ಶನಿವಾರ, ಮೇ 8, 2021
17 °C

ಟ್ರೆಂಡ್ ಸೃಷ್ಟಿಸಿದ ಹೂವಿನ ಚಿತ್ತಾರದ ಉಡುಪು

ರೇಷ್ನಾ Updated:

ಅಕ್ಷರ ಗಾತ್ರ : | |

Prajavani

ಋತುಮಾನಗಳು ಬದಲಾದಂತೆ ಫ್ಯಾಷನ್ ಟ್ರೆಂಡ್‌ಗಳೂ ಬದಲಾಗುತ್ತವೆ. ಆಯಾ ಋತುಮಾನಕ್ಕೆ ಹೊಂದುವಂತಹ ಉಡುಪುಗಳು ಫ್ಯಾಷನ್ ಪ್ರಿಯರ ಮನ ತಣಿಸಲು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಬೇಸಿಗೆ ಆರಂಭವಾಗಿರುವುದರಿಂದ ಹೊಸ ಬಗೆಯ ಫ್ಯಾಷನ್‌ ದಾಂಗುಡಿಯಿಟ್ಟಿದೆ. ಈ ಬೇಸಿಗೆಯಲ್ಲಿ ದೊಡ್ಡ ದೊಡ್ಡ ಹೂವಿನ ಚಿತ್ತಾರದ ಉಡುಪುಗಳನ್ನು ಫ್ಯಾಷನ್ ಪ್ರಿಯರು ಹೆಚ್ಚು ಮೆಚ್ಚುತ್ತಿದ್ದಾರೆ. 1980 ಹಾಗೂ 1990ರ ಕಾಲಘಟ್ಟದಲ್ಲಿ ಹೆಚ್ಚಾಗಿದ್ದ ಈ ದೊಡ್ಡ ಹೂವಿನ ಚಿತ್ತಾರದ ಉಡುಪುಗಳು ಮಹಿಳೆ ಹಾಗೂ ಪುರುಷ ಇಬ್ಬರನ್ನೂ ಸೆಳೆಯುತ್ತಿವೆ.

ಪಾಶ್ಚಾತ್ಯ ಹಾಗೂ ಭಾರತೀಯ ಈ ಎರಡೂ ಶೈಲಿಯ ಉಡುಪುಗಳಲ್ಲಿ ಈಗ ಹೂವಿನ ಚಿತ್ತಾರ ಎದ್ದು ಕಾಣುತ್ತಿದೆ. ಕಸೂತಿ ಮಾಡಿದ ಉಡುಪಿನಲ್ಲೂ ಇದೇ ಹೆಚ್ಚು ಗಮನ ಸೆಳೆಯುತ್ತಿದೆ.

ಜೀನ್ಸ್‌, ಪಲಾಜೊದೊಂದಿಗೆ..: ಸಾಮಾನ್ಯವಾಗಿ ಜೀನ್ಸ್ ಅಥವಾ ಪಲಾಜೊ ಪ್ಯಾಂಟ್ ಮೇಲೆ ಪ್ಲೇನ್ ಟಾಪ್‌ ಅಥವಾ ಚಿಕ್ಕ ಚಿಕ್ಕ ಹೂವಿನ ವಿನ್ಯಾಸದ ಟಾಪ್‌ಗಳನ್ನು ತೊಡುವುದು ಸಾಮಾನ್ಯ. ಆದರೆ ಈಗ ಟಾಪ್‌, ಕ್ರಾಪ್ ಟಾಪ್‌, ಟೀ ಶರ್ಟ್ ಎಲ್ಲದರ ಮೇಲೆ ದೊಡ್ಡ ಚಿತ್ತಾರದ ವಿವಿಧ ಬಣ್ಣದ ಹೂಗಳ ವಿನ್ಯಾಸವು ಹೆಚ್ಚು ಆಕರ್ಷಿಸುತ್ತಿದೆ. ಇವು ಒಂದು ರೀತಿಯ ಭಿನ್ನ ಲುಕ್‌ ನೀಡುವುದು ಸುಳ್ಳಲ್ಲ.

ಸೀರೆಯ ಮೇಲೂ ಹೂವಿನ ಚಿತ್ತಾರ: ಹಿಂದೆ ನಟಿಯರು ದೊಡ್ಡ ದೊಡ್ಡ ಹೂವಿನ ಚಿತ್ತಾರದ ಸೀರೆ, ಉದ್ದ ತೋಳಿನ ರವಿಕೆ ಧರಿಸಿ ಸಿನಿಮಾಗಳಲ್ಲಿ ಹಾಡುಗಳಿಗೆ ನರ್ತಿಸುತ್ತಿದ್ದರು. ಈಗ ಅಂತಹ ಫ್ಯಾಷನ್ ಮತ್ತೆ ಟ್ರೆಂಡ್ ಆಗಿದೆ. ಪೂರ್ತಿ ಸೀರೆಯ ಮೇಲೆ ಒಂದೇ ಬಣ್ಣದ ದೊಡ್ಡ ದೊಡ್ಡ ಹೂವಿನ ಚಿತ್ತಾರವಿರುತ್ತದೆ. ಸೀರೆಗೆ ಕಾಂಟ್ರಾಸ್ಟ್ ಬಣ್ಣದಲ್ಲಿರುವ ಹೂವಿನ ಚಿತ್ತಾರಗಳು ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ನಟಿಯರಿಗೂ ಅಚ್ಚುಮೆಚ್ಚು: ಹೂವಿನ ಚಿತ್ತಾರದ ಉಡುಪುಗಳು, ಸೀರೆಗಳು, ಕುರ್ತಾ, ಚೂಡಿದಾರ್‌ಗಳು ಈಗ ನಟಿಯರನ್ನು ಕೂಡ ಹೆಚ್ಚು ಸೆಳೆಯುತ್ತಿವೆ. ಗಾಢ ಕೆಂಪು ಬಣ್ಣದ ಮೇಲೆ ಬಿಳಿ ಹೂವಿನ ಚಿತ್ತಾರವಿರುವ ಉದ್ದನೆಯ ಮ್ಯಾಕ್ಸಿ ಧರಿಸಿ ಫೋಟೊಗೆ ಪೋಸ್ ನೀಡಿದ್ದ ಶಿಲ್ಪಾ ಶೆಟ್ಟಿ ಆ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಗಾಢ ಹಸಿರು ಬಣ್ಣದ ಲಾಂಗ್‌ ಡ್ರೆಸ್‌ ಮೇಲೆ ಹೂವಿನ ಚಿತ್ತಾರವಿರುವ ಡ್ರೆಸ್ ಧರಿಸಿದ ನಟಿ ಆಲಿಯಾ ಭಟ್ ಇನ್ನಷ್ಟು ಸುಂದರಿಯಾಗಿ ಕಂಡಿದ್ದು ಸುಳ್ಳಲ್ಲ. ಪ್ರಿಯಾಂಕ ಚೋಪ್ರಾ, ಕತ್ರಿನಾ ಕೈಫ್‌, ರಾಶಿ ಖನ್ನಾ, ಐಶ್ವರ್ಯಾ ರೈ ಎಲ್ಲರೂ ಹೂವಿನ ಚಿತ್ತಾರದ ಡ್ರೆಸ್ ಧರಿಸುವ ಮೂಲಕ ಈ ಟ್ರೆಂಡ್‌ಗೆ ಸೈ ಎಂದಿದ್ದಾರೆ.

ಪಾಶ್ಚ್ಯಾತ್ಯ ಶೈಲಿಯಲ್ಲೂ ಟ್ರೆಂಡ್‌: ಪಾರ್ಟಿ ಅಥವಾ ಇತರ ಸಮಾರಂಭಗಳಿಗೆ ಧರಿಸುವ ಶಾರ್ಟ್‌ ಸ್ಕರ್ಟ್–ಟಾಪ್, ಮಿನಿ ಡ್ರೆಸ್‌, ಮಿನಿ ಫ್ರಾಕ್‌ನಂತಹ ಡ್ರೆಸ್‌ಗಳಲ್ಲೂ ಈಗ ಈ ಚಿತ್ತಾರ ಟ್ರೆಂಡ್ ಸೃಷ್ಟಿಸುತ್ತಿದೆ. ಇದರೊಂದಿಗೆ ಅದೇ ಬಣ್ಣದ ಅಂತಹದ್ದೇ ವಿನ್ಯಾಸವಿರುವ ಹ್ಯಾಂಡ್‌ಬ್ಯಾಗ್‌ಗಳು ಇನ್ನಷ್ಟು ಸ್ಟೈಲಿಷ್ ಆಗಿ ಕಾಣುವಂತೆ ಮಾಡುತ್ತಿವೆ.

ದುಪಟ್ಟಾ, ಲೆಹೆಂಗಾಕ್ಕೂ ಇದೇ ಅಚ್ಚುಮೆಚ್ಚು: ಭಾರತೀಯ ಶೈಲಿಯ ಉಡುಪುಗಳಾದ ಚೂಡಿದಾರ್, ಅನಾರ್ಕಲಿ, ಲೆಹೆಂಗಾ, ಕುರ್ತಾ, ಗೌನ್‌ನಂತಹ ಉಡುಪುಗಳಲ್ಲೂ ಈಗ ದೊಡ್ಡ ಚಿತ್ತಾರದ ವಿನ್ಯಾಸವು ರಾರಾಜಿಸುತ್ತಿದೆ. ಪ್ಲೇನ್ ಚೂಡಿದಾರ್‌ ಜೊತೆಗೆ ಸಂಪೂರ್ಣ ಹೂವಿನ ಚಿತ್ತಾರದ ದುಪಟ್ಟಾ ಧರಿಸಿದರೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು