ಮಂಗಳವಾರ, ಮಾರ್ಚ್ 2, 2021
31 °C

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲವೇ ಇಲ್ಲ: ಜೇಟ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ‘ಐದು ವರ್ಷಗಳಲ್ಲಿ ದೇಶದಲ್ಲಿ ಯಾವುದೇ ರೀತಿಯ ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳು ನಡೆದಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳು ಉದ್ಯೋಗಗಳನ್ನು ಸೃಷ್ಟಿಸಿವೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

‘ಕೇಂದ್ರ ಸರ್ಕಾರವು ಉದ್ಯೋಗರಹಿತ ಆರ್ಥಿಕ ಅಭಿವೃದ್ಧಿಯನ್ನು ತೋರಿಸುತ್ತಿದೆ’ ಎಂಬ ಆರೋಪವನ್ನು ಈ ಮೂಲಕ ಜೇಟ್ಲಿ ತಿರಸ್ಕರಿಸಿದ್ದಾರೆ.

‘ನಮ್ಮ ಸರ್ಕಾರ ಬಂದಮೇಲೆ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಉದ್ಯೋಗ ಇಲ್ಲದಿದ್ದರೆ, ಖರ್ಚು ಮಾಡಲು ಜನರ ಬಳಿ ಹಣ ಎಲ್ಲಿಂದ ಬರಬೇಕು? ಹಣ ಖರ್ಚು ಮಾಡದೇ ಜನ ಸುಮ್ಮನೇ ತೆರಿಗೆ ಕಟ್ಟುತ್ತಾರೆಯೇ? ತೆರಿಗೆ ಸಂಗ್ರಹದಲ್ಲಿನ ಹೆಚ್ಚಳವೂ ಉದ್ಯೋಗ ಸೃಷ್ಟಿಯನ್ನು ಸೂಚಿಸುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘ನೋಟು ರದ್ದತಿಯ ನಂತರ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಏರಿಕೆಯಾಗಿದೆ ಎಂಬುದನ್ನು ಯಾರೂ ಒಪ್ಪಿಕೊಳ್ಳುತ್ತಿಲ್ಲ. ನೋಟು ರದ್ದತಿಗೂ ಮೊದಲು ದೇಶದಲ್ಲಿ ಪರ್ಯಾಯ ಆರ್ಥಿಕತೆ ಅಸ್ತಿತ್ವದಲ್ಲಿತ್ತು. ಪರ್ಯಾಯ ಆರ್ಥಿಕತೆಯ ವಹಿವಾಟು ಜಿಡಿಪಿಯಲ್ಲಿ ದಾಖಲಾಗುತ್ತಿರಲಿಲ್ಲ. ಆದರೆ ನೋಟು ರದ್ದತಿಯ ನಂತರ ಆ ಎಲ್ಲಾ ಹಣ ಬ್ಯಾಂಕ್‌ಗಳಿಗೆ ಜಮೆಯಾಯಿತು. ನಂತರ ದೇಶದಲ್ಲಿ ನಡೆಯುವ ಪ್ರತಿ ವಹಿವಾಟೂ ದಾಖಲಾಯಿತು. ಹೀಗಾಗಿಯೇ ಜಿಡಿಪಿ ಏರಿಕೆಯಾಗಿದೆ’ ಎಂದು ವಿವರಿಸಿದ್ದಾರೆ.

‘ದೇಶದಲ್ಲಿ ಈಗ ಯಾವುದೇ ಸಮಸ್ಯೆ ಇಲ್ಲ. ಹೀಗಾಗಿಯೇ ವಿರೋಧ ಪಕ್ಷಗಳು ‘ನಕಲಿ ಸಮಸ್ಯೆ’ಗಳನ್ನು ಸೃಷ್ಟಿಸುತ್ತಿವೆ. ರಫೇಲ್‌ ಹಗರಣವು ಒಂದು ನಕಲಿ ಸಮಸ್ಯೆ’ ಎಂದರು.

ಖರ್ಗೆ ಬಗ್ಗೆ ಅಸಮಾಧಾನ: ‘ಎಲ್ಲದಕ್ಕೂ ಪದೇ–ಪದೇ ಅಸಮ್ಮತಿ ಸೂಚಿಸುವುದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭ್ಯಾಸವಾಗಿ ಹೋಗಿದೆ’ ಎಂದು ಅರುಣ್ ಜೇಟ್ಲಿ ಲೇವಡಿ ಮಾಡಿದ್ದಾರೆ.

ಸಿಬಿಐ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ಅವರ ಆಯ್ಕೆಗೆ ಅಸಮ್ಮತಿ ಸೂಚಿಸಿ ಪ್ರಧಾನಿ ಮೋದಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರ ಬರೆದಿದ್ದರು. ಆ ಅಸಮ್ಮತಿಯ ಬಗ್ಗೆ ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಿಬಿಐ ನಿರ್ದೇಶಕರಾಗಿ ಅಲೋಕ್‌ ವರ್ಮಾ ಅವರನ್ನು ಆಯ್ಕೆ ಮಾಡಿದಾಗಲೂ ಖರ್ಗೆ ಅದಕ್ಕೆ ಅಸಮ್ಮತಿ ಸೂಚಿಸಿದ್ದರು. ವರ್ಮಾ ಅವರನ್ನು ರಜೆ ಮೇಲೆ ಕಳುಹಿಸಿದಾಗಲೂ ಖರ್ಗೆ ತಕರಾರು ಮಾಡಿದ್ದರು. ವರ್ಮಾ ಅವರನ್ನು ವಜಾ ಮಾಡಿದಾಗಲೂ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ನೂತನ ನಿರ್ದೇಶಕರ ನೇಮಕಕ್ಕೂ ಅಸಮ್ಮತಿ ಸೂಚಿಸುತ್ತಿದ್ದಾರೆ’ ಎಂದು ಜೇಟ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೈತರ ನೆರವು ಏರಿಕೆ ಸಾಧ್ಯತೆ
ಈ ಬಜೆಟ್‌ನಲ್ಲಿ ರೈತರಿಗೆ ಘೋಷಿಸಿರುವ ತಿಂಗಳ ನೆರವು ₹ 500ರನ್ನು (ವಾರ್ಷಿಕ ₹ 6,000) ಏರಿಕೆ ಮಾಡಬಹುದು ಎಂದು ಜೇಟ್ಲಿ ಹೇಳಿದ್ದಾರೆ.

‘ನಾವೀಗ ತಿಂಗಳಿಗೆ ₹ 500 ಘೋಷಿಸಿದ್ದೇವೆ. ಆಯಾ ರಾಜ್ಯ ಸರ್ಕಾರಗಳೂ ಈ ₹ 500 ಜತೆಗೆ ತಮ್ಮ ಕೊಡುಗೆಯನ್ನೂ ನೀಡಬಹುದು. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಬಳಿ ಸಂಪನ್ಮೂಲ ಹೆಚ್ಚಾದರೆ ತಿಂಗಳ ನೆರವನ್ನು ಮತ್ತಷ್ಟು ಏರಿಕೆ ಮಾಡಬಹುದು’ ಎಂದು ಅವರು ಹೇಳಿದ್ದಾರೆ.

ಬಜೆಟ್ ಚರ್ಚೆಗೆ ಗೈರು
ಮಧ್ಯಂತರ ಬಜೆಟ್ ಮೇಲಿನ ಚರ್ಚೆಯಲ್ಲಿ ಅರುಣ್ ಜೇಟ್ಲಿ ಅವರು ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಇದೆ.

ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಅವರು ಅಮೆರಿಕದಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮಧ್ಯಂತರ ಹಣಕಾಸು ಸಚಿವ ಪೀಯೂಷ್ ಗೋಯಲ್ ಅವರು ಬಜೆಟ್ ಮಂಡಿಸಿದ್ದರು.

‘ಚಿಕಿತ್ಸೆ ಪೂರ್ಣಗೊಂಡಿದೆ. ಆದರೆ ಆರೋಗ್ಯದಲ್ಲಿ ಸುಧಾರಣೆಯಾಗಬೇಕಿದೆ. ವೈದ್ಯರು ಅನುಮತಿ ನೀಡುವವರೆಗೆ ಹಿಂದಿರುಗುವುದು ಸಾಧ್ಯವಿಲ್ಲ. ಗೋಯಲ್ ಅವರೇ ಬಜೆಟ್ ಮೇಲಿನ ಚರ್ಚೆಯನ್ನು ನಿರ್ವಹಿಸಲಿದ್ದಾರೆ’ ಎಂದು ಜೇಟ್ಲಿ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು