ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ: ಬಿ.ಎಸ್. ಯಡಿಯೂರಪ್ಪ

Published 16 ಫೆಬ್ರುವರಿ 2024, 11:03 IST
Last Updated 16 ಫೆಬ್ರುವರಿ 2024, 11:03 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ದಾಖಲೆಯ 15ನೇ ಬಜೆಟ್ ಮಂಡಿಸಿದ್ದಾರೆ. ಈ ಕುರಿತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

‘ದಾಖಲೆಯ 15ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಇಂತಹ ಕಳಪೆ ಬಜೆಟ್ ನಿರೀಕ್ಷಿಸಿರಲಿಲ್ಲ. ನಾನು ನನ್ನ ಜೀವಮಾನದಲ್ಲಿಯೇ ಇಂತಹ ಕಳಪೆ ಮುಂಗಡ ಪತ್ರವನ್ನು ನೋಡಿರಲಿಲ್ಲ' ಎಂದು ಕಿಡಿಕಾರಿದ್ದಾರೆ.

ಈ ಬಜೆಟ್ ಎಲ್ಲಾ ದೃಷ್ಟಿ ಕೋನದಲ್ಲಿಯೂ ಕಳಪೆಯಾಗಿದೆ. ಬಜೆಟ್‌ನ ಬಹುತೇಕ ಅಂಶಗಳನ್ನು ಕೇಂದ್ರ ಸರ್ಕಾರವನ್ನು ದೂರಲು ಮೀಸಲಿಡಲಾಗಿದೆಯೇ ಹೊರತು ರಾಜ್ಯದ ಅಭಿವೃದ್ಧಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಎಲ್ಲಿಯೂ ಪ್ರಸ್ತಾಪಿಸಿಲ್ಲ.

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಈ ಆಯವ್ಯಯ ಕಾಣುತ್ತಿದೆ. ವಾಸ್ತವಿಕ ಅಂಕಿಸಂಖ್ಯೆಗಳನ್ನು ನೀಡದೇ ಕೇವಲ ಕಾಲ್ಪನಿಕ ಅಂಕಿಸಂಖ್ಯೆಗಳನ್ನು ನೀಡಿ ಕೇಂದ್ರ ಸರ್ಕಾರದಿಂದ ಇನ್ನೂ ಹೆಚ್ಚುವರಿ ಅನುದಾನ ಬರಬೇಕಿತ್ತು ಎಂದು ಸಬೂಬು ಹೇಳುತ್ತಾ, ರಾಜ್ಯದ ಜನರನ್ನು ದಿಕ್ಕು ತಪ್ಪಿಸಲೆಂದೇ ಮಾಡಿದ ಆಯವ್ಯಯದಂತೆ ಗೋಚರಿಸುತ್ತಿದೆ.

ಡಿ.ಕೆ ಶಿವಕುಮಾರ್ ಅವರಿಗೂ ಮೋಸ:

ಈ ಆಯವ್ಯಯ ರಾಜ್ಯದ ಜನರಿಗೆ ಮಾಡಿದ ಮಹಾ ಮೋಸದಂತೆ ಗೋಚರವಾಗುತ್ತಿದೆ. ರಾಜ್ಯದ ಜನರಿಗೆ ಮೋಸ ಮಾಡುವುದಿರಲಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಿರ್ವಹಿಸುತ್ತಿರುವ ಜಲಸಂಪನ್ಮೂಲ ಇಲಾಖೆಗೆ ಯಾವುದೇ ಅನುದಾನ ನೀಡದೇ ಅವರಿಗೂ ಮೋಸ ಹಾಗೂ ಅನ್ಯಾಯ ಮಾಡಿರುವುದು ಎದ್ದು ಕಾಣುತ್ತಿದೆ.

ಡಿ.ಕೆ. ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಮಾಡಿದೆ ಸಾಧನೆ. ಈ ಯೋಜನೆಯನ್ನು ಆರಂಭಿಸುವ ಯಾವ ಖಾತರಿಯೂ ಈ ಆಯವ್ಯಯದಲ್ಲಿ ಇಲ್ಲ.

ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯ:

ಕೃಷ್ಣ ಕೊಳ್ಳದ ಯೋಜನೆಗಳಿಗೆ ಹಾಗೂ ಮಹಾದಾಯಿ ಯೋಜನೆ ಹಾಗೂ ನವಿಲೆ ಜಲಾಶಯ ಯೋಜನೆಗೆ ಅನುದಾನ ನಿಗದಿಪಡಿಸಿಲ್ಲ. ಇದರಿಂದ ರೈತರಿಗೆ ಹಾಗೂ ಹಿಂದುಳಿದ ಭಾಗಗಳಾದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಿಗೆ ಅನ್ಯಾಯ ಮಾಡಲಾಗಿದೆ.

ರಾಜಧಾನಿ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಯಾವುದೇ ಅನುದಾನ ನಿಗದಿಪಡಿಸಿಲ್ಲ. ಕೇವಲ ಘೋಷಣೆಗಳನ್ನಷ್ಟೇ ಮಾಡಲಾಗಿದೆ. ಇದರಿಂದ ಬೆಂಗಳೂರಿನ ಯಾವ ಸಮಸ್ಯೆಗಳಿಗೂ ಮುಕ್ತಿ ಸಿಗುವುದಿಲ್ಲ. ಪರಿಣಾಮವಾಗಿ ಬೆಂಗಳೂರಿಗೆ ಹರಿದು ಬರುವ ಬಂಡವಾಳ ಹೂಡಿಕೆ ಕಡಿಮೆಯಾಗಿ ಅಭಿವೃದ್ಧಿ ಕುಂಠಿತವಾಗಲಿದೆ.

ಸರ್ಕಾರಿ ನೌಕರರ ಬಹುದಿನದ ಬೇಡಿಕೆಯಾದ 7ನೇ ವೇತನ ಆಯೋಗ ಅನುಷ್ಠಾನಗೊಳಿಸುವ ಬಗ್ಗೆ ಯಾವುದೇ ಸ್ಪಷ್ಟವಾದ ಘೋಷಣೆ ಇಲ್ಲ. ಇದರಿಂದ ಖಜಾನೆ ಖಾಲಿಯಾಗಿರುವುದು ಕಂಡು ಬರುತ್ತಿದೆ.

ತಮ್ಮ ವರುಣಾ ಕ್ಷೇತ್ರಕ್ಕೆ ₹ 2000 ಕೋಟಿಗಳನ್ನು ಬಜೆಟ್‌ನಲ್ಲಿ ಒದಗಿಸಿದ್ದು ರಾಜ್ಯದ ಬೇರೆ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೇ ತಾರತಮ್ಮ ಮರೆದಿದ್ದಾರೆ.

2023-24ನೇ ಸಾಲಿನಲ್ಲಿ ₹12,522 ಕೋಟಿ ರಾಜಸ್ಥ ಕೊರತೆ ಆಯವ್ಯಯ ಮಂಡಿಸಿದ್ದ ಮುಖ್ಯಮಂತ್ರಿಯವರು 2024-25ನೇ ಸಾಲಿಗೆ ₹ 27,353 ಕೋಟಿ ರಾಜಸ್ವ ಕೊರತೆ ಬಜೆಟ್ ಮಂಡಿಸುತ್ತಿರುವುದು, ರಾಜ್ಯವು ಆರ್ಥಿಕವಾಗಿ ದಿವಾಳಿಯಾಗುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ.

2023-24ನೇ ಸಾಲಿನಲ್ಲಿ ₹ 85,928 ಕೋಟಿಗಳ ಸಾಲಮಾಡಲಾಗಿದೆ. 2024-25 ನೇ ಸಾಲಿನಲ್ಲಿ ₹. 1,05,496 ಕೋಟಿಗಳಿಗೆ ಸಾಲದ ಮೊತ್ತ ಹೆಚ್ಚಾಗಲಿದೆ. ಇದರಿಂದ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ರಾಜ್ಯವು ದಿವಾಳಿಯಾಗಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಕಳಪೆ ಬಜೆಟ್:

ಒಟ್ಟಾರೆಯಾಗಿ ಸಿದ್ದರಾಮಯ್ಯ ಅವರು ಮಂಡಿಸಿರುವ 2024-25ರ ಆಯವ್ಯಯವು ಗೊತ್ತುಗುರಿ ಇಲ್ಲದ, ರಾಜ್ಯದ ಅಭಿವೃದ್ಧಿಗೆ ಮಾರಕವಾದ ಹಾಗೂ ರಾಜ್ಯದ ಹಣ ಕಾಸು ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ನಿಲ್ಲಿಸುವ ಅತ್ಯಂತ ಕಳಪೆ ಬಜೆಟ್ ಎಂದರೆ ತಪ್ಪಾಗಲಾರದು ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT