ಗುರುವಾರ , ಜೂನ್ 4, 2020
27 °C

ಆರಾಮಕ್ಕೂ ಸೈ, ವೇಗಕ್ಕೂ ಸೈ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ಬಹುತೇಕ ಕಾರ್‌ ಕಂಪನಿಗಳು ತಮ್ಮ ಪರ್ಫಾರ್ಮೆನ್ಸ್ ಕಾರುಗಳಿಗೆಂದೇ ಪ್ರತ್ಯೇಕ ವಿಭಾಗವನ್ನು ಹೊಂದಿರುತ್ತವೆ. ಐಷಾರಾಮಿ ಕಾರುಗಳಿಗೆ ಹೆಸರಾದ ಮರ್ಸಿಡೆಸ್‌ ಬೆಂಜ್, ಪರ್ಫಾಮೆನ್ಸ್‌ ಕಾರ್‌ಗಳಿಗೂ ಹೆಸರುವಾಸಿ. 

ಒಂದೇ ಕಂಪನಿಯ ಸಾಮಾನ್ಯ ಕಾರುಗಳು ಮತ್ತು ಪರ್ಫಾಮೆನ್ಸ್ ಕಾರುಗಳನ್ನು ಪ್ರತ್ಯೇಕ ಹೆಸರುಗಳಿಂದ ಗುರುತಿಸುವುದು ಜಾಗತಿಕ ಆಟೊಮೊಬೈಲ್ ಕ್ಷೇತ್ರದಲ್ಲಿ ರೂಢಿಗತ. ಅಂತೆಯೇ ಮರ್ಸಿಡಿಸ್ ಬೆಂಜ್ ತನ್ನ ಸ್ಪೋರ್ಟ್ಸ್ ಮತ್ತು ಪರ್ಫಾಮೆನ್ಸ್ ಕಾರುಗಳಿಗೆಂದೇ ಪ್ರತ್ಯೇಕ ‘ಎಎಂಜಿ’ ಎಂಬ ವಿಭಾಗವನ್ನು ಹೊಂದಿದೆ.

‘ಎಎಂಜಿ’ಯಲ್ಲಿ ಈ ಮೊದಲು ತಯಾರಾಗುತ್ತಿದ್ದ ಕಾರುಗಳೆಲ್ಲವೂ ಪ್ರಚಂಡ ಶಕ್ತಿಯದ್ದಾಗಿದ್ದವು. ಆಫ್‌ರೋಡ್ ದೈತ್ಯರಲ್ಲಿ ಒಂದೆನೆಸಿಕೊಂಡಿರುವ ಜಿ-ವ್ಯಾಗನ್‌ ಸಹ ಎಎಂಜಿ ವಿಭಾಗದ ಎಸ್‌ಯುವಿ. ಜಿ-ವ್ಯಾಗನ್‌ನ ಟಾಪ್ಎಂಡ್ ಅವತರಣಿಕೆಯಲ್ಲಿ 5.5 ಲೀಟರ್‌ (5,500 ಸಿ.ಸಿ ) ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ ಇದೆ. ಇಂಗ್ಲಿಷ್‌ನ ‘ವಿ’ ಆಕಾರದಲ್ಲಿ ಸಂಯೋಜಿಸಲಾಗಿರುವ ಎಂಟು ಸಿಲಿಂಡರ್‌ಗಳಿರುವ (ವಿ8) ಆ ಎಂಜಿನ್‌ಗೆ ಎರಡು ಟರ್ಬೊಚಾರ್ಜರ್‌ಗಳನ್ನು ಅಳವಡಿಸಲಾಗಿದೆ. ಅದು ಬರೋಬ್ಬರಿ 700 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಆರಂಭದ ದಿನಗಳಲ್ಲಿ ಎಎಂಜಿಯು ಇಂತಹ ಪ್ರಚಂಡ ಶಕ್ತಿಯ ಕಾರುಗಳನ್ನಷ್ಟೇ ತಯಾರಿಸುತ್ತಿತ್ತು. ಈ ಕಾರುಗಳ ಬೆಲೆ ₹2 ಕೋಟಿಯಿಂದ ₹3ಕೋಟಿವರೆಗೂ ಇದೆ. ಹೀಗಾಗಿ ಅವು ಕೆಲವರಿಗೆ ಮಾತ್ರ ಎಟಕುತ್ತವೆ. 

ಆದರೆ ಮರ್ಸಿಡೆಸ್ ಬೆಂಜ್ ಈಗ ತನ್ನ ಮಾರುಕಟ್ಟೆ ತಂತ್ರವನ್ನು ಬದಲಿಸಿದೆ. ತನ್ನ ಪರ್ಫಾಮೆನ್ಸ್‌ ಕಾರುಗಳು ಎಲ್ಲರಿಗೂ ಸಿಗುವಂತಾಗಬೇಕು ಎಂದು ತನ್ನ ಸಾಮಾನ್ಯ ಕಾರುಗಳಿಗೂ ಎಎಂಜಿ ಟಚ್‌ ನೀಡುತ್ತಿದೆ. ಹೀಗಾಗಿ ಎ-ಕ್ಲಾಸ್‌ನಿಂದ ಆರಂಭಿಸಿ ಸಿ-ಕ್ಲಾಸ್‌ ಶ್ರೇಣಿಯ ಸೆಡಾನ್, ಕೂಪ್ ಮತ್ತು ಎಸ್‌ಯುವಿಗಳಲ್ಲಿ ಎಎಂಜಿ ಅವತರಣಿಕೆಯನ್ನು ಹೊರತರುತ್ತಿದೆ.

ಭಾರತದ ಐಷಾರಾಮಿ ಕಾರುಗಳಲ್ಲಿ ಒಂದೆನಿಸಿರುವ ಸಿ-ಕ್ಲಾಸ್‌ನ ಎಎಂಜಿ ಅವತರಣಿಕೆಯನ್ನು ಕೆಲವು ದಿನಗಳ ಹಿಂದಷ್ಟೇ ಮರ್ಸಿಡೆಸ್ ಬೆಂಜ್ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯು ‘ಪ್ರಜಾವಾಣಿ’ಗೆ ನೀಡಿದ್ದ ಆಹ್ವಾನದ ಮೇರೆಗೆ ಈ ಕೂಪ್‌ ಅನ್ನು ಚಲಾಯಿಸಲಾಯಿತು.

ಮೊದಲೇ ಹೇಳಿದಂತೆ ಇದು ಸ್ಪೋರ್ಟ್ಸ್ ಅರ್ಥಾತ್ ಪರ್ಫಾರ್ಮೆನ್ಸ್ ಕಾರು. ಹೊರ ನೋಟದಲ್ಲಿ ಬಂಪರ್‌ ಸ್ಕರ್ಟ್‌, ಗ್ರಿಲ್ ಮತ್ತು ಹಿಂಬದಿಯಲ್ಲಿ ಎಕ್ಸಾಸ್ಟ್ ಟಿಪ್‌ಗಳ (ಸೈಲೆನ್ಸರ್‌ ಟಿಪ್‌) ವಿಶಿಷ್ಟ ವಿನ್ಯಾಸದ ಹೊರತಾಗಿ ಇದು ಸಾಮಾನ್ಯ ಸಿ-ಕ್ಲಾಸ್‌ನಂತೆಯೇ ಇದೆ. 

ಸಿ 43 ಎಎಂಜಿಯಲ್ಲಿ ಎರಡು ಟರ್ಬೊ ಚಾರ್ಜರ್‌ಗಳ ಪೆಟ್ರೋಲ್ ಎಂಜಿನ್ ಇದೆ. ಇದು 3,000 ಸಿ.ಸಿ. ಸಾಮರ್ಥ್ಯದ ವಿ6 ( ವಿ– ಆಕಾರದಲ್ಲಿ ಜೋಡಿಸಲಾದ ಆರು ಸಿಲಿಂಡರ್‌) ಎಂಜಿನ್. ಜತೆಗೆ ಎರಡು ಟರ್ಬೊ ಚಾರ್ಜರ್ (ಇದನ್ನು ಬೈಟರ್ಬೊ ಎಂದು ಕರೆಯಲಾಗುತ್ತದೆ) ಇರುವುದರಿಂದ ಅಪಾರ ಶಕ್ತಿ ಉತ್ಪಾದಿಸುತ್ತದೆ. ಅಪಾರ ಶಕ್ತಿ ಎಂದರೆ ಬರೋಬ್ಬರಿ 362 ಬಿಎಚ್‌ಪಿ ಶಕ್ತಿಯನ್ನು ಈ ಎಂಜಿನ್‌ ಕಾರಿನ ನಾಲ್ಕೂ ಚಕ್ರಗಳಿಗೆ ರವಾನಿಸುತ್ತದೆ. 

ನಿಂತಲ್ಲಿಂದ ಹೊರಟು ಪ್ರತಿಗಂಟೆಗೆ 100 ಕಿ.ಮೀ ವೇಗ ತಲುಪಲು ಈ ಕಾರು ಕೇವಲ 4.7 ಸೆಕೆಂಡ್ ತೆಗೆದುಕೊಳ್ಳುತ್ತದೆ ಎಂದರೆ 362 ಬಿಎಚ್‌ಪಿಯ ಶಕ್ತಿ ಅನುಭವಕ್ಕೆ ಬರಬಹುದು. ಈ ಕಾರಿನ ಗರಿಷ್ಠ ವೇಗವನ್ನು ಪ್ರತಿಗಂಟೆಗೆ 250 ಕಿ.ಮೀ.ಗೆ ಮಿತಿಗೊಳಿಸಲಾಗಿದೆ. ಇಷ್ಟು ವೇಗವನ್ನು ನಿಯಂತ್ರಿಸಲು ಪ್ರಚಂಡ ಬ್ರೇಕ್ ವ್ಯವಸ್ಥೆಯನ್ನೂ (ಹೈಡ್ರಾಲಿಕ್ ಅಸಿಸ್ಟೆಡ್) ನೀಡಲಾಗಿದೆ. ಸಿ-43 ಎಎಂಜಿಯ ಬ್ರೇಕ್‌ ಡಿಸ್ಕ್‌ಗಳು ಪ್ರವೇಶಮಟ್ಟದ ಕೆಲವು ಕಾರುಗಳ ಒಟ್ಟಾರೆ ಎತ್ತರಕ್ಕಿಂತ ಹೆಚ್ಚು ಎತ್ತರವಾಗಿವೆ (16.5 ಇಂಚಿನ ವ್ಯಾಸ).  ಇಷ್ಟು ದೊಡ್ಡ ಬ್ರೇಕ್‌ ಡಿಸ್ಕ್‌ಗಳು ಇದ್ದರೆ ಬ್ರೇಕಿಂಗ್‌ ಹೆಚ್ಚು ಶಾರ್ಪ್ ಆಗಿರುತ್ತದೆ. ಕಾರು ಗಂಟೆಗೆ 100 ಕಿ.ಮೀ  ವೇಗದಲ್ಲಿದ್ದರೂ ಬ್ರೇಕ್ ಒತ್ತಿದಾಗ ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ನಿಲ್ಲುತ್ತದೆ. ಜತೆಗೆ ಡೈನಮಿಕ್ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಇರುವುದರಿಂದ ಭಾರಿ ವೇಗದಲ್ಲೂ ಚಾಲನೆ ಮತ್ತು ನಿಯಂತ್ರಣ ಸುಲಭ. 

ಇದು ವೇಗದ ಕಾರು ಆಗಿದ್ದರೂ, ಈಗ ರಾಜ್ಯದ ಎಲ್ಲಾ ಹೆದ್ದಾರಿಗಳಲ್ಲಿ ವೇಗದ ಗರಿಷ್ಠಮಿತಿಯನ್ನು ಪ್ರತಿ ಗಂಟೆಗೆ 80 ಕಿ.ಮೀ ಗೆ ಇಳಿಸಿರುವುದರಿಂದ,  ಸಿ-43 ಎಎಂಜಿಯ ವೇಗವನ್ನು ಹೆದ್ದಾರಿಗಳಲ್ಲಿ ಅನುಭವಿಸಲು ಸಾಧ್ಯವಾಗಲಿಲ್ಲ. ಆದರೆ ವಿ6 ಬೈಟರ್ಬೊ ಎಂಜಿನ್‌ನ ಶಕ್ತಿಯನ್ನು ಅನುಭವಿಸಲು ಯಾವುದೇ ಅಡ್ಡಿ ಇರಲಿಲ್ಲ. ಖಾಸಗಿ ಏರ್‌ಸ್ಟ್ರಿಪ್‌ನಲ್ಲಿ ಚಲಾಯಿಸಿದಾಗ, ಪ್ರತಿ ಗಂಟೆಗೆ 240 ಕಿ.ಮೀ.ನಷ್ಟು ವೇಗ ಮುಟ್ಟಲು ಸಾಧ್ಯವಾಯಿತು. ಸಿ-43 ಎಎಂಜಿಯಲ್ಲಿ ಇದ್ದದ್ದು 9 ಗಿಯರ್‌ಗಳ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್. ಜತೆಗೆ ಎಂಜಿನ್‌ ಶಕ್ತಿ ರವಾನೆ ವಿನ್ಯಾಸ–ಇಸಿಯು ಮ್ಯಾಪಿಂಗ್ ಬದಲಿಸಿಕೊಳ್ಳುವ ಆಯ್ಕೆಗಳಿದ್ದವು. ಅದರಲ್ಲಿ ಇಕೊ, ಸ್ಪೋರ್ಟ್ಸ್‌, ಸ್ಪೋರ್ಟ್ಸ್‌ ಪ್ಲಸ್‌, ಕಂಫರ್ಟ್ ಮತ್ತು ಇಂಡಿವಿಷ್ಯುಯೆಲ್ ಎಂಬ ಮ್ಯಾಪಿಂಗ್ ಆಯ್ಕೆಗಳಿದ್ದವು.

ಅಪಾರ ಶಕ್ತಿ ಇದ್ದ ಕಾರಣ ಹೆದ್ದಾರಿಯಲ್ಲಿ ಬಹುತೇಕ ವೇಳೆ ಇಕೊ ಆಯ್ಕೆಯಲ್ಲೇ ಕೂಪ್‌ ಅನ್ನು ಚಲಾಯಿಸಲಾಯಿತು. ಈ ಆಯ್ಕೆಯ ಹೆಗ್ಗಳಿಕೆಯೆಂದರೆ, ಪ್ರತಿಗಂಟೆಗೆ 100 ಕಿ.ಮೀ. ವೇಗದಲ್ಲೂ 9ನೇ ಗಿಯರ್ ಆಯ್ಕೆಯಾಗುತ್ತಿತ್ತು. ಆಗ ಥ್ರೋಟಲ್ (ಅಕ್ಸಲರೇಟರ್) ಒತ್ತದಿದ್ದರೂ ಕೂಪ್ ಅದೇ ವೇಗದಲ್ಲಿ ಓಡುತ್ತಿತ್ತು. ಎಂಜಿನ್ ವೇಗ 1,500 ಆರ್‌ಪಿಎಂನಲ್ಲಿದ್ದಾಗಲೂ ಅದೇ ವೇಗದಲ್ಲಿ ಕೂಪ್ ಓಡುತ್ತಿತ್ತು. ಬಹುತೇಕ ಪಯಣವನ್ನು ಈ ಮೋಡ್‌ನಲ್ಲೇ ಕಳೆದದ್ದರಿಂದ ಕಂಪನಿ ಹೇಳಿದ್ದಕ್ಕಿಂತಲೂ ಹೆಚ್ಚು (ಕಂಪನಿ ಹೇಳಿದ್ದು ಪ್ರತಿ ಫುಲ್‌ ಟ್ಯಾಂಕ್‌ಗೆ 400 ಕಿ.ಮೀ. ನಮಗೆ ದೊರೆತದ್ದು 530 ಕಿ.ಮೀ.) ಮೈಲೇಜ್ ದೊರೆಯಿತು. ಕಾರಿನಲ್ಲಿದ್ದ ಕ್ರೂಸ್‌ ಕಂಟ್ರೋಲ್‌ ಅನ್ನೂ ಬಳಸಿದ್ದರಿಂದ ಇಷ್ಟು ಮೈಲೇಜ್ ತೆಗೆಯುವುದು ಸಾಧ್ಯವಾಯಿತು, ಅದೂ ಉತ್ತಮ ವೇಗದಲ್ಲಿ.

ಇದರ ಜತೆಯಲ್ಲಿ ‘ಸ್ಪೋರ್ಟ್ಸ್‌ ಪ್ಲಸ್‌’ ಆಯ್ಕೆಯನ್ನು ಪರೀಕ್ಷಿಸಲಾಯಿತು. ಈ ಆಯ್ಕೆಯಲ್ಲಿ ಕೂಪ್ ಪ್ರತಿಗಂಟೆಗೆ 100 ಕಿ.ಮೀ. ವೇಗದಲ್ಲಿ ಓಡುತ್ತಿದ್ದರೂ ನಾಲ್ಕನೇ ಗಿಯರ್‌ನಲ್ಲೇ ಇರುತ್ತಿತ್ತು. ಹೀಗಾಗಿ ನಮ್ಮ ಹೆದ್ದಾರಿಯಲ್ಲಿ 5ನೇ ಗಿಯರ್‌ಗೆ ಶಿಫ್ಟ್ ಆಗಲು ಸಾಧ್ಯವೇ ಆಗಲಿಲ್ಲ. ಈ ಮೋಡ್‌ನಲ್ಲಿ ಸಸ್ಪೆನ್ಷನ್‌ ಸ್ವಯಂಚಾಲಿತವಾಗಿ ಗಡಸಾಗುತ್ತದೆ. ಅಂದರೆ ಸ್ಟಿಫ್ ಆಗುತ್ತದೆ. ಸ್ಟಿಫ್ ಆಗುವುದರಿಂದ ಓಲಾಟ ಕಡಿಮೆಯಾಗುತ್ತದೆ. ವೇಗವಾಗಿ ಜಿಗ್‌ಜಾಗ್ ಮಾಡಿದರೂ, ತಿರುವಿನಲ್ಲಿ ವೇಗವಾಗಿ ತಿರುಗಿಸಿದರೂ ಒಂದಿನತೂ ಓಲಾಡುವುದಿಲ್ಲ ಮತ್ತು ವಾಲುವುದಿಲ್ಲ. ಹೀಗಾಗಿ ನಿಯಂತ್ರಣ ತಪ್ಪುವ ಸಾಧ್ಯತೆ ತೀರಾ ಕಡಿಮೆ. ಬೇರೆ ಆಯ್ಕೆಗಳಲ್ಲಿ ಚಾಲನೆ ಮಾಡುತ್ತಿದ್ದಾಗಲೂ ಸಸ್ಪೆನ್ಷನ್ ಅನ್ನು ಗಡಸು ಮಾಡಲು ಒಂದು ಗುಂಡಿ ನೀಡಲಾಗಿದೆ. ಬೇಡವೆಂದಾಗ ಆ ಗುಂಡಿಯನ್ನು ಒತ್ತಿ, ಸಸ್ಪೆನ್ಷನ್‌ನ ಗಡಸನ್ನು ಕಡಿಮೆ ಮಾಡಬಹುದು. ಇದು ಹೆಚ್ಚು ಉಪಯೋಗಕ್ಕೆ ಬರುವ ಸವಲತ್ತು.

ಬಹುತೇಕ ಎಲ್ಲಾ ವೇಗದ ಕಾರ್‌ಗಳಲ್ಲಿ ಆಲ್‌ವ್ಹೀಲ್‌ಡ್ರೈವ್ ಸವಲತ್ತು ಇರುತ್ತದೆ. ಇದರಲ್ಲಿ ಮರ್ಸಿಡೆಸ್ ಬೆಂಜ್‌ನವರದ್ದೇ ಆಲ್‌ವ್ಹೀಲ್‌ಡ್ರೈವ್ ತಂತ್ರಜ್ಞಾನ–4 ಮ್ಯಾಟಿಕ್ ಇತ್ತು. ಸಿ-43 ಎಎಂಜಿ ಮೂಲತಃ ರೇರ್‌ವ್ಹೀಲ್‌ ಡ್ರೈವ್ ಸೆಡಾನ್. ಹೀಗಾಗಿ ಅಗತ್ಯಬಿದ್ದಾಗ ಮಾತ್ರ ಮುಂದಿನ ಚಕ್ರಗಳಿಗೆ ಶಕ್ತಿ ರವಾನೆಯಾಗುತ್ತದೆ. ಅಂತ ಸಂದರ್ಭದಲ್ಲಿ ಹೀಗೆ ಶಕ್ತಿ ರವಾನೆಯಾಗಲು ಒಂದು ಸೆಕೆಂಡ್‌ನಷ್ಟು ಸಮಯ ತೆಗೆದುಕೊಳ್ಳುತ್ತದೆ. ಆ ಸಂದರ್ಭದಲ್ಲಿ ಕಾರು ಮಣ್ಣಿನ ರಸ್ತೆಯಲ್ಲಿದ್ದರೆ ಸ್ವಲ್ಪ ಅತ್ತಿತ್ತ ಎಳೆದಾಡುತ್ತದೆ (ಡ್ರಿಫ್ಟ್‌ ಆಗುತ್ತದೆ). ಅದರ ಮರುಕ್ಷಣವೇ ಟ್ರಾಕ್ಷನ್ ಕಂಟ್ರೋಲ್, ಡೈನಮಿಕ್ ಕಂಟ್ರೋಲ್‌ಗಳು ಜೀವಪಡೆದು ಕೂಪ್ ಸ್ವಯಂನಿಯಂತ್ರಣಕ್ಕೆ ಬರುತ್ತದೆ. ಬೇರೆ ಬ್ರಾಂಡ್‌ನ ಆಲ್‌ವ್ಹೀಲ್‌ಡ್ರೈವ್‌ ತಂತ್ರಜ್ಞಾನಗಳಿಗೆ ಹೋಲಿಸಿದರೆ 4 ಮ್ಯಾಟಿಕ್‌ನ ಚುರುಕು ಕಡಿಮೆ ಎನ್ನಬಹುದು. ಆದರೆ ಅದು ಜೀವಪಡೆಯಲು ತೆಗೆದುಕೊಳ್ಳುವ ಸಮಯದಲ್ಲಿ ಕಾರು ಡ್ರಿಫ್ಟ್ ಆಗುವ ಅನುಭವ ಮಾತ್ರ ರೋಮಾಂಚನಕಾರಿಯಾದದ್ದು.

ಎಎಂಜಿ ಅವತರಣಿಕೆ ಆಗಿರುವುದರಿಂದ ಇಂಟೀರಿಯರ್ ವಿನ್ಯಾಸದಲ್ಲಿ ಬಹಳ ಬದಲಾವಣೆ ಇದೆ. ಸ್ಟೀರಿಂಗ್‌ ವ್ಹೀಲ್‌ನ ತಳಭಾಗ ಚಪ್ಪಟೆಯಾಗಿದೆ. ಇಂತಹ ಸ್ಟಿರಿಂಗ್ ವ್ಹೀಲ್‌ಗಳನ್ನು ರೇಸಿಂಗ್ ವ್ಹೀಲ್ ಎಂದೇ ಕರೆಯಲಾಗುತ್ತದೆ. ಕಪ್ಪು ಲೆದರ್ ಸೀಟ್, ಡ್ಯಾಶ್‌ಬೋರ್ಡ್‌ನ ಲೆದರ್ ಟ್ರಿಮ್‌ಗಳ ಹೊಲಿಗೆಗೆ ಕೆಂಪು ಬಣ್ಣದ ದಾರ ಬಳಸಲಾಗಿದೆ. ಇನ್ನು ಸೀಟ್‌ಬೆಲ್ಟ್‌ಗಳೂ ಕೆಂಪು ಬಣ್ಣದ್ದೇ ಆಗಿವೆ. ಈ ಕಪ್ಪು–ಕೆಂಪು ಸಂಯೋಜನೆಯ ಇಂಟೀರಿಯರ್ ವಿಶಿಷ್ಟ ಅನುಭವ ನೀಡುತ್ತದೆ.  

ಇಷ್ಟೆಲ್ಲಾ ಇದ್ದರೂ ಸಿ-43ಯ ಚಾಲನೆ ಮತ್ತು ಸವಾರಿ ಆರಾಮದಾಯಕವೇ ಹೌದು.

ಒನ್‌ ಹ್ಯಾಂಡ್‌ ಎಂಜಿನ್
ಎಎಂಜಿ ಅವತರಣಿಕೆಗಳು ಹೊರನೋಟದಲ್ಲಿ ಸ್ವಲ್ಪ ಭಿನ್ನವಾಗಿವೆ. ಸೂಕ್ಷ್ಮವಾಗಿ ಗಮನಿಸಿದಾಗ ಮಾತ್ರ ವಿಭಿನ್ನತೆ ಕಾಣುತ್ತದೆ. ಆದರೆ ಒಳಾಂಗಣ ಸಂಪೂರ್ಣ ರೇಸಿಂಗ್‌ಮಯವಾಗಿರುತ್ತವೆ. ಕಾರಿನ ಇಂಟೀರಿಯರ್‌ ಚಾಲಕನ ಚಾಲನಾ ಶಕ್ತಿಯನ್ನು ಉದ್ದೀಪನಗೊಳಿಸುವಂತಿರುತ್ತದೆ. ಸಾಮಾನ್ಯ ಅವತರಣಿಕೆಗಳಿಗಿಂತ ದುಪ್ಪಟ್ಟು ಶಕ್ತಿ ಉತ್ಪಾದಿಸುವಂತಹ ಎಂಜಿನ್‌ ಸಹ ಇದರಲ್ಲಿರುತ್ತದೆ. ಆ ಎಂಜಿನ್‌ ಶಕ್ತಿಯನ್ನು ನಿಯಂತ್ರಣದಲ್ಲಿಡಲು ಪ್ರಚಂಡ ಬ್ರೇಕಿಂಗ್‌ ವ್ಯವಸ್ಥೆಯೂ ಇರುತ್ತದೆ. ಈ ಅವತರಣಿಕೆಗಳಲ್ಲಿ ಫ್ರೀ ಫ್ಲೋ ಎಕ್ಸಾಸ್ಟ್‌ಗಳು ಇರುತ್ತವೆ. ಅಂದರೆ ಈ ಕಾರುಗಳಿಂದ ಹೊರಡುವ ಸದ್ದು ಜೋರಾಗಿರುತ್ತದೆ. ಥ್ರೋಟಲ್ ಅನ್ನು ಒತ್ತಿದೊಡಣೆ ಜೋರಾಗಿ ಗರ್ಜಿಸುತ್ತಾ ಮುನ್ನುಗ್ಗುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿ ಎಎಂಜಿ ಅವತರಣಿಕೆಯ ಕಾರುಗಳ ಎಂಜಿನ್‌ ಅನ್ನು ಸಂಪೂರ್ಣವಾಗಿ ಒಬ್ಬನೇ ಎಂಜಿನಿಯರ್‌ ಜೋಡಿಸಿರುತ್ತಾನೆ. ಹೀಗಾಗಿ ಈ ಎಂಜಿನ್‌ಗಳಿಗೆ ‘ಒನ್‌ ಹ್ಯಾಂಡ್ ಎಂಜಿನ್’ ಎಂದೇ  ಕರೆಯಲಾಗುತ್ತದೆ. ಆ ಎಂಜಿನ್‌ನ ಕವರ್‌ ಮೇಲೆ ಆ ಎಂಜಿನಿಯರ್‌ನ ಸಹಿ ಇರುತ್ತದೆ. ಕಾರಿನ ವಿಂಡ್‌ಶೀಲ್ಡ್‌ ಮೇಲೂ ಆತನ ಸಹಿ ಇರುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.