ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್‌ ಎನ್‌ಫೀಲ್ಡ್ ಹಿಮಾಲಯನ್‌ ಆಫ್‌ ರೋಡರ್‌ಗೆ ಹೊಸ ಸ್ಪರ್ಶ

ರಾಯಲ್‌ ಎನ್‌ಫೀಲ್ಡ್‌ನ ಹೊಸ ಹಿಮಾಲಯನ್ ; ಬಿಎಸ್6 ಅವರಣಿಕೆ ವಿಶೇಷ
Last Updated 18 ಮಾರ್ಚ್ 2020, 19:30 IST
ಅಕ್ಷರ ಗಾತ್ರ

‘ರಾಯಲ್‌ ಎನ್‌ಫೀಲ್ಡ್’ ಎಂದಾಕ್ಷಣ ಕಣ್ಣ ಮುಂದೆ ಬರುವುದು ಬುಲೆಟ್ ಬೈಕ್‌ನ ದೃಶ್ಯ. ಕಿವಿಯಲ್ಲಿ ಅನುರಣಿಸುವುದು ಢಗ್‌ ಢಗ್ ಎಂಬ ಸದ್ದು. ಅದೇ ಈ ಬೈಕ್‌ಗಳ ಹಿರಿಮೆ. ದೃಢವಾದ ದೇಹ, ಶ್ರೇಷ್ಠ ಸುರಕ್ಷೆ, ಅಧಿಕ ಕಾರ್ಯಕ್ಷಮತೆ ಇದರ ವಿಶೇಷಗಳು. ಕಾಲಕ್ಕೆ ತಕ್ಕಂತೆ ಸುಧಾರಣೆಗಳನ್ನು ಮಾಡಿಕೊಂಡು ಬರುತ್ತಿರುವ ರಾಯಲ್‌ ಎನ್‌ಫೀಲ್ಡ್, ತನ್ನ ಆಫ್‌ ರೋಡರ್‌ ‘ಹಿಮಾಲಯನ್‌’ ಬೈಕ್‌ನ್ನು ಮತ್ತಷ್ಟು ಸುಧಾರಿಸಿದೆ. ಬಿಎಸ್6 ಅವತರಣಿಕೆಯನ್ನು ಇದೀಗ ತಾನೇ ಬಿಡುಗಡೆಗೊಳಿಸಿದೆ.

‘ಹಿಮಾಲಯನ್‌’ ರಾಯಲ್‌ ಎನ್‌ಫೀಲ್ಡ್‌ನ ಪ್ರಥಮ ‘ಸಿಗ್ನೇಚರ್‌ ಬೈಕ್‌’. ಸಿಗ್ನೇಚರ್‌ ಬೈಕ್‌ ಎಂದರೆ ಕೆಲವು ವಿಶೇಷಗಳಿರುತ್ತವೆ. ಬೇರೆಲ್ಲ ಬೈಕ್‌ ಕಂಪನಿಗಳು ತಯಾರಿಸುವ ಬೈಕ್‌ಗಳಿಗಿಂತ ವಿಭಿನ್ನ ನೋಟ, ಕಾರ್ಯಕ್ಷಮತೆ, ಸೌಂದರ್ಯ ಈ ಬೈಕ್‌ಗಳಿಗಿರುತ್ತವೆ. ‘ಹಿಮಾಲಯನ್‌’ ಬೈಕ್‌ 2016ರಲ್ಲಿ ಬಿಡುಗಡೆಯಾದಾಗ ಅದು ರಾಯಲ್‌ ಎನ್‌ಫೀಲ್ಡ್‌ನ ಪ್ರಥಮ ‘ಆಫ್‌ ರೋಡ್‌’ ಬೈಕ್‌ ಆಗಿತ್ತು.

ಬಿಎಸ್‌6 ಮಾನದಂಡಕ್ಕೆ ಅನುಗುಣವಾಗಿ ರಾಯಲ್‌ ಎನ್‌ಫೀಲ್ಡ್‌ ಬಿಎಸ್‌6 ಅವತರಣಿಕೆಯ ‘ಹಿಮಾಲಯನ್‌’ ಬೈಕ್‌ನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಬೈಕ್‌ನ್ನು ‘ಪ್ರಜಾವಾಣಿ’ ಟೆಸ್ಟ್ ಡ್ರೈವ್‌ ಮಾಡಿದ್ದು, ಪರಿಪೂರ್ಣ ಮಾಹಿತಿ ಇಲ್ಲಿದೆ.

ಅದೇ ವಿಶ್ವಾಸಾರ್ಹತೆ, ಹೊಸ ಸೌಲಭ್ಯ: ಬೈಕ್‌ನ ದೇಹದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿಲ್ಲ. ಕೆಲವು ತಾಂತ್ರಿಕ ಬದಲಾವಣೆಗಳು ಹೊಸ ಬೈಕ್‌ನಲ್ಲಿ ಕಾಣಸಿಗುತ್ತವೆ.

ಬೈಕ್‌ನ ಸೈಡ್‌ ಸ್ಟ್ಯಾಂಡ್‌ ಬಗ್ಗೆ ‘ಹಿಮಾಲಯನ್‌’ ಬಳಕೆದಾರರು ಆಗಾಗ ಒಂದು ದೂರು ಹೇಳುತ್ತಿದ್ದರು. ಅದೆಂದರೆ, ಸೈಡ್ ಸ್ಟ್ಯಾಂಡ್ ಕೊಂಚ ಉದ್ದ ಹೆಚ್ಚಾಯಿತು ಎಂದು. ಇದನ್ನು ಪುರಸ್ಕರಿಸಿರುವ ಕಂಪನಿಯು ಸ್ಟ್ಯಾಂಡ್ ಉದ್ದವನ್ನು ಕೊಂಚ ತುಂಡರಿಸಿದೆ. ನಾವು ಬೈಕ್‌ ಹತ್ತಿ ಕೂರುವಾಗ ಹಿಂದಿನ ಬೈಕ್‌ಗಿಂತ ಸುಲಭವಾಗಿ ಕೂರಬಹುದು ಅನ್ನಿಸಿತು.

ಹಿಮಾಲಯನ್‌ ಬೈಕ್‌ ಸೈಡ್‌ ಸ್ಟ್ಯಾಂಡ್ ಹಾಕಿರುವಾಗ ಬೈಕ್‌ ಗಿಯರ್‌ಗೆ ಬೀಳುವುದಿಲ್ಲ. ಸ್ಟ್ಯಾಂಡ್‌ ಹಾಕಿದ್ದು, ಗಿಯರ್‌ಗೆ ಹಾಕಿದರೆ ಎಂಜಿನ್‌ ಬಂದ್‌ ಆಗುತ್ತದೆ. ಇದು ಎರಡು ಕಾರಣಗಳಿಗೆ ಹೆಚ್ಚು ಅನುಕೂಲಕರ. ಬೈಕ್‌ ಚಾಲನೆಯಾದಾಗ ಅವಘಡ ಆಗುವುದನ್ನು ತಪ್ಪಿಸಲು. ಸೈಡ್‌ ಸ್ಟ್ಯಾಂಡ್‌ ಇನ್ನು ಹಾಕಿಯೇ ಇದೆ ಎನ್ನುವುದನ್ನು ತಿಳಿಸಲು.

ಎಂಜಿನ್‌ ಕಾರ್ಯಕ್ಷಮತೆ: 411 ಸಿಸಿ ಏರ್‌ ಕೂಲ್ಡ್‌ ಎಂಜಿನ್‌ ಹೊಸ ಹಿಮಾಲಯನ್‌ ಬೈಕ್‌ನಲ್ಲಿದೆ. ಆದರೆ, ಇದಕ್ಕೆ ರೇಡಿಯೇಟರ್‌ ಸಹ ನೀಡಲಾಗಿದೆ. ಅಂದರೆ, ಎಂಜಿನ್‌ ತಣ್ಣಗಿಡಲು ಇದರಲ್ಲಿ ಹೆಚ್ಚುವರಿ ಸೌಲಭ್ಯ ನೀಡಲಾಗಿದೆ ಎಂದರ್ಥ. ಬೈಕ್‌ನ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ನ ಪರದೆಯಲ್ಲಿ ಎಂಜಿನ್‌ ತಾಪಮಾನವನ್ನು ತೋರಿಸುವ ಸೌಲಭ್ಯವಿದೆ.

ಕಡಿಮೆ ವೇಗದಲ್ಲಿ ಬೈಕ್‌ ಹೆಚ್ಚಿನ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ. ಅಂದರೆ ಬೈಕ್‌ಗೆ ಅತ್ಯುತ್ತಮ ಟಾರ್ಕ್‌ ಇದೆ ಎಂದರ್ಥ. 32 ನ್ಯೂಟನ್‌ ಮೀಟರ್‌ (4,000– 4,500 ಆರ್‌ಪಿಎಂ) ಬೈಕ್‌ಗೆ ಇದೆ. ಇದರಿಂದ ಬೈಕ್‌ ಕಡಿಮೆ ವೇಗಕ್ಕೆ ಬಂದಾಗ, ನಾಲ್ಕು ಅಥವಾ ಐದನೇ ಗಿಯರ್‌ನಲ್ಲಿ ಇದ್ದರೂ ಬೈಕ್‌ ಜರ್ಕ್‌ ಆಗುವುದಿಲ್ಲ. ಎಂಜಿನ್‌ ಬಂದ ಸಹ ಆಗುವುದಿಲ್ಲ. 17.88 ಕಿಲೊವಾಟ್ (6,500 ಆರ್‌ಪಿಎಂ) ಶಕ್ತಿ ಬೈಕ್‌ಗೆ ಇದೆ. ಇದು ಬಿಎಸ್‌4 ಅವತರಣಿಕೆಯಲ್ಲೂ ಇಷ್ಟೇ ಇದೆ. 411 ಸಿಸಿ ಎಂಜಿನ್‌ಗೆ ಇದು ಹದವಾದ ಮಿಶ್ರಣ. ಅತ್ಯಂತ ಕಚ್ಚಾ ರಸ್ತೆಯಲ್ಲಿ ಕಡಿಮೆ ವೇಗದಲ್ಲಿ ಹಳ್ಳ ಕೊಳ್ಳಗಳನ್ನು ಹತ್ತಿ ಇಳಿಸುವಾಗ ಇದು ಹೆಚ್ಚಿನ ಸ್ಥಿರತೆಯನ್ನು ಬೈಕ್‌ಗೆ ನೀಡುತ್ತದೆ.

ಹೊಸ ಸೌಲಭ್ಯ: ಬಿಎಸ್‌6 ಅವತರಣಿಗಾಗಿ ಹೊಸ ಸೌಲಭ್ಯಗಳನ್ನು ಹಿಮಾಲಯನ್ ಪಡೆದಿದೆ. ಹಿಂದಿನ ಅವತರಣಿಕೆಯಲ್ಲೂ ‘ಆ್ಯಂಟಿ ಕಾಲ್ ಬ್ರೇಕಿಂಗ್‌ ಸಿಸ್ಟಂ’ (ಎಬಿಎಸ್‌) ಇತ್ತು. ಆದರೆ, ಈ ಅವತರಣಿಕೆಯಲ್ಲಿ ಬದಲಿಸಿಕೊಳ್ಳಬಲ್ಲ ‘ಎಬಿಎಸ್‌’ ನೀಡಲಾಗಿದೆ. ಎಬಿಎಸ್‌ ಬೈಕ್‌ನ ಎರಡೂ ಚಕ್ರಗಳಿಗೆ ಇದೆ. ಎಬಿಎಸ್ ಬಳಕೆಗಾಗಿ ಬ್ರೇಕ್‌ನ ಡಿಸ್ಕ್‌ ಬ್ರೇಕ್‌ ಬಳಿ ಅಯಸ್ಕಾಂತೀಯ ಸಂವೇದಕಗಳನ್ನು ಅಳವಡಿಸಲಾಗಿರುತ್ತದೆ. ಬೈಕ್‌ ಸವಾರ ಬ್ರೇಕ್‌ ಹಾಕಿದ ಕೂಡಲೇ ಚಕ್ರ ತಿರುಗುತ್ತಿರುವ ವೇಗವನ್ನು ಗಮನಿಸುವ ಈ ಸೆನ್ಸರ್‌ಗಳು ಬೈಕ್‌ ಹಿಡಿಯುವಂತೆ ಮಾಡುತ್ತವೆ. ಆದರೆ, ಚಕ್ರ ತಿರುಗುವುದನ್ನು ಇದು ನಿಲ್ಲಿಸುವುದಿಲ್ಲ. ಹಾಗಾಗಿ, ಚಾಲಕ ಬೈಕ್‌ನ ದಿಕ್ಕನ್ನು ಬದಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಗ ಸಂಭವಿಸುಬಹುದಾದ ‍ಅ‍ಪಘಾತಗಳನ್ನು ತಪ್ಪಿಸಬಹುದು. ಹೊಸ ಹಿಮಾಲಯನ್‌ನಲ್ಲಿ ಎಬಿಎಸ್‌ನ್ನು ಬಂದ್ ಮಾಡುವ ಸೌಲಭ್ಯ ಇದೆ. ಅದು, ಹಿಂದಿನ ಚಕ್ರಕ್ಕೆ ಮಾತ್ರ. ಆಫ್‌ ರೋಡ್‌ ಚಾಲನೆ ಮಾಡುವಾಗ ಎಬಿಎಸ್ ಬೇಕಿರುವುದಿಲ್ಲ. ಏಕೆಂದರೆ ವೇಗ ತೀರಾ ಕಡಿಮೆ ಇರುತ್ತದೆ. ಅದರಲ್ಲೂ ಹಿಂದಿನ ಚಕ್ರಕ್ಕೆ ಅಗತ್ಯ ಇರುವುದಿಲ್ಲ. ಹಾಗಾಗಿ, ಎಬಿಎಸ್‌ ಆಫ್‌ ಮಾಡಿದ ಕೂಡಲೇ ಹಿಂದಿನ ಚಕ್ರಕ್ಕೆ ಹೆಚ್ಚಿನ ಬಲ ಸಿಗುತ್ತದೆ.

ಜತೆಗೆ, ಬಿಎಸ್‌6 ವಿಶೇಷ ಎನ್ನುವಂತೆ, ಬೈಕ್‌ನ ಇಗ್ನಿಷನ್‌ ಆನ್‌ ಮಾಡಿದ ಕೂಡಲೇ ಹೆಡ್‌ ಲೈನ್ ಆಗುತ್ತದೆ. ಜತೆಗೆ, ಈ ಅವತರಣಿಕೆಯಲ್ಲಿ ಹಜಾರ್ಡ್ ದೀಪವನ್ನೂ ನೀಡಲಾಗಿದೆ. ಬೈಕ್‌ನ ಎಂಜಿನ್‌ ಬಂದ್ ಆದ ಕೂಡಲೇ ಇಗ್ನಿಷನ್ ಆಫ್‌ ಮಾಡುವುದು ಒಳಿತು. ಇಲ್ಲವಾದರೆ ದೀಪ ಉರಿಯುತ್ತಲೇ ಇರುತ್ತದೆ. ಬ್ಯಾಟರಿ ಬಹುಬೇಗ ಖಾಲಿ ಆಗುತ್ತದೆ.

ಬೈಕ್‌ನ ದೇಹವು ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ಬೈಕ್‌ನಲ್ಲಿ ಲಗೇಜ್‌ ಕೊಂಡೊಯ್ಯಲು ಅನುಕೂಲವಾಗುವಂತೆ ವಿನ್ಯಾಸವಿದೆ. ಹಿಂಬದಿಯಲ್ಲಿ ಒಟ್ಟು ಮೂರು ಬಾಕ್ಸ್‌ ಜೋಡಿಸಲು ಅವಕಾಶವಿದೆ. ಮುಂಭಾಗದಲ್ಲಿ ಬಟ್ಟೆ ಬ್ಯಾಗ್‌ಗಳನ್ನು ಜೋಡಿಸಿಕೊಳ್ಳಲು ಸೌಲಭ್ಯ ನೀಡಲಾಗಿದೆ.‌ ರಾಯಲ್‌ ಎನ್‌ಫೀಲ್ಡ್‌ ಎಂದಾಕ್ಷಣ ತೀರಾ ಗಡಸು ಎಂಜಿನ್‌ ಎಂಬ ಸಾಮಾನ್ಯ ಭಾವನೆ ಇದ್ದದ್ದೇ. ಹಿಮಾಲಯನ್‌ ಅದಕ್ಕೆ ವ್ಯತಿರಿಕ್ತವಾಗಿದೆ. ಅತ್ಯಂತ ಶಕ್ತಿಶಾಲಿ ಎಂಜಿನ್‌ ಇದ್ದರೂ, ಹೆಚ್ಚು ಕಂಪನವಿಲ್ಲದ ಸರಾಗ ಚಾಲನೆ ಸಿಗುತ್ತದೆ. ಇದರಿಂದ ನೂರಾರು ಕಿಲೋಮೀಟರ್‌ ಚಾಲನೆ ಮಾಡಿದರೂ ಸುಸ್ತಾಗುವುದಿಲ್ಲ.

ಮೈಲೇಜ್‌ ಸಮಾಧಾನಕರ: ಉತ್ತಮ 32 ಕಿಲೋಮೀಟರ್‌ ಮೈಲೇಜ್‌ ಪ್ರತಿ ಲೀಟರ್ ಪೆಟ್ರೋಲ್‌ಗೆ ಸಿಗುತ್ತದೆ. 15 ಲೀಟರ್‌ ಪೆಟ್ರೋಲ್‌ ಟ್ಯಾಂಕ್‌ ಇದ್ದು, 480 ಕಿಲೋಮೀಟರ್ ಪಯಣಿಸಬಹುದು.

ರಾಯಲ್‌ ಎನ್‌ಫೀಲ್ಡ್ ಹಿಮಾಲಯನ್‌ ಬೆಂಗಳೂರು ಎಕ್ಸ್ ಷೋರೂಂ ಬೆಲೆ ₹ 1.66 ಲಕ್ಷದಿಂದ 1.83 ಲಕ್ಷವಿದೆ. ಹಣಕ್ಕೆ ತಕ್ಕ ಮೌಲ್ಯ ಬೈಕ್‌ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT