ಶುಕ್ರವಾರ, ಡಿಸೆಂಬರ್ 9, 2022
22 °C

ಬ್ಯೂಟಿ ಟಿಪ್ಸ್: ಮೇಕಪ್ ಹೀಗಿರಲಿ...

ಕೆ.ವಿ.ರಾಜಲಕ್ಷ್ಮಿ Updated:

ಅಕ್ಷರ ಗಾತ್ರ : | |

ಹಬ್ಬ ಹರಿದಿನ, ಶುಭ ಸಮಾರಂಭಗಳು ಎಂದ ಕೂಡಲೇ ಹೆಣ್ಣುಮಕ್ಕಳು ವಿಶೇಷವಾಗಿ ಅಲಂಕರಿ ಸಿಕೊಂಡು ಸಂಭ್ರಮಿಸುವ ಅವಕಾಶ. ವಿವಿಧ ಸೀರೆ ಉಡುಗೆಗಳ ಜೊತೆಗೆ ಪೂರಕವಾಗಿ ಒಂದಿಷ್ಟು ಮೇಕಪ್ ಇದ್ದರೆ ಅದರ ಸೆಳೆತವೇ ಬೇರೆ. ಅಲಂಕಾರಿಕ ಪ್ರಸಾದನಗಳು, ಸಹಜವಾಗಿ ಚಂದ ಇರುವವರ ಸೌಂದರ್ಯ ಹೆಚ್ಚಿಸಿದರೆ, ಸಾಧಾರಣ ರೂಪಿನವರು ಇನ್ನಷ್ಟು ಸುಂದರ ಕಾಣುವಂತೆ ಮಾಡುತ್ತದೆ.

ಮೇಕಪ್‌ನತ್ತಗಮನ ಹರಿಸುವ ಮುನ್ನ, ಕೇಶವಿನ್ಯಾಸಕ್ಕೆ ಆದ್ಯತೆ ಕೊಡುವುದು ಉತ್ತಮ. ಮೇಕಪ್ ಅಥವಾ ಅಂದ ಹೆಚ್ಚಿಸುವ ಈ ಕೆಲಸದಲ್ಲಿ ಮುಖ್ಯವಾದ ಹಂತಗಳು ಕ್ಲೆನ್ಸಿಂಗ್ (ಶುದ್ಧಗೊಳಿಸುವುದು), ಮಾಯಿಶ್ಚರೈಸಿಂಗ್ (ತಂಪಾಗಿಸುವುದು).

ಕ್ಲೆನ್ಸಿಂಗ್: ಮುಖವನ್ನು ಕಣ್ಣಿಗೆ ಕಾಣದ ಧೂಳು ಕೊಳೆಗಳಿಂದ ಮುಕ್ತವಾಗಿಸುವ ವಿಧಾನ. ಮಾರುಕಟ್ಟೆಯಲ್ಲಿ ಚರ್ಮದ ಸ್ವಭಾವಕ್ಕೆ ಹೊಂದುವ ಕ್ಲೆನ್ಸರ್ ಉಪಯೋಗಿಸಬಹುದು.

ಕ್ಲೆನ್ಸಿಂಗ್ ಮಿಲ್ಕ್ ಅನ್ನು ಮುಖ,ಕಿವಿ, ಕುತ್ತಿಗೆ, ಭಾಗಕ್ಕೆ ಸಣ್ಣ ಸಣ್ಣ ಚುಕ್ಕಿಗಳಂತೆ ಇಟ್ಟು ವರ್ತುಲಾಕಾರದಲ್ಲಿ ನಯವಾಗಿ ತಿಕ್ಕಿ ಎಲ್ಲಕಡೆ ( ವಿಶೇಷವಾಗಿ ಕಣ್ಣು, ಮೂಗು ಮತ್ತು ತುಟಿಯ ಮೇಲ್ಬಾಗ) ಸಮವಾಗಿ ಹರಡುವಂತೆ ಗಮನಿಸಿಕೊಳ್ಳಿ. ನಂತರ ಹತ್ತಿಯಿಂದ ಒರೆಸಿದರೆ ಚರ್ಮವು ಸ್ವಚ್ಛವಾಗುತ್ತದೆ. ಮೂಗಿನ ಸುತ್ತ, ತುಸು ನೀರು ಸವರಿ ಇದರ ಮೇಲೆ ಕ್ಲೆನ್ಸಿಂಗ್ ನೋಸ್ ಸ್ಟ್ರಿಪ್ಸ್ ಅಂಟಿಸಿ. ತ್ವಚೆಯ ಗುಣಕ್ಕೆ ತಕ್ಕಂತೆ ಐದರಿಂದ ಹತ್ತು ನಿಮಿಷದೊಳಗೆ, ತೇವಾಂಶ ಹೀರಿ ಒಣಗುವ ಸ್ಟ್ರಿಪ್ಸ್ ತೆಗೆದುಬಿಡಿ. ಇದರಿಂದ ಬ್ಲಾಕ್,ವೈಟ್ ಹೆಡ್ ಚುಕ್ಕಿಗಳು ಇದ್ದಲ್ಲಿ ಶುಭ್ರವಾಗಿ, ಸಣ್ಣರಂಧ್ರಗಳು ಕಾಣದಂತೆ ಚರ್ಮ ಬಿಗಿಯಾಗಿ ಮೂಗು ಇನ್ನಷ್ಟು ಹೊಳಪುಗೊಳ್ಳುತ್ತದೆ.

ಮುಂದಿನ ಹಂತದಲ್ಲಿ ನಿಮ್ಮ ತ್ವಚೆಯ ಗುಣ ಮತ್ತು ಬಣ್ಣಕ್ಕೆ ಹೊಂದುವ ಆಲ್ ಇನ್ ಒನ್ ಕ್ರೀಮ್ ( ಮಾಯಿಶ್ಚರೈಸರ್, ಪ್ರೈಮರ್, ಫೌಂಡೇಶನ್ ) ನ್ನು, ಕ್ಲೆನ್ಸ್ ಆದ ಜಾಗಕ್ಕೆ ಸಮವಾಗಿ ಸವರಿಕೊಳ್ಳಿ. (ಒಂದುವೇಳೆ ಈ ಕ್ರೀಮ್ ಇಲ್ಲದ ಪಕ್ಷದಲ್ಲಿ ಅನುಕ್ರಮವಾಗಿ ಮಾಯಿಶ್ಚರೈಸರ್ ಮತ್ತು ಸ್ಕಿನ್ ಟೋನ್ ಗೆ ಸರಿಹೊಂದುವ ಫೌಂಡೇಶನ್ ಕ್ರೀಮ್ ಅನ್ನು ಹಚ್ಚಿಕೊಳ್ಳಿ). ನಂತರ ಮ್ಯಾಟ್ ಫಿನಿಷ್ ಕಾಂಪ್ಯಾಕ್ಟ್ ಪೌಡರ್ ಹಚ್ಚಿಕೊಳ್ಳಬಹುದು. ಗ್ರಾಂಡ್ ಲುಕ್ ಬೇಕಿದ್ದಲ್ಲಿ ತೆಳುವಾಗಿ ಶಿಮ್ಮರ್‌ (shimmer) ಪೌಡರನ್ನು ಹಣೆ,ಕಣ್ಣಿನ ರೆಪ್ಪೆಯ ಮೇಲ್ಭಾಗ,ಕೆನ್ನೆ,ಮೂಗಿನ ಗೆರೆ, ಮೇಲೆ ತೆಳುವಾಗಿ ಬ್ರಶ್ ನಿಂದ ಹೈ ಲೈಟ್ ಮಾಡಿಕೊಳ್ಳಿ.

(ತೋಳು ರಹಿತ ಅಥವಾ ಅರೆತೋಳು ಉಡುಗೆ ಧರಿಸುವಾಗ, ಇದೇ ವಿಧಾನವನ್ನು ಅನುಸರಿಸಿ ಕೈಗಳನ್ನು ಅಂದಗೊಳಿಸಿ )

* ಕಣ್ಣಿಗೆ ಸ್ಮಡ್ಜ್‌ಪ್ರೂಫ್‌(smudgeproof) ಕಾಜಲ್ ಪೆನ್ಸಿಲ್ ಬಳಸಿ, ಐಲೈನರ್‌ನಿಂದ ಕಣ್ಣರೆಪ್ಪೆಯ ಅಂಚನ್ನು ತೀಡಿಕೊಳ್ಳಿ. ಅಗಲ, ಬಟ್ಟಲು ಕಂಗಳಿರುವವರು ತೆಳ್ಳಗೆ ಮತ್ತು ಕಿರಿದಾದ ಕಣ್ಣುಗಳಿಗೆ ಸ್ವಲ್ಪ ದಟ್ಟವಾಗಿ ಹಚ್ಚಿಕೊಳ್ಳಿ. ನಂತರ ಸ್ಮಡ್ಜ್‌ಪ್ರೂಫ್‌ ಮಸ್ಕರಾದಿಂದ ಕಣ್ಣಿನ ರೆಪ್ಪೆಗಳನ್ನು ನಾಜೂಕಾಗಿ ಬ್ರಶ್ ಮಾಡಿಕೊಳ್ಳಿ. ಇದೇ ಮಸ್ಕರಾ ಬ್ರಶ್ ಅಥವಾ ಐ ಬ್ರೋ ಬ್ರಶ್ ನಿಂದ ಹುಬ್ಬುಗಳನ್ನು ತೀಡಿಕೊಳ್ಳಿ.

* ತುಟಿಗಳಿಗೆ, ಮೊದಲು ಲಿಪ್ ಪೆನ್ಸಿಲ್‌ನಿಂದ ತುಟಿ ಅಂಚನ್ನು ಗುರುತಿಸಿಕೊಂಡು, ವ್ಯಾಸಲಿನ್ ಜೆಲ್ ಅಥವಾ ಲಿಪ್ ಬಾಮ್ ಸವರಿ. ನಂತರ ನಿಮ್ಮ ಆಯ್ಕೆಯ ಲಿಪ‍್‌ಸ್ಟಿಕ್‌ ಅನ್ನು ಸಮವಾಗಿ ಅಂಚಿನೊಳಗೆ ಹರಡಿ. ತೆಳ್ಳಗಿನ ತುಟಿಗಳು ಹೈಲೈಟ್ ಆಗಲು, ಲಿಪ್‌ಗ್ಲಾಸ್‌ (*ipg*oss) ಅನ್ನು ಲೇಪಿಸಿ. ಇದರಿಂದ ತುಟಿ ಹೆಚ್ಚು ಆಕರ್ಷಕವಾಗಿ ಕಾಣುವುದು.

ಬಾಹ್ಯ ಸೌಂದರ್ಯಕ್ಕಾಗಿ ಮೇಕಪ್ ಎಷ್ಟೇ ಮಾಡಿಕೊಂಡರೂ, ನಿದ್ರಾಹೀನ, ಅನಾರೋಗ್ಯ ಸ್ಥಿತಿಯಲ್ಲಿ ಅದರ ಪೂರ್ಣ ಪರಿಣಾಮ ನಿರೀಕ್ಷಿಸಲಾಗದು. ಹೀಗಾಗಿ, ಮೇಕಪ್‌ನ ಉತ್ತಮ ಫಲಿತಾಂಶ ಸಿಗಬೇಕೆಂದರೆ ಆಂತರಿಕ ಸೌಂದರ್ಯಕ್ಕೆ ಪೂರಕವಾದ ಆರೋಗ್ಯಕರ ಆಹಾರಸೇವನೆ ಮತ್ತು ಒಳ್ಳೆಯ ನಿದ್ದೆ ಅಪೇಕ್ಷಣೀಯ ಎಂಬುದನ್ನು ಮರೆಯಬಾರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು