ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ, ಜನಗಣತಿ ಸುತ್ತ ಮುತ್ತ

ಸುದ್ದಿ ಹಿನ್ನೆಲೆ
Last Updated 12 ಜುಲೈ 2015, 19:35 IST
ಅಕ್ಷರ ಗಾತ್ರ

ಜುಲೈ 11ರಂದು (ಶನಿವಾರ) ಆಚರಿಸಲಾದ ವಿಶ್ವ ಜನಸಂಖ್ಯಾ ದಿನಾಚರ ಣೆಯ ದಿನ ಭಾರತದ ಒಟ್ಟು ಜನಸಂಖ್ಯೆ 127 ಕೋಟಿ (127,42,34,538) ದಾಟಿದೆ. ಇದು ವಿಶ್ವ ಜನಸಂಖ್ಯೆಯ ಶೇ 17.23ರಷ್ಟಿದೆ.  ರಾಷ್ಟ್ರೀಯ ಜನಸಂಖ್ಯಾ ಆಯೋಗ ಮತ್ತು ಅಮೆರಿಕದ ಜನಸಂಖ್ಯಾ ಮಂಡಳಿಯ ಮಾಹಿತಿ ಆಧರಿಸಿ  ಈ ಜನಸಂಖ್ಯೆಯ ಲೆಕ್ಕ ಹಾಕಲಾಗಿದೆ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, 2028ರ ಹೊತ್ತಿಗೆ ದೇಶದ ಜನಸಂಖ್ಯೆಯು ಚೀನಾದ ಜನಸಂಖ್ಯೆ ಯನ್ನು ಹಿಂದಿಕ್ಕಲ್ಲಿದೆ ಎಂದು ಅಂದಾಜಿಸಲಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ದೇಶದ ಜನಸಂಖ್ಯೆಯ ಬೆಳವಣಿಗೆ ದರವು ಗಮನಾರ್ಹ ಇಳಿಕೆ ಕಂಡಿರುವುದೂ ನಿಜ. 1991-2000ರಲ್ಲಿ ಶೇ 21.54ರಷ್ಟಿದ್ದ ಜನಸಂಖ್ಯೆ ಹೆಚ್ಚಳ ದರವು, 2001-11ರ ಅವಧಿಯಲ್ಲಿ ಶೇ 17.64ಕ್ಕೆ ಇಳಿದಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಬಹುತೇಕ ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ದರ ಸ್ಥಿರತೆ ಕಂಡಿದೆ. ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮಗಳಿಗೆ 1952ರಲ್ಲಿಯೇ ಚಾಲನೆ ನೀಡಲಾಗಿತ್ತು.   ವಿಶ್ವದ ಜನಸಂಖ್ಯೆಯು 1950ರಲ್ಲಿ 250 ಕೋಟಿಗಳಷ್ಟಿದ್ದರೆ, ಈಗ ಅದು 700 ಕೋಟಿಗಳಿಗೆ ತಲುಪಿದೆ. ಅಗಾಧ ಪ್ರಮಾಣದಲ್ಲಿ ಹೆಚ್ಚಳಗೊಂಡಿರುವ ಜನಸಂಖ್ಯೆಯು ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ.

700 ಕೋಟಿಗಳಷ್ಟು ಜನಸಂಖ್ಯೆಯು ವಿಶ್ವ ಸಮುದಾಯಕ್ಕೆ ಅನೇಕ ಸವಾಲುಗಳನ್ನೂ ಒಡ್ಡಿದೆ. ನಗರೀಕರಣ, ಸುಸ್ಥಿರತೆ, ಆರೋಗ್ಯ ಸೇವೆಗಳ ಲಭ್ಯತೆ ಮತ್ತು ಉದ್ಯೋಗ ಅವಕಾಶ ಮತ್ತಿತರ ಸಮಸ್ಯೆಗಳನ್ನೂ ತಂದೊಡ್ಡಿದೆ.

1989ರಲ್ಲಿ ನಿರ್ಧಾರ: ವಿಶ್ವ ಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಮಂಡಳಿಯ ಶಿಫಾರಸಿನ ಅನ್ವಯ, ಪ್ರತಿ ವರ್ಷದ ಜುಲೈ 11ರಂದು ವಿಶ್ವ ಜನಸಂಖ್ಯೆ ದಿನ ಆಚರಿಸಲು 1989ರಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ಜನಸಂಖ್ಯೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಉದ್ದೇಶಕ್ಕೆ ವಿಶ್ವದಾದ್ಯಂತ ಈ ದಿನ ಆಚರಿಸಿಕೊಂಡು ಬರಲಾಗುತ್ತಿದೆ.

ತುರ್ತು ಸಂದರ್ಭದಲ್ಲಿ ತೊಂದರೆಗೆ ಸಿಲುಕುವ ಜನರ ನೆರವಿಗೆ ಧಾವಿಸುವುದು ಈ ವರ್ಷದ ವಿಶ್ವ ಜನಸಂಖ್ಯಾ ದಿನದ ಮುಖ್ಯ ಧ್ಯೇಯವಾಗಿದೆ.
ವಿಶ್ವ ಸಂಸ್ಥೆಯ ಅಂದಾಜಿನ ಪ್ರಕಾರ, ವಿಶ್ವದಾದ್ಯಂತ ಸದ್ಯಕ್ಕೆ 6 ಕೋಟಿಗಳಷ್ಟು ಜನರು ಸಂತ್ರಸ್ತರಾಗಿದ್ದಾರೆ. ಈ ಸಂತ್ರಸ್ತರ ಹಕ್ಕು ಮತ್ತು ಅಗತ್ಯಗಳನ್ನು ಈಡೇರಿಸಲು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಘನತೆ ಕಾಪಾಡಿಕೊಳ್ಳಲು ನೆರವಿನ ಹಸ್ತ ಚಾಚಲು, ಅವರಿಗೆ ರಕ್ಷಣೆ ನೀಡಲು ಮತ್ತು ಆರೋಗ್ಯ ರಕ್ಷಿಸಲು ವಿಶ್ವಸಂಸ್ಥೆಯು ಹಲವಾರು ತುರ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಜಾತಿ ಗಣತಿ; ಯಾರಿಗೆ ಹೆದರಿಕೆ: ಇತ್ತೀಚೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಸಾಮಾಜಿಕ, ಆರ್ಥಿಕ ಜಾತಿ ಗಣತಿಯ ವಿವರಗಳ ಪೈಕಿ ಜಾತಿ ಗಣತಿಯ ಮಾಹಿತಿ ಬಹಿರಂಗ ಗೊಳಿಸದಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ರಾಜ್ಯ ಸರ್ಕಾರ ನಡೆಸಿರುವ ಜಾತಿ ಸಮೀಕ್ಷೆಯೂ ವ್ಯಕ್ತಿಗತ ಮಾಹಿತಿ ಸೋರಿಕೆಯ ವಿವಾದಕ್ಕೆ ಗುರಿಯಾಗಿತ್ತು.

ಸರ್ಕಾರಿ ಹುದ್ದೆಗಳಲ್ಲಿ ಮೇಲ್ಜಾತಿ ಜನರ ಪ್ರಾಬಲ್ಯ ಇರುವುದು ಬಹಿರಂಗಗೊಳ್ಳುವ ಭೀತಿಯಿಂದ ಕೇಂದ್ರ ಸರ್ಕಾರವು ಜಾತಿ ಗಣತಿ ವಿವರಗಳನ್ನು ಪ್ರಕಟಿಸಿಲ್ಲ ಎನ್ನುವ ಟೀಕೆ ಕೇಳಿ ಬರುತ್ತಿದೆ.

ಒಂದು ವೇಳೆ ಬಿಜೆಪಿ ನೇತೃತ್ವದ    ಎನ್‌ಡಿಎ ಸರ್ಕಾರವು ಈ ವಿವರಗಳನ್ನು ಪ್ರಕಟಿಸದಿದ್ದರೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅದು ಪಕ್ಷಕ್ಕೆ ಮುಳುವಾಗುವ ಸಾಧ್ಯತೆ ಇದೆ. ಜಾತಿ ವಿವರ ಬಹಿರಂಗಕ್ಕೆ ಒತ್ತಾಯಿಸಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಇದೇ ಸೋಮವಾರ ಪಟ್ನಾದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.

1931ರ ಜನಗಣತಿ ಮತ್ತು 1980ರ ಮಂಡಲ್‌ ಆಯೋಗದ ವರದಿ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಸಂಖ್ಯೆ ಶೇ 54ರಷ್ಟಿದೆ.  ಹೊಸ ಗಣತಿ ಪ್ರಕಾರ, ಈ ಹಿಂದುಳಿದ ವರ್ಗಗಳ ಸಂಖ್ಯೆ ಹೆಚ್ಚಿಗೆ ಇದ್ದರೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಹಜವಾಗಿಯೇ ಹೆಚ್ಚು ಪಾಲು ಕೇಳುವ ಕೂಗು ಇನ್ನಷ್ಟು ಬಲಗೊಳ್ಳುವ ಸಾಧ್ಯತೆ ಇದೆ. ಜಾತಿ ಗಣತಿ ವಿವರ ಬಹಿರಂಗಪಡಿಸದಿದ್ದರೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಮಾಣದಲ್ಲಿ ಪ್ರಾತಿನಿಧ್ಯ ಪಡೆಯುವ ಹಕ್ಕನ್ನು ನಿರಾಕರಿಸಿ ದಂತಾಗುತ್ತದೆ.

ಈ  ಜಾತಿ ಗಣತಿ ವಿವರ ಬಹಿರಂಗಪಡಿಸದಿರುವುದಕ್ಕೆ ಒಬಿಸಿ ಅಂಕಿ ಅಂಶಗಳಷ್ಟೆ ಕಾರಣವಲ್ಲ. ಮೇಲ್ಜಾತಿಗೆ ಸೇರಿದವರು  ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ವಿವರಗಳನ್ನು ಬಹಿರಂಗಗೊಳಿಸಬಾರದು ಎನ್ನುವುದು  ಸರ್ಕಾರದ ಇರಾದೆಯಾಗಿದೆ ಎಂದೂ ಅನುಮಾನಿಸಲಾಗಿದೆ. ಈ ವಿವರಗಳು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಶಂಕಿಸಲಾಗಿದೆ. ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಮೇಲ್ಜಾತಿಗಳಿಗೆ ಸೇರಿದ ಅಧಿಕಾರಶಾಹಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ಯಂತ್ರ ನಿಯಂತ್ರಿಸುತ್ತಿರುವುದು ಬಹಿರಂಗಗೊಳ್ಳಬಾರದು ಎನ್ನುವುದೂ   ಕೆಲವರ ಲೆಕ್ಕಾಚಾರ ಇದ್ದಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT