ಬುಧವಾರ, ಅಕ್ಟೋಬರ್ 5, 2022
27 °C

ಆಲ್ಟೊ ಹೊಸ ಆವೃತ್ತಿ ಬಿಡುಗಡೆ ಮಾಡಿದ ಮಾರುತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಎಸ್‌ಯುವಿ ಮಾರುಕಟ್ಟೆ ವಿಸ್ತರಣೆ ಕಾಣುತ್ತಿರುವ ಹೊತ್ತಿನಲ್ಲಿಯೂ ದೊಡ್ಡ ಸಂಖ್ಯೆಯ ಗ್ರಾಹಕರು ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಬಯಸುತ್ತಿದ್ದು, ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸಣ್ಣ ಕಾರುಗಳ ವಿಭಾಗದಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಅಗತ್ಯವಿರುವುದಾಗಿ ಭಾವಿಸಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹಾಗೂ ಸಿಇಒ ಹಿಸಾಶಿ ಟಕೆಯುಚಿ ಹೇಳಿದ್ದಾರೆ.

ಕಂಪನಿಯು ಗುರುವಾರ ‘ಆಲ್ಟೊ ಕೆ10’ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 3.99 ಲಕ್ಷದಿಂದ ₹ 5.83 ಲಕ್ಷದವರೆಗೆ ಇದೆ. ಕಂಪನಿಯು ಆರಂಭಿಕ ಹಂತದ ಕಾರುಗಳ ಮಾದರಿ ಸೇರಿದಂತೆ ಎಲ್ಲ ಹಂತಗಳ ಮಾದರಿಗಳ ಮೇಲೆ ಗಮನ ನೀಡುವುದಾಗಿ ಹೇಳಿದೆ.

‘ಆಹಾರ ಮತ್ತು ಸಂಸ್ಕೃತಿಯಂತೆಯೇ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಗ್ರಾಹಕರ ಅಗತ್ಯಗಳು ಕೂಡ ಬದಲಾಗುತ್ತವೆ. ಈಚಿನ ದಿನಗಳಲ್ಲಿ ಎಸ್‌ಯುವಿ ವಾಹನಗಳ ಜನಪ್ರಿಯತೆ ಹೆಚ್ಚಾಗಿದೆ ಎಂಬುದು ನಿಜ. ಆದರೆ, ಈಗಲೂ ಬಹಳಷ್ಟು ಗ್ರಾಹಕರು ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಬಯಸುತ್ತಿದ್ದಾರೆ’ ಎಂದು ಟಕೆಯುಚಿ ಹೇಳಿದ್ದಾರೆ.

ಹಿಂದಿನ ಆರ್ಥಿಕ ವರ್ಷದಲ್ಲಿ ದೇಶದ ಪ್ರಯಾಣಿಕ ವಾಹನ ಉದ್ದಿಮೆಯು 11.5 ಲಕ್ಷಕ್ಕಿಂತ ಹೆಚ್ಚಿನ ಹ್ಯಾಚ್‌ಬ್ಯಾಕ್‌ ಕಾರುಗಳನ್ನು ಮಾರಾಟ ಮಾಡಿದೆ. ಈ ಪೈಕಿ ಮಾರುತಿ ಸುಜುಕಿ ಕಂಪನಿಯ ಪಾಲು ಶೇಕಡ 68ರಷ್ಟಕ್ಕಿಂತ ಹೆಚ್ಚು. ಮಾರುಕಟ್ಟೆಯಲ್ಲಿ ನಾಯಕತ್ವದ ಸ್ಥಾನ ಹೊಂದಿರುವ ಕಂಪನಿಯು ಹೊಸ ಉತ್ಪನ್ನಗಳ ಮೂಲಕ ಹ್ಯಾಚ್‌ಬ್ಯಾಕ್‌ ವಿಭಾಗಕ್ಕೆ ಶಕ್ತಿ ತುಂಬುತ್ತ ಇರಬೇಕು ಎಂದು ಕೂಡ ಅವರು ಹೇಳಿದ್ದಾರೆ.

ಆಲ್ಟೊ ಮಾದರಿಯನ್ನು 2000ನೆ ಇಸವಿಯ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. 2022ರ ಜುಲೈವರೆಗೆ ಒಟ್ಟು 43.3 ಲಕ್ಷಕ್ಕೂ ಹೆಚ್ಚು ಆಲ್ಟೊ ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದಿದ್ದಾರೆ.

ಹೊಸ ಆಲ್ಟೊ ಕೆ10 ಕಾರಿನಲ್ಲಿ ಮುಂದಿನ ತಲೆಮಾರಿನ ಕೆ–ಸರಣಿಯ 1 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಇರಲಿದೆ. ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ 24.9 ಕಿ.ಮೀ. ಇಂಧನ ದಕ್ಷತೆ ನೀಡುತ್ತದೆ ಎಂದು ಕಂಪನಿ ಹೇಳಿದೆ.

‘ನಾವು ವಿಶ್ವಾಸಾರ್ಹ, ಕಡಿಮೆ ವೆಚ್ಚದ ಮತ್ತು ಆಧುನಿಕ ತಂತ್ರಜ್ಞಾನ ಹೊಂದಿರುವ ಕಾರುಗಳನ್ನು ಭಾರತೀಯರಿಗೆ ಒದಗಿಸುವ ಉದ್ದೇಶದಿಂದ ದೇಶದಲ್ಲಿ ಕಾರ್ಯಾಚರಣೆ ಆರಂಭಿಸಿ 2022ಕ್ಕೆ 40 ವರ್ಷಗಳು ತುಂಬಿವೆ’ ಎಂದು ಟಕೆಯುಚಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು