ಭಾನುವಾರ, ಮಾರ್ಚ್ 7, 2021
22 °C
ಬಿಬಿಎಂಪಿ ಆಡಳಿತ ಸುಧಾರಣೆ ಕುರಿತ ಕಸ್ತೂರಿರಂಗನ್‌ ಸಮಿತಿ ವರದಿ

6 ವರ್ಷವಾದರೂ ಜಾರಿಗೆ ಬಾರದ ಶಿಫಾರಸುಗಳು

ಪ್ರಜಾವಾಣಿ ವಾರ್ತೆ/ದಯಾನಂದ Updated:

ಅಕ್ಷರ ಗಾತ್ರ : | |

6 ವರ್ಷವಾದರೂ ಜಾರಿಗೆ ಬಾರದ ಶಿಫಾರಸುಗಳು

ಬೆಂಗಳೂರು: ಬೆಂಗಳೂರು ಮಹಾನಗರದ ಆಡಳಿತ ಸುಧಾರಣೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು 2006ರ ನವೆಂಬರ್‌ ತಿಂಗಳಲ್ಲಿ ರಾಜ್ಯ ಸರ್ಕಾರ ಡಾ.ಕೆ. ಕಸ್ತೂರಿರಂಗನ್‌ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತ್ತು. ಸಮಿತಿ 2008ರ ಮಾರ್ಚ್‌ ತಿಂಗಳಲ್ಲಿ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿದೆ. ಆದರೆ, ವರದಿ ಸಲ್ಲಿಸಿ ಆರು ವರ್ಷವಾದರೂ ವರದಿ ಜಾರಿಯ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ.ನಗರದ ಮೂಲಸೌಕರ್ಯ ಸಮಸ್ಯೆಗಳು, ಸ್ಥಳೀಯ ಸಂಸ್ಥೆಗಳ ಸಮನ್ವಯ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಸಮಿತಿ ಅಧ್ಯಯನ ನಡೆಸಿತ್ತು. ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರ, ನಿವೃತ್ತ ಐಎಎಸ್‌ ಅಧಿಕಾರಿ ಶಿವರಾಮಕೃಷ್ಣನ್‌ ಸೇರಿದಂತೆ ಒಟ್ಟು ಐದು ಮಂದಿ ಸದಸ್ಯರ ಸಮಿತಿ ಈ ವರದಿ ನೀಡಿತ್ತು.ಈ ಹಿಂದೆಯೇ ರಾಜ್ಯ ಸರ್ಕಾರ ವರದಿ ಜಾರಿಗೆ ಪ್ರಯತ್ನ ನಡೆಸಿದ್ದರೆ, ಇಂದು ನಗರದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತೇನೋ. ಆದರೆ, ರಾಜ್ಯ ಸರ್ಕಾರ ವರದಿಯನ್ನು ನಿರ್ಲಕ್ಷಿಸಿದೆ. ವರದಿ ಜಾರಿಯ ಬಗ್ಗೆ ಇಂದಿಗೂ ಸರ್ಕಾರ ಗಂಭೀರವಾದ ಚಿಂತನೆ ನಡೆಸಿಲ್ಲ ಎಂಬುದು ನಗರ ಯೋಜನಾತಜ್ಞರ ಅನಿಸಿಕೆ.‘ಸಮಿತಿ ನೀಡಿರುವ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಸರ್ಕಾರ ಸೋತಿದೆ. ಈಗಲಾದರೂ ವರದಿಯ ಕಡೆಗೆ ಸರ್ಕಾರ ಕಣ್ತೆರೆದು ನೋಡಬೇಕು’ ಎಂಬುದು ಸಮಿತಿಯ ಸದಸ್ಯರಾಗಿದ್ದ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಡಾ.ಎ.ರವೀಂದ್ರ ಅವರ ಅಭಿಪ್ರಾಯ.ವರದಿ ಜಾರಿಯಾಗಿದ್ದರೆ:
ವರದಿ ಜಾರಿಯಾಗಿದ್ದರೆ ಮೇಯರ್‌ ನೇರ ಚುನಾವಣೆ ನಡೆದು, ಮೇಯರ್‌ ಅಧಿಕಾರ ಹೆಚ್ಚುತ್ತಿತ್ತು. ಇದರಿಂದ ನಗರದ ಅಭಿವೃದ್ಧಿಗೆ ಸಂಬಂಧಿಸಿದ ನಿರ್ಣಯಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ವಿಳಂಬವಾಗುತ್ತಿರಲಿಲ್ಲ. ತ್ಯಾಜ್ಯ ನಿರ್ವಹಣೆ, ರಸ್ತೆ ದುರಸ್ತಿ ಸೇರಿದಂತೆ ಮೂಲಸೌಕರ್ಯ ಸಮಸ್ಯೆ ಗಂಭೀರವಾಗುತ್ತಿರಲಿಲ್ಲ.ಪಾಲಿಕೆ ತನ್ನ ಆದಾಯ ಹಾಗೂ ವೆಚ್ಚವನ್ನು ತಾನೇ ಸರಿದೂಗಿಸಿಕೊಂಡು ಸ್ವಾಯತ್ತ ಸಂಸ್ಥೆಯಾಗುವ ಅನಿವಾರ್ಯ ಉಂಟಾಗುತ್ತಿತ್ತು. ಇದರಿಂದ ಪಾಲಿಕೆಯ ಆದಾಯ ಮೂಲಗಳಾದ ಆಸ್ತಿ ತೆರಿಗೆ, ವ್ಯಾಪಾರ ಪರವಾನಗಿ ಶುಲ್ಕ, ಪಾಲಿಕೆ ಕಟ್ಟಡಗಳ ಬಾಡಿಗೆಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕಾಗುತ್ತಿತ್ತು.ಬಿಡಿಎ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ ಇತರೆ ಸ್ಥಳೀಯ ಸಂಸ್ಥೆಗಳು ಬಿಬಿಎಂಪಿ ಜತೆಗೆ ಸಮನ್ವಯದಲ್ಲಿ ಕಾರ್ಯ ನಿರ್ವಹಿಸುವುದು ಅನಿವಾರ್ಯವಾಗುತ್ತಿತ್ತು. ಬೃಹತ್‌ ಕಾಮಗಾರಿಗಳ ಸಂದರ್ಭದಲ್ಲಿ ಈ ಎಲ್ಲ ಸಂಸ್ಥೆಗಳ ಮುಖ್ಯಸ್ಥರ ಸಭೆ ನಡೆಸಿದ್ದರೆ ಪದೇ ಪದೇ ರಸ್ತೆಗಳು ಹದಗೆಡುವುದು, ರಸ್ತೆಗಳನ್ನು ಅಗೆಯುವುದು, ಮಾರ್ಗ ಬದಲಾವಣೆ, ಸಂಚಾರ ದಟ್ಟಣೆ  ಮತ್ತಿತರ ಸಮಸ್ಯೆಗಳನ್ನು ತಗ್ಗಿಸಬಹುದಿತ್ತು.

ನಗರದ ಕೊಳೆಗೇರಿಗಳ ಅಭಿವೃದ್ಧಿಯಾಗಿ ಕೊಳೆಗೇರಿಗಳ ಜನರು ಸಾಮಾಜಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿತ್ತು. ಕೊಳೆಗೇರಿಗಳ ಜನರಲ್ಲಿ ನೈರ್ಮಲ್ಯದ ಬಗ್ಗೆ ಅರಿವು ಮೂಡುತ್ತಿತ್ತು. ನಗರದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತಿತ್ತು.ಮೆಟ್ರೊಪಾಲಿಟನ್‌ ಯೋಜನಾ ಸಮಿತಿ  ರಚನೆಯಾಗಿದ್ದರೆ, ಉತ್ಪಾದನಾ ಕ್ಷೇತ್ರ, ಮಾಹಿತಿ ತಂತ್ರಜ್ಞಾನ, ವಾಣಿಜ್ಯ, ರಿಯಲ್‌ ಎಸ್ಟೇಟ್‌, ಪರಿಸರ ವಿಜ್ಞಾನ, ಆರೋಗ್ಯ, ಶಿಕ್ಷಣ, ನಗರ ಯೋಜನೆ, ಕಾನೂನು ಕ್ಷೇತ್ರಗಳ ತಜ್ಞರ ಚಿಂತನೆ ನಗರದ ಅಭಿವೃದ್ಧಿಗೆ ಪೂರಕವಾಗುತ್ತಿತ್ತು. ನಗರದ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತಿತ್ತು.

ವರದಿ ಜಾರಿಗೆ ‘ಬಿ– ಪ್ಯಾಕ್‌’ ಸಂಘಟನೆಯ ಒತ್ತಾಯ

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಗರದ ಅಭಿವೃದ್ಧಿ ಬಗ್ಗೆ ಮಾತುಕತೆ ನಡೆಸಿದ ‘ಬಿ– ಪ್ಯಾಕ್‌’ ಸಂಘಟನೆಯ ಸದಸ್ಯರು ಕಸ್ತೂರಿ ರಂಗನ್‌ ವರದಿ ಜಾರಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

‘ಮೇಯರ್‌ ಅಧಿಕಾರಾವಧಿಯನ್ನು ಐದು ವರ್ಷಕ್ಕೆ ಹೆಚ್ಚಿಸಬೇಕು. ನಗರದ ಆಡಳಿತದಲ್ಲಿ ಮೇಯರ್‌ಗೆ ಸಹಾಯವಾಗಲು ವಿಶೇಷ ಅಧಿಕಾರಿಯನ್ನು ನೇಮಿಸಬೇಕು. ಸ್ವಾಯತ್ತ ಸಂಸ್ಥೆಯಾಗಿ ಮೆಟ್ರೊಪಾಲಿಟನ್‌ ಯೋಜನಾ ಸಮಿತಿ ರಚನೆಯಾಗಬೇಕು. ಎಲ್ಲ ಕಾಮಗಾರಿಗಳಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳ­ಬೇಕು’ ಎಂದು ಸಂಘಟನೆಯ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ತಿಳಿಸಿದ್ದಾರೆ.

‘ನಗರಕ್ಕೆ ಸಮರ್ಪಕ ಮೂಲ ಸೌಕರ್ಯ ಒದಗಿಸಬೇಕು. ಗುಂಡಿ ಮುಕ್ತ ರಸ್ತೆ­ಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.ನಗರದ ಕೆರೆಗಳನ್ನು ಕೊಳಚೆ ಮುಕ್ತಗೊಳಿಸಬೇಕು. ಎರಡನೇ ಹಂತದ ‘ನಮ್ಮ ಮೆಟ್ರೊ’ ಯೋಜನೆಗೆ ಚಾಲನೆ ನೀಡಬೇಕು. ಮಹಿಳೆಯರು ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಬೆಂಗಳೂರು ನಗರ ವಾಣಿಜ್ಯ ನಗರಿಯಾಗಿ ಅಂತರರರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ. ಹೀಗಾಗಿ ನಗರದ ಎಲ್ಲ ವಾಣಿಜ್ಯ ಕೇಂದ್ರಗಳನ್ನು ರಾತ್ರಿ 1 ಗಂಟೆಯವರೆಗೆ ತೆರೆಯಲು ಅವಕಾಶ ನೀಡಬೇಕು. ಕಸ್ತೂರಿ ರಂಗನ್‌ ವರದಿಯ ಎಲ್ಲ ಶಿಫಾರಸುಗಳನ್ನು ಸರ್ಕಾರ ವ್ಯವಸ್ಥಿತವಾಗಿ ಜಾರಿಗೆ ತರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.