಗುವುದು.ನಾಗ್‌ಝರಿಯಲ್ಲಿರುವ ಆರು ಘಟಕಗಳ ಪೈಕಿ ಈಗಾಗಲೇ ಐದನ್ನು ಮೇಲ್ದರ್ಜೆಗೇರಿಸಲಾಗಿದೆ. ಆರನೇ ಘಟಕದ ಉನ್ನತೀಕರಣ ಕಾರ್ಯ ಪ್ರಗತಿಯಲ್ಲಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ. ಎರಡನೇ ಹಂತದಲ್ಲಿ ಜಲವಿದ್ಯುತ್ ಸ್ಥಾವರಗಳ ನವೀಕರಣ ಹಾಗೂ ಆಧುನೀಕರಣ ಕಾರ್ಯ ಕೈಗೊಳ್ಳಲಾಗುವುದು ಎಂದು ಶಿವಮಲ್ಲು ತಿಳಿಸಿದರು.ಕಾರ್ಯಾಗಾರದಲ್ಲಿ ಸಿದ್ಧಾರ್ಥ ತಾಂತ್ರಿಕ ಕಾಲೇಜು ಆಡಳಿತಾಧಿಕಾರಿ ಪ್ರೊ.ಸಿ.ಎನ್.ನರಸಿಂಹಮೂರ್ತಿ, ಪ್ರಾಂಶುಪಾಲ ಡಾ.ಕೆ.ಎ.ಕೃಷ್ಣಮೂರ್ತಿ, ರಾಜೇಶ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.