ಬುಧವಾರ, ಸೆಪ್ಟೆಂಬರ್ 29, 2021
20 °C

ಮರಳಿ ಕಚೇರಿಗೆ: ಬದಲಾಗಲಿ ಫ್ಯಾಷನ್ ಟ್ರೆಂಡ್‌

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಶುರುವಾದ ನಂತರ ಎಲ್ಲರ ಜೀವನಶೈಲಿಯಲ್ಲೂ ಹಲವು ಬಗೆಯ ಬದಲಾವಣೆಗಳಾಗಿವೆ. ಹಿಂದೆಲ್ಲಾ ಕಚೇರಿ, ಸಿನಿಮಾ, ಶಾಪಿಂಗ್‌ ಎಂದು ಬಗೆ ಬಗೆಯ ಬಟ್ಟೆ ಧರಿಸಿ, ಸಿಂಗರಿಸಿಕೊಳ್ಳುತ್ತಿದ್ದ ಫ್ಯಾಷನ್ ಪ್ರಿಯರು ಈಗ ವರ್ಕ್ ಫ್ರಂ ಹೋಮ್‌ ಉಡುಪಿಗೆ ಹೊಂದಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದು ಈಗ ಕೊರೊನಾ ನಿಯಂತ್ರಣವಾದ ಹಿನ್ನೆಲೆಯಲ್ಲಿ ಮತ್ತೆ ಕಚೇರಿಯತ್ತ ಮರಳಬೇಕಿದೆ. ಆದರೆ ಕಪಾಟಿನಲ್ಲಿ ಮಡಿಸಿ ಇಟ್ಟಿದ್ದ ಉಡುಪುಗಳು ಹಲವರಿಗೆ ಹೊಂದುತ್ತಿಲ್ಲ. ತೂಕದಲ್ಲಿ ವ್ಯತ್ಯಾಸವಾದ ಕಾರಣ ದಿರಿಸುಗಳಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ಮನೆಯಲ್ಲೇ ಕುಳಿತು ದೇಹತೂಕದಲ್ಲಿ ಹೆಚ್ಚಾಗಿದೆ, ಇದರೊಂದಿಗೆ ಕೆಲವು ಟ್ರೆಂಡ್‌ಗಳೂ ಬದಲಾಗಿವೆ. ಹಾಗಂತ ಚಿಂತಿಸಬೇಕಿಲ್ಲ. ಇರುವುದರಲ್ಲೇ ಒಂದಿಷ್ಟು ಮಾರ್ಪಾಡು ಮಾಡಿಕೊಂಡು ಧರಿಸಬಹುದು.

ಸ್ಟ್ರೆಚೇಬಲ್‌ ಪ್ಯಾಂಟ್‌ಗಳು
ಲೆಗ್ಗಿಂಗ್ಸ್‌ ಅಥವಾ ಜೆಗ್ಗಿಂಗ್ಸ್‌ನಂತಹ ಸ್ಟ್ರೆಚೇಬಲ್‌ ಪ್ಯಾಂಟ್‌ಗಳು ಈ ಸಮಯದಲ್ಲಿ ಧರಿಸಲು ಹೆಚ್ಚು ಅನುಕೂಲ ಎನ್ನಿಸುತ್ತವೆ. ಇವು ನಮ್ಮ ತೂಕದಲ್ಲಿ ವ್ಯತ್ಯಾಸವಾಗಿದ್ದರೂ ಮೈಗಂಟುವ ಕಾರಣ ದೇಹಕ್ಕೆ ಹೊಂದಿಕೊಳ್ಳುತ್ತವೆ. ಇದರ ಜೊತೆ ಭಾರತೀಯ ಹಾಗೂ ಪಾಶ್ಚಾತ್ಯ ಶೈಲಿಯ ಟಾಪ್‌ಗಳನ್ನು ಧರಿಸಬಹುದು. ಸಡಿಲವಾದ ಟೀ ಶರ್ಟ್‌ ಅಥವಾ ಶರ್ಟ್‌ ಟ್ರೆಂಡಿಯಾಗಿ ಕಾಣಿಸುತ್ತದೆ. ಮಳೆಗಾಲವಾದ ಕಾರಣ ಓವರ್ ಕೋಟ್, ಜಾಕೆಟ್‌ಗಳನ್ನೂ ಧರಿಸಬಹುದು.

ಅಗಲವಾದ ಪ್ಯಾಂಟ್‌ಗಳು
ಪಲಾಜೊದಂತಹ ಅಗಲವಾದ ಪ್ಯಾಂಟ್‌ಗಳು ಈ ಸಮಯದಲ್ಲಿ ಹೆಚ್ಚು ಹೊಂದುತ್ತವೆ. ತೂಕ ಹೆಚ್ಚಾಗಿದ್ದರೂ ಧರಿಸಬಹುದು. ಇದರೊಂದಿಗೆ ಸಿಲ್ಹೋಟ್‌ ಪ್ಯಾಂಟ್‌ಗಳ ಬಳಕೆಯೂ ಉತ್ತಮ. ಇದರ ಮೇಲೆ ಟೀ ಶರ್ಟ್‌, ಕ್ರಾಪ್ ಟಾಪ್‌ಗಳನ್ನು ಧರಿಸಬಹುದು. ಪಲಾಜೊ ಪ್ಯಾಂಟ್ ಮೇಲೆ ಕುರ್ತಾ ಟಾಪ್‌ ಕೂಡ ಧರಿಸಲು ಸೂಕ್ತ.

ಪುಲ್‌ ಓವರ್ ಹಾಗೂ ಜಾಕೆಟ್‌ಗಳು
ಪುಲ್‌ ಓವರ್‌, ಓವರ್‌ ಕೋಟ್ ಹಾಗೂ ಜಾಕೆಟ್‌ಗಳು ಎಲ್ಲಾ ಕಾಲದಲ್ಲೂ ಧರಿಸಲು ಸೂಕ್ತ ಎನ್ನಿಸುತ್ತವೆ. ದೇಹತೂಕದಲ್ಲಿ ಕಡಿಮೆಯಾದರೂ, ಹೆಚ್ಚಾದರೂ ಇದನ್ನು ಧರಿಸಿದರೆ ಬಹಳ ವ್ಯತ್ಯಾಸ ಕಾಣಿಸುವುದಿಲ್ಲ. ಅಲ್ಲದೇ ಈಗ ಮಳೆಗಾಲ ಹಾಗೂ ಮುಂದೆ ಚಳಿಗಾಲ ಬರುವುದರಿಂದ ಪುಲ್‌ ಓವರ್‌ ಹಾಗೂ ಜಾಕೆಟ್‌ಗಳನ್ನೇ ಹೆಚ್ಚಾಗಿ ಧರಿಸಬಹುದು. ಇವು ಕಚೇರಿಗೆ ತೆರಳುವಾಗ ಸೂಕ್ತ ಎನ್ನಿಸುತ್ತವೆ. ತೂಕ ವ್ಯತ್ಯಾಸವಾದರೆ ಇದು ಅಷ್ಟೊಂದು ತಿಳಿಯುವುದಿಲ್ಲ.

ಸ್ಲ್ಯಾಕ್‌ ಹಾಗೂ ಸ್ಕರ್ಟ್‌ಗಳು
ಪೆನ್ಸಿಲ್‌ ಪ್ಯಾಂಟ್‌ನಂತೆ ಕಾಣುವ ಸ್ಲ್ಯಾಕ್‌ಗಳು ಕಚೇರಿಗೆ ಆಫೀಶಿಯಲ್‌ ಲುಕ್ ನೀಡುವುದರಲ್ಲಿ ಸಂಶಯವಿಲ್ಲ. ಇದರ ಮೇಲೆ ಶರ್ಟ್‌ ಧರಿಸಿ ಇನ್‌ಶರ್ಟ್ ಮಾಡಬಹುದು. ಇದು ಸ್ವಲ್ಪ ದೊಗಲೆಯಾಗಿರುವ ಕಾರಣ ದಪ್ಪಗಾಗಿದ್ದರೂ ಧರಿಸಬಹುದು. ಚೌಕಾಕಾರದ ಸ್ಲ್ಯಾಕ್‌ಗಳು ಇಂದಿನ ಟ್ರೆಂಡ್‌. ಇದರ ಮೇಲೆ ಶರ್ಟ್‌, ಪುಲ್‌ ಓವರ್‌ ಹಾಗೂ ಟೀ ಶರ್ಟ್‌ಗಳನ್ನು ಧರಿಸಬಹುದು. ಸ್ಕರ್ಟ್‌ಗಳು ಈ ಸಮಯದಲ್ಲಿ ಕಚೇರಿಗೆ ತೆರಳುವವರಿಗೆ ಹೆಚ್ಚು ಸೂಕ್ತ ಎನ್ನಿಸುತ್ತವೆ.

ಮಿಕ್ಸ್ ಅಂಡ್‌ ಮ್ಯಾಚ್ ಟಾಪ್‌ಗಳು
ಯಾವುದೇ ವಿನ್ಯಾಸ ಅಥವಾ ಶೈಲಿಯ ಸಡಿಲವಾದ ಮಿಕ್ಸ್ ಅಂಡ್ ಮ್ಯಾಚ್ ಟಾಪ್‌ಗಳು ಈ ಸಮಯದಲ್ಲಿ ಧರಿಸಲು ಹೆಚ್ಚು ಸೂಕ್ತ ಎನ್ನಿಸುತ್ತವೆ. ಇವು ಟ್ರೆಂಡಿ ಲುಕ್‌ ಸಿಗುವಂತೆ ಮಾಡುತ್ತವೆ. ಅಲ್ಲದೇ ಹಲವು ದಿನಗಳಿಂದ ಮನೆಯಲ್ಲೇ ಇದ್ದು ಒಂದೇ ರೀತಿಯ ಉಡುಪುಗಳನ್ನು ಧರಿಸಿದವರಿಗೆ ಈ ರೀತಿಯ ಉಡುಪುಗಳು ಕೊಂಚ ಭಿನ್ನ ಎನ್ನಿಸಬಹುದು.

ಕಟ್ಟುವಂತಹ ಉಡುಪುಗಳು
ಸೊಂಟದ ಬಳಿ ಕಟ್ಟುವಂತಹ ಡ್ರೆಸ್‌ಗಳು ತೂಕ ಹೆಚ್ಚಿದಾಗ ಧರಿಸಲು ಸೂಕ್ತ ಎನ್ನಿಸುತ್ತವೆ. ಕೆಲವೊಂದು ಸ್ಕರ್ಟ್‌ಗಳು, ಪಲಾಜೊ ಪ್ಯಾಂಟ್‌ಗಳು ಸೊಂಟದ ಬಳಿ ಸುತ್ತುವಂತೆ ಇರುತ್ತವೆ. ಇದು ತೆಳ್ಳಗಾದಾಗಲೂ ಹಾಗೂ ದಪ್ಪಗಾದಾಗಲೂ ಧರಿಸಲು ಸೂಕ್ತ ಎನ್ನಿಸುತ್ತವೆ.

ತಿಳಿ ಬಣ್ಣದ ಉಡುಪುಗಳು
ನಿಮ್ಮ ದೇಹತೂಕ ಕೊಂಚ ಹೆಚ್ಚಾಗಿದ್ದರೆ ಗಾಢ ಬಣ್ಣದ ಉಡುಪು ಧರಿಸುವುದಕ್ಕಿಂತ ತಿಳಿ ಬಣ್ಣದ ಉಡುಪನ್ನು ಧರಿಸುವುದು ಹೆಚ್ಚು ಸೂಕ್ತ. ಅದರಲ್ಲೂ ಅಲ್ಲಲ್ಲಿ ಸಣ್ಣ ಸಣ್ಣ ಪ್ರಿಂಟ್ ಇರುವ ವಿನ್ಯಾಸದ ಟಾಪ್‌ಗಳನ್ನು ಧರಿಸಬಹುದು. ಹಾಗೆಯೇ ಮ್ಯಾಕ್ಸಿ ರೂಪದ ಉಡುಪುಗಳೂ ಟ್ರೆಂಡ್‌ ಸೆಟ್‌ ಮಾಡುವುದರಲ್ಲಿ ಸಂಶಯವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು