ಸೋಮವಾರ, ಜನವರಿ 20, 2020
27 °C

6 ಪೊಲೀಸ್ ತರಬೇತಿ ಶಾಲೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

6 ಪೊಲೀಸ್ ತರಬೇತಿ ಶಾಲೆ ಆರಂಭ

ಯಲಹಂಕ: ಪೊಲೀಸ್‌ ತರಬೇತಿ ಸಾಮರ್ಥ್ಯ­ವನ್ನು ಸುಧಾರಿಸುವ ನಿಟ್ಟಿ­ನಲ್ಲಿ  ರಾಜ್ಯದಾದ್ಯಂತ ಆರು ನೂತನ ಪೊಲೀಸ್‌ ತರಬೇತಿ ಶಾಲೆಗಳನ್ನು ಆರಂಭಿ­ಸಲು ಚಿಂತನೆ ನಡೆಸಲಾಗಿದೆ ಎಂದು ಗೃಹಸಚಿವ ಕೆ.ಜೆ. ಜಾರ್ಜ್ ಹೇಳಿದರು.ಇಲ್ಲಿನ ಸಶಸ್ತ್ರ ಪೊಲೀಸ್‌ ತರಬೇತಿ ಶಾಲೆಯಲ್ಲಿ ನಡೆದ 28ನೇ ತಂಡದ ಸಶಸ್ತ್ರ ಪೊಲೀಸ್‌ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮ­ದಲ್ಲಿ ಗೌರವವಂದನೆ ಸ್ವೀಕರಿಸಿ ಮಾತ­ನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೆಂಗಳೂರು, ಚಿತ್ರದುರ್ಗ, ಮೈಸೂರು, ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮೂರು ವರ್ಷದ ಒಳಗೆ   ನೂತನ ಪೊಲೀಸ್‌ ತರಬೇತಿ ಶಾಲೆಗಳನ್ನು ತೆರೆ­ಯಲು ನಿರ್ಧರಿಸ ಲಾಗಿದೆ ಎಂದರು.ಪೊಲೀಸ್‌ ಇಲಾಖೆಗೆ ಹೊಸದಾಗಿ 8,500 ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಲಾಗುತ್ತಿದ್ದು, ಇದರಲ್ಲಿ ಶೇ.20­ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾ ಗುವುದು. ಅಲ್ಲದೆ ಗುಡ್ಡಗಾಡು ಮತ್ತು ಬುಡಕಟ್ಟು ಜನಾಂಗದವರಿಗೂ ನೇಮಕಾತಿಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ಪೊಲೀಸ್‌ ಮಹಾನಿರ್ದೇಶಕ­(ತರಬೇತಿ) ಕೆ.ಎಸ್‌.ಆರ್‌.ಚರಣ್‌ರೆಡ್ಡಿ ಮಾತನಾಡಿ, 28ನೇ ತಂಡದಲ್ಲಿ 455 ಸಶಸ್ತ್ರ ಪೊಲೀಸ್‌ ಪ್ರಶಿಕ್ಷಣಾರ್ಥಿಗಳಿದ್ದು, ಇದು ಈ ತರಬೇತಿಶಾಲೆಯ ಅತಿದೊಡ್ಡ ನಿರ್ಗಮನ ಪಥಸಂಚಲನವಾಗಿದೆ. ಇವರು ರಾಜ್ಯದ 12  ವಿವಿಧ ಘಟಕ­ಗಳಿಗೆ ಸೇರಿದವರಾಗಿದ್ದು, ಮುಂದೆ ಆಯಾ ಘಟಕಗಳ ಸಶಸ್ತ್ರ ಮೀಸಲು ಪಡೆಗಳಲ್ಲಿ ಸೇವೆ ಸಲ್ಲಿಸಲು ಸಿದ್ಧ­ರಾಗುತ್ತಾರೆ ಎಂದು ಹೇಳಿದರು.ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಹಾಗೂ ಫೈರಿಂಗ್‌ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸ­ಲಾಯಿತು. ಸದಾಶಿವ ಬಗಲಿ ಅವರಿಗೆ ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಲಾಲ್‌­ರುಖುಮಾ ಪಚಾವೋ, ಪೊಲೀಸ್‌ ಮಹಾನಿರ್ದೇಶಕ(ತರಬೇತಿ) ಸುಶಾಂತ್‌ ಮಹಾಪಾತ್ರ ಮತ್ತಿತರರು ಹಾಜರಿದ್ದರು.ತನಿಖೆ ಪ್ರಗತಿಯಲ್ಲಿ

ಎಟಿಎಂ ಕೇಂದ್ರದಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ­ದಂತೆ ತನಿಖೆ ಪ್ರಗತಿಯಲ್ಲಿದ್ದು, ಆರೋಪಿಯು ಹೊರರಾಜ್ಯದಲ್ಲಿ ತಲೆಮರೆಸಿ­ಕೊಂಡಿರು ವುದರಿಂದ ಆತನನ್ನು ಬಂಧಿಸಲು ವಿಳಂಬವಾಗುತ್ತಿದೆ ಎಂದು ಗೃಹಸಚಿವ ಜಾರ್ಜ್‌ ಹೇಳಿದರು.

ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ­ಯನ್ನು ಶೀಘ್ರದಲ್ಲೆ ಬಂಧಿಸುವ ನಿಟ್ಟಿನಲ್ಲಿ ಹೊರರಾಜ್ಯದ ಪೊಲೀಸರೊಂದಿಗೆ ರಾಜ್ಯ ಪೊಲೀಸರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)