ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್ ಜಗತ್ತು | ಮಳೆಗಾಲಕ್ಕೆ ಓವರ್‌ಕೋಟ್‌ ಬ್ಲೌಸ್‌ ಟ್ರೆಂಡ್

Last Updated 28 ಜೂನ್ 2020, 9:32 IST
ಅಕ್ಷರ ಗಾತ್ರ

ನಟಿಯರು ಕೂಡ ಈಗ ‘ಐ ಲೈಕ್‌ ಸಾರಿ’ ಎನ್ನುತ್ತಾ ರ‍್ಯಾಂಪ್‌ ವಾಕ್‌, ಸಿನಿಮಾ ಕಾರ್ಯಕ್ರಮಗಳಲ್ಲಿ ಕಂಗೊಳಿಸುತ್ತಾರೆ. ಸೀರೆ ಈಗ ಬರೀ ಸಾಂಪ್ರದಾಯಿಕ ಉಡುಗೆಯಾಗಿ ಉಳಿದಿಲ್ಲ. ಸೀರೆ ಉಡುವ ಶೈಲಿಯಲ್ಲಿ ಬದಲಾವಣೆಯಾದಂತೆ, ತರಹೇವಾರಿ ವಿನ್ಯಾಸದ ರವಿಕೆಗಳು ಫ್ಯಾಷನ್ ಜಗತ್ತಿನಲ್ಲಿ ಸೀರೆಗಿಂತ ಹೆಚ್ಚು ಟ್ರಂಡ್‌ ಸೃಷ್ಟಿಸುತ್ತಿವೆ.

ಸೀರೆ ಉಟ್ಟಾಗ ಸೊಂಟ ಕಾಣಬೇಕು ಎಂಬ ಅಲಿಖಿತ ನಿಯಮವನ್ನು ಓವರ್‌ಕೋಟ್‌ ಬ್ಲೌಸ್‌ಗಳು ಮುರಿದಿವೆ. ಸೊಂಟದವರೆಗೆ ಚಾಚಿಕೊಳ್ಳುವ, ಮೊಣಕೈ ಉದ್ದದ ತೋಳಿನ ಈ ಕೋಟ್‌ಬ್ಲೌಸ್‌‌‌ ಈಗ ಮಹಿಳಾ ಉದ್ಯೋಗಿ, ಉದ್ಯಮಿಗಳ ಅಚ್ಚುಮೆಚ್ಚಾಗಿವೆ. ವಿದ್ಯಾಬಾಲನ್‌, ಸೋನಂ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್‌ ಅವರಂತಹ ಹೊಸ ತಲೆಮಾರಿನ ನಟಿಮಣಿಯರು ಕೂಡ ಈ ಟ್ರೆಂಡ್‌ಗೆ ಫಿದಾ ಆಗಿದ್ದಾರೆ.

ಓವರ್‌ಕೋಟ್‌ ಬ್ಲೌಸ್‌ ಮಳೆಗಾಲದ ಟ್ರೆಂಡಿ ಡ್ರೆಸ್‌‌ ಆಗಿದೆ.ತೊಡಲು ಆರಾಮದಾಯಕ ಎನ್ನಿಸುವ ಈ ಬ್ಲೌಸ್‌, ಫ್ಯಾಷನ್‌ ವಿಚಾರದಲ್ಲಿ ಬದಲಾದ ಮನಸ್ಥಿತಿಯನ್ನೂ ಹೇಳುತ್ತದೆ.

‘ಓವರ್‌ಕೋಟ್‌ ಬ್ಲೌಸ್‌ ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸದ ಮಿಶ್ರಣ ಎನ್ನಬಹುದು. ಮಹಿಳಾ ಉದ್ಯೋಗಿಗಳೇ ಹೆಚ್ಚಾಗಿ ಇಂತಹ ಬ್ಲೌಸ್‌ ತೊಡುತ್ತಾರೆ. ಕಾಟನ್‌, ಫ್ಯಾನ್ಸಿ, ಆರ್ಗಾಂಜಾ, ಕ್ರೇಪ್ ಹೀಗೆ ಎಲ್ಲಾ ರೀತಿಯ ಸೀರೆಗಳಿಗೆ‌ ಈ ಓವರ್‌ಕೋಟ್‌ ಬ್ಲೌಸ್‌ ಹೊಲಿಸಿಕೊಳ್ಳಬಹುದು’ ಎನ್ನುತ್ತಾರೆ ಬೆಂಗಳೂರಿನ ಯಶವಂತಪುರದ ಸಾಮುದ್ರಿಕಾ ಫ್ಯಾಷನ್ ಸಂಸ್ಥೆಯ ವಸ್ತ್ರವಿನ್ಯಾಸಕಿ ಮೀನು.

‘ಈ ಓವರ್‌ಕೋಟ್‌ ಬ್ಲೌಸ್‌ ತೊಟ್ಟ ನಂತರ ಮೇಲಿಂದ ಸೀರೆ ಸೆರಗನ್ನು ಪಿನ್‌ ಮಾಡಿದರೆ ಕಾರ್ಪೋರೇಟ್‌ ಲುಕ್‌ ಕಾಣುತ್ತದೆ. ಗುಜರಾತಿ ಶೈಲಿಯಂತೆಯೂ ಮುಂದೆ ಸೆರಗು ಹಾಕಿಕೊಳ್ಳಬಹುದು. ಹಾಗೆಯೇ ಮಾಮೂಲಿಯಂತೆ ಸೀರೆ ಉಟ್ಟು ಈ ಓವರ್‌ಕೋಟ್‌ಗಳನ್ನು ಮೇಲಿಂದ ಕೋಟ್‌ನಂತೆಯೂ ತೊಟ್ಟುಕೊಳ್ಳಬಹುದು’ ಎನ್ನುತ್ತಾರೆ ಮೀನು.

ಪ್ಲೇನ್‌ ಸೀರೆಗಳಿಗೆ ಎಂಬ್ರಾಯ್ಡರಿ ಅಥವಾ ಅದ್ಧೂರಿ ವಿನ್ಯಾಸದ ಸೀರೆಗಳಿಗೆ ಸರಳ ವಿನ್ಯಾಸದ, ಸೀರೆಯ ವಿರುದ್ಧ ಬಣ್ಣದ (ಕಾಂಟ್ರಾಸ್ಟ್‌ ಕಲರ್‌) ಓವರ್‌ಕೋಟ್‌ ಆಕರ್ಷಕವಾಗಿ ಕಾಣುತ್ತವೆ ಎಂಬುದು ಅವರ ಸಲಹೆ.

ಈ ಓವರ್‌ಕೋಟ್‌ಗಳಿಗೆ ವಯಸ್ಸಿನ ಹಂಗಿಲ್ಲ. 18ರಿಂದ 45ವರ್ಷದೊಳಗಿನ ಎಲ್ಲಾ ಮಹಿಳೆಯರಿಗೂ ತೊಡಬಹುದು. ಸಪೂರ ದೇಹದ, ಎತ್ತರ ನಿಲುವಿನ ಮಹಿಳೆಯರಿಗೆ ಇದು ಹೆಚ್ಚು ಸೂಟ್‌ ಆಗುತ್ತದೆ. ರಿಸೆಪ್ಷನ್‌, ಪಾರ್ಟಿ, ಕಚೇರಿ ಸಮಾರಂಭಗಳಿಗೆ ತೊಟ್ಟರೆ ರಿಚ್‌ ಲುಕ್‌ ಇರುತ್ತದೆ. ‘ಇದು ಎಕ್ಸಿಕ್ಯುಟಿವ್‌ ಲುಕ್‌ ನೀಡುತ್ತದೆ. ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲದವರಿಗೆ ಇದು ಉತ್ತಮ ಆಯ್ಕೆ’ ಎನ್ನುತ್ತಾರೆ ಮೀನು.

ಇಂತಹ ಬ್ಲೌಸ್‌ ತೊಟ್ಟಾಗ ಆಭರಣದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಇಷ್ಟವಿದ್ದರೆ ಇಯರ್‌ ರಿಂಗ್ಸ್‌ ಅಥವಾ ಹ್ಯಾಂಗಿಂಗ್ಸ್‌ ಹಾಕಿಕೊಳ್ಳಬಹುದು. ಇಲ್ಲದಿದ್ದರೆ ಕೂದಲು ಇಳಿಬಿಟ್ಟರಾಯಿತು. ಆದರೆ ಕಾಲಿಗೆ ಮಾತ್ರ ಹೈಹೀಲ್ಡ್ಸ್‌ ಇರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT