ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಳುಪಿನ ಮೋಹ ಕಡಿಮೆಯಾಗುವುದೇ?

Last Updated 26 ಜೂನ್ 2020, 12:00 IST
ಅಕ್ಷರ ಗಾತ್ರ

ಬಿಳುಪಿನ ಕುರಿತ ಭಾರತೀಯರ ವ್ಯಾಮೋಹ ಗೊತ್ತಿರುವಂತಹದ್ದೇ. ಹಲವಾರು ವರ್ಷಗಳಿಂದ ತ್ವಚೆ ಬಿಳಿ ಬಣ್ಣವಿದ್ದರೆ ಅದು ಸೌಂದರ್ಯದ ಪ್ರತೀಕ ಎಂದು ನಂಬಿಕೊಂಡು ಬಂದವರು ನಮ್ಮ ಜನ. ಯಾವುದೇ ಮೆಟ್ರಿಮೋನಿಯಲ್‌ ಜಾಹೀರಾತನ್ನು ನೋಡಿದರೂ ಇದು ನಿಚ್ಚಳ– ಹುಡುಗಿ ಬಿಳುಪಾಗಿರಬೇಕು ಎಂಬ ಷರತ್ತು ಅಲ್ಲಿರುತ್ತಿತ್ತು. ಕೆಲವೊಮ್ಮೆ ಇದು ವರ ಬೇಕಾಗಿದ್ದಾನೆ ಎಂಬ ಕಾಲಂನಲ್ಲೂ ಕಂಡು ಬರುತ್ತಿತ್ತು. ಬಿಳುಪಿಗೆ ‘ಗೌರವ ವರ್ಣ’ ಎಂಬ ಬಣ್ಣನೆ ಬೇರೆ.

ಕಪ್ಪು/ ಕಂದು ಬಣ್ಣದ ತ್ವಚೆಯಿದ್ದವರು– ಬಹುತೇಕ ಭಾರತೀಯರು ಇದೇ ರಂಗಿನವರಿದ್ದರೂ ಕೂಡ ಟೀಕೆಗೆ, ಅವಮಾನಕ್ಕೆ ಒಳಗಾದ ಪ್ರಸಂಗಗಳು ಬಹಳ. ಹೀಗಾಗಿ ತ್ವಚೆಯ ಬಣ್ಣ ನೈಸರ್ಗಿಕ, ಹುಟ್ಟಿನಿಂದ ಬರುವಂತಹದ್ದು, ಸೌಂದರ್ಯವಿರುವುದು ನಮ್ಮ ಆಂತರ್ಯದಲ್ಲಿ ಎಂದುಕೊಂಡವರೂ ಕೂಡ ಚರ್ಮವನ್ನು ಬಿಳುಪಿಗೆ ತಿರುಗಿಸಲು ಏನೇನೋ ಕಸರತ್ತು ನಡೆಸುವುದು ಸಾಮಾನ್ಯ. ಅಜ್ಜಿಯ ಮನೆಮದ್ದಿನಿಂದ ಹಿಡಿದು, ಖ್ಯಾತ ಬ್ರ್ಯಾಂಡ್‌ಗಳ ತ್ವಚೆಯ ರಂಗು ತಿಳಿಗೊಳಿಸುವ ಕ್ರೀಮ್‌ಗಳವರೆಗೂ ಈ ಪ್ರಯೋಗ ನಡೆಸುವವರಿದ್ದಾರೆ. ಸೆಲೆಬ್ರಿಟಿಗಳಲ್ಲಿ ಕೆಲವರು ಚರ್ಮದ ಬಣ್ಣ ಬಿಳುಪಾಗಿಸುವ ಚಿಕಿತ್ಸೆಯನ್ನೂ ಪಡೆದ ನಿದರ್ಶನಗಳಿವೆ.

ಮೆಲನಿನ್‌ ಮಹಿಮೆ

ಆದರೆ ತ್ವಚೆಯ ಬಣ್ಣ ಮತ್ತು ಸೌಂದರ್ಯವನ್ನು ಬೇರ್ಪಡಿಸುವ ಯತ್ನಗಳು ಈಗ ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಫೇರ್‌ನೆಸ್‌ ಕ್ರೀಂ ತಯಾರಿಕೆ ಕಂಪನಿಯೊಂದು ತನ್ನ ಪ್ಯಾಕೇಜಿಂಗ್‌ನಲ್ಲಿ ಈ ‘ಫೇರ್‌’ ಶಬ್ದವನ್ನು ತೆಗೆದುಹಾಕಲು ನಿರ್ಧರಿಸಿದೆ. ತ್ವಚೆಯಲ್ಲಿ ಉತ್ಪಾದನೆಯಾಗುವ ಮೆಲನಿನ್‌ ಎಂಬ ವರ್ಣದ್ರವ್ಯಕ್ಕೆ ತಡೆಯೊಡ್ಡುವ ಮೂಲಕ ಬಿಳಿ ಬಣ್ಣಕ್ಕೆ ತಿರುಗಿಸುವ ಕ್ರೀಮ್‌ ಇದು. ಮೂರು ದಶಕಗಳ ಹಿಂದೆ ಈ ಉತ್ಪನ್ನ ಮಾರುಕಟ್ಟೆ ಪ್ರವೇಶಿಸಿದ ನಂತರ ಬಹಳಷ್ಟು ಇಂತಹದೇ ಉತ್ಪನ್ನಗಳು ಭಾರತದ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳು ಮತ್ತು ಆಫ್ರಿಕಾದ ಮಾರುಕಟ್ಟೆಗೆ ದಾಂಗುಟಿಯಿಟ್ಟಿವೆ. ತಿಳಿ ಬಣ್ಣದ ತ್ವಚೆ ಯಶಸ್ಸಿಗೆ ಮುನ್ನುಡಿ ಎಂಬ ರೀತಿಯಲ್ಲೂ ಮಾರುಕಟ್ಟೆಗಾಗಿ ಪ್ರಚಾರ ನಡೆದಿತ್ತು.

ಅಮೆರಿಕದಲ್ಲಿ ನಡೆದ ಜಾರ್ಜ್‌ ಫ್ಲಾಯ್ಡ್‌ ಹತ್ಯೆಯಿಂದಾಗಿ ‘ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಎಂಬ ಆಂದೋಲನ ಜಗತ್ತಿನಾದ್ಯಂತ ತೀವ್ರವಾಗುತ್ತಿರುವ ಈ ಸಂದರ್ಭದಲ್ಲಿ ಕಂಪನಿಯ ಈ ನಿರ್ಧಾರ ಹೊರಬಿದ್ದಿದೆ.

ಇಂತಹುದೇ ಹೆಜ್ಜೆಯನ್ನಿಟ್ಟಿರುವ ಭಾರತದ ಮೆಟ್ರಿಮೋನಿಯಲ್‌ ಕಂಪನಿಯೊಂದು ಸ್ಕಿನ್‌ ಟೋನ್‌ ಫಿಲ್ಟರ್‌ ಅನ್ನು ತನ್ನ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ.

ಟೀಕೆಗೆ ಕಡಿವಾಣ

ತನ್ನ ಕಂದು ಬಣ್ಣದ ತ್ವಚೆಯಿಂದ ‘ಡಸ್ಕಿ’ ಚೆಲುವೆ ಎಂದೇ ಖ್ಯಾತರಾದ ಬಾಲಿವುಡ್ ನಟಿ ಮತ್ತು ರೂಪದರ್ಶಿ ಬಿಪಾಸಾ ಬಸು ಕೂಡ ಬಣ್ಣ ಬಿಳುಪಾಗಿಸುವ ಕ್ರೀಮ್‌ ವಿರುದ್ಧ ಹಲವು ಬಾರಿ ಮಾತನಾಡಿದ್ದರು. ಈಗ ಕೂಡ ಹರ್ಷ ವ್ಯಕ್ತಪಡಿಸಿದ್ದು, ಕಪ್ಪು ಅಥವಾ ಕಂದು ಬಣ್ಣದ ತ್ವಚೆ ಕುರಿತು ಇರುವ ನಕಾರಾತ್ಮಕ ನಿಲುವು, ಟೀಕೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎನ್ನುತ್ತಾರೆ.

ತ್ವಚೆಯ ಬಣ್ಣ ಎನ್ನುವುದು ನೈಸರ್ಗಿಕ. ಬಣ್ಣಕ್ಕೆ ಕಾರಣವಾಗುವ ವರ್ಣದ್ರವ್ಯ (ಮೆಲನಿನ್‌) ಸೂರ್ಯನ ಬೆಳಕಿನಲ್ಲಿರುವ ಅಪಾಯಕಾರಿ ಅತಿ ನೇರಳೆ (ಅಲ್ಟ್ರಾ ವೈಲಟ್‌) ಕಿರಣವನ್ನು ತಡೆಯುವ ತಾಕತ್ತು ಹೊಂದಿದೆ. ಹೀಗಾಗಿ ವ್ಯಕ್ತಿಯ ಸೌಂದರ್ಯಕ್ಕೆ ಅದನ್ನು ತಳಕು ಹಾಕುವುದು ಸರಿಯಲ್ಲ ಎಂಬುದಕ್ಕೆ ಈ ನಡೆಯಿಂದ ಪುಷ್ಟಿ ಸಿಕ್ಕಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT