ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಿಂದ ಹೊಲವೆಲ್ಲಾ ರಸ

Last Updated 18 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ದಿಢೀರ್ ಲಾಭಗಳಿಸುವ ಧಾವಂತದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಔಷಧಿ, ಗೊಬ್ಬರಗಳನ್ನು ತಂದು ಭೂಮಿಗೆ ಸುರಿಯುವುದು, ಯಂತ್ರಗಳಿಂದ ನಿರಂತರ ಉಳುಮೆ ಮಾಡುವುದು, ಪ್ರತಿಯೊಂದಕ್ಕೂ ಕೂಲಿಕಾರ್ಮಿಕರನ್ನು  ಅವಲಂಬಿಸುವಂಥ ಪದ್ಧತಿಗೆ ಜೋತು ಬೀಳದೆ ನಿಸರ್ಗದ ನಿಯಮಗಳಿಗೆ ಬದ್ಧರಾಗಿ ತಾಳ್ಮೆಯಿಂದ ಕೃಷಿ ಕೈಗೊಂಡಲ್ಲಿ ಅತ್ಯಲ್ಪ ಖರ್ಚಿನ್ಲ್ಲಲೂ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಲಾಭಗಳಿಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದ ರೈತ ಬಿ.ಎನ್.ಎಂ. ಸ್ವಾಮಿ.

ಉಳುಮೆಯ ನೆಪದಲ್ಲಿ ಭೂಮಿಯನ್ನು ಅನಗತ್ಯವಾಗಿ ಛಿದ್ರಗೊಳಿಸುವುದರ ಮೂಲಕ ಕೃಷಿ ಕೈಗೊಳ್ಳುವುದು ಎಲ್ಲೆಡೆ ಸಾಮಾನ್ಯ. ಆದರೆ ಯಾರ ನೆರವೂ ಇಲ್ಲದೆ, ಗೊಬ್ಬರ ಹಾಕುವವರಿಲ್ಲದೆ ಸದೃಢವಾಗಿ ಬೆಳೆಯುವ ಅರಣ್ಯದ ಗಿಡ ಮರಗಳ ನೈಸರ್ಗಿಕ ಬೆಳವಣಿಗೆಯನ್ನು ಆಧರಿಸಿದ ನೈಸರ್ಗಿಕ ಕೃಷಿ ಪದ್ಧತಿಯ ಹರಿಕಾರರಾದ ಫುಕುವೋಕಾ ಹಾಗೂ ಸುಭಾಷ್ ಪಾಳೇಕಾರ್ ಇವರಿಗೆ ಸ್ಫೂರ್ತಿ.

ತಮಗೆ ಸೇರಿದ 6 ಎಕರೆ ಭೂಮಿಯಲ್ಲಿ ಶೂನ್ಯ ಬಂಡವಾಳ ಅಥವಾ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಅಡಿಕೆ, ಬಾಳೆ, ಪಪ್ಪಾಯಿ, ನುಗ್ಗೆ, ತೆಂಗು ಮುಂತಾದ ಸಮ್ಮಿಶ್ರ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯುತ್ತಿದ್ದಾರೆ. ಇದುವರೆಗೂ ಯಾವುದೇ ಗೊಬ್ಬರ, ಔಷಧಿಗಳನ್ನು ಬಳಸದೆ ಪ್ರತಿ ವರ್ಷ 25 ಸಾವಿರ ರೂಪಾಯಿಯವರೆಗೆ ಖರ್ಚು ಮಾಡುವ ಮೂಲಕ 6ಎಕರೆಯಲ್ಲಿ ಎಲ್ಲಾ ಬೆಳೆಗಳಿಂದ ರೂ 8 ಲಕ್ಷದಿಂದ 9 ಲಕ್ಷ ಲಾಭ ಗಳಿಸುತ್ತಾ ಯಶಸ್ವಿ ಹಾಗೂ ಮಾದರಿ ರೈತರಾಗಿದ್ದಾರೆ.

3 ಸಾವಿರ ಅಡಿಕೆ, 3 ಸಾವಿರ ಬಾಳೆ, 1500 ನುಗ್ಗೆ , ಕೊಕ್ಕೊ ಹಾಗೂ ಅಂಚಿನಲ್ಲಿ ಸಿಲ್ವರ್ ಓಕ್, ತೇಗ, ಬೇವು, ತೆಂಗು, ಗ್ಲಿರಿಸೀಡಿಯಾ ಸೇರಿದಂತೆ ಸುಮಾರು 10 ಸಾವಿರ ಗಿಡಗಳು ತೋಟವನ್ನು ಆವರಿಸಿಕೊಂಡಿವೆ.

ಔಷಧಕ್ಕೆ ಕಡಿವಾಣ

ಮಣ್ಣು, ಗೊಬ್ಬರ ಅಥವಾ ಔಷಧಿ ಸೇರಿದಂತೆ ಹೊರಗಿನಿಂದ ಯಾವುದೇ ವಸ್ತುವನ್ನು ಅನಗತ್ಯವಾಗಿ ತಂದು ಭೂಮಿಗೆ ಸುರಿಯುವುದಿಲ್ಲ. ತೋಟದ ಅಡಿಕೆ ದಬ್ಬೆ, ತೆಂಗಿನ ಮಟ್ಟೆ, ಗರಿ, ಹುಲ್ಲು, ಕಳೆಗಿಡಗಳು, ಉದುರಿದ ಎಲೆ, ಕಸ ಸೇರಿದಂತೆ ಯಾವುದೇ ತ್ಯಾಜ್ಯವನ್ನೂ ಹೊರಗೆ ಹಾಕುವುದಿಲ್ಲ. ಎಲ್ಲಾ ತ್ಯಾಜ್ಯಗಳು ಯಾವುದೇ ಹಸ್ತಕ್ಷೇಪವಿಲ್ಲದೇ ಇದ್ದಲ್ಲಿಯೇ ಕ್ರಮೇಣ ಕೊಳೆತು ಗೊಬ್ಬರವಾಗಬೇಕು ಎನ್ನುವುದು ಸ್ವಾಮಿ ಅವರ ಅನುಭವದ ಮಾತು.

ಅಡಿಕೆ ಹಾಗೂ ಬಾಳೆ ಗಿಡಗಳಿಗೆ ಹನಿ ನೀರಾವರಿಯ ಮೂಲಕ ಬೇಸಿಗೆಯಲ್ಲಿ ಮಾತ್ರ ಹಿತಮಿತವಾಗಿ ನೀರು ಹಾಯಿಸಲಾಗುತ್ತದೆ. ಮನೆಯಲ್ಲಿ ಸಾಕಿರುವ ಒಂದು ನಾಟಿ ಹಸುವಿನ ಸಗಣಿ, ಗಂಜಲ ಮತ್ತು ಕೃಷಿ ತ್ಯಾಜ್ಯಗಳನ್ನು ಜಲ್ಲಿ, ಮರಳಿನಿಂದ ವಿಶೇಷವಾಗಿ ನಿರ್ಮಿಸಿದ ಒಂದು ತೊಟ್ಟಿಯಲ್ಲಿ ಶೇಖರಿಸಲಾಗುತ್ತದೆ. ತಿಂಗಳಿಗೊಮ್ಮೆ ಬೆಲ್ಲ ಮತ್ತು ದ್ವಿದಳ ಧಾನ್ಯದ ಹಿಟ್ಟಿನ ಹದವಾದ ಮಿಶ್ರಣದಿಂದ ಜೀವಾಮೃತ ತಯಾರಿಸಿ ಹನಿ ನೀರಾವರಿ ಮೂಲಕ ತೋಟದ ಎಲ್ಲಾ ಬೆಳೆಗಳಿಗೆ ಪೂರೈಸುವ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಗಿಡಗಳಿಗೆ ಅಗತ್ಯ ಪೋಷಕಾಂಶ ಲಭ್ಯವಾಗುತ್ತದೆ. ಭೂಮಿಯಲ್ಲಿ ಸೂಕ್ಷ್ಮಾಣುಗಳ ವೃದ್ಧಿಗೂ ಕಾರಣವಾಗುತ್ತದೆ ಎನ್ನುತ್ತಾರೆ ಬಿ.ಎನ್.ಸ್ವಾಮಿ.

ಇಂದು ಕಸ ನಾಳೆ ರಸ...

ತೋಟಕ್ಕೆ ಭೇಟಿ ನೀಡುವ ಕೆಲವರು ಎಲ್ಲೆಂದರಲ್ಲಿ ಬಿದ್ದಿರುವ ಅಡಿಕೆ, ತೆಂಗಿನ ಗರಿ, ಮಟ್ಟೆಗಳನ್ನು ಕಂಡು ಇಡೀ ತೋಟವೇ ಕಸದ ತಿಪ್ಪೆ ಆಗಿದೆಯಲ್ಲಾ ಎಂದು ಪ್ರಶ್ನಿಸುತ್ತಾರೆ. ಇಡೀ ಜಮೀನು ಕಸದ ತಿಪ್ಪೆ ಆಗಬೇಕು ಎನ್ನುವುದೇ ನನ್ನ ಉದ್ದೇಶ. ಇಂದಿನ ಕಸ ನಾಳೆಯ ರಸವಾಗಿ ಮಾರ್ಪಡುತ್ತದೆ. ಮಳೆಗಾಲದಲ್ಲಿ ಬೀಳುವ ಪ್ರತಿ ಹನಿ ನೀರೂ ಜಮೀನಿನಲ್ಲೇ ಇಂಗಿಸಲಾಗುತ್ತದೆ. ಹೀಗಾಗಿ ಇಡೀ ಹೊಲವನ್ನೇ ಅಕ್ಷರಶ: ಚೆಕ್‌ಡ್ಯಾಂ ಆಗಿ ಪರಿವರ್ತಿಸಲಾಗಿದೆ. ಮಳೆಗಾಲದ ಬಹುತೇಕ ದಿನಗಳಲ್ಲಿ ತೋಟದಲ್ಲಿ ನೀರು ಸಂಗ್ರಹವಾಗಿ ಎಲ್ಲಾ ಕೃಷಿ ತ್ಯಾಜ್ಯಗಳು ಕೊಳೆತು ಗೊಬ್ಬರವಾಗುತ್ತದೆ. ಭೂಮಿ ಹೂವಿನಂತೆ ಮೃದುವಾಗುತ್ತ ಹೋಗುತ್ತದೆ. ನೆಲ ಮಟ್ಟದಲ್ಲಿ ವಿವಿಧ ಜಾತಿಯ 30ರಿಂದ 40 ಸಸ್ಯಗಳು ಹಾಗೂ ಹುಲ್ಲಿನ ದಟ್ಟ ಬೆಳವಣಿಗೆಯಿಂದ ಹೊಲ ನೈಸರ್ಗಿಕವಾಗಿ ಮಲ್ಚಿಂಗ್ (ತೇವಾಂಶ ಹೊದಿಕೆ) ಆಗುತ್ತದೆ. ಮಣ್ಣಿನ ಆರ್ದ್ರತೆ ಹೆಚ್ಚುವುದರಿಂದ ಎರೆಹುಳುಗಳು ಉತ್ಪಾದನೆಯಾಗಿ ಇಡೀ ಭೂಮಿ ಎರೆಹುಳು ಉತ್ಪಾದನಾ ಘಟಕವಾಗಿ ಮಾರ್ಪಟ್ಟಿದೆ. ಹೀಗಾಗಿ ಹೊರಗಿನಿಂದ ಮಣ್ಣು, ಎರೆಹುಳು ಗೊಬ್ಬರ, ತಿಪ್ಪೆ ಗೊಬ್ಬರ ತರಬೇಕಾದ ಖರ್ಚೂ ಇಲ್ಲ.

ರಾಸಾಯನಿಕಗಳಿಂದ ಮುಕ್ತವಾದ ಗುಣಮಟ್ಟದ ಅಡಿಕೆ, ನುಸಿ ರಹಿತ ತೆಂಗು, ಸತ್ವಯುತ ನುಗ್ಗೆ ಮುಂತಾದ ತೋಟದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಇದೆ. ಖರೀದಿದಾರರು ನೇರವಾಗಿ ನಮ್ಮ ತೋಟಕ್ಕೆ ಬಂದು ಉತ್ತಮೆ ಬೆಲೆಗೆ ಉತ್ಪನ್ನ ಖರೀದಿಸುತ್ತಾರೆ ಎಂದರು.

6 ಎಕರೆ ಜಮೀನಿಗೆ 2 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಎರಡರಲ್ಲಿ ಕೇವಲ 2.5 ಇಂಚು ನೀರು ಇದ್ದು, 10 ಸಾವಿರ ಗಿಡಗಳಿಗೆ ನೀರುಣಿಸಲಾಗುತ್ತದೆ. ಡಿಸೆಂಬರ್‌ನಿಂದ ಮೇ ತಿಂಗಳವರೆಗೆ ಮಾತ್ರ ಕೊಳವೆಬಾವಿಗಳನ್ನು ಚಾಲನೆಯಲ್ಲಿಡಲಾಗುತ್ತದೆ. ವರ್ಷದಲ್ಲಿ 6 ತಿಂಗಳು ಕೊಳವೆಬಾವಿಗಳನ್ನು ಬಳಕೆ ಮಾಡುವುದಿಲ್ಲ. ಇದರಿಂದಾಗಿ 6 ತಿಂಗಳು ವಿದ್ಯುತ್ ಮತ್ತು ನೀರು ಉಳಿತಾಯವಾಗುತ್ತದೆ. ಮಿತ ಬಳಕೆಯಿಂದಾಗಿ ಕಳೆದ 18 ವರ್ಷಗಳಿಂದ ಪಂಪ್‌ಸೆಟ್ ಮೋಟಾರ್ ಕೈಕೊಟ್ಟಿಲ್ಲ ಎನ್ನುತ್ತಾರೆ ಅವರು.

ಸಂಪರ್ಕಕ್ಕೆ: 9448884309.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT