ಸೋಮವಾರ, ಮೇ 23, 2022
28 °C

ವಿದೇಶಿ ಒತ್ತಡ; ಸ್ಥಳೀಯ ಹೂಡಿಕೆ ಮದ್ದು

ಕೆ.ಜಿ.ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರುಪೇಟೆಗಳಲ್ಲಿ ಹೆಚ್ಚಿನ, ರಭಸದ ಏರಿಳಿತ ಕಾಣಬರುತ್ತಿದ್ದು, ಇದನ್ನು ನಿಯಂತ್ರಿಸಲು ಮಾರುಕಟ್ಟೆ ನಿಯಂತ್ರಕರಿಂದಾಗಲೀ(ಸೆಬಿ) ಅಥವಾ ಸ್ವಯಂ ನಿಯಂತ್ರಣ ಸಾಮರ್ಥ್ಯವೂ ಇರುವ `ಷೇರು ವಿನಿಮಯ ಕೇಂದ್ರ'ಗಳಿಂದಲೇ ಆಗಲೀ ಸಾಧ್ಯವಿಲ್ಲ. ಕಾರಣ ಪ್ರಸ್ತುತ ಜಾರಿಯಾಗುತ್ತಿರುವ ನಿಯಮಗಳು ಹೆಚ್ಚಾಗಿ ಇಂತಹ ಉಬ್ಬರ-ಇಳಿತದ ಪೂರಕ ವಾತಾವರಣ ನಿರ್ಮಾಣಕ್ಕೆ ಕಾರಣವಾಗಿವೆ. ಷೇರುಪೇಟೆಯಲ್ಲಿ ಸ್ಥಿರತೆ ಮೂಡಬೇಕಾದರೆ ಭಾರತದ ಮೂಲಧನವಾದ ಜನಸಾಮಾನ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಷೇರುಪೇಟೆ ಪ್ರವೇಶಿಸಬೇಕಿದೆ.ಈ ಹೂಡಿಕೆದಾರರು ಖರೀದಿಸಿದ ಷೇರುಗಳನ್ನು ವರ್ಷಗಟ್ಟಲೆ ಇಟ್ಟುಕೊಂಡಿದ್ದು, ಅದರ ಏಳ್ಗೆಯ ಲಾಭ ಪಡೆಯಲು ಸಿದ್ಧರಿರುತ್ತಾರೆ. ಆದರೆ ವಾಸ್ತವವಾಗಿ ಆಗುತ್ತಿರುವುದು ಏನೆಂದರೆ ಈಗಿನ ಷೇರುಪೇಟೆಗಳು ಸಟ್ಟಾ ವ್ಯಾಪಾರದ ಕೇಂದ್ರಗಳಾಗುತ್ತಿವೆ. ಏರಿಕೆ-ಇಳಿಕೆಗೆ ಮೂಲ ಪ್ರೇರಣೆಯ ಅಂಶಗಳನ್ನು ಹೊರತುಪಡಿಸಿ ಇತರೆ ಬಾಹ್ಯ ಕಾರಣಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿವೆ.ಒಂದು ಕಂಪೆನಿ ಪ್ರಕಟಿಸಿದ ಸಾಧನೆಗಳು ಉತ್ತಮವಾಗಿದ್ದರೂ ಮುಂದಿನ ದಿನಗಳಲ್ಲಿ ಸಾಧನೆ ಉತ್ತಮವಾಗಿರಲಾರದೆಂಬ ಕಾರಣಕ್ಕಾಗಿಯಾಗಲೀ ಅಥವಾ ಪ್ರಕಟಿಸಿದ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಕಾರಣವನ್ನೋ ಮುಂದೊಡ್ಡಿ ಷೇರಿನ ಬೆಲೆಯನ್ನು ಊಹಿಸಲು ಅಸಾಧ್ಯವಾದ ಮಟ್ಟಕ್ಕೆ ತುಳಿಯಲಾಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಎಂದರೆ ಎಂಜಿನಿಯರಿಂಗ್ ವಲಯದ ಅಗ್ರಮಾನ್ಯ `ಲಾರ್ಸನ್ ಅಂಡ್ ಟ್ಯೂಬ್ರೊ' ಕಂನಿಯ ಷೇರಿನ ಬೆಲೆಯ ಅಗಾಧ ಕುಸಿತ. ಈ ರೀತಿಯ ವಾತಾವರಣ ಹಾಗೂ ಹೂಡಿಕೆದಾರರಲ್ಲಿ ತ್ವರಿತ ಹಣ ಗಳಿಸಬೇಕೆಂಬ ಚಪಲವನ್ನು ಬಿತ್ತುತ್ತಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳ ಪಾತ್ರವೂ ಇಂಥ ನಡೆಗೆ ಕಾರಣವಾಗಿದೆ.ಪಾರಿಭಾಷಿಕ ವಿಶ್ಲೇಷಣೆ ಈ ಗುಣಗಳ ಬೆಳವಣಿಗೆಗೆ ಪೂರಕವಾಗಿಯೇ ಇವೆ. ಈ ಎಲ್ಲಾ ಬೆಳವಣಿಗೆಗಳು ಕಂಪೆನಿಯ ಮೂಲ ಅಂಶಗಳಾದ ಲಾಭಾಂಶ, ಪ್ರತಿ ಷೇರಿನ ಗಳಿಕೆ, ಪುಸ್ತಕ ಮೌಲ್ಯ, ದರ, ಸಾಧನೆಯ ಅನುಪಾತ ಮುಂತಾದವುಗಳನ್ನು ಹೂಡಿಕೆದಾರರು ಮರೆಯುವಂತೆ ಮಾಡಿವೆ.ಸುಮಾರು 65 ಲಕ್ಷ ಕೋಟಿ ರೂಪಾಯಿ ಬಂಡವಾಳೀಕರಣ ಮೌಲ್ಯವಿರುವ ಷೇರು ಪೇಟೆಯಲ್ಲಿ ಈ ಆಗುತ್ತಿರುವ ವಹಿವಾಟಿನ ಗಾತ್ರ ಕೇವಲ 2 ಸಾವಿರ ಕೋಟಿ. ಅದರಲ್ಲಿ ಹೆಚ್ಚಿನ ಭಾಗ ದೈನಂದಿನ ಚುಕ್ತಾ ಚಟುವಟಿಕೆಯೇ ಆಗಿದೆ. ಇದೇ ವಾತಾವರಣ ಇನ್ನಷ್ಟು ಕಾಲ ಮುಂದುವರಿದರೆ ಷೇರುಪೇಟೆಯಲ್ಲಿ ಭಾಗಿಯಾಗಿರುವ ಬೆರಳೆಣಿಕೆಯಷ್ಟು ಸಣ್ಣ ಹೂಡಿಕೆದಾರರೂ ಅಲ್ಲಿಂದ ದೂರವಾಗುವುದರಲ್ಲಿ ಸಂದೇಹವೇ ಇಲ್ಲ.ಯಾವುದೇ ಯೋಜನೆಯಾಗಲಿ ಯಶಸ್ಸು ಕಾಣಬೇಕಾದರೆ ಜನಸಾಮಾನ್ಯರನ್ನು ಆಕರ್ಷಿಸುವುದು ಅತ್ಯಗತ್ಯ. ಇದಕ್ಕೆ ಸೂಕ್ತ ಉದಾಹರಣೆ; ಹೊಸದಾಗಿ ಬಿಡುಗಡೆಯಾಗುವ ಚಲನಚಿತ್ರಗಳ, ಬಿಡುವಿಲ್ಲದೆ ನಡೆಯುತ್ತಿರುವ ಐಪಿಎಲ್ ಮ್ಯಾಚ್‌ಗಳೇ ಆಗಿವೆ. ಕಾರ್ಪೊರೆಟ್ ವಲಯದ ಉದಾಹರಣೆಗಳೆಂದರೆ; ಹಿಂದೂಸ್ಥಾನ್ ಯೂನಿಲಿವರ್, ಬ್ರಿಟಾನಿಯಾ, ಟಾಟಾ ಗ್ಲೋಬಲ್, ನೆಸ್ಲೆ, ಪ್ರಾಕ್ಟರ್ ಅಂಡ್ ಗ್ಯಾಬ್ಲರ್ ಮೊದಲಾದ ಕಂಪೆನಿಗಳು. ಈ ಕಂಪೆನಿಗಳ ವಿವಿಧ ಉತ್ಪನ್ನಗಳನ್ನು ಗ್ರಾಹಕರು ಖರೀದಿಸಿ ಬೆಂಬಲಿಸುವ ಕಾರಣ ಈ ಕಂಪೆನಿಗಳು ಉತ್ತಮವಾದ ಫಲಿತಾಂಶವನ್ನೇ ನೀಡುತ್ತಿವೆ.ಇದರ ಪ್ರಭಾವ ಎಷ್ಟಿದೆ ಎಂದರೆ ಹಿಂದೂಸ್ತಾನ್ ಯೂನಿಲಿವರ್‌ನ ಮಾತೃ ಸಂಸ್ಥೆ `ಯೂನಿಲಿವರ್' ಭಾರತದ ಕಂಪೆನಿಯಲ್ಲಿನ ತನ್ನ ಬಂಡವಾಳ ಪಾಲುದಾರಿಕೆಯನ್ನು ಶೇ 75ಕ್ಕೆ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಷೇರು ಖರೀದಿಗಾಗಿ ಮುಕ್ತ ಆಹ್ವಾನವನ್ನೂ ನೀಡುತ್ತಿದೆ. ಇದು ವಿದೇಶಿ ವಿನಿಮಯದ ಒಳಹರಿವಿಗೂ ಕಾರಣವಾಗಲಿದೆ. ಆ ಮೂಲಕ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೂ ಬೆಂಬಲ ನೀಡುವಂತಹ ನಡೆಯಾಗಿದೆ. ಇದೇ ಕಾರಣವಾಗಿ ಗ್ಲಾಕ್ಸೊ ಸ್ಮಿತ್‌ಕ್ಲೈನ್ ಸಮೂಹದಿಂದಲೂ ವಿದೇಶಿ ವಿನಿಮಯದ ಒಳಹರಿವು ಆಗಿರುವುದು ಮಾರುಕಟ್ಟೆಗೆ ಹೆಚ್ಚು ವಿದೇಶಿ ಬಂಡವಾಳದ ಹರಿವ ಬರುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.ಸಣ್ಣ ಹೂಡಿಕೆದಾರರನ್ನು ಷೇರುಪೇಟೆಯತ್ತ ಆಕರ್ಷಿಸಲು ಇರುವ ಅವಕಾಶಗಳನ್ನು ಬದಿಗೊತ್ತಿ ಪೇಟೆಗಳನ್ನು ಸಟ್ಟಾ ವ್ಯಾಪಾರದತ್ತ ಕೊಂಡೊಯ್ಯುತ್ತಿರುವ ಕ್ರಮಗಳಿಗೆ ಬೆಂಬಲವಾಗಿರುವ ನಡೆಯೆಂದರೆ ಈಗಿನ `ಆಫರ್ ಫಾರ್ ಸೇಲ್'(ಒಎಫ್‌ಎಸ್) ವಿಧಾನ. ಈ ಯೋಜನೆಯಂತೆ ಕಂಪೆನಿಗಳು ವಿತರಿಸುವ ಷೇರುಗಳ ಬೆಲೆಗಳು ಆಕರ್ಷಣೀಯವಾಗಿದ್ದರೂ, ಸೆಕೆಂಡರಿ ಮಾರುಕಟ್ಟೆ ಕುಸಿಯಲು ಕಾರಣವೇ ಈ ಮುಕ್ತ ಚಟುವಟಿಕೆ.ಹಿಂದೆ ಹಿಂದೂಸ್ತಾನ್ ಕಾಪರ್ ಕಂಪೆನಿಯ ಷೇರಿನ ಬೆಲೆರೂ260ರ ಸಮೀಪವಿದ್ದಾಗರೂ155ರಂತೆ ವಿತರಿಸಿದ ಕಾರಣ, ಕೈಯಲ್ಲಿದ್ದ ಎಲ್ಲ ಷೇರುಗಳನ್ನು ಮಾರಾಟ ಮಾಡಿ ಹೊಸ ವಿತರಣೆ ಮಾರ್ಗದಲ್ಲಿ ಷೇರು ಪಡೆಯಲು ಮುಂದಾಗುವಂತೆ ಉತ್ತೇಜಿಸಲಾಗಿದೆ. ಅದೇ ರೀತಿ ಕಳೆದ ವಾರದ `ಎಂಎಂಟಿಸಿ' ವಿತರಣೆಯ ಪ್ರತಿ ಷೇರಿಗೆರೂ60ರಂತೆ ಮೌಲ್ಯ ನಿಗದಿಪಡಿಸಿದ್ದರೂ ಅಂದಿನ ಪೇಟೆಯ ಬೆಲೆರೂ210ರ ಸಮೀಪವಿತ್ತು. ಈ ಅಂತರದ ಕಾರಣ ನೈಜ ಪೇಟೆಯಲ್ಲಿ ಮಾರಾಟದ ಒತ್ತಡ ಹೆಚ್ಚಾಗಿ ಷೇರನ್ನು ಕೊಳ್ಳುವವರೇ ಲ್ಲದಂತೆ ಮಾಡಿತು. ಇಂತಹ ಕ್ರಮಗಳು ವಿತ್ತೀಯ ಸಂಸ್ಥೆಗಳಿಂದಲೇ ಹೆಚ್ಚಾಗಿವೆ.`ಎಲ್‌ಐಸಿ'ಯಂತಹ ಸಂಸ್ಥೆಗಳೂ ಈಗ ಹೊಂದಿರುವ ಷೇರನ್ನು ಮಾರಾಟ ಮಾಡಲು ಮುಂದಾಗಿವೆ. `ಆಫರ್ ಫಾರ್ ಸೇಲ್' ಮೂಲಕ ಷೇರು ಮರು ಖರೀದಿಗೂ ಯತ್ನಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಬಂಡವಾಳ ಹಿಂತೆಗೆತ(ಷೇರು ವಿಕ್ರಯ) ಪ್ರಕ್ರಿಯೆ ಯಶಸ್ಸು ಕಾಣುವಲ್ಲಿ `ಎಲ್‌ಐಸಿ'ಯಂತಹ ಸಂಸ್ಥೆಗಳ ಪಾತ್ರ ಮಹತ್ವ ಪಡೆದಿದೆ.ಇದು ಪೇಟೆಯಲ್ಲಿ ಏರಿಳಿತಗಳ ಒತ್ತಡಕ್ಕೆ ಮೂಲ ಕಾರಣವಾಗಿದೆ. ಹಿಂದಿನ ವಾರದಲ್ಲಿ ಉಂಟಾದ ಕುಸಿತದಲ್ಲಿ ಸನ್ ಟಿವಿ ನೆಟ್‌ವರ್ಕ್, ಅದಾನಿ ಎಂಟರ್‌ಪ್ರೈಸಸ್, ಜೆಪಿ ಇನ್‌ಫ್ರಾಟೆಕ್, ಜೆ.ಎಸ್.ಡಬ್ಲ್ಯು ಎನರ್ಜಿ, ಜೆಟ್ ಏರ್‌ವೇಸ್ ಮುಂತಾದವು ಆಫರ್ ಫಾರ್ ಸೇಲ್‌ನಲ್ಲಿ ವಿವರಿಸಿದ ಷೇರುಗಳ ಮಾರಾಟಕ್ಕೆ ಬಂದು ವಾತಾವರಣವನ್ನು ಕದಡಿವೆ.ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮವೆಂದರೆ `ಆಫರ್ ಫಾರ್ ಸೇಲ್'ನಲ್ಲಿ ಖರೀದಿಸಿದ ಷೇರುಗಳಿಗೆ ಕನಿಷ್ಠ 3 ತಿಂಗಳ `ಲಾಕ್ ಇನ್' ಮಿತಿ ವಿಧಿಸುವುದು ಅಗತ್ಯ. ಈ ಆಫರ್ ಫಾರ್ ಸೇಲ್‌ನಲ್ಲಿ ಸಣ್ಣ ಹೂಡಿಕೆದಾರರೂ ಭಾಗವಹಿಸಬಹುದು ಎಂಬುದನ್ನು ಹೆಚ್ಚು ಪ್ರಚುರಪಡಿಸಿ ತಿಳಿವಳಿಕೆ ಮೂಡಿಸುವುದು ಸಹ ಅಗತ್ಯ.ಸಣ್ಣ ಹೂಡಿಕೆದಾರರ ಬೆಂಬಲದಿಂದಲೇ ಪೇಟೆಗಳು ಸ್ಥಿರತೆ ಕಾಣುವುದು. ಅಲ್ಲದೆ ಕಂಪೆನಿಗಳು ತೋರುವ ಸಾಧನೆಯಿಂದ ಹೂಡಿಕೆಗಳು, ವಿದೇಶಿ ಹೂಡಿಕೆ ಸಹ ಸರದಿಯಲ್ಲಿ ಹರಿದು ಬರುವುದು. ಇದು ದೀರ್ಘಕಾಲೀನವಾಗುವುದರಿಂದ ಮಾರುಕಟ್ಟೆಗೆ ಆರೋಗ್ಯಕಾರಿಯೂ ಆಗಿರುತ್ತದೆ. ಇದಕ್ಕೆ `ಕ್ರಿಸಿಲ್' ಸಂಸ್ಥೆಯು ಷೇರುಗಳಿಗೆ ನೀಡಿರುವ ಮುಕ್ತ ಆಹ್ವಾನ ಉತ್ತಮ ಉದಾಹರಣೆಯಾಗಿದೆ.ಆಂತರಿಕವಾಗಿ ಹೂಡಿಕೆದಾರರು ಬೆಳೆದಂತೆ ಪೇಟೆಗಳು ಸುಭದ್ರ - ಇದು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುವುದರಿಂದ ವಿದೇಶಿ ವಿನಿಮಯ ಒಳಹರಿವು ಹೆಚ್ಚಾಗುತ್ತದೆ. ಇದರಿಂದ ಸದ್ಯ ದೇಶದ ಎದುರಿಸುತ್ತಿರುವ ವಿತ್ತೀಯ ಕೊರತೆ ನೀಗಿಸಿ ಸ್ಥಿರತೆಗೂ ಮೂಲವಾಗುತ್ತದೆ.`ಕರೆಂಟ್ ಅಕೌಂಟ್ ಡಿಫಿಸಿಟ್'(ಚಾಲ್ತಿ ಖಾತೆ ಕೊರತೆ)ಗೆ ಕೇವಲ ವಿದೇಶಿ ವಿತ್ತೀಯ ಸಂಸ್ಥೆಗಳಿಗೆ ಮಣೆ ಹಾಕುವ ಬದಲು ಸ್ಥಳೀಯವಾಗಿ ಸಣ್ಣ ಹೂಡಿಕೆದಾರರ ಸೇರಿದಂತೆ ಎಲ್ಲ ವರ್ಗದ ಹೂಡಿಕೆದಾರರ ಬೆಂಬಲ ಪಡೆದು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮ ಕೈಗೊಂಡಲ್ಲಿ ಉದ್ಯಮಗಳು ಸಕಾರಾತ್ಮಕವಾಗಿ ಬೆಳೆಯಲು ಅವಕಾಶವಾಗುತ್ತದೆ. ಸ್ಥಿರತೆಯೊಂದಿಗೆ ಸಾಧನೆಗೆ ಸ್ವಯಂ ಪ್ರೇರಿತವಾಗಿ ಹೂಡಿಕೆಯ ಒಳಹರಿವು ಬರುವುದಕ್ಕೆ ಮುಂದಾಗುವುದು ದೀರ್ಘಕಾಲೀನ ಕ್ರಮವಾಗುತ್ತದೆ. ಯಾವುದೂ ಸುಲಭ ಸಾಧ್ಯವಲ್ಲ, ಆದರೆ ಈ ದಿಸೆಯಲ್ಲಿ ಪ್ರಯತ್ನ ಮಾಡಿದರೆ ಯಶಸ್ಸು ಖಂಡಿತ ಸಾಧ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.