ಶನಿವಾರ, ಡಿಸೆಂಬರ್ 5, 2020
21 °C

PV Web Exclusive: ಟ್ರೆಂಡ್ ಆಗುತ್ತಿದೆ ‘ಖಣ’ ಫ್ಯಾಷನ್

ಮಂಜುಶ್ರೀ ಎಂ. ಕಡಕೋಳ Updated:

ಅಕ್ಷರ ಗಾತ್ರ : | |

Prajavani

ನಟಿ ಶ್ವೇತಾ ಶ್ರೀವಾಸ್ತವ್ ತಮ್ಮ ಮಗಳೊಂದಿಗೆ ಮಾಡಿಸಿದ ಕಲರ್‌ಫುಲ್ ಫೋಟೊಶೂಟ್ ಈಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕೈಮಗ್ಗದ ಇಳಕಲ್ ಸೀರೆ ಉಟ್ಟಿದ ಶ್ವೇತಾ ಭಿನ್ನ ನೋಟದಲ್ಲಿ ನೋಡುಗರ ಗಮನ ಸೆಳೆದಿದ್ದರೆ, ಅವರ ಮಗಳು ಗುಳೇದಗುಡ್ಡದ ಖಣದಲ್ಲಿ ವಿನ್ಯಾಸ ಮಾಡಿದ್ದ ಲಂಗ ಜಾಕೀಟಿನಲ್ಲಿ ಮುದ್ದುಮುದ್ದಾಗಿ ಕಾಣುತ್ತಿದ್ದಳು.

ರವಿಕೆಗೆ ಮಾತ್ರ ಸೀಮಿತವಾಗಿದ್ದ ಖಣ ಇದೀಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಪುಟ್ಟ ಮಕ್ಕಳ ಲಂಗ ಜಾಕೀಟು, ಯುವತಿಯರ ಲಾಂಗ್ ಗೌನ್‌ನಿಂದ ಹಿಡಿದು ತಲೆದಿಂಬಿನ ಕವರ್‌ ತನಕವೂ ನಾನಾ ವಿನ್ಯಾಸದಲ್ಲಿ ಖಣ ಛಾಪು ಮೂಡಿಸುತ್ತಿದೆ.

ಸಾಂಪ್ರದಾಯಿಕ ಚೆಲುವು, ಆಕರ್ಷಕ ವರ್ಣ ಸಂಯೋಜನೆಯಿಂದ ಕಣ್ಸೆಳೆಯುವ ಗುಳೇದಗುಡ್ಡದ ‘ಖಣ’ ಫ್ಯಾಷನ್ ಲೋಕದಲ್ಲಿ ಸದ್ದಿಲ್ಲದೇ ಟ್ರೆಂಡ್ ಸೃಷ್ಟಿಸುತ್ತಿದೆ.

ಕೆಲ ವಸ್ತ್ರವಿನ್ಯಾಸಕರು ಖಣದಲ್ಲಿ ನಾನಾ ರೀತಿಯ ಪ್ರಯೋಗ ಮಾಡುವ ಮೂಲಕ ಸಾಂಪ್ರದಾಯಿಕ ನೋಟದ ಈ ವಸ್ತ್ರಕ್ಕೆ ಆಧುನಿಕತೆಯ ಸ್ಪರ್ಶ ನೀಡುತ್ತಿದ್ದಾರೆ. ವಸ್ತ್ರವಿನ್ಯಾಸಕಿಯರಾದ ಸುಮಾ ರೆಡ್ಡಿ, ಗೀತಾ ಪಾಟೀಲ್, ಜಾಹ್ನವಿ ಕುಲಕರ್ಣಿ ಅವರು ಖಣದಲ್ಲಿ ಸದಾ ಒಂದಿಲ್ಲೊಂದು ಪ್ರಯೋಗ ಮಾಡುತ್ತಲೇ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ.

ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನಾಧಾರಿತ ‘ಮಹಾನಾಯಕ’ ಧಾರಾವಾಹಿಯಲ್ಲೂ ಪುಟ್ಟ ಹೆಣ್ಣುಮಕ್ಕಳು ಖಣದಲ್ಲಿ ವಿನ್ಯಾಸ ಮಾಡಿದ ಲಂಗ–ಜಾಕೀಟು ತೊಟ್ಟು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

‘ಗುಳೇದಗುಡ್ಡ ಖಣದ ಹೆಚ್ಚಿನ ವಿನ್ಯಾಸಗಳು ಸೂರ್ಯ ದೇವರ ಪ್ರತಿರೂಪಗಳಾಗಿವೆ. ಸೂರ್ಯದೇವರ ಮುಖ, ಸಿದ್ದೇಶ್ವರ ಮುಕುಟ, ತೇರು, ಆನೆ ಹೆಜ್ಜೆ, ತುಳಸಿ ಎಲೆ ಮತ್ತು ಸೂಜಿ ಮಲ್ಲಿಗೆಯ ವಿನ್ಯಾಸಗಳು ಖಣದ ಅಂದವನ್ನು ಹೆಚ್ಚಿಸುತ್ತವೆ’ ಎನ್ನುತ್ತಾರೆ ವಸ್ತ್ರವಿನ್ಯಾಸಕಿ ಸುಮಾ ರೆಡ್ಡಿ.

ಸಂಸ್ಕೃತಿಯ ಪ್ರತೀಕ

ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಖಣವನ್ನು ಸಂಸ್ಕೃತಿಯ ಪ್ರತೀಕವೆಂತಲೇ ಭಾವಿಸುತ್ತಾರೆ. ವಿಶೇಷವಾಗಿ ಹಬ್ಬ–ಹರಿದಿನಗಳಲ್ಲಿ ದೇವರಿಗೆ ಬಟ್ಟೆ ಅರ್ಪಿಸುವಾಗ ಸೀರೆಯ ಜತೆಗೆ ಕಡ್ಡಾಯವಾಗಿ ಗುಳೇದಗುಡ್ಡದ ಖಣವನ್ನು ಇಡುವುದು ಹಿಂದಿನಿಂದಲೂ ರೂಢಿಗತವಾಗಿದೆ. ಪ್ರಾದೇಶಿಕ ಸೊಗಡನ್ನು ಬಿಂಬಿಸುವ ಖಣ, ಧರಿಸಿದವರನ್ನು ನಾಲ್ಕು ಜನರಲ್ಲಿ ಥಟ್ಟನೆ ಎದ್ದುಕಾಣುವಂತೆ ಮಾಡುತ್ತದೆ.

ಅಂದ ಇಮ್ಮಡಿ

‘ಭಿನ್ನ ನೋಟ, ಆಕರ್ಷಕ ವರ್ಣ ಸಂಯೋಜನೆಯ ಕಾರಣಕ್ಕಾಗಿ ಮಹಿಳೆಯರು ತಿಳಿಬಣ್ಣದ ಸೀರೆಗಳಷ್ಟೇ ಅಲ್ಲ, ಇತರ ಗಾಢ ವರ್ಣಗಳ ಸೀರೆಗಳಿಗೂ ಖಣದ ರವಿಕೆ ತೊಟ್ಟಲ್ಲಿ ಧರಿಸಿದವರ ಅಂದ ಇಮ್ಮಡಿಸುತ್ತದೆ’ ಎನ್ನುತ್ತಾರೆ ವಸ್ತ್ರ ವಿನ್ಯಾಸಕರು.

‘ನಟಿ ಶ್ವೇತಾ ತಮ್ಮ ಮಗಳಿಗೆ ಸಾಂಪ್ರದಾಯಿಕ ಚೆಲುವು ನೀಡುವ ಫ್ರಾಬ್ರಿಕ್ ಬೇಕು ಅಂತ ಹೇಳಿದಾಗ, ಗುಳೇದಗುಡ್ಡದ ಖಣದಲ್ಲಿ ವಸ್ತ್ರವಿನ್ಯಾಸ ರೂಪಿಸಿದೆ. ನನ್ನ ನಿರೀಕ್ಷೆಗೂ ಮೀರಿ ಈ ವಿನ್ಯಾಸ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು. ಖಣ ನೋಡಲು ಸಾಂಪ್ರದಾಯಿಕವಾಗಿದೆ. ಹಾಗಾಗಿ ಹಬ್ಬಗಳು,ಶುಭ ಸಮಾರಂಭಗಳಿಗೆ ಇದು ಹೇಳಿ ಮಾಡಿಸಿದ ವಸ್ತ್ರ’ ಎನ್ನುತ್ತಾರೆ ವಸ್ತ್ರವಿನ್ಯಾಸಕಿ ಸುಮಾರೆಡ್ಡಿ.

‘ಹೊರದೇಶಗಳಿಂದ ಭಾರತಕ್ಕೆ ಅನೇಕ ಫ್ರಾಬ್ರಿಕ್‌ಗಳು ಬರುತ್ತಿವೆ. ಚೈನಾ ಸಿಲ್ಕ್, ಸ್ಯಾಟಿನ್ ಇತ್ಯಾದಿ ಬಳಸುವ ಬದಲು ಮಕ್ಕಳಿಗೆ ದೇಸಿಯ ಸೊಗಡಿನ ಇಂಥ ವಸ್ತ್ರಗಳನ್ನು ಬಳಸಿದರೆ ನೋಡಲು ಚೆನ್ನಾಗಿರುತ್ತದೆ. ಮುಖ್ಯವಾಗಿ ಖಣ ಕರ್ನಾಟಕದ್ದು. ಇದನ್ನು ನಾವು ಹೆಚ್ಚೆಚ್ಚು ಬಳಸುವ ಮೂಲಕ ನೇಕಾರರಿಗೆ ನೆರವಾಗಬಹುದು. ಅಷ್ಟೇ ಅಲ್ಲ, ನಮ್ಮ ಸಂಸ್ಕೃತಿಯನ್ನೂ ಉಳಿಸಿಕೊಂಡಂತಾಗುತ್ತದೆ’ ಎನ್ನುತ್ತಾರೆ ಅವರು.

ರೇಷ್ಮೆ ಲಂಗದ ಬದಲು ಖಣದ ಲಂಗ

ಪುಟ್ಟಮಕ್ಕಳಿಗೆ ರೇಷ್ಮೆ ಬಟ್ಟೆಯಲ್ಲಿ ಲಂಗ–ಜಾಕೀಟು ಹೊಲೆಸುವುದು ವಾಡಿಕೆ. ಎಲ್ಲರಿಗೂ ರೇಷ್ಮೆ ಬಟ್ಟೆ ಕೊಳ್ಳಲು ಆಗದಿರಬಹುದು. ಅದರ ಬೆಲೆಯೂ ದುಬಾರಿ. ಅಲ್ಲದೇ, ರೇಷ್ಮೆಯನ್ನು ನಿಭಾಯಿಸುವುದು ತುಸು ತ್ರಾಸದಾಯಕ. ಅಂಥವರು ಮಕ್ಕಳಿಗೆ ಖಣದ ಬಟ್ಟೆಯಲ್ಲಿ ಲಂಗ–ಜಾಕೀಟು, ಫ್ರಾಕ್, ಚೂಡಿದಾರ್ ಹೊಲೆಸಬಹುದು. ರೇಷ್ಮೆ ಮತ್ತು ಹತ್ತಿ ಬಟ್ಟೆಯಿಂದ ರೂಪಿತವಾಗಿರುವ ಖಣ ಮಕ್ಕಳ ಚರ್ಮಕ್ಕೂ ಹಿತಕಾರಿ ಎಂದು ವಿವರಿಸುತ್ತಾರೆ ಅವರು.

ಈ ಹಿಂದೆ ಸುಮಾ, ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ವಸ್ತ್ರವಿನ್ಯಾಸಕಿಯರಾದ ನಂದಿನಿ, ಪೂಜಾ ಅವರೊಂದಿಗೆ ರೂಪಿಸಿದ್ದ ಖಣದ ಗೌನ್‌ಗಳು ಗಮನ ಸೆಳೆದಿದ್ದವು. ಖಣದಲ್ಲಿ ಯುವತಿಯರಿಗಾಗಿ ನಾನಾ ವಿನ್ಯಾಸದಲ್ಲಿ ರೂಪಿಸಿದ್ದ ನೀಳ ಗೌನ್‌ಗಳು ನೋಡುಗರ ಮೆಚ್ಚುಗೆ ಗಳಿಸಿದ್ದವು.

ಬೆಂಗಳೂರಿನ ‘ಕಲೆ–ನೆಲೆ’ಯಲ್ಲಿ ಜಾಹ್ನವಿ ಕುಲಕರ್ಣಿ ಅವರು ಖಣದಲ್ಲಿ ರೂಪಿಸಿರುವ ಸೀರೆ, ಆಭರಣಗಳು, ಬಾಗಿಲು ತೋರಣ, ಸೋಫಾ ಸೆಟ್, ತಲೆದಿಂಬಿನ ಕವರ್, ಟೀ ಟ್ರೇ, ಗೋಡೆ ಮೇಲೆ ತೂಗುಹಾಕುವ ಕಲಾತ್ಮಕ ಪಟಗಳು ಫ್ಯಾಷನ್ ಪ್ರಿಯರ ಗಮನ ಸೆಳೆದಿವೆ.

 ಇನ್‌ಸ್ಟಾಗ್ರಾಂ ಲಿಂಕ್ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು