ಗುರುವಾರ , ಜೂನ್ 4, 2020
27 °C
ವಿದ್ಯುತ್ ಚಾಲಿತ ಕಾರು...

ಪೆಟ್ರೋಲ್-ಡೀಸೆಲ್ ಕಾರುಗಳಿಗೂ ಸಡ್ಡು ಹೊಡೆಯುವ ನೆಕ್ಸಾನ್ ಇವಿ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ನೆಕ್ಸಾನ್ ಇವಿ ಯ ಪರೀಕ್ಷಾರ್ಥ ಚಾಲನೆಗೂ ಮುನ್ನ, ವಿದ್ಯುತ್ ಚಾಲಿತ ವಾಹನಗಳ ‘ಡ್ರೈವೆಬಿಲಿಟಿ’, ‘ಹ್ಯಾಂಡ್ಲಿಂಗ್’ ಮತ್ತು ‘ಬ್ರೇಕಿಂಗ್’ ಹೇಗಿರಬಹುದು ಎಂಬುದು ಕುತೂಹಲದ ವಿಚಾರವಾಗಿತ್ತು. ಹೀಗಾಗಿ ಪರೀಕ್ಷಾರ್ಥ ಚಾಲನೆ ವೇಳೆ ಈ ವಿಷಯಗಳಿಗೇ ಆದ್ಯತೆ ನೀಡಲಾಯಿತು.

ಡ್ರೈವೆಬಿಲಿಟಿ

ನೆಕ್ಸಾನ್ ಇವಿಯಲ್ಲಿ ಶಾಶ್ವತ ಆಯಸ್ಕಾಂತವಿರುವ ವಿದ್ಯುತ್ ಮೋಟರ್ ಇದೆ. ಈ ಮೋಟರ್ ಬರೋಬ್ಬರಿ 129 ಪಿಎಸ್‌ ಶಕ್ತಿ ಉತ್ಪಾದಿಸುತ್ತದೆ. ಇದು ಈ ವರ್ಗದ ಎಸ್‌ಯುವಿಗಳಲ್ಲೇ ಅತ್ಯಧಿಕ ಶಕ್ತಿ. ಅಲ್ಲದೆ ಈ ಮೋಟರ್ ಬರೋಬ್ಬರಿ 245 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ನೆಕ್ಸಾನ್ ಇವಿ ಚಾಲನೆ ವೇಳೆ ಈ ಮೋಟರ್‌ನ ಪ್ರಚಂಡ ಶಕ್ತಿ ಅನುಭವಕ್ಕೆ ಬರುತ್ತದೆ.

ನೆಕ್ಸಾನ್ ಇವಿಯಲ್ಲಿ ಸಿಂಗಲ್ ಸ್ಪೀಡ್‌ ಟ್ರಾನ್ಸ್‌ಮಿಷನ್ ಇದೆ. ಡ್ರೈವ್ ಸೆಲೆಕ್ಟರ್ ಮೂಲಕ ಡ್ರೈವ್‌ ಮೋಡ್ ಅನ್ನು ಆಯ್ಕೆ ಮಾಡಿದರೆ ಸಾಕು. ನೆಕ್ಸಾನ್ ಇವಿ ಚಲಿಸಲು ಸಿದ್ಧವಾಗುತ್ತದೆ. ಇದರಲ್ಲಿ ಕ್ರೀಪ್ ಫಂಕ್ಷನ್ ಸವಲತ್ತು ಇದೆ. ಅಂದರೆ,  ಆ್ಯಕ್ಸಿಲರೇಟರ್ ಒತ್ತದೇ ಇದ್ದರೂ ವಾಹನ ತೀರಾ ಕಡಿಮೆ ವೇಗದಲ್ಲಿ ಮುಂದೆ ಚಲಿಸುತ್ತದೆ. ಕ್ರೀಪ್ ಫಂಕ್ಷನ್ ಇರುವ ಕಾರಣ ಬ್ರೇಕ್‌ ಮೇಲಿಂದ ಕಾಲು ತೆಗೆದರೆ ಸಾಕು, ನೆಕ್ಸಾನ್ ಇವಿ ಮುಂದಕ್ಕೆ ಚಲಿಸುತ್ತದೆ. ಇದು ಬಂಪರ್‌ ಟು ಬಂಪರ್ ಸಂಚಾರ ದಟ್ಟಣೆಯಲ್ಲಿ ಹೆಚ್ಚು ಉಪಯೋಗಕ್ಕೆ ಬರುತ್ತದೆ.

ನೆಕ್ಸಾನ್ ಇವಿಯಲ್ಲಿ ಡ್ರೈವ್‌ ಮೋಡ್‌ಗಳ ಆಯ್ಕೆ ನೀಡಲಾಗಿದೆ. ಮೊದಲನೆಯದ್ದು 'ಡಿ' ಮೋಡ್. ಇದು ಸಾಮಾನ್ಯ ಮತ್ತು ಆರಾಮದಾಯಕ ಚಾಲನೆಗೆ ಹೇಳಿ ಮಾಡಿಸಿದ ಮೋಡ್. ಈ ಮೋಡ್‌ನಲ್ಲಿ ನೆಕ್ಸಾನ್ ಇವಿಯ ಪಿಕ್‌ಅಪ್ ಉತ್ತಮವಾಗಿದೆ. ವಿದ್ಯುತ್ ಚಾಲಿತ ವಾಹನಗಳ ಮೋಟರ್‌ಗಳು 0 ಆರ್‌ಪಿಎಂನಲ್ಲಿಯೇ ಗರಿಷ್ಠ ಟಾರ್ಕ್ ಉತ್ಪಾದಿಸುತ್ತವೆ. ಹೀಗಾಗಿ ಸಾಮಾನ್ಯ ಮೋಡ್‌ನಲ್ಲಿಯೂ ನೆಕ್ಸಾನ್ ಇವಿಯ ಪಿಕ್ಅಪ್ ಮತ್ತು ವೇಗವರ್ಧನೆ ಉತ್ತಮವಾಗಿದೆ. ನಗರದೊಳಗಿನ ಸಂಚಾರ ದಟ್ಟಣೆ, ಸಿಗ್ನಲ್‌ಗಳಲ್ಲಿ ಕ್ಷಿಪ್ರ ವೇಗವರ್ಧನೆ ಮತ್ತು ಶಾಪಿಂಗ್ ಮಾಲ್‌ಗಳ ಪಾರ್ಕಿಂಗ್ ಲಾಟ್‌ನ ರ‍್ಯಾಂಪ್‌ ಏರುವುದು ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗಿಂತ ನೆಕ್ಸಾನ್ ಇವಿಯಲ್ಲಿ ಸುಲಭ. ದೈನಂದಿನ ಬಳಕೆಯ ಬಹುತೇಕ ಸಂದರ್ಭಗಳಲ್ಲಿ ಚಾಲನೆಗೆ ‘ಡಿ’ ಮೋಡ್ ಅತ್ಯುತ್ತಮವಾಗಿದೆ. ಹೆದ್ದಾರಿ ಚಾಲನೆಯಲ್ಲೂ ಶಕ್ತಿಪೂರೈಕೆ ಮತ್ತು ವೇಗವರ್ಧನೆ ಚೆನ್ನಾಗಿದೆ. ಈ ಮೋಡ್‌ನಲ್ಲಿಯೇ ಘಾಟ್‌ಗಳನ್ನು ಹತ್ತಿ ಇಳಿಬಹುದು.

‘ಎಸ್‌’ (ಸ್ಪೋರ್ಟ್ಸ್‌) ಎಂಬ ಇನ್ನೊಂದು ಡ್ರೈವ್ ಮೋಡ್ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ‘ಡಿ’ ಮೋಡ್‌ನಲ್ಲಿರುವ ಎಲ್ಲಾ ಹೆಗ್ಗಳಿಕೆಗಳ ಮಟ್ಟವನ್ನು ಈ ‘ಎಸ್‌’ ಮೋಡ್ ಮತ್ತಷ್ಟು ಹೆಚ್ಚಿಸುತ್ತದೆ. ನೆಕ್ಸಾನ್ ಇವಿ ಈ ಮೋಡ್‌ನಲ್ಲಿ ಇದ್ದಾಗ, ಆ್ಯಕ್ಸಿಲರೇಟರ್ ಪೆಡಲ್ ಅನ್ನು ಪೂರ್ಣ ಒತ್ತಿದರೆ ಚಾಲಕ ಮತ್ತು ಪ್ರಯಾಣಿಕರು ತಮ್ಮ ಸೀಟಿನಲ್ಲೇ ಹಿಂದಕ್ಕೆ ಸರಿಯುತ್ತಾರೆ. ಅಷ್ಟು ಕ್ಷಿಪ್ರವಾಗಿ ನೆಕ್ಸಾನ್ ಇವಿ ವೇಗ ವರ್ಧಿಸಿಕೊಳ್ಳುತ್ತದೆ. ವೇಗವರ್ಧನೆ ಕ್ಷಿಪ್ರವಾಗಿರುವ ಕಾರಣ ಎರಡು ಲೇನ್‌ಗಳ ಹೆದ್ದಾರಿಗಳಲ್ಲಿ ಓವರ್‌ಟೇಕಿಂಗ್ ಸುಲಭ. ಈ ಮೋಡ್‌ನಲ್ಲಿದ್ದಾಗ ನೆಕ್ಸಾನ್ ಇವಿ, 0-100 ಕಿ.ಮೀ. ವೇಗವನ್ನು ಕೇವಲ 9.6 ಸೆಕೆಂಡ್‌ಗಳಲ್ಲಿ ಮುಟ್ಟುತ್ತದೆ. ನೆಕ್ಸಾನ್ ಇವಿಯ ಡ್ರೈವೆಬಿಲಿಟಿ ಉತ್ತಮವಾಗಿದೆ. ಯಾವ ಸಂದರ್ಭದಲ್ಲೂ ಈ ಕಾರಿಗೆ ಇನ್ನಷ್ಟು ಶಕ್ತಿ ಬೇಕಿತ್ತು ಎನಿಸುವುದಿಲ್ಲ.

ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್

ಬ್ಯಾಟರಿಯನ್ನು ಪ್ಲಾಟ್‌ಫಾರ್ಮ್‌ನಲ್ಲಿ ಕೂರಿಸಲಾಗಿದೆ. ತಳಭಾಗದಲ್ಲಿ ಬ್ಯಾಟರಿಪ್ಯಾಕ್ ಕೂರುವ ಕಾರಣ ವಾಹನದ ಗುರುತ್ವ ಕೇಂದ್ರ ತಳಮಟ್ಟದಲ್ಲಿ ಇದೆ. ಹೀಗಾಗಿ, ಎತ್ತರದ ವಾಹನವಾಗಿದ್ದರೂ ನೆಕ್ಸಾನ್‌ನ ಚಾಲನೆ ಸುಲಭ. ಅಲ್ಲದೆ ಎಸ್‌ಯುವಿಯ ಪೂರ್ಣ ಭಾರವನ್ನು ಮುಂಬದಿಯ ಮತ್ತು ಹಿಂಬದಿಯ ಚಕ್ರಗಳ ಮೇಲೆ 50:50ರ ಅನುಪಾತದಲ್ಲಿ ಹಂಚಿಕೆಯಾಗುವಂತೆ ವಿನ್ಯಾಸ ಮಾಡಲಾಗಿದೆ. ಗುರುತ್ವ ಬಲದ ಕೇಂದ್ರ ತಳಮಟ್ಟದಲ್ಲಿ ಇರುವ ಮತ್ತು 50:50ರ ಅನುಪಾತದಲ್ಲಿ ತೂಕ ಹಂಚಿಕೆಯಾಗಿರುವ ಕಾರಣ ನೆಕ್ಸಾನ್ ಇವಿಯ ಹ್ಯಾಂಡ್ಲಿಂಗ್ ಅತ್ಯುತ್ತಮವಾಗಿದೆ. ಭಾರಿ ವೇಗದಲ್ಲಿ ಲೇನ್ ಬದಲಾವಣೆ ಮಾಡಿದರೂ, ನೆಕ್ಸಾನ್ ಇವಿ ಓಲಾಡುವುದಿಲ್ಲ (ಬಾಡಿ ರೋಲಿಂಗ್). ಚಾಲಕನಾಗಲೀ ಪ್ರಯಾಣಿಕರಾಗಲೀ ಅತ್ತಿತ್ತ ಓಲಾಡುವುದಿಲ್ಲ. ಭಾರಿ ವೇಗದಲ್ಲಿ ತಿರುವು ಪಡೆಯುವಾಗಲೂ ನೆಕ್ಸಾನ್ ಉತ್ತಮವಾಗಿ ಸ್ಪಂದಿಸುತ್ತದೆ. ಅಂಡರ್ ಸ್ಟೀರ್ (ಅಗತ್ಯಕ್ಕಿಂತ ಕಡಿಮೆ ತಿರುವು ಪಡೆಯುವುದು) ಮತ್ತು ಓವರ್ ಸ್ಟೀರ್ (ಅಗತ್ಯಕ್ಕಿಂತ ಹೆಚ್ಚು ತಿರುವು ಪಡೆಯುವುದು) ಅಪಾಯವಿಲ್ಲ.  ನೆಕ್ಸಾನ್ ಇವಿಯ ಮೋಟರ್ ರಿಜನರೇಟಿವ್ ಸವಲತ್ತು ಹೊಂದಿದೆ. ಅಂದರೆ ಮೃದುವಾಗಿ ಬ್ರೇಕ್ ಒತ್ತಿದಾಗ ಮತ್ತು ಆ್ಯಕ್ಸಿಲರೇಟರ್ ಪೆಡಲ್ ಮೇಲಿಂದ ಕಾಲು ತೆಗೆದಾಗ ಮೋಟರ್‌ಗೆ ಶಕ್ತಿ ಪೂರೈಕೆ ಸ್ಥಗಿತಗೊಂಡು, ಮೋಟರ್ ವಿದ್ಯುತ್ ಉತ್ಪಾದನೆಯಾಗಿ ಬ್ಯಾಟರಿಗೆ ರವಾನೆಯಾಗುತ್ತದೆ. ಇದೇ ವೇಳೆ ಮೋಟರ್‌ ಎಂಜಿನ್ ಬ್ರೇಕಿಂಗ್‌ನಂತೆಯೂ ಕೆಲಸ ಮಾಡುತ್ತದೆ. ಹೀಗಾಗಿ ಪದೇ ಪದೇ ಬ್ರೇಕ್ ಒತ್ತುವ ಅಗತ್ಯವಿಲ್ಲ. ತೀರಾ ಇಳಿಜಾರಾಗಿದ್ದ ಘಾಟ್‌ನಲ್ಲಿ ಬ್ರೇಕ್ ಒತ್ತದಿದ್ದರೂ, ವೇಗ 15 ಕಿ.ಮೀ.ನ ಗಡಿ ದಾಟಲಿಲ್ಲ. ಒಟ್ಟಾರೆ ನೆಕ್ಸಾನ್ ಇವಿಯ ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಅತ್ಯುತ್ತಮವಾಗಿದೆ. ಇವೆಲ್ಲವೂ ಚಾಲಕನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.

ವಿನ್ಯಾಸ

ನೆಕ್ಸಾನ್ ಇವಿಯ ಆಕಾರ ಗಾತ್ರ ಎಲ್ಲವೂ ಸಾಮಾನ್ಯ ನೆಕ್ಸಾನ್ ರೀತಿಯಲ್ಲಿಯೇ ಇದೆ. ಆದರೆ ಮುಂಬದಿ ಮತ್ತು ಹಿಂಬದಿಯಲ್ಲಿ ವಿನ್ಯಾಸ ಬದಲಿಸಲಾಗಿದೆ ಅಷ್ಟೆ. ಮುಂಬದಿಯ ಕೆಳಗಿನ ಗ್ರಿಲ್‌ ಮತ್ತು ವಿಂಡೊಲೇನ್ ಮತ್ತು ಹಿಂಬದಿಯ ಬಂಪರ್‌ನ ತಳಭಾಗದಲ್ಲಿ ‘ನಿಯಾನ್ ಬ್ಲೂ’ ಬಣ್ಣದ ಇನ್ಸರ್ಟ್‌ ಬಳಸಲಾಗಿದೆ. ಇದು ನೆಕ್ಸಾನ ಇವಿ ಎದ್ದುಕಾಣುವಂತೆ ಮಾಡುತ್ತದೆ. ಒಳಾಂಗಣ ವಿನ್ಯಾಸವೂ ಉತ್ತಮವಾಗಿದೆ. ಡಿಜಿಟಲ್ ಇಸ್ಟ್ರುಮೆಂಟ್ ಕ್ಲಸ್ಟರ್ ಆಕರ್ಷಕವಾಗಿದೆ. ವಾಹನದ ಎಲ್ಲಾ ಮಾಹಿತಿ ಈ ಕ್ಲಸ್ಟರ್‌ನಲ್ಲಿ ಲಭ್ಯವಿದೆ. ಸ್ಟೀರಿಂಗ್‌ನ ತಳಭಾಗ ಚಪ್ಪಟೆಯಾಗಿದೆ. ಇದು ರೇಸಿಂಗ್ ಕಾರ್‌ನ ಅನುಭವ ನೀಡುತ್ತದೆ. ಸನ್‌ರೂಫ್, ಚರ್ಮದ ಸೀಟ್ ಕವರ್‌ಗಳು ಮತ್ತು ಅತ್ಯುತ್ತಮವಾದ ಹರ್ಮಾನ್ ಇನ್ಫೊಟೇನ್‌ಮೆಂಟ್ ಸಿಸ್ಟಂ ನೆಕ್ಸಾನ್ ಇವಿಯ ಐಷಾರಾಮತೆಯನ್ನು ಹೆಚ್ಚಿಸಿವೆ.

ಕನೆಕ್ಟೆಡ್ ಕಾರ್

ಈ ಕಾರ್‌ನಲ್ಲಿ ಕನೆಕ್ಟೆಡ್ ಕಾರ್ ವ್ಯವಸ್ಥೆ ಇದೆ. ಸ್ಮಾರ್ಟ್‌ಫೋನ್‌ನಲ್ಲಿನ ಆ್ಯಪ್ ಮೂಲಕವೇ ನೆಕ್ಸಾನ್ ಇವಿಯ ಹಲವು ಫೀಚರ್‌ಗಳನ್ನು ನಿಯಂತ್ರಿಸಬಹುದು. ಹೆಡ್‌ಲ್ಯಾಂಡ್, ಡೋರ್‌ಲಾಕ್, ಎಸಿಗಳನ್ನು ನಿಯಂತ್ರಿಸಬಹುದಾಗಿದೆ. ಬ್ಯಾಟರಿಯಲ್ಲಿ ಎಷ್ಟು ಚಾರ್ಜ್ ಉಳಿದಿದೆ? ಎಷ್ಟು ದೂರ ಕ್ರಮಿಸಬಹುದು ಮತ್ತು ಚಾರ್ಜಿಂಗ್ ಸ್ಟೇಷನ್ ಎಲ್ಲಿವೆ ಎಂಬುದರ ಮಾಹಿತಿಯನ್ನು ಈ ಅಪ್ಲಿಕೇಷನ್ ನೀಡುತ್ತದೆ. ಇದು ಈ ವರ್ಗದಲ್ಲೇ ಮೊದಲ ಸವಲತ್ತು.  ನೆಕ್ಸಾನ್ ಇವಿಯಲ್ಲಿ ಎಲ್ಲಾ ಸವಲತ್ತುಗಳು, ತಂತ್ರಜ್ಞಾನ ಪರ್ಫಾಮೆನ್ಸ್, ಹ್ಯಾಂಡ್ಲಿಂಗ್ ಮತ್ತು ಬ್ರೇಕಿಂಗ್ ಅನ್ನು ಹದವಾಗಿ ಸಂಯೋಜಿಸಲಾಗಿದೆ. ಒಂದು ಕಾರ್ ಆಗಿ ನೆಕ್ಸಾನ್ ಇವಿಗೆ 5 ತಾರೆಗಳ ರೇಟಿಂಗ್ ನೀಡಬಹುದು. ₹ 15 ರಿಂದ ₹ 17 ಲಕ್ಷ ಎಕ್ಸ್‌ ಷೋರೂಂ ಬೆಲೆಯಲ್ಲಿ ಇದು ಮಾರುಕಟ್ಟೆಗೆ ಬರಬಹುದು ಎಂದು ಕಂಪನಿ ಹೇಳಿದೆ.

ಬ್ಯಾಟರಿ

ನೆಕ್ಸಾನ ಇವಿಯಲ್ಲಿ 30.2 ಕಿಲೊವಾಟ್‌ನ ಲಿಥೀಯಂ ಅಯಾನ್ ಬ್ಯಾಟರಿ ಅಳವಡಿಸಲಾಗಿದೆ. ಕಾರಿನ ಪ್ಲಾಟ್‌ಫಾರಂನ ವಿನ್ಯಾಸಕ್ಕೆ ತಕ್ಕಂತೆ ಇದರ ಆಕಾರವನ್ನು ವಿನ್ಯಾಸ ಮಾಡಲಾಗಿದೆ. ಇದರ ಮೇಲೆ ತುಕ್ಕು ನಿರೋಧಕ ಕಬ್ಬಿಣದ ಕವಚ ಇದೆ. ಇದು ನೀರಿನಲ್ಲಿ ಇದ್ದರೂ (ಗರಿಷ್ಟ ಮೂರು ಗಂಟೆ) ಏನಾಗುವುದಿಲ್ಲ. ಇದು ದೂಳು ನಿರೋಧಕ. ಇದನ್ನು ಪರೀಕ್ಷಿಸುವ ಸಲುವಾಗಿ ಕಂಪನಿಯ ಪರೀಕ್ಷಾ ಟ್ರ್ಯಾಕ್‌ನಲ್ಲಿರುವ ಹೊಂಡಕ್ಕೆ ನೆಕ್ಸಾನ್ ಇವಿಯನ್ನು ಇಳಿಸಲಾಯಿತು. ಸುಮಾರು 400 ಮೀಟರ್ ದೂರವನ್ನು 300 ಮಿಲಿಮೀಟರ್ ಆಳದಷ್ಟು ನೀರಿನಲ್ಲಿ ಕ್ರಮಿಸಲಾಯಿತು. ಈ ವೇಳೆ ನೀರಿನಲ್ಲಿ ಅಲೆಗಳು ಎದ್ದ ಕಾರಣ, ನೀರಿನ ಮಟ್ಟ 600 ಮೀಟರ್‌ವರೆಗೂ ಮುಟ್ಟುತ್ತಿತ್ತು. ಇಂತಹ ಸಂದರ್ಭದಲ್ಲೂ ಬ್ಯಾಟರಿ ಮತ್ತು ಮೋಟರ್‌ಗೆ ಯಾವುದೇ ಹಾನಿ ಆಗಲಿಲ್ಲ. ನೆಕ್ಸಾನ್ ಇವಿ ನಿರಾಯಾಸವಾಗಿ ನೀರಿನಿಂದ ಹೊರಬಂತು. ಕಾರಿನೊಳಗೂ ನೀರು ಸೋರಿಕೆ ಆಗಿರಲಿಲ್ಲ. ಬ್ಯಾಟರಿಯಿಂದ ಯಾರಿಗೂ ವಿದ್ಯುತ್ ಆಘಾತವಾಗಲಿಲ್ಲ. ಈ ಬ್ಯಾಟರಿ ಮೇಲೆ ಟಾಟಾ ಮೋಟರ್ಸ್ 8 ವರ್ಷಗಳ ವಾರಂಟಿ ನೀಡುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು