ಶುಕ್ರವಾರ, ಅಕ್ಟೋಬರ್ 30, 2020
27 °C

ಮಾರುಕಟ್ಟೆಯಲ್ಲಿ ಲಭ್ಯವಿರುವುದು ಮೂರು ಡೀಸೆಲ್ ಹ್ಯಾಚ್‌ಬ್ಯಾಕ್‌ಗಳು ಮಾತ್ರ

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

Prajavani

ಭಾರತದಲ್ಲಿ ಈಗ ಕೇವಲ ಮೂರು ಡೀಸೆಲ್ ಹ್ಯಾಚ್‌ಬ್ಯಾಕ್‌ಗಳು ಮಾರಾಟಕ್ಕೆ ಇವೆ. ಈ ಹಿಂದೆ ಭಾರಿ ಮಾರುಕಟ್ಟೆ ಹೊಂದಿದ್ದ ಡೀಸೆಲ್ ಕಾರುಗಳ ತಯಾರಿಕೆಯನ್ನು ಕಂಪನಿಗಳೇ ನಿಲ್ಲಿಸಿವೆ. ಮಾಲಿನ್ಯ ನಿಯಂತ್ರಣ ಪರಿಮಾಣ ಭಾರತ್‌ ಸ್ಟೇಜ್‌ 4ರಿಂದ ಒಮ್ಮೆಲೇ ಭಾರತ್ ಸ್ಟೇಜ್ 6ಕ್ಕೆ ಪರಿವರ್ತನೆ ಮಾಡಿದ್ದು, ಡೀಸೆಲ್ ಕಾರುಗಳ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿತ್ತು. ಹೀಗಾಗಿ ಕೆಲವು ಕಂಪನಿಗಳಷ್ಟೇ ಬಿಎಸ್‌–6 ಪರಿಮಾಣದ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಹಸ ಮಾಡಿವೆ. 

ಸದ್ಯ ಈಗ ಮಾರುಕಟ್ಟೆಯಲ್ಲಿ ಟಾಟಾ ಮೋಟರ್ಸ್‌ನ ಆಲ್ಟ್ರೋಝ್‌ ಡೀಸೆಲ್, ಫೋರ್ಡ್‌ ಫಿಗೊ/ಫ್ರೀಸ್ಟೈಲ್ ಮತ್ತು ಹುಂಡೈ ಐ10 ನಿಯಾಸ್ ಡೀಸೆಲ್ ಮಾತ್ರ ಖರೀದಿಗೆ ಲಭ್ಯವಿವೆ. ಈಗ ಹಿಂದೆ ಇದ್ದ ಟಿಯಾಗೊ, ಟಿಗಾರ್, ಸುಜುಕಿ ಬಲೆನೊ, ಸುಜುಕಿ ಸ್ವಿಫ್ಟ್‌, ಹುಂಡೈ ಐ20, ಟೊಯೊಟಾ ಇಟಿಯೋಸ್ ಲಿವಾ ಹೀಗೆ... ಮಾರುಕಟ್ಟೆಯಿಂದ ಹಿಂದೆ ಸರಿದ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳ ಪಟ್ಟಿ ಬೆಳೆಯುತ್ತದೆ. ಈ ಕಾರುಗಳ ಬೆಲೆ ಏರಿಕೆಯಿಂದ ಗ್ರಾಹಕರು ಅವುಗಳಿಂದ ದೂರ ಸರಿಯಬಹುದು ಎಂಬ ಕಾರಣದಿಂದಲೇ ತಯಾರಕರು ಇವುಗಳನ್ನು ಮಾರುಕಟ್ಟೆಯಿಂದ ಹಿಂದೆ ಪಡೆದಿದ್ದಾರೆ. ಹೀಗಾಗಿ ಮುಂದೆಯೂ ಇಂತಹ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳು ಮಾರುಕಟ್ಟೆಗೆ ಬರಲಿವೆಯೇ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.

ಹುಂಡೈ ಮತ್ತು ಕಿಯಾ ಮಾತ್ರ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಮಾರುತಿ ಸುಜುಕಿಯಂತೂ, ಡೀಸೆಲ್ ಕಾರುಗಳ ಖರೀದಿಯಿಂದ ಲಾಭವಿಲ್ಲ ಎಂದು ದೊಡ್ಡ ಜಾಹೀರಾತು ಅಭಿಯಾನವನ್ನೇ ನಡೆಸುತ್ತಿದೆ. ಕಂಪನಿಯು ತನ್ನ ಎಲ್ಲಾ ಡೀಸೆಲ್ ಕಾರುಗಳ ತಯಾರಿಕೆಯನ್ನು ನಿಲ್ಲಿಸಿದೆ. ಕೇವಲ ಡೀಸೆಲ್ ಅವತರಣಿಕೆಯಲ್ಲಿ ಲಭ್ಯವಿದ್ದ ಬ್ರೆಜಾ ಸಿಎಸ್‌ಯುವಿಯಲ್ಲೂ ಈಗ ಲಭ್ಯವಿರುವುದು ಪೆಟ್ರೋಲ್ ಅವತರಣಿಕೆ ಅಷ್ಟೆ. ಟೊಯೊಟಾ ಸಹ ಡೀಸೆಲ್ ಹ್ಯಾಚ್‌ಬ್ಯಾಕ್‌ ಅನ್ನು ಮತ್ತೆ ಮಾರುಕಟ್ಟೆಗೆ ತರುತ್ತದೆಯೇ ಎಂಬುದರ ಯಾವ ಸುಳಿವೂ ಇಲ್ಲ. ಹೀಗಾಗಿ ಪ್ರವೇಶಮಟ್ಟದ ಮತ್ತು ಪ್ರೀಮಿಯಂ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳ ಮಾರುಕಟ್ಟೆಯಲ್ಲಿ ದೊಡ್ಡ ನಿರ್ವಾತ ಉಂಟಾಗಿದೆ.

ಮಾರುಕಟ್ಟೆಯಲ್ಲಿ ಉಂಟಾಗಿರುವ ಈ ನಿರ್ವಾತ ಲಾಭವನ್ನು ಯಾರು ಪಡೆಯುತ್ತಾರೆ ಎಂಬುದು ಅತ್ಯಂತ ಕುತೂಹಲಕಾರಿಯಾದ ಸಂಗತಿ. ಹುಂಡೈ ತನ್ನ ಐ20 ಡೀಸೆಲ್‌ನ ಬಿಎಸ್‌–6 ಅವತರಣಿಕೆಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಚೆ ಇದೆ. ಐ20 ಡೀಸೆಲ್ ಮತ್ತೆ ಮಾರುಕಟ್ಟೆಗೆ ಬಂದರೆ, ಅದು ಟಾಟಾ ಆಲ್ಟ್ರೋಝ್‌ ಮತ್ತು ಫೋರ್ಡ್‌ ಫಿಗೊ/ಫ್ರೀಸ್ಟೈಲ್‌ಗಳಿಗೆ ಸ್ಪರ್ಧೆ ಒಡ್ಡಬಹುದು ಎಂಬ ನಿರೀಕ್ಷೆ ಇದೆ. ಈ ಮೂರೂ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳು ತಮ್ಮದೇ ಆದ ಹೆಗ್ಗಳಿಕೆ ಹೊಂದಿವೆ. 

ಹೆಚ್ಚು ಶಕ್ತಿಶಾಲಿ ಎಂಜಿನ್‌ ಮತ್ತು ಚಾಲನೆಯಲ್ಲಿ ರೋಮಾಂಚನ ನೀಡುವ ಗುಣಮಟ್ಟದಿಂದಲೇ ಫಿಗೊ/ಫ್ರೀಸ್ಟೈಲ್‌ ಖರೀದಿಸುವವರು ಇದ್ದಾರೆ. ಟಾಟಾ ಆಲ್ಟ್ರೋಝ್‌ ಹೆಚ್ಚು ಪ್ರೀಮಿಯಂ ಆದ ವಿನ್ಯಾಸ, ಇಂಟೀರಿಯರ್ ಮತ್ತು ಅತ್ಯುತ್ತಮ ಮ್ಯೂಸಿಕ್ ಸಿಸ್ಟಂ ಹೊಂದಿದೆ. ಅಲ್ಲದೆ ಆಲ್ಟ್ರೋಝ್‌ ಭಾರತದಲ್ಲಿ ಮಾರಾಟಕ್ಕಿರುವ ಹ್ಯಾಚ್‌ಬ್ಯಾಕ್‌ಗಳಲ್ಲೇ ಅತ್ಯಂತ ಹೆಚ್ಚು ಸುರಕ್ಷಿತ ಕಾರ್ ಎನಿಸಿದೆ.

ಭಾರತದಲ್ಲಿ ಈಗ ಮಾರಾಟಕ್ಕಿರುವ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳ ಬಗ್ಗೆ, ಈಚೆಗೆ ಟೀಂಬಿಎಚ್‌ಪಿ ನಡೆಸಿದ ಸಮೀಕ್ಷೆಯಲ್ಲಿ ಶೇ 46ರಷ್ಟು ಜನರು ಫಿಗೊ ಖರೀದಿಸುತ್ತೇವೆ ಎಂದು ಹೇಳಿದ್ದಾರೆ. ಶೇ 47ರಷ್ಟು ಜನರು ಟಾಟಾ ಆಲ್ಟ್ರೋಝ್‌ ಖರೀದಿಸುತ್ತೇವೆ ಎಂದಿದ್ದಾರೆ. ಶೇ 5ರಷ್ಟು ಜನರು ಮಾತ್ರ ಹುಂಡೈ ಐ10 ನಿಯಾಸ್ ಡೀಸೆಲ್ ಖರೀದಿಸುತ್ತೇವೆ ಎಂದಿದ್ದಾರೆ. ಶೇ 2ರಷ್ಟು ಜನರು ಬೇರೇ ಯಾವ ಡೀಸೆಲ್ ಹ್ಯಾಚ್‌ಬ್ಯಾಕ್‌ ಮಾರುಕಟ್ಟೆಗೆ ಬರುತ್ತದೆ ಎಂಬುದನ್ನು ನೋಡುತ್ತಿದ್ದೇವೆ ಎಂದಿದ್ದಾರೆ.  ಮಾರುಕಟ್ಟೆಗೆ ಬರಲಿರುವ ಹೊಸ ಡೀಸೆಲ್‌ ಹ್ಯಾಚ್‌ಬ್ಯಾಕ್‌ ಅನ್ನು ಒಮ್ಮೆ ಪರಿಶೀಲಿಸುತ್ತೇವೆ ಎಂದು ಶೇ 60ರಷ್ಟು ಮಂದಿ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.

ಹೀಗಾಗಿ ಡೀಸೆಲ್ ಹ್ಯಾಚ್‌ಬ್ಯಾಕ್‌ಗಳಿಗೆ ದೇಶದಲ್ಲಿ ಇನ್ನೂ ಮಾರುಕಟ್ಟೆ ಇದೆ ಎಂದು ವಿಶ್ಲೇಷಿಸಲಾಗಿದೆ. ಹುಂಡೈ ಮತ್ತು ಕಿಯಾ ಕಂಪನಿಗಳು ಸಣ್ಣ ಡೀಸೆಲ್ ಎಂಜಿನ್‌ನ ಬಿಎಸ್‌–6 ಅವತರಣಿಕೆಯ ಕಾಂಪಾಕ್ಟ್‌ ಎಸ್‌ಯುವಿಗಳನ್ನು ಹೊಂದಿವೆ. ಈ ಎಂಜಿನ್‌ ಇರುವ ಡೀಸೆಲ್ ಹ್ಯಾಚ್‌ಬ್ಯಾಕ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಹಾಗೇನಾದರೂ ಆದರೆ ಅದು ಗ್ರಾಹಕರಿಗೇ ಒಳ್ಳೆಯದು. ಡೀಸೆಲ್ ಹ್ಯಾಚ್‌ಬ್ಯಾಕ್‌ಗಳ ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಲಿದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಸಿಗಲಿದೆ.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು