ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮಾರುಕಟ್ಟೆಗೆ ಲಗ್ಗೆ ಇರಿಸಿದ ‘ಕಿಯಾ ಕ್ಯಾರೆನ್ಸ್‌’

Last Updated 15 ಫೆಬ್ರುವರಿ 2022, 8:25 IST
ಅಕ್ಷರ ಗಾತ್ರ

ಬೆಂಗಳೂರು: ಕಿಯಾ ಮೋಟಾರ್ಸ್‌ ತನ್ನ ನಾಲ್ಕನೇಸ್ಪೋರ್ಟ್ ಯುಟಿಲಿಟಿ ವಾಹನವಾದ (ಎಸ್‌ಯುವಿ) ‘ಕಿಯಾ ಕ್ಯಾರೆನ್ಸ್‌’ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಅಚ್ಚರಿ ಎಂದರೆ, ಕಿಯಾ ಸಂಸ್ಥೆ ಇದನ್ನು ಎಸ್‌ಯುವಿ ಎಂದಾಗಲೀ ಅಥವಾ ವಿವಿಧೋದ್ದೇಶದ ವಾಹನ (ಎಂಪಿವಿ) ಎಂದಾಗಲೀ ವರ್ಗೀಕರಿಸಿಲ್ಲ. ಬದಲಿಗೆ, ಇದನ್ನು ರಿಕ್ರಿಯೇಷನಲ್‌ ವಾಹನ (ಆರ್‌.ವಿ) ಎಂದು ಪರಿಚಯಿಸಿದೆ.

ಈ ಕಾರು ಫೆ.15ರಂದು ದೇಶದಲ್ಲಿ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ‘ಪ್ರಜಾವಾಣಿ’ ವರದಿಗಾರರು ಇದರ ಚಾಲನಾ ಅನುಭವ ಪಡೆದಿದ್ದು, ಅದರ ವಿವರ ಇಲ್ಲಿದೆ.

ಕಿಯಾ ಕ್ಯಾರೆನ್ಸ್ ಎಂಪಿವಿ ವಲಯದಲ್ಲೇ ಅತಿ ಉದ್ದವಾದ ಕಾರು. ಮುಂಭಾಗದಲ್ಲಿ ಇದು ಎಸ್‌ಯುವಿ ವಿನ್ಯಾಸವನ್ನು ಹೊಂದಿದೆಯಾದರೂ, ಈ ವಲಯದ ಇತರ ಕಾರುಗಳಿಗೆ ಹೋಲಿಸಿದರೆ ಇದಕ್ಕೆ ಹೆಚ್ಚಿನ ಸ್ಥಳಾವಕಾಶ ಬೇಕಾಗುತ್ತದೆ. ಇದು 4,540 ಮಿ.ಮೀ ಉದ್ದ, 1,800 ಮಿ.ಮೀ ಅಗಲ ಹಾಗೂ 1,708 ಮಿ.ಮೀ ಎತ್ತರವನ್ನು ಹೊಂದಿದೆ. 195 ಮಿ.ಮೀ ಗ್ರೌಂಡ್‌ ಕ್ಲಿಯರೆನ್ಸ್ ಹೊಂದಿದೆ. ಇದೇ ಮಾದರಿಯ ಅಲ್ಕಜಾರ್‌ ಅನ್ನು ಹೊರತುಪಡಿಸಿದರೆ ಇದರ ಗ್ರೌಂಡ್‌ ಕ್ಲಿಯರೆನ್ಸ್‌ ಇತರ ಕಾರುಗಳಿಗಿಂತ ಹೆಚ್ಚೇ ಇದೆ.

ಮುಂಭಾಗದಲ್ಲಿ ಮೇಲೆ ಕಪ್ಪು ಬಣ್ಣದ ಸ್ಟಾರ್‌ ವಿನ್ಯಾಸದ ಡಿಆರ್‌ಎಲ್‌ಗಳಿವೆ (ಹಗಲು ಹೊತ್ತಿನಲ್ಲೂ ಬೆಳಗುವ ದೀಪಗಳು). 3ಡಿ ವಿನ್ಯಾಸ ಒಳಗೊಂಡಿದೆ ಮತ್ತು ಮುಂಭಾಗದ ತುಂಬಾ ಕವರ್‌ ಆಗುವ ಕ್ರೋಮ್ ಪಟ್ಟಿಗಳಿವೆ. ಇದರಲ್ಲಿ ಸ್ಪ್ಲಿಟ್‌ ಹೆಡ್‌ಲ್ಯಾಂಡ್‌ಗಳಿವೆ. ಇದು ಹೈಬೀಮ್‌, ಲೋಬೀಮ್‌ಗಳನ್ನು ಪ್ರತ್ಯೇಕವಾಗಿ ಹೊಂದಿದೆ. ಜೊತೆಗೆ, ಕಿಯಾದ ಹೆಗ್ಗುರುತಾದ ಹುಲಿಯ ಮೂಗಿನ ಚಿಹ್ನೆಗಳನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ.

16 ಇಂಚುಗಳ ಮಿಶ್ರಲೋಹದ (ಅಲಾಯ್‌) ಚಕ್ರಗಳು, ಕ್ರೋಮ್‌ ಪಟ್ಟಿ ಇರುವ ಕನ್ನಡಿಗಳು, ಹಿಂಭಾಗದಲ್ಲಿ ಎರಡೂ ಎಲ್‌ಇಡಿ ಟೇಲ್‌ ದೀಪಗಳಿವೆ. ಆದರೆ, ಈ ಸೆಗ್ಮೆಂಟ್‌ನ ಇತರ ಕಾರುಗಳಂತೆ ಇದರಲ್ಲಿ 360 ಡಿಗ್ರಿ ಕ್ಯಾಮರಾ ಅಳವಡಿಸಿಲ್ಲ. ಕಿಯಾ ಕ್ಯಾರೆನ್ಸ್ ಪ್ರೀಮಿಯಂ, ಪ್ರೆಸ್ಟೀಜ್, ಪ್ರೆಸ್ಟೀಜ್ ಪ್ಲಸ್, ಐಷಾರಾಮಿ ಮತ್ತು ಐಷಾರಾಮಿ ಪ್ಲಸ್ ವೇರಿಯಂಟ್‌ಗಳಲ್ಲಿ ಬರಲಿದ್ದು, ಎಲ್ಲ 5 ಟ್ರಿಮ್ ಹಂತಗಳು ರೋಬಸ್ಟ್ 10 ಉನ್ನತ ಸುರಕ್ಷತೆಯ (ಹೈ-ಸೇಫ್ಟಿ) ಪ್ಯಾಕೇಜ್ ನೀಡುತ್ತವೆ. ಇದು 6.03 ಸೆಂ.ಮೀ. (10.25") ಎಚ್‌ಡಿ ಉದ್ದದ ಟಚ್‌ಸ್ಕ್ರೀನ್ ನ್ಯಾವಿಗೇಶನ್ ಕಿಯಾ ಕನೆಕ್ಟ್, 8 ಸ್ಪೀಕರ್‌ಗಳೊಂದಿಗೆ ಬೋಸ್ ಪ್ರೀಮಿಯಂ ಸೌಂಡ್ ಸಿಸ್ಟಮ್, ವೈರಸ್ ಮತ್ತು ಬ್ಯಾಕ್ಟೀರಿಯಾದ ರಕ್ಷಣೆಗಾಗಿ ಸ್ಮಾರ್ಟ್ ಪ್ಯೂರ್ ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಂತಹ ಅನೇಕ ಪ್ರೀಮಿಯಂ ಸೌಲಭ್ಯಗಳನ್ನು ಒಳಗೊಂಡಿದೆ.

ಕಾರಿನ ಎರಡನೇ ಸಾಲಿನಲ್ಲಿ ಒನ್‌ ಟಚ್‌ ಎಲೆಕ್ಟ್ರಿಕ್‌ ಟಂಬಲ್‌ ಸೀಟ್, ಸ್ಕೈಲೈಟ್‌ ಸನ್‌ರೂಫ್‌ಗಳಿವೆ. ಕಿಯಾ ಕ್ಯಾರೆನ್ಸ್‌ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯ– ಸ್ಮಾಲ್ ಸ್ಟ್ರೀಮ್ 1.5 ಪೆಟ್ರೋಲ್, ಸ್ಮಾಲ್ ಸ್ಟ್ರೀಮ್ 1.4 ಟಿ ಜಿಡಿಐ ಪೆಟ್ರೋಲ್ ಮತ್ತು 1.5 ಸಿಆರ್‌ಡಿಐ ವಿಜಿಟಿ ಡೀಸೆಲ್. ಇದಲ್ಲದೆ, ಗ್ರಾಹಕರಿಗೆ ಮೂರು ಪ್ರಸರಣ 6 ಮ್ಯಾನ್ಯುವಲ್‌ ಟ್ರಾನ್ಸ್ಮಿಷನ್‌ (ಎಂಟಿ), 7 ಡ್ಯುಯೆಲ್‌ ಕ್ಲಚ್‌ ಟ್ರಾನ್ಸ್‌ಮಿಷನ್‌ (ಡಿಸಿಟಿ) ಮತ್ತು 6 ಎಟಿ ಆಯ್ಕೆಗಳಿವೆ.

ಕ್ಯಾರೆನ್ಸ್‌ ಏಳು ಸೀಟುಗಳ ಸೌಲಭ್ಯ ಹೊಂದಿದೆ. ಐಷಾರಾಮಿ ಪ್ಲಸ್ ಟ್ರಿಮ್ 6 ಮತ್ತು 7 ಆಸನಗಳ ಆಯ್ಕೆಯೊಂದಿಗೆ ಲಭ್ಯ.

ಕಿಯಾ ಮೋಟಾರ್ಸ್‌ ಭಾರತದಲ್ಲಿ ಜನಪ್ರಿಯವಾಗಿರುವುದೇ ಅದರ ಎಂಜಿನ್‌ ಸಾಮರ್ಥ್ಯದಿಂದ. ಆ ಪ್ರಯತ್ನವನ್ನು ಇದರಲ್ಲೂ ಮುಂದುವರಿಸಿರುವ ಕಿಯಾ, ಕ್ಯಾರೆನ್ಸ್‌ನಲ್ಲಿ ಅತ್ಯುತ್ತಮ ಸಾಮರ್ಥ್ಯದ ಎಂಜಿನ್‌ ಒದಗಿಸಿದೆ.

ಸೆಲ್ಟೊಸ್ ಎಸ್‌ಯುವಿ ಮಾದರಿಯಲ್ಲಿರುವಂತೆಯೇಇದರಲ್ಲಿ 1.5 ಲೀಟರ್ ಸಾಮಾನ್ಯ ಪೆಟ್ರೋಲ್, 1.4 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಿವೆ. 1.5-ಲೀಟರ್ ಪೆಟ್ರೋಲ್ ಮಾದರಿಯು 113-ಬಿಎಚ್ಪಿ, 144-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 1.4 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 138 ಬಿಎಚ್ಪಿ, 242-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಜೊತೆಗೆ ಇದರ ಡಿ-ಕಟ್‌ ಸ್ಟೀರಿಂಗ್‌ ಈ ವಾಹನದ ಚಾಲನೆಯನ್ನು ಮತ್ತಷ್ಟು ಸರಾಗ ಹಾಗೂ ಸುಲಲಿತವಾಗಿಸುತ್ತದೆ. 3 ಸಾಲುಗಳ ಸೀಟಿನ ಕಾರು ಇದಾಗಿರುವುದರಿಂದ ಕುಟುಂಬ ಸಮೇತ ಪ್ರಯಾಣ ಬೆಳೆಸಲು ಸೂಕ್ತವಾಗಿದೆ. ಇದರಲ್ಲಿ ಹೆಡ್‌ರೂಂ ಹಾಗೂ ಕಾಲು ಚಾಚುವ ಜಾಗ (ಲೆಗ್‌ರೂಂ) ವಿಸ್ತಾರವಾಗಿರುವುದರಿಂದ ದೀರ್ಘ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಕಾಲನ್ನು ಚಾಚಿ ವಿರಮಿಸಲು ನೆರವಾಗುತ್ತದೆ.

ಹಾಗೆಯೇ 1.5-ಲೀಟರ್ ಡೀಸೆಲ್ ಮಾದರಿಯು 113.4-ಬಿಎಚ್ಪಿ, 250-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, 1.4-ಲೀಟರ್ ಟರ್ಬೊ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ ಬಾಕ್ಸ್ ಆಯ್ಕೆ ಲಭ್ಯವಿದ್ದರೆ, 1.5-ಲೀಟರ್ ಸಾಮಾನ್ಯ ಪೆಟ್ರೋಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಮಾತ್ರ ಖರೀದಿಗೆ ಲಭ್ಯವಿರಲಿದೆ. ಡೀಸೆಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಮಾಡಬಹುದು.
ಕಿಯಾ ಕಾರೆನ್ಸ್ ಕಾರು ಎರಡನೇ ಸಾಲಿನಲ್ಲಿ ಎಡ-ಬದಿಯ ಪ್ರಯಾಣಿಕರಿಗೆ ಪ್ರಯಾಣದ ವೇಳೆಯಲ್ಲಿಯೇ ಕೆಲಸ ನಿರ್ವಹಿಸಲು ನೆರವಾಗುವ ಸಲುವಾಗಿ ಮಡಿಚಬಹುದಾದ ವರ್ಕ್ ಡೆಸ್ಕ್ ಇದೆ. ಜೊತೆಗೆ, ಕಾರಿನೊಳಗಿನ ದುರ್ಗಂಧ ನಿವಾರಿಸುವ ಅತಿದೊಡ್ಡ ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳು ಇದರ ವಿಶೇಷತೆಯಾಗಿದೆ.

ಹಿಂದಿನ ಎಸ್‌ಯುವಿಗಳಿಗೆ ಹೋಲಿಸಿದರೆ ಕ್ಯಾರೆನ್ಸ್ ಈ ಬಾರಿ ಸುರಕ್ಷತಾ ವ್ಯವಸ್ಥೆಗೆ ಹೆಚ್ಚು ಆದ್ಯತೆ ನೀಡಿದೆ. ಆರು ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೆಜ್‌ಮೆಂಜ್ ಸಿಸ್ಟಂ, ಆಲ್-ವ್ಹೀಲ್ ಡಿಸ್ಕ್ ಬ್ರೇಕ್‌ಗಳು, ಬ್ರೇಕ್ ಅಸಿಸ್ಟ್ ಸಿಸ್ಟಂ, ಇಳಿಜಾರಿನಲ್ಲಿ ಬಳಸುವ ಬ್ರೇಕ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಆ್ಯಂಟಿ ಲಾಕ್ ಬ್ರೇಕ್, ರಿಯರ್ ಪಾರ್ಕಿಂಗ್ ಸೆನ್ಸರ್, ಐಸೋಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ ಸೌಲಭ್ಯಗಳಿವೆ.

ಈ ಕಾರಿನ ದರ (ಎಕ್ಸ್ ಶೋರೂಂ)₹8.99 ಲಕ್ಷಗಳಿಂದ ₹16.99 ಲಕ್ಷದವರೆಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT