ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

Published 14 ಡಿಸೆಂಬರ್ 2023, 11:31 IST
Last Updated 14 ಡಿಸೆಂಬರ್ 2023, 11:31 IST
ಅಕ್ಷರ ಗಾತ್ರ

2004ರವರೆಗೂ ಭಾರತದಲ್ಲಿ ಗರಿಷ್ಠ ಮಾರಾಟ ಆಗುತ್ತಿದ್ದ ಜನಸಾಮಾನ್ಯರ ಕಾರು 'ಮಾರುತಿ-800'. ಭಾರತ-ಜಪಾನ್ ಸಹಯೋಗದೊಂದಿಗೆ ಭಾರತದಲ್ಲಿ ತಯಾರಾಗಿ ಮೊದಲ ಬಾರಿಗೆ ಮಾರುಕಟ್ಟೆಗೆ ಬಂದಿದ್ದು 1983ರಲ್ಲಿ. ಭಾರತದ ಮಾರುತಿ ಉದ್ಯೋಗ್ ಲಿಮಿಟೆಡ್ ಹಾಗೂ ಜಪಾನಿನ ಸುಜುಕಿ ಮೋಟಾರ್ ಕಂಪನಿ ಲಿಮಿಟೆಡ್ - ಎರಡರ ಸಂಯೋಗದ ಫಲವಾಗಿ ಹರಿಯಾಣದ ಗುರುಗ್ರಾಮ (ಅಂದಿನ ಗುರ್ಗಾಂವ್) ಸ್ಥಾವರದಿಂದ ಮಾರುತಿ ಕಾರುಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದವು.

1983ರ ಡಿಸೆಂಬರ್ 14ರಂದು ಮೊದಲ ಬಾರಿಗೆ ಮಾರಾಟವಾದ ಮಾರುತಿ-800 ಕಾರು ಈಗೆಲ್ಲಿದೆ? ಹೇಗಿದೆ? ಅದರ ಮಾಲೀಕರು ಯಾರಾಗಿದ್ದರು? ಎಂಬ ಮಾಹಿತಿ ಇಲ್ಲಿದೆ:

  • ಮಾರುತಿ-800 ಕಾರು ಮಾರುತಿ ಉದ್ಯೋಗ್ ಲಿಮಿಟೆಡ್ ಎಂಬ ಸಾರ್ವಜನಿಕ ವಲಯದ ಉದ್ದಿಮೆಯ ಮೂಲಕ ಮಾರುಕಟ್ಟೆಗೆ ಬಂದಿತು.

  • 14 ಡಿಸೆಂಬರ್ 1983ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕೈಯಿಂದ ಮೊದಲ ಮಾರುತಿ-800 ಕಾರಿನ ಕೀಲಿಯನ್ನು ಪಡೆದವರು ನವದೆಹಲಿಯ ಇಂಡಿಯನ್ ಏರ್‌ಲೈನ್ಸ್ ಉದ್ಯೋಗಿ ಹರಪಾಲ್ ಸಿಂಗ್.

  • ಮಾರುತಿ-800 ಕಾರಿನ ಅಂದಿನ ಬೆಲೆ ₹47,500. ಅಂದಿನಿಂದ ಭಾರತದಲ್ಲಿ ಕಾರಿನ ಕ್ರಾಂತಿಯೇ ನಡೆಯಿತು. ಮಧ್ಯಮವರ್ಗದವರ ಪ್ರತಿಷ್ಠೆಯಾಗಿ ಮಾರುತಿ-800 ಬೆಳೆಯಿತು.

  • ಮೊದಲ ಮಾರುತಿ-800 ಕಾರಿನ ನೋಂದಣಿ ಸಂಖ್ಯೆ DIA 6479

  • ಹರಪಾಲ್ ಸಿಂಗ್ ಅವರು ಮಾರುತಿ-800 ಕಾರನ್ನು ಮಗನಂತೆಯೇ ನೋಡಿಕೊಳ್ಳುತ್ತಿದ್ದರು ಮತ್ತು ಜೀವಮಾನಪೂರ್ತಿ ಓಡಿಸಿದ್ದರು.

  • ಹರಪಾಲ್ ಸಿಂಗ್ ಅವರು 2010ರಲ್ಲಿ ನಿಧನರಾದರು. ಎರಡು ವರ್ಷಗಳ ಬಳಿಕ ಅವರ ಪತ್ನಿ ಗುಲ್ಷನ್‌ಬೀರ್ ಕೌರ್ ಕೂಡ ನಿಧನರಾದರು.

  • ಆ ಬಳಿಕ ಕಾರು ಮೂಲೆಗೆ ಬಿತ್ತು. ಅದರಲ್ಲಿ ಮೂಲ ಬಿಡಿಭಾಗಗಳೇ ಇದ್ದವು ಮತ್ತು ಹೊಸ ನಿಯಮದಂತೆ ಆಗ ಅಷ್ಟೊಂದು ಹಳೆಯ ಕಾರುಗಳು ರಸ್ತೆಗಿಳಿಯುವಂತಿಲ್ಲ.

  • ಇದೀಗ ಮಾರುತಿ ಸಂಸ್ಥೆಯೇ ಆ ಕಾರನ್ನು ಹರಪಾಲ್ ಕುಟುಂಬಿಕರಿಂದ ಮರಳಿ ಪಡೆದುಕೊಂಡಿದೆ ಮತ್ತು ನವೀಕರಿಸಿದೆ.

  • ಮಾರುತಿ ಸುಜುಕಿ ಸಂಸ್ಥೆಯ ಮಾರಾಟ ವಿಭಾಗದ ಹಿರಿಯ ಕಾರ್ಯಕಾರಿ ನಿರ್ದೇಶಕ ಶಶಾಂಕ ಶ್ರೀವಾಸ್ತವ ಅವರ ಪ್ರಯತ್ನದ ಫಲವಿದು.

  • ಮೊದಲ ಮಾರುತಿ-800 ಕಾರಿಗೆ ಎಲ್ಲ ರೀತಿಯ ಹೊಸ ಬಿಡಿಭಾಗಗಳನ್ನು ಜೋಡಿಸಿ, ಅದನ್ನು ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಅದನ್ನೀಗ ಗುರುಗ್ರಾಮದ ಮಾರುತಿ ಸ್ಥಾವರದಲ್ಲಿ ಸಾಲಂಕೃತವಾಗಿ ಪ್ರದರ್ಶನಕ್ಕಿಡಲಾಗಿದೆ.

  • ದೇಶದಲ್ಲಿ ಮಾರುತಿ ಕಾರುಗಳ ಯಶಸ್ಸಿನ ಅಭಿಯಾನದ ಹೆಮ್ಮೆಯ ಪ್ರತೀಕವಾಗಿ ಈ ಕಾರು ಇದೀಗ ಮಾರುತಿ ಕಾರುಗಳ ಮುಖ್ಯಾಲಯದ ಆಕರ್ಷಣೆಯ ವಸ್ತುವಾಗಿದೆ.

ಮೊದಲ ಮಾರುತಿ-800 ಕೀಲಿಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ಪಡೆಯುತ್ತಿರುವ ಹರಪಾಲ್ ಸಿಂಗ್.

ಮೊದಲ ಮಾರುತಿ-800 ಕೀಲಿಯನ್ನು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ಪಡೆಯುತ್ತಿರುವ ಹರಪಾಲ್ ಸಿಂಗ್.

X ಚಿತ್ರಕೃಪೆ:@Jayram_Ramesh

ಮಾರುತಿ-800 ಕಾರಿನ ಇತಿಹಾಸದ ಮತ್ತಷ್ಟು ವಿಚಾರಗಳು

  • ಮಧ್ಯಮವರ್ಗದ ಕನಸಿನ ಹ್ಯಾಚ್‌ಬ್ಯಾಕ್ ಕಾರು ಈಗಲೂ ಭಾರತೀಯ ರಸ್ತೆಗಳಲ್ಲಿ ಓಡಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಈಗಲೂ ಜನಪ್ರಿಯವಾಗಿದೆ.

  • ಇದುವರೆಗೆ ಸುಮಾರು 27 ಲಕ್ಷ ಸಂಖ್ಯೆಯ ಮಾರುತಿ-800 ಕಾರುಗಳು ಮಾರಾಟವಾಗಿವೆ ಎಂದು ಹೇಳಲಾಗುತ್ತಿದೆ.

  • 2010ರಲ್ಲಿ ಮಾರುತಿ-800 ಕಾರಿನ ತಯಾರಿಕೆಯನ್ನು ಸ್ಥಗಿತಗೊಳಿಸಲಾಯಿತು. ಅದರ ಸ್ಥಾನದಲ್ಲಿ ಮಾರುತಿ ಆಲ್ಟೊ ಬಂದಿತು.

  • 2014ರಲ್ಲಿ ಮಾರುತಿ-800 ಕಾರುಗಳ ಮಾರಾಟವನ್ನು ಪೂರ್ಣವಾಗಿ ಸ್ಥಗಿತಗೊಳಿಸಲಾಯಿತು.

  • ಮಾರುತಿ-800 ಕಾರು ಲೀಟರಿಗೆ 25ಕ್ಕೂ ಹೆಚ್ಚು ಕಿಲೋಮೀಟರ್‌ನಷ್ಟು ಭರ್ಜರಿ ಮೈಲೇಜ್ ನೀಡುತ್ತಿತ್ತು.

  • ಮಾರುತಿ-800 ಬೇಸ್ ಮಾದರಿಯ ಬೆಲೆ ₹47,500 ಇದ್ದರೆ, 1984ರಲ್ಲಿ ಮಾರುಕಟ್ಟೆಗೆ ಬಂದ ಎಸಿ ಸೌಕರ್ಯವಿರುವ ಡಿಲಕ್ಸ್ ಕಾರುಗಳ ಬೆಲೆ ₹70,000.

  • ಮಾರುಕಟ್ಟೆಗೆ ಬಿಡುಗಡೆಯಾದ ದಿನದವರೆಗೆ ಸುಮಾರು 70 ಕಾರುಗಳನ್ನು ಅಸೆಂಬಲ್ ಮಾಡಲಾಗಿತ್ತು. ಮರುವರ್ಷ (1984) 20,000 ಕಾರುಗಳು, 1985ರಲ್ಲಿ 40 ಸಾವಿರ ಹಾಗೂ 1988ರ ವೇಳೆಗೆ 1 ಲಕ್ಷ ಕಾರುಗಳನ್ನು ಮಾರುಕಟ್ಟೆಗೆ ಬಿಡುತ್ತೇವೆ ಎಂದು ಮಾರುತಿ ಉದ್ಯೋಗ್ ಲಿ. ಅಂದಿನ ಅಧ್ಯಕ್ಷ ವಿ.ಕೃಷ್ಣಮೂರ್ತಿ ಹೇಳಿದ್ದರು.

  • ಮಾರುತಿ ಉದ್ಯೋಗ್ ಲಿ. ಕಂಪನಿಯಲ್ಲಿ ಕಾರ್ಮಿಕರು, ಆಡಳಿತ ಮಂಡಳಿ ಎಲ್ಲರೂ ಏಕರೀತಿಯ ಯುನಿಫಾರ್ಮ್ (ಸಮವಸ್ತ್ರ) ಧರಿಸುತ್ತಿದ್ದರು. ಮುಕ್ತವಾದ ಕಚೇರಿಯಲ್ಲಿ ಕೂರುತ್ತಿದ್ದರು ಮತ್ತು ಒಂದೇ ಕ್ಯಾಂಟೀನಿನಲ್ಲೇ ಅದೇ ಆಹಾರವನ್ನು ತಿನ್ನುತ್ತಿದ್ದರು. ಮೇಲಧಿಕಾರಿ - ಕಾರ್ಮಿಕರ ನಡುವೆ ಯಾವುದೇ ಭೇದಭಾವ ಇಲ್ಲ ಎಂದಿದ್ದರು ಕೃಷ್ಣಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT