ಭಾನುವಾರ, ಏಪ್ರಿಲ್ 11, 2021
32 °C

7,820 ಫಲಾನುಭವಿಗಳಿಗೆ ಮಡಿಲು ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ತಾಯಿ ಮತ್ತು ಮಗುವಿನ ಆರೋಗ್ಯಕರ ಬಾಣಂತನಕ್ಕಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಮಡಿಲು’ ಯೋಜನೆಯಡಿ ಜನವರಿ ಅಂತ್ಯದವರೆಗೆ ಜಿಲ್ಲೆಯ 7,820 ಫಲಾನುಭವಿಗಳಿಗೆ ಕಿಟ್ ವಿತರಿಸಲಾಗಿದೆ. ಬಡಕುಟುಂಬದ ಗರ್ಭಿಣಿಯರು ತಿಳಿವಳಿಕೆ ಕೊರತೆ ಹಾಗೂ ಆರ್ಥಿಕ ಕಾರಣಗಳಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗುವುದು ಕಡಿಮೆ. ಮನೆಯಲ್ಲಿಯೇ ಹೆರಿಗೆಗೆ ಒತ್ತು ನೀಡು ವುದರಿಂದ ತಾಯಿ-ಮಗು ರೋಗರುಜಿನಗಳಿಗೆ ತುತ್ತಾಗುವುದು ಸಹಜ. ಇದನ್ನು ತಪ್ಪಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಡಿಲು ಯೋಜನೆ ಅನುಷ್ಠಾನಗೊಂಡಿದೆ.ಸುರಕ್ಷಿತ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ಗ್ರಾಮೀಣರು ಬರುವಂತೆ ಉತ್ತೇಜಿಸುವುದು ಯೋಜನೆಯ ಮುಖ್ಯ ಗುರಿ. ಜತೆಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಿಸುವ ಉದ್ದೇಶವೂ ಇದೆ. ತಾಯಿ, ನವಜಾತ ಶಿಶುವಿನ ಆರೋಗ್ಯದ ರಕ್ಷಣೆ, ತಾಯಂದಿರ ಹಾಗೂ ಶಿಶುಮರಣ ಪ್ರಮಾಣ ತಗ್ಗಿಸುವುದು, ಕಡ್ಡಾಯವಾಗಿ ಮಗುವಿನ ಜನನ ನೋಂದಣಿ ಮಾಡಿಸುವ ಉದ್ದೇಶ ಹೊಂದಿದ್ದರೂ ನಿರೀಕ್ಷಿತ ಉದ್ದೇಶ ಈಡೇರುವಲ್ಲಿ ಸ್ವಲ್ಪ ತೊಡಕಾಗಿದೆ. ಇದಕ್ಕೆ ಗ್ರಾಮೀಣರಲ್ಲಿರುವ ಅರಿವಿನ ಕೊರತೆಯೇ ಮೂಲ ಕಾರಣ. ಮಡಿಲು ಕಿಟ್‌ನಲ್ಲಿ ಹೆರಿಗೆ ನಂತರದ 3 ತಿಂಗಳವರೆಗೆ ತಾಯಿ-ಮಗುವಿಗೆ ಅಗತ್ಯವಿರುವ ಹೊದಿಕೆ, ಟವೆಲ್, ರಬ್ಬರ್‌ಶೀಟ್, ಸ್ವೆಟರ್, ಕುಲಾವಿ, ಕಾಲುಚೀಲ, ಬೆಡ್‌ಶೀಟ್, ಸಾಬೂನು, ಪೌಡರ್, ಕೊಬ್ಬರಿ ಎಣ್ಣೆ ಸೇರಿದಂತೆ 18 ವಸ್ತುಗಳಿರುತ್ತವೆ.ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಅನುಷ್ಠಾನಗೊಂಡಿದೆ. ಕಳೆದ ಏಪ್ರಿಲ್‌ನಿಂದ 2011ರ ಜನವರಿ ಅಂತ್ಯದವರೆಗೆ ಒಟ್ಟು 7,820 ಮಡಿಲು ಕಿಟ್ ವಿತರಿಸಿರುವುದು ವಿಶೇಷ. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ಕಿಟ್ ನೀಡಲಾಗುತ್ತಿದೆ. ಕಿಟ್ ಪಡೆದವರಲ್ಲಿ 2,160 ಪರಿಶಿಷ್ಟ ಜಾತಿ ಹಾಗೂ 704 ಪರಿಶಿಷ್ಟ ವರ್ಗಕ್ಕೆ ಸೇರಿದ ಮಹಿಳೆಯರಿದ್ದಾರೆ. ಇತರೇ ವರ್ಗಕ್ಕೆ ಸೇರಿದ ಫಲಾನುಭವಿಗಳ ಸಂಖ್ಯೆ 4,956ರಷ್ಟಿದೆ.ಚಾಮರಾಜನಗರ ತಾಲ್ಲೂಕಿನಲ್ಲಿ 3,630 ಮಡಿಲು ಕಿಟ್ ವಿತರಿಸಲಾಗಿದೆ. ಇದರಲ್ಲಿ ಇತರೇ ವರ್ಗದವರು 2,278, ಪರಿಶಿಷ್ಟ ಜಾತಿ- 1,017 ಹಾಗೂ ಪರಿಶಿಷ್ಟ ವರ್ಗದ 335 ಫಲಾನುಭವಿಗಳಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 253 ಪರಿಶಿಷ್ಟ ಜಾತಿ ಹಾಗೂ 89 ಪರಿಶಿಷ್ಟ ಪಂಗಡ ಸೇರಿದಂತೆ 1,016 ಇತರೇ ವರ್ಗದ ಫಲಾನುಭವಿಗಳಿಗೆ ಕಿಟ್ ವಿತರಿಸಲಾಗಿದೆ.ಕೊಳ್ಳೇಗಾಲ ತಾಲ್ಲೂಕಿನಲ್ಲಿ 727 ಪರಿಶಿಷ್ಟ ಜಾತಿ, 184 ಪರಿಶಿಷ್ಟ ವರ್ಗ ಮತ್ತು ಇತರೇ ವರ್ಗದ 1,429 ಮಂದಿ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಯಳಂದೂರು ತಾಲ್ಲೂಕಿನಲ್ಲಿ ಇತರೇ ವರ್ಗದ 233 ಫಲಾನುಭವಿಗಳು, 163 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ 96 ಫಲಾನು ಭವಿಗಳಿಗೆ ಮಡಿಲು ಕಿಟ್ ಸೌಲಭ್ಯ ದಕ್ಕಿದೆ.ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯದ ದೃಷ್ಟಿಯಿಂದ ರೂಪಿಸಿರುವ ಈ ಯೋಜನೆಯ ಸೌಲಭ್ಯ ಎರಡು ಮಕ್ಕಳ ಹೆರಿಗೆ ಸಂದರ್ಭದಲ್ಲಿ ಮಾತ್ರ ಸಿಗಲಿದೆ. ಬಡತನ ರೇಖೆಗಿಂತ ಕೆಳಗಿರುವ, ಜನನಿ ಸುರಕ್ಷಾ ಯೋಜ ನೆಯ ಕಾರ್ಡ್ ಹೊಂದಿದ ಫಲಾನುಭವಿಗಳು ಯೋಜನೆಯ ಸೌಲಭ್ಯ ಪಡೆಯಬಹುದು. ಉಪ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯರು ಮುಂಚಿತವಾಗಿಯೇ ಈ ಯೋಜನೆಯಡಿ ನೋಂದಾಯಿಸಿಕೊ ಳ್ಳಬೇಕು. ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಯ ಸೌಲಭ್ಯ ಪಡೆಯಬೇಕು ಎಂಬುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನವಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.