ಪುಣೆ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ ಆ್ಯಂಡ್ ಮಹೀಂದ್ರಾವು ಬಹು ಇಂಧನ ಆಯ್ಕೆಯ ಹೊಸ ಪ್ಲಾಟ್ ಫಾರ್ಮ್‌ನಲ್ಲಿ ತಯಾರಿಸಿರುವ ಲಘು ವಾಣಿಜ್ಯ ವಾಹನ (ಎಲ್‌ಸಿವಿ) ‘ವೀರೋ’ ಅನ್ನು ಸೋಮವಾರ ಅನಾವರಣಗೊಳಿಸಿದೆ.
ಪುಣೆ ಸಮೀಪದ ಚಾಕಣ್ ಕೈಗಾರಿಕಾ ಪ್ರದೇಶದಲ್ಲಿರುವ ತನ್ನ ತಯಾರಿಕಾ ಘಟಕದಲ್ಲಿ ನಡೆದ ಸಮಾರಂಭದಲ್ಲಿ ‘ವೀರೋ’ವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮಹೀಂದ್ರಾ, ಅತ್ಯಾಧುನಿಕ ಮತ್ತು ಹೆಚ್ಚು ಸುರಕ್ಷಿತವಾದ ಈ ವಾಹನವು ಲಘು ಸರಕು ಸಾಗಣೆ ವಾಹನಗಳ ಮಾರುಕಟ್ಟೆಯಲ್ಲಿ ಹೊಸ ಶಕೆಯನ್ನೇ ಆರಂಭಿಸಲಿದೆ ಎಂದು ಹೇಳಿದೆ.
‘1.5 ಲೀಟರ್ ಎಂಜಿನ್, 1.6 ಟನ್ ತೂಕ ಹೊತ್ತೊಯ್ಯುವ ಸಾಮರ್ಥ್ಯದ ವೀರೋ, ಡೀಸೆಲ್ ಮತ್ತು ಸಿಎನ್ ಜಿ ಇಂಧನ ಆಯ್ಕೆಗಳಲ್ಲಿ ಸದ್ಯ ಲಭ್ಯವಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಮಾದರಿಯನ್ನೂ ಬಿಡುಗಡೆ ಮಾಡಲಾಗುವುದು. ಲಘು ಸರಕು ವಾಹನಗಳ ವಿಭಾಗದಲ್ಲಿ ಏರ್ ಬ್ಯಾಗ್ ಸೌಲಭ್ಯ ಹೊಂದಿರುವ ಮೊದಲ ವಾಹನ ಇದು. ಮುಂಭಾಗದ ಕ್ರ್ಯಾಷ್ ಟೆಸ್ಟ್ ಮಾನದಂಡಗಳನ್ನೂ (ಎಐಎಸ್ 096) ಅನುಸರಣೆ ಮಾಡಿದೆ’ ಎಂದು ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ರಾಮ್ ನಕರಾ ಹೇಳಿದರು.
1.5 ಲೀಟರ್ ಸಾಮರ್ಥ್ಯದ ಡೀಸೆಲ್ ಎಂಜಿನ್ 80 ಅಶ್ವಶಕ್ತಿ, 210 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಟರ್ಬೋ ಸಿಎನ್ ಜಿ ಎಂಜಿನ್ 90 ಅಶ್ವಶಕ್ತಿ ಮತ್ತು 210 ಟಾರ್ಕ್ ಉತ್ಪಾದಿಸುತ್ತದೆ. ಪ್ರತಿ ಲೀಟರ್ ಡೀಸೆಲ್ ಗೆ ಗರಿಷ್ಠ 18.4 ಕಿ.ಮೀ ಮತ್ತು ಪ್ರತಿ ಕೆಜಿ ಸಿಎನ್ ಜಿಗೆ 19.2 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.
‘ಬಹು ಇಂಧನ ಆಯ್ಕೆಯ ಹೊಸ ಪ್ಲಾಟ್ ಫಾರ್ಮ್‌ನಲ್ಲಿ ತಯಾರಿಸಲಾಗಿರುವ ‘ವೀರೋ’,
ಅತ್ಯಾಧುನಿಕ ತಂತ್ರಜ್ಞಾನ, ಹೆಚ್ಚು ಸುರಕ್ಷತೆ, ಕಾರುಗಳನ್ನು ಹೋಲುವ ಆರಾಮದಾಯಕ ಕ್ಯಾಬಿನ್ ಮತ್ತು ಅತ್ಯುತ್ತಮ ಸಾಮರ್ಥ್ಯ ಹೊಂದಿದೆ. ಇದು 3.5 ಟನ್ ಸಾಮರ್ಥ್ಯದ ಒಳಗಿನ ಲಘು ವಾಣಿಜ್ಯ ವಾಹನ ವಿಭಾಗದಲ್ಲಿ ಮಹೀಂದ್ರಾದ ಪಾಲನ್ನು ಇನ್ನಷ್ಟು ಹೆಚ್ಚಿಸಲಿದೆ’ ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದರು.
ವೀರೋದ ಡೀಸೆಲ್ ಅವತರಣಿಕೆಯ ಎಕ್ಸ್ ಶೋರೂಂ ಬೆಲೆ ₹7.99 ಲಕ್ಷದಿಂದ ₹ 9.56ಲಕ್ಷದವರೆಗೆ ಇದೆ. ವಿ2, ವಿ4 ಮತ್ತು ವಿ6 ಮಾದರಿಗಳಲ್ಲಿ ಸದ್ಯ ಲಭ್ಯವಿದೆ.
26.03 ಸೆಂ.ಮೀ ಟಚ್ ಸ್ಕ್ರೀನ್, ಪವರ್ ವಿಂಡೋಸ್, ಸ್ಟೀರಿಂಗ್ ಆಧಾರಿತ ನಿಯಂತ್ರಣ ವ್ಯವಸ್ಥೆ, ಚಾಲಕ ಸೇರಿದಂತೆ ಮೂವರಿಗೆ ಕುಳಿತುಕೊಳ್ಳುವ ಜಾಗ, ಹಿಂದಕ್ಕೆ ಬಾಗುವ ಚಾಲಕನ ಆಸನ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾಗಳು ವೀರೋದ ಇತರ ವೈಶಿಷ್ಟ್ಯಗಳು.
ಮಹೀಂದ್ರಾ ಆ್ಯಂಡ್ ಮಹೀಂದ್ರಾ ಆಟೋಮೋಟಿವ್ ತಂತ್ರಜ್ಞಾನ ಮತ್ತು ಅಭಿವೃದ್ಧಿ ವಿಭಾಗದ ಅಧ್ಯಕ್ಷ ವೇಲುಸ್ವಾಮಿ ಇತರರು ಭಾಗವಹಿಸಿದ್ದರು.
‘ವೀರೋ ಡೀಸೆಲ್ ಮತ್ತು ಸಿಎನ್ ಜಿ ಮಾದರಿ ವಾಹನ ತಯಾರಿಕೆಗಾಗಿ ಕಂಪನಿಯು ₹900 ಕೋಟಿ ಹೂಡಿಕೆ ಮಾಡಿದೆ. ಎಲೆಕ್ಟ್ರಿಕ್ ಮಾದರಿ ಮುಂದಿನ ದಿನಗಳಲ್ಲಿ ಬರಲಿದೆ. ಸದ್ಯ ಮೂರು ಚಕ್ರಗಳ ಸರಕು ವಾಹನಗಳ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ತಯಾರಾಗುತ್ತಿದ್ದು, ನಾಲ್ಕು ಚಕ್ರಗಳ ವಾಹನಗಳ ವಿಭಾಗದಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಮಾರುಕಟ್ಟೆಗೆ ಬಂದಿಲ್ಲ. ಇದಕ್ಕೆ ಇನ್ನಷ್ಟು ಹೂಡಿಕೆಯ ಅಗತ್ಯವಿದೆ’ ಎಂದು ಮಹೀಂದ್ರಾ ಆಟೋಮೋಟಿವ್ ವಿಭಾಗದ ಅಧ್ಯಕ್ಷ ವಿಜಯ್ ಹೇಳಿದರು.
‘ತಿಂಗಳಿಗೆ 10 ಸಾವಿರದಂತೆ ವರ್ಷಕ್ಕೆ 1.20 ಲಕ್ಷ ವಾಹನವನ್ನು ತಯಾರಿಸುವ ಸಾಮರ್ಥ್ಯ ನಮ್ಮ ಘಟಕಕ್ಕೆ ಇದೆ. ತಿಂಗಳಿಗೆ ಕನಿಷ್ಠ 5,000 ವೀರೋ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದ್ದೇವೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ ಆ್ಯಂಡ್ ಮಹೀಂದ್ರಾವು ಬಹು ಇಂಧನ ಆಯ್ಕೆಯ ಹೊಸ ಪ್ಲಾಟ್ ಫಾರ್ಮ್ ನಲ್ಲಿ ನಿರ್ಮಿಸಲಾದ ಲಘು ಸರಕು ವಾಹನ ‘ವೀರೋ’ ಅನ್ನು ಸೋಮವಾರ ಅನಾವರಣಗೊಳಿಸಿದೆ. #Mahindra #Veero pic.twitter.com/uvUT6h6UZ4
— Prajavani (@prajavani) September 16, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.