ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 Tata Nexon: ಹೊಸ ರೂಪ, ಹೊಸ ಶಕ್ತಿಯ ಸಿಎಸ್‌ಯುವಿ

Published 14 ಸೆಪ್ಟೆಂಬರ್ 2023, 12:50 IST
Last Updated 14 ಸೆಪ್ಟೆಂಬರ್ 2023, 12:50 IST
ಅಕ್ಷರ ಗಾತ್ರ

ನೆಕ್ಸಾನ್‌, ಟಾಟಾ ಮೋಟಾರ್ಸ್‌ನ ಅತ್ಯಂತ ಜನಪ್ರಿಯ ಸಿಎಸ್‌ಯುವಿಗಳಲ್ಲಿ ಒಂದು. ಟಾಟಾ ಮೋಟಾರ್ಸ್‌ನ ಡಿಸೈನ್‌ ಲ್ಯಾಂಗ್ವೇಜ್‌ 2.0 ಅಡಿಯಲ್ಲಿ ರೂಪಿಸಿದ್ದ ಎರಡನೇ ಕಾರು ಇದಾಗಿತ್ತು. 2017ರಲ್ಲಿ ಮಾರುಕಟ್ಟೆಗೆ ಬಂದ ಇದನ್ನು ಜನರು ಕೈಚಾಚಿ ಆಹ್ವಾನಿಸಿದ್ದರು. ಹಲವು ತಿಂಗಳ ಕಾಲ ನೆಕ್ಸಾನ್‌ ಅತಿಹೆಚ್ಚು ಮಾರಾಟವಾದ ಸಿಎಸ್‌ಯುವಿ ಪಟ್ಟದಲ್ಲಿತ್ತು. ನೆಕ್ಸಾನ್‌ಗೆ 2020ರಲ್ಲಿ ಕಂಪನಿಯು ಸಣ್ಣಮಟ್ಟದ ಫೇಸ್‌ಲಿಫ್ಟ್‌ ನೀಡಿತ್ತು. ಈಗ ದೊಡ್ಡಮಟ್ಟದ ಫೇಸ್‌ಲಿಫ್ಟ್‌ ನೀಡಿದೆ. ನೆಕ್ಸಾನ್‌ನ ಹೊರ ವಿನ್ಯಾಸ, ಒಳವಿನ್ಯಾಸ, ಎಂಜಿನ್‌ ಟ್ಯೂನಿಂಗ್‌, ಟ್ರಾನ್ಸ್‌ಮಿಷನ್‌, ಫೀಚರ್‌ಗಳು... ಹೀಗೆ ಅಪ್‌ಡೇಟ್‌ನ ಪಟ್ಟಿ ದೊಡ್ಡದೇ ಇದೆ.

ಎಕ್ಸ್‌ಟೀರಿಯರ್

2017ರಲ್ಲಿ ನೆಕ್ಸಾನ್‌ ಮಾರುಕಟ್ಟೆಗೆ ಬಂದಾಗ ಅದು ಹೆಚ್ಚು ಸದ್ದು ಮಾಡಿದ್ದು ಅದರ ಎಕ್ಸ್‌ಟೀರಿಯರ್ ವಿನ್ಯಾಸದಿಂದ. ಸಾಂಪ್ರದಾಯಿಕವಲ್ಲದ ವಿನ್ಯಾಸದ ಕಾರಣದಿಂದಲೇ ನೆಕ್ಸಾನ್‌ ಆಗ ಚರ್ಚೆಯಲ್ಲಿತ್ತು. ಬಹಳ ಮಂದಿ ಆ ವಿನ್ಯಾಸವನ್ನು ಇಷ್ಟಪಟ್ಟಿದ್ದರು. ಅದರ ಸ್ಟೈಲಿಂಗ್‌ ವಿಪರೀತ ಆಯಿತು ಎಂದು ಮೂಗುಮುರಿದವರೂ ಇದ್ದರು. ನೆಕ್ಸಾನ್‌ನ ವಿನ್ಯಾಸವನ್ನು ಇಷ್ಟಪಡಿ ಅಥವಾ ಇಷ್ಟಪಡದೇ ಇರಿ, ಆದರೆ ಅದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ ಎನ್ನುವಂತಿತ್ತು. ಮೊಟ್ಟೆಯಾಕಾರದ ದೇಹ, ಇಳಿಜಾರಾದ ರೂಫ್‌, ಪೈಲ್ವಾನನ ಕಟ್ಟುಮಸ್ತಾದ–ಗುಂಡಾದ ದೇಹದಂತಿದ್ದ ಹಿಂಭಾಗ, ಎತ್ತರಿಸಿದ ಬಾನೆಟ್‌... ವಿಚಿತ್ರವಾಗಿ ಕಾಣುತ್ತಿದ್ದ ಆ ದೇಹದ ಎಲ್ಲಾ ಮೂಲೆಗಳೂ ಗುಂಡುಗುಂಡಾಗಿದ್ದವು. 2020ರಲ್ಲಿ ಈ ವಿನ್ಯಾಸವನ್ನು ಟಾಟಾ ಸ್ವಲ್ಪ ಬದಲಿಸಿತ್ತು. ಆದರೆ, 2023ರ ಫೇಸ್‌ಲಿಫ್ಟ್‌ನಲ್ಲಿ ಹೊರ ವಿನ್ಯಾಸವನ್ನು ಬಹುತೇಕ ಬದಲಾಯಿಸಿದೆ.

ಹಳೆಯ ನೆಕ್ಸಾನ್‌ಗೂ ಈಗಿನ ಫೇಸ್‌ಲಿಫ್ಟ್‌ ನೆಕ್ಸಾನ್‌ಗೂ ದೇಹದ ಆಕಾರದಲ್ಲಿ ಮಾತ್ರವೇ ಸಂಬಂಧವಿದೆ. ಮುಂಬದಿಯ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಬಾನೆಟ್‌, ಬಂಪರ್‌, ಫೆಂಡರ್‌ನ ಅಂಚುಗಳನ್ನು ಮೊನಚಾಗಿಸಲಾಗಿದೆ. ಜತೆಗೆ ಬಾನೆಟ್‌ ರಿಬ್‌ನ ಎತ್ತರವನ್ನು ಹೆಚ್ಚಿಸಲಾಗಿದೆ. ಇದರಿಂದ ನೆಕ್ಸಾನ್‌ನ ಮುಂಬದಿಯು ದೇಹದಾರ್ಢ್ಯಪಟುವಿನ ಕಡಿದಿಟ್ಟ ದೇಹದಂತೆ ಕಾಣುತ್ತದೆ. ಈ ಹಿಂದೆ ಹೆಡ್‌ಲ್ಯಾಂಪ್‌ ಇದ್ದ ಜಾಗದಲ್ಲಿ ಎಲ್‌ಇಡಿ ಡಿಎಲ್‌ಆರ್‌ಗಳನ್ನು ಅಳವಡಿಸಲಾಗಿದೆ. ಈ ಡಿಎಲ್‌ಆರ್‌ಗಳು ಟರ್ನ್‌ ಇಂಡಿಕೇಟರ್‌ ಆಗಿಯೂ ಕೆಲಸ ಮಾಡುತ್ತವೆ. ಇನ್ನು ಹೆಡ್‌ಲ್ಯಾಂಪ್‌ ಅನ್ನು ಬಂಪರ್‌ನ ಅಂಚಿಗೆ ತಳ್ಳಲಾಗಿದೆ. ಹೆಡ್‌ಲ್ಯಾಂಪ್‌ನ ಕೆಳಗೆ ಫಾಗ್‌ಲ್ಯಾಂಪ್‌ಗಳನ್ನು ಅಳವಡಿಸಲಾಗಿದೆ. ಅಪ್ಪರ್ ಗ್ರಿಲ್‌ ಮತ್ತು ಲೋವರ್ ಗ್ರಿಲ್‌ಗಳ ಗಾತ್ರವನ್ನು ಹೆಚ್ಚಿಸಲಾಗಿದೆ. ಅವುಗಳ ವಿನ್ಯಾಸ ಸಹ ಬದಲಾಗಿದೆ. ಒಟ್ಟಾರೆ ನೂತನ ನೆಕ್ಸಾನ್‌ನ ಮುಂಭಾಗ ಹೆಚ್ಚು ಮೊನಚಾಗಿದ್ದು, ಅದರ ಆಕರ್ಷಣೆಯನ್ನು ಹೆಚ್ಚಿಸಿದೆ, ತಾಜಾ ಎನಿಸುವಂತಿದೆ.

ಇನ್ನು ಹಿಂಬದಿಯ ವಿನ್ಯಾಸಕ್ಕೆ ದೊಡ್ಡಮಟ್ಟದ ಬದಲಾವಣೆ ನೀಡಲಾಗಿದೆ. ಈ ಹಿಂದೆ ಇದ್ದ ಸೆರಾಮಿಕ್‌ ಸ್ಟ್ರಿಪ್‌ನ ಜಾಗದಲ್ಲಿ ಸ್ಟ್ರಿಪ್ಡ್‌ ಟೇಲ್‌ಲ್ಯಾಂಪ್‌ ಅಳವಡಿಸಲಾಗಿದೆ. ಅಂದರೆ, ಹಿಂಭಾಗದ ಒಂದು ಬದಿಯಿಂದ ಇನ್ನೊಂದು ಬದಿಯವರೆಗೂ ಟೇಲ್‌ಲ್ಯಾಂಪ್‌ ಚಾಚಿಕೊಂಡಿದೆ. ಈ ಎಲ್‌ಇಡಿ ಟೇಲ್‌ಲ್ಯಾಂಪ್‌ನ ವಿನ್ಯಾಸವೂ ಆಕರ್ಷಕವಾಗಿದೆ. ಟೇಲ್‌ಲ್ಯಾಂಪ್‌ನ ಫೈನ್ಡ್‌ ಮಿ ಮತ್ತು ವೆಲ್‌ಕಂ ಫೀಚರ್‌ಗಳು ಮುದ ನೀಡುವಂತಿವೆ. ಹಿಂಬದಿಯ ಬಂಪರ್‌, ಬೂಟ್‌ ಎಲ್ಲದರ ವಿನ್ಯಾಸವನ್ನೂ ಬದಲಿಸಲಾಗಿದೆ. ಸ್ಪಾಯ್ಲರ್‌ನ ಗಾತ್ರವನ್ನು ಹೆಚ್ಚಿಸಲಾಗಿದ್ದು, ಹಿಂಬದಿಯ ವೈಫರ್ ಅನ್ನು ಅದರೊಳಗೆ ಅಡಗಿಸಲಾಗಿದೆ. ಇದು ಹಿಂಬದಿಯ ಅಂದವನ್ನು ಹೆಚ್ಚಿಸಿದ್ದು ಮಾತ್ರವಲ್ಲದೆ, ಹಿಂಬದಿಯ ಕನ್ನಡಿಯಲ್ಲಿ ವೈಫರ್ ಕಾಣದಂತೆ ಮಾಡಿದೆ. ಇದರಿಂದ ಚಾಲಕನಿಗೆ ಕಿರಿಕಿರಿ ಕಡಿಮೆಯಾಗಿದೆ.

ಇಂಟೀರಿಯರ್

ನೆಕ್ಸಾನ್‌ನ ಇಂಟೀರಿಯರ್‌ನ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಹಳೆಯ ನೆಕ್ಸಾನ್‌ಗೂ, ಈಗಿನ ನೆಕ್ಸಾನ್‌ಗೂ ಸಂಬಂಧವೇ ಇಲ್ಲ ಎನ್ನುವಷ್ಟರಮಟ್ಟಿಗೆ ಇಂಟೀರಿಯರ್ ವಿನ್ಯಾಸವನ್ನು ಅಪ್‌ಗ್ರೇಡ್‌ ಮಾಡಲಾಗಿದೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿರುವುದರಿಂದ ಇಂಟೀರಿಯರ್‌ ಪ್ರೀಮಿಯಂ ಆದ ಅನುಭವ ನೀಡುತ್ತದೆ.

ಇಂಟೀರಿಯರ್‌ನ ಕೆಲವು ಪ್ರಮುಖ ಬದಲಾವಣೆಗಳು

  • ಡ್ಯಾಶ್‌ಬೋರ್ಡ್‌ನ ವಿನ್ಯಾಸವನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಎಸಿ ವೆಂಟ್‌ಗಳ ಜಾಗ ಮತ್ತು ವಿನ್ಯಾಸ ಬದಲಾಗಿದೆ. ಲೆದರ್‌ ಫಿನಿಷ್‌ ಮೃದುವಾಗಿದ್ದು, ಉತ್ತಮ ಅನುಭವ ನೀಡುತ್ತದೆ

  • ಮೀಟರ್‌ ಕನ್ಸೋಲ್‌ ಅನ್ನು ಸಂಪೂರ್ಣ ಡಿಜಿಟಲ್‌ ಆಗಿಸಲಾಗಿದೆ. ಇದು 10 ಇಂಚಿನ ಪರದೆಯಾಗಿದ್ದು, ಹಲವು ವಿನ್ಯಾಸಗಳನ್ನು ಅಳವಡಿಸಲಾಗಿದೆ. ಟಾಕೋ ಮೀಟರ್‌ ಮತ್ತು ಸ್ಪೀಡೋ ಮೀಟರ್‌ ಜತೆಗೆ, ಇದನ್ನು ಮ್ಯೂಸಿಕ್‌ ಕಂಟ್ರೋಲ್‌, ನ್ಯಾವಿಗೇಟರ್ ಆಗಿಯೂ ಬದಲಿಸಬಹುದು. ವಿನ್ಯಾಸಗಳು ಮತ್ತು ಅದರಲ್ಲಿ ಬಿತ್ತರವಾಗುವ ಮಾಹಿತಿಗಳನ್ನು ಬದಲಿಸಿಕೊಳ್ಳಲು ಸ್ಟೀರಿಂಗ್‌ ವೀಲ್‌ನಲ್ಲಿ ಪ್ರತ್ಯೇಕ ಬಟನ್‌ ನೀಡಲಾಗಿದೆ

  • ಡ್ಯಾಶ್‌ಬೋರ್ಡ್‌ನಲ್ಲಿ 10.5 ಇಂಚಿನ ಪರದೆ ಇರುವ ಮಲ್ಟಿಮೀಡಿಯಾ ಸಿಸ್ಟಂ ಅಳವಡಿಸಲಾಗಿದೆ. ಇದರಲ್ಲಿ ಆ್ಯಂಡ್ರಾಯ್ಡ್‌ ಆಟೊ, ಆ್ಯಪಲ್‌ ಕಾರ್‌ಪ್ಲೇ ವ್ಯವಸ್ಥೆಗಳಿವೆ. ಹರ್ಮಾನ್‌ನ ಮ್ಯೂಸಿಕ್‌ ಎಂಜಿನ್‌ ಮತ್ತು ಸ್ಪೀಕರ್‌ ಸಿಸ್ಟಂ ಅತ್ಯುತ್ತಮವಾಗಿದ್ದು, ಹೋಂಥಿಯೇಟರ್‌ನ ಅನುಭವ ನೀಡುತ್ತದೆ. ನ್ಯಾವಿಗೇಷನ್‌, ಕಾಲ್‌–ಮೆಸೇಜ್‌ ನಿರ್ವಹಣೆ ಉತ್ತಮವಾಗಿದೆ. ಟರ್ನ್‌ ಇಂಡಿಕೇಟರ್‌ ಕ್ಯಾಮೆರಾ, ರಿವರ್ಸ್‌ ಕ್ಯಾಮೆರಾ ಮತ್ತು 360 ಡಿಗ್ರಿ ಕ್ಯಾಮೆರಾಗಳ ಡಿಸ್‌ಪ್ಲೇ ಆಗಿಯೂ ಇದು ಕಾರ್ಯನಿರ್ವಹಿಸುತ್ತದೆ

  • ಸೆಂಟರ್‌ ಕನ್ಸೋಲ್‌ನಲ್ಲಿ ಹೆಚ್ಚಿನ ಬಟನ್‌ಗಳಿಲ್ಲ. ಬದಲಿಗೆ ಅತಿವೇಗದ ಕೆಪಾಸಿಟರ್‌ಗಳ ಟಚ್‌ಪ್ಯಾನೆಲ್‌ ಅಳವಡಿಸಲಾಗಿದೆ. ಬೂಟ್‌ ಓಪನ್‌ ಮಾಡಲು, ಎಸಿ–ಕ್ಲೈಮೇಟ್‌ ಕಂಟ್ರೋಲ್‌ ನಿರ್ವಹಣೆ ಮತ್ತಿತರ ಸವಲತ್ತುಗಳನ್ನು ಟಚ್‌ಪ್ಯಾನೆಲ್‌ ಮೂಲಕವೇ ನಿಯಂತ್ರಿಸಬಹುದಾಗಿದೆ. ಈ ವಿನ್ಯಾಸವು ಹೆಚ್ಚು ಪ್ರೀಮಿಯಂ ಆದ ಅನುಭವ ನೀಡುತ್ತದೆ

  • ಕೆಲವು ಅವತರಣಿಕೆಗಳಲ್ಲಿ ಸಂಪೂರ್ಣ ಕಪ್ಪು ಬಣ್ಣದ ಥೀಂನಲ್ಲಿ ಇಂಟೀರಿಯರ್ ಅನ್ನು ವಿನ್ಯಾಸ ಮಾಡಲಾಗಿದೆ. ಫಿಯರ್‌ಲೆಸ್‌ ಮತ್ತು ಕ್ರಿಯೇಟಿವ್‌ ಅವತರಣಿಕೆಗಳಲ್ಲಿ ಕಪ್ಪು–ನೇರಳೆ, ಕಪ್ಪು–ಸಿಲ್ವರ್‌ ಬಣ್ಣದ ಡುಯೆಲ್‌ಟೋನ್‌ ಥೀಂನಲ್ಲಿ ಇಂಟೀರಿಯರ್ ವಿನ್ಯಾಸ ಮಾಡಲಾಗಿದೆ. ಒಟ್ಟು ಇಂಟೀರಿಯರ್ ವಿನ್ಯಾಸ ಉತ್ತಮವಾಗಿದೆ

  • ಚಾಲಕ ಮತ್ತು ಮುಂಬದಿಯ ಸವಾರನ ಸೀಟ್‌ಗಳಿಗೆ ವೆಂಟಿಲೇಷನ್‌ ನೀಡಲಾಗಿದೆ. ವೆಂಟಿಲೇಷನ್‌ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ಚಾಲಕನಿಗೆ ಆಗುವ ಆಯಾಸವನ್ನು ಕಡಿಮೆ ಮಾಡುತ್ತದೆ. ಎರಡೂ ಸೀಟ್‌ಗಳಲ್ಲಿ ಎತ್ತರವನ್ನು ಹೆಚ್ಚಿಸಿಕೊಳ್ಳುವ ಸವಲತ್ತು ಇದೆ

  • ಇಂಟೀರಿಯರ್‌ನಲ್ಲಿ ಅತ್ಯಂತ ದೊಡ್ಡ ಬದಲಾವಣೆ ಅಂದರೆ ಸ್ಟಿಯರಿಂಗ್ ವೀಲ್‌ನ ವಿನ್ಯಾಸ. ಇದು ಎರಡು ಸ್ಪೋಕ್‌ನ ಮತ್ತು ಫ್ಲಾಟ್‌ಬಾಟಂನ ವೀಲ್‌ ಆಗಿದೆ. ಎರಡು ಸ್ಪೋಕ್‌ನ ಮಧ್ಯೆ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ಇಗ್ನಿಷನ್‌ ಆನ್‌ ಮಾಡಿದ ತಕ್ಷಣ ಅದರಲ್ಲಿ ಟಾಟಾ ಮೋಟಾರ್ಸ್‌ನ ಮೊನೊಗ್ರಾಂ ಬಿತ್ತರವಾಗುತ್ತದೆ. ಇದು ಜಗತ್ತಿನಲ್ಲಿಯೇ ಮೊದಲು ಎಂದು ಕಂಪನಿ ಹೇಳಿಕೊಂಡಿದೆ. ಸ್ಟಿಯರಿಂಗ್‌ ವೀಲ್‌ನಲ್ಲಿ ಬಳಸಿರುವ ಲೆದರ್‌ನ ಗುಣಮಟ್ಟ ಉತ್ತಮವಾಗಿದ್ದು, ಹಿಡಿತ ಮುದ ನೀಡುತ್ತದೆ.

ಎಂಜಿನ್‌+ಟ್ರಾನ್ಸ್‌ಮಿಷನ್‌

ನೆಕ್ಸಾನ್‌ನ ಡೀಸೆಲ್‌ ಎಂಜಿನ್‌ ಮತ್ತು ಟ್ರಾನ್ಸ್‌ಮಿಷನ್‌ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗ ಮಾರಾಟವಾಗುತ್ತಿರುವ ಡೀಸೆಲ್‌ ನೆಕ್ಸಾನ್‌ನ ಚಾಲನೆಗೂ, ಹೊಸ ನೆಕ್ಸಾನ್‌ನ ಚಾಲನೆಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಆದರೆ, ಪೆಟ್ರೋಲ್‌ ಎಂಜಿನ್‌ನಲ್ಲಿ ಡ್ಯುಯಲ್‌ ಕ್ಲಚ್‌ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ (ಡಿಸಿಟಿ) ನೀಡಲಾಗಿದೆ. ಇದು ಏಳು ಫಾರ್ವಾರ್ಡ್‌ ಮತ್ತು ಒಂದು ರಿವರ್ಸ್‌ ಗಿಯರ್‌ಗಳನ್ನು ಒಳಗೊಂಡಿದ್ದು, ಚಾಲನೆ ಅತ್ಯಂತ ನಯವಾಗಿದೆ.

ನೂತನ ನೆಕ್ಸಾನ್‌ನ ಹೆಗ್ಗಳಿಕೆಗಳಲ್ಲಿ ಡಿಸಿಟಿ ಟ್ರಾನ್ಸ್‌ಮಿಷನ್‌ ಮೊದಲ ಸಾಲಿನಲ್ಲಿ ನಿಲ್ಲುತ್ತದೆ ಎಂದರೆ ತಪ್ಪಾಗಲಾರದು. ದೇಶದಲ್ಲಿ ಈಗ ಪ್ರವೇಶಮಟ್ಟದ ಪ್ರೀಮಿಯಂ ವಾಹನಗಳಲ್ಲಿ ಲಭ್ಯವಿರುವ ಡಿಸಿಟಿ ಗಿಯರ್‌ಬಾಕ್ಸ್‌ಗಳೆಲ್ಲವೂ ‘ಡ್ರೈಕ್ಲಚ್‌’ ಸವಲತ್ತುಹೊಂದಿವೆ. ಭಾರತದ ಅತಿಉಷ್ಣತೆಯ ವಾತಾವರಣದಲ್ಲಿ ಅಂತಹ ಗಿಯರ್‌ಬಾಕ್ಸ್‌ಗಳು ತ್ವರಿತವಾಗಿ ಕೆಟ್ಟುಹೋಗುತ್ತವೆ. ಹೀಗಾಗಿ ಟಾಟಾ ಮೋಟಾರ್ಸ್‌ ‘ವೆಟ್‌ಕ್ಲಚ್‌’ ಸವಲತ್ತನ್ನು ಅಳವಡಿಸಿದೆ. ಈ ಗಿಯರ್‌ಬಾಕ್ಸ್‌ನ ಕ್ಲಚ್‌ಗಳು ಸದಾ ಆಯಿಲ್‌ನಲ್ಲಿ ಮುಳುಗಿದ್ದು, ಬಿಸಿಯಾಗುವ ಸಾಧ್ಯತೆ ತೀರಾ ಕಡಿಮೆ.

ಡಿಸಿಟಿ ಗಿಯರ್‌ಬಾಕ್ಸ್‌ ಅನ್ನು ಟಾಟಾ ಎಂಜಿನಿಯರ್‌ಗಳು ಅತ್ಯುತ್ತಮ ಎನ್ನುವಷ್ಟರಮಟ್ಟಿಗೆ ಕ್ಯಾಲಿಬರೇಟ್‌ ಮಾಡಿದ್ದಾರೆ. ಗಿಯರ್ ಬದಲಾಗುವುದು ಚಾಲಕನಿಗಾಗಲೀ, ಪ್ರಯಾಣಿಕರಿಗಾಗಲೀ ಗೊತ್ತಾಗುವುದೇ ಇಲ್ಲ. ಅಷ್ಟು ನಯವಾಗಿ ಗಿಯರ್‌ ಅಪ್‌ಶಿಫ್ಟ್‌ ಮತ್ತು ಡೌನ್‌ಶಿಫ್ಟ್‌ ಆಗುತ್ತದೆ. ಸ್ಪೋರ್ಟ್ಸ್‌ ಮೋಡ್‌ನಲ್ಲಿ ಗಿಯರ್‌ಬಾಕ್ಸ್‌ ಅತ್ಯಂತ ಚುರುಕಾಗಿ ಶಿಫ್ಟ್‌ ಆಗುತ್ತದೆ. ಹೀಗಾಗಿ ವೇಗವರ್ಧನೆ ಉತ್ತಮವಾಗಿದೆ. ಜತೆಗೆ, ಮ್ಯಾನುಯಲ್‌ ಮೋಡಲ್‌ನಲ್ಲಿ ಬಳಸಲು ಪ್ಯಾಡಲ್‌ ಶಿಫ್ಟರ್‌ಗಳನ್ನು ನೀಡಲಾಗಿದೆ. ಇದು ಗಿಯರ್‌ಬಾಕ್ಸ್‌ನ ಕಾರ್ಯನಿರ್ವಹಣೆಯ ಮೇಲೆ ಚಾಲಕನಿಗೆ ಹೆಚ್ಚಿನ ನಿಯಂತ್ರಣ ನೀಡುತ್ತದೆ. ಪ್ಯಾಡಲ್‌ ಶಿಫ್ಟರ್‌ಗಳ ಮೂಲಕ ಮಾಡುವ ಗಿಯರ್ ಬದಲಾವಣೆಯೂ ನಯವಾಗಿದ್ದು, ಚಾಲನೆಯನ್ನು ಅನಾಯಾಸವಾಗಿಸುತ್ತದೆ. ಪೆಟ್ರೋಲ್‌ ಎಂಜಿನ್‌+ಡಿಸಿಟಿ ಅತ್ಯುತ್ತಮ ಸಂಯೋಜನೆ ಎನ್ನಬಹುದು.

ಎಲ್ಲಾ ನೆಕ್ಸಾನ್‌ಗಳಲ್ಲೂ 6 ಗಿಯರ್‌ಗಳ ಮ್ಯಾನುಯಲ್‌ ಮತ್ತು ಎಎಂಟಿ ಗಿಯರ್‌ಬಾಕ್ಸ್ ಲಭ್ಯವಿದ್ದು, ಹೊಸದಾಗಿ ಸ್ಮಾರ್ಟ್‌ ಅವತರಣಿಕೆಯಲ್ಲಿ 5 ಗಿಯರ್‌ಗಳ ಮ್ಯಾನುಯಲ್‌ ಗಿಯರ್‌ಬಾಕ್ಸ್‌ ಅನ್ನು ನೀಡಲಾಗಿದೆ. ಇದು ನೆಕ್ಸಾನ್‌ನ ಬೇಸಿಕ್‌ ಅವತರಣಿಕೆಯ ಬೆಲೆಯನ್ನು ಇನ್ನಷ್ಟು ಇಳಿಸಲು ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಗಮನ ಸೆಳೆಯುವ ಸವಲತ್ತುಗಳು, ಆಯ್ಕೆಗಳು

  • ಬೇಸಿಕ್‌ನಿಂದ ಆರಂಭವಾಗಿ ಟಾಪ್‌ಎಂಡ್‌ ಅವತರಣಿಕೆಗಳವರೆಗೆ ಎಲ್ಲದರಲ್ಲೂ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ

  • ಟರ್ನ್‌ ಇಂಡಿಕೇಟರ್‌ ಕ್ಯಾಮೆರಾ ಡಿಸ್ಪ್ಲೇ ಚಾಲನೆಯನ್ನು ಸುಲಭವಾಗಿಸುತ್ತದೆ

  • ಎಲ್ಲಾ ಅವತರಣಿಕೆಗಳಲ್ಲೂ ಸನ್‌ರೂಫ್‌ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ

  • ಕೆಲವು ಅತ್ಯಗತ್ಯದ ಸವಲತ್ತುಗಳನ್ನು ಎಲ್ಲಾ ಅವತರಣಿಕೆಗಳಲ್ಲಿ ಆಯ್ಕೆ ಮಾಡಿಕೊಳ್ಳಲು ಅವಕಾಶ ನಿಡಲಾಗಿದೆ

  • ಹೊಸ ಅಲಾಯ್‌ವೀಲ್‌ನ ವಿನ್ಯಾಸ ಚೆನ್ನಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT