ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 Kia Seltos | 32 ಸುರಕ್ಷಾ ಸೌಕರ್ಯವುಳ್ಳ ಹೊಸ ಸೆಲ್ಟೋಸ್ ಬಿಡುಗಡೆ

Published 4 ಜುಲೈ 2023, 8:26 IST
Last Updated 4 ಜುಲೈ 2023, 8:26 IST
ಅಕ್ಷರ ಗಾತ್ರ

ನವದೆಹಲಿ: ಹಲವು ಹೊಸ ಸೌಲಭ್ಯ ಹಾಗೂ ವಿನ್ಯಾಸದೊಂದಿಗೆ ಸೆಲ್ಟೋಸ್‌ನ ನೂತನ ವಿನ್ಯಾಸದ ಕಾರನ್ನು ಕಿಯಾ ಮಂಗಳವಾರ ಇಲ್ಲಿ ಬಿಡುಗಡೆ ಮಾಡಿತು.

ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಟೀ ಜಿನ್ ಪಾರ್ಕ್‌ ಅವರು ಕಾರನ್ನು ಅನಾವರಣಗೊಳಿಸಿದರು.

‘ಭಾರತದಲ್ಲಿ ತಯಾರಾಗುತ್ತಿರುವ ಈ ಕಾರು ಹಲವು ದೇಶಗಳಿಗೆ ರಫ್ತಾಗುತ್ತಿದೆ. ಹೊಸ ಮಾದರಿಯ ಸೆಲ್ಟೋಸ್‌ನಲ್ಲಿ ಕಾರು ಚಾಲನೆಯ ಆಧುನಿಕ ತಂತ್ರಜ್ಞಾನ ವ್ಯವಸ್ಥೆ (ಎಡಿಎಎಸ್‌) ನ 2ನೇ ಹಂತವನ್ನು ಅಳವಡಿಸಲಾಗಿದೆ. ಸೆಲ್ಟೋಸ್‌ನ ಮೊದಲ ಮಾದರಿ ನಾಲ್ಕು ವರ್ಷಗಳಲ್ಲಿ 10 ಲಕ್ಷ ಕಾರುಗಳು ಮಾರಾಟವಾಗಿವೆ. ಸದ್ಯ ಇರುವ ಮಾರುಕಟ್ಟೆ ಪಾಲನ್ನು ಶೇ 10ರಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. 2028ರ ಹೊತ್ತಿಗೆ ದೇಶದಾದ್ಯಂತ 300ರಿಂದ 600ರಷ್ಟು ಸಂಪರ್ಕ ಕೇಂದ್ರಗಳನ್ನು ತೆರೆಯುವ ಮೂಲಕ ಕಿಯಾ ಗ್ರಾಹಕರ ಹಿತ ಕಾಯಲಾಗುವುದು’ ಎಂದರು.

ಹೊಸ ಮಾದರಿಯ ಸೆಲ್ಟೋಸ್‌ನ ಮಾಹಿತಿ ಹಂಚಿಕೊಂಡ ಕಂಪನಿಯ ಭಾರತ ವಿಭಾಗದ ಮಾರುಕಟ್ಟೆ ಮುಖ್ಯಸ್ಥ ಹರ್ದೀಪ್ ಸಿಂಗ್ ಬ್ರಾರ್, ‘ವಿನ್ಯಾಸ, ಸುರಕ್ಷೆ, ಮನರಂಜನೆ ಹಾಗೂ ತಂತ್ರಜ್ಞಾನಕ್ಕೆ ನೂತನ ಸೆಲ್ಟೋಸ್‌ನಲ್ಲಿ ಆದ್ಯತೆ ನೀಡಲಾಗಿದೆ. ಮೂರು ರ‍್ಯಾಡಾರ್ ಹಾಗೂ ಒಂದು ಕ್ಯಾಮೆರಾ ಹೊಂದಿರುವ ಈ ಕಾರು 32 ಸುರಕ್ಷಾ ಸೌಕರ್ಯಗಳನ್ನು ಹೊಂದಿದೆ. ಡಿಕ್ಕಿ ತಡೆ ಹಾಗೂ ರಸ್ತೆಯಲ್ಲಿನ ಲೇನ್‌ ಕಾಯ್ದುಕೊಳ್ಳಲು ಇದು ನೆರವಾಗಲಿದೆ‘ ಎಂದು ತಿಳಿಸಿದರು.

‘1.5 ಲೀಟರ್‌ನ ಪೆಟ್ರೋಲ್ ಎಂಜಿನ್ ‘ಜಿಡಿಐ‘ ಅನ್ನು ಇದು ಹೊಂದಿದೆ. ಆಟೊಮ್ಯಾಟಿಕ್‌ನಿಂದ ಮ್ಯಾನ್ಯುಯಲ್ ವರೆಗೆ ಒಟ್ಟು ಐದು ಚಾಲನಾ ಸೌಕರ್ಯ ಹಾಗೂ ಮೂರು ಮಾದರಿಗಳಲ್ಲಿ ಕಾರು ಲಭ್ಯ. 160 ಪಿಎಸ್‌ ಶಕ್ತಿ ಹಾಗೂ 253 ಎನ್‌ಎಂ ಟಾರ್ಕ್ ಅನ್ನು ಇದು ಉತ್ಪಾದಿಸುವ ಸಾಮರ್ಥವನ್ನು ಈ ಮಧ್ಯಮ ಶ್ರೇಣಿಯ ಎಸ್‌ಯುವಿ ಹೊಂದಿದೆ. ಕಾರಿನ ಒಳಗೆ 26.04 ಸೆಂ.ಮೀ. ಎಚ್‌ಡಿ ಡಿಜಿಟಲ್ ಟಚ್‌ಸ್ಕ್ರೀನ್‌ ಬೋರ್ಡ್ ಅಳವಡಿಸಲಾಗದೆ. ಬೋಸ್ ಸೌಂಡ್ ಸಿಸ್ಟಂ ಹೊಂದಿದೆ. ಸಂಪೂರ್ಣ ಸ್ವಯಂನಿಯಂತ್ರಿತ ಹವಾನಿಯಂತ್ರಣ ಸೌಕರ್ಯ, ಧ್ವನಿ ಮೂಲಕ ನಿಯಂತ್ರಿಸಬಹುದಾದ ಸನ್‌ರೂಫ್‌, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್‌, ಕಾರಿನ ಹಿಂದೆ ಹಾಗೂ ಮುಂದೆ ಎಲ್‌ಇಡಿ ಕನೆಕ್ಟೆಡ್‌ ದೀಪಗಳು ಕಾರಿನ ಸೌಂದರ್ಯ ಮತ್ತು ಸೌಕರ್ಯ ಹೆಚ್ಚಿಸಿವೆ’ ಎಂದರು.

‘ಹೊಸ ಮಾದರಿಯ ಸೆಲ್ಟೋಸ್‌ನೊಂದಿಗೆ ‘ಪ್ಯೂವ್ಟರ್ ಆಲೀವ್‘ ಎಂಬ ಹೊಸ ಬಣ್ಣವನ್ನು ಪರಿಚಯಿಸಲಾಗುತ್ತಿದೆ. ಮೆಟಾ ಗ್ರಾಫೈಟ್ ಸೇರಿದಂತೆ ಒಟ್ಟು 8 ಬಣ್ಣಗಳಲ್ಲಿ ಲಭ್ಯ. ಜುಲೈ 14ರಂದು ಮಧ್ಯರಾತ್ರಿ 12ರಿಂದ ಮರುದಿನ ರಾತ್ರಿ 11.59ರವರೆಗೆ ಹೊಸ ಮಾದರಿಯ ಸೆಲ್ಟೋಸ್ ಬುಕ್‌ ಮಾಡಲು ಅವಕಾಶ ನೀಡಲಾಗಿದೆ. ಈಗಿರುವ ಕಿಯಾ ಗ್ರಾಹಕರ ಬಳಿ ಇರುವ ಕಿಯಾ ಆ್ಯಪ್‌ ಅಥವಾ kia.com ಅಂತರ್ಜಾಲತಾಣದ ಮೂಲಕ ಈಗಿರುವ ಗ್ರಾಹಕರ ನೆರವಿನೊಂದಿಗೆ ಹೊಸ ಗ್ರಾಹಕರು ಹೊಸ ಸೆಲ್ಟೋಸ್‌ ಅನ್ನು ಕಾಯ್ದಿರಿಸಬಹುದು. ಲಭ್ಯವಾಗುವ ಕೆ–ಕೋಡ್‌ ಅನ್ನು ಗೋಪ್ಯವಾಗಿಟ್ಟುಕೊಳ್ಳಬೇಕು. ಇದನ್ನು ಆಧರಿಸಿ ಹೊಸ ಕಾರುಗಳನ್ನು ನೀಡಲಾಗುವುದು. ನೂತನ ಕಾರಿನ ಬೆಲೆಯನ್ನು ಶೀಘ್ರದಲ್ಲಿ ತಿಳಿಸಲಾಗುವುದು’ ಎಂದು ಬ್ರಾರ್ ತಿಳಿಸಿದರು.

ಕಂಪನಿಯ ಅಧಿಕಾರಿ ಮಿಯಾಂಗ್ ಸಿಕ್ ಸೋಮ್ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT