ರಾಜಕೋಟ್: ಚೆಂಡಿಗೆ ಸಾಕಷ್ಟು ತಿರುವು ನೀಡುತ್ತಿದ್ದ ಪಿಚ್‌ನಲ್ಲಿ ಸ್ಪಿನ್ನರ್ ಸೌರಭ್ ಕುಮಾರ್ ಅವರನ್ನು ಆಡಲು ಸೌರಾಷ್ಟ್ರ ಆಟಗಾರರು ಪರದಾಡಿದರು. ಅವರು ಪಂದ್ಯದಲ್ಲಿ 10 ವಿಕೆಟ್ ಕೂಡ ಪೂರೈಸಿದರು. ಭಾರತ ಇತರೆ ತಂಡ ಮಂಗಳವಾರ ರಣಜಿ ಟ್ರೋಫಿ ಚಾಂಪಿಯನ್ ಸೌರಾಷ್ಟ್ರ ತಂಡವನ್ನು ಮೂರೇ ದಿನಗಳ ಒಳಗೆ 175 ರನ್‌ಗಳಿಂದ ಸೋಲಿಸಿ ಇರಾನಿ ಕಪ್ ಗೆದ್ದುಕೊಂಡಿತು.
ಮಂಗಳವಾರ 21 ವಿಕೆಟ್‌ಗಳು ಉರುಳಿದವು. ಇಂಥ ಪಿಚ್‌ನಲ್ಲಿ ಗೆಲುವಿಗೆ 255 ರನ್‌ಗಳ ‘ದೊಡ್ಡ ಗುರಿ’ ಎದುರಿಸಿದ ಸೌರಾಷ್ಟ್ರ 34.3 ಓವರುಗಳಲ್ಲಿ ಕೇವಲ 79 ರನ್‌ಗಳಿಗೆ ಉರುಳಿತು.
ಭಾರತ ‘ಎ’ ತಂಡದ ಸ್ಪಿನ್ನರ್ ಆಗಿರುವ ಸೌರಭ್ 108 ರನ್ನಿಗೆ 10 ವಿಕೆಟ್ (64ಕ್ಕೆ4 ಮತ್ತು 43ಕ್ಕೆ 6) ಪಡೆದು ಮಿಂಚಿದರು. ಅವರ ಸಾಧನೆಯೆದುರು 147 ರನ್ನಿಗೆ 12 ವಿಕೆಟ್ ಪಡೆದ ಪಾರ್ಥ ಭುತ್ ಅವರ ಅಮೋಘ ಪ್ರದರ್ಶನ (94ಕ್ಕೆ5 ಮತ್ತು 53ಕ್ಕೆ7) ಮಸುಕಾಗಿಹೋಯಿತು. ಪಂದ್ಯದಲ್ಲಿ 40 ವಿಕೆಟ್‌ಗಳ ಪೈಕಿ 33 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದವು.
ಸೋಮವಾರ 9 ವಿಕೆಟ್‌ಗೆ 212 ರನ್ ಗಳಿಸಿದ್ದ ಸೌರಾಷ್ಟ್ರ ಆ ಮೊತ್ತಕ್ಕೆ ಎರಡು ರನ್ ಸೇರಿಸಿತು. 94 ರನ್‌ಗಳ ಮಹತ್ವದ ಮುನ್ನಡೆ ಪಡೆದ ಇತರೆ ತಂಡ ಎರಡನೇ ಇನಿಂಗ್ಸ್‌ನಲ್ಲಿ 160 ರನ್‌ಗಳಿಗೆ ಕುಸಿಯಿತು. ಆರಂಭ ಆಟಗಾರರಾದ ಸಾಯಿ ಸುದರ್ಶನ್ (43) ಮತ್ತು ಮಯಂಕ್ ಅಗರವಾಲ್ (49) ಅವರ 85 ರನ್ ಜೊತೆಯಾಟದಿಂದ ಉತ್ತಮ ಅಡಿಪಾಯ ಪಡೆದ ಒಂದು ಹಂತದಲ್ಲಿ 1 ವಿಕೆಟ್‌ಗೆ 117 ರನ್ ಗಳಿಸಿತ್ತು. ನಂತರ ಭುತ್ ಸ್ಪಿನ್ ದಾಳಿಗೆ ಸಿಲುಕಿತು. ಏಳು ಮಂದಿ ಎರಡಂಕಿಯನ್ನೂ ಗಳಿಸಲಿಲ್ಲ.
ಸೌರಾಷ್ಟ್ರ ಎರಡನೇ ಇನಿಂಗ್ಸ್‌ನಲ್ಲಿ ಸೌರಭ್ ಅವರನ್ನು ಎದುರಿಸಲು ಒದ್ದಾಡಿತು. ಕೆಲವು ಎಸೆತಗಳು ಕೆಳಮಟ್ಟದಲ್ಲಿ ಹೊರಳಿದರೆ, ಮತ್ತೆ ಕೆಲವು ಪುಟಿದೆದ್ದವು. ಧರ್ಮೇಂದ್ರ ಸಿನ್ಹ ಜಡೇಜ ಗಳಿಸಿದ 21 ರನ್‌ಗಳೇ ತಂಡದ ಪರ ಅತ್ಯಧಿಕ ಎನಿಸಿತು.
ಸಂಕ್ಷಿಪ್ತ ಸ್ಕೋರುಗಳು: 1ನೇ ಇನಿಂಗ್ಸ್: ಭಾರತ ಇತರೆ ತಂಡ: 308, ಸೌರಾಷ್ಟ್ರ: 83.2 ಓವರುಗಳಲ್ಲಿ 214; ಎರಡನೇ ಇನಿಂಗ್ಸ್: ಭಾರತ ಇತರೆ ತಂಡ: 52 ಓವರುಗಳಲ್ಲಿ 160 (ಮಯಂಕ್ ಅಗರವಾಲ್ 49, ಎನ್.ಸಾಯಿ ಸುದರ್ಶನ್ 43; ಪಾರ್ಥ ಭುತ್ 53ಕ್ಕೆ7); ಸೌರಾಷ್ಟ್ರ: 34.3 ಓವರುಗಳಲ್ಲಿ 34.3 ಓವರುಗಳಲ್ಲಿ 79 (ಧರ್ಮೇಂದ್ರ ಸಿನ್ಹ ಜಡೇಜ 21; ಸೌರಭ್ ಕುಮಾರ್ 43ಕ್ಕೆ6, ಶಮ್ಸ್ ಮುಲಾನಿ 22ಕ್ಕೆ 3)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.