ಶನಿವಾರ, ಮಾರ್ಚ್ 6, 2021
29 °C
ಫೆ.1ಕ್ಕೆ 2020–21ನೇ ಹಣಕಾಸು ವರ್ಷದ ಬಜೆಟ್‌ ಮಂಡನೆ

ಕೇಂದ್ರ ಬಜೆಟ್‌ 2020 | ನಿರ್ಮಲಾ ಮೇಲೆ ನಿರೀಕ್ಷೆಗಳ ಭಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇದೇ ಶನಿವಾರ ಮಂಡಿಸಲಿರುವ 2020–21ನೇ ಹಣಕಾಸು ವರ್ಷದ ಬಜೆಟ್‌ ಘೋಷಣೆಗಳ ಬಗ್ಗೆ ಜನಸಾಮಾನ್ಯರು, ಉದ್ಯಮಿಗಳು, ರಿಯಲ್‌ ಎಸ್ಟೇಟ್‌ ವಹಿವಾಟುದಾರರಲ್ಲಿ ಕುತೂಹಲ ಹೆಚ್ಚಿದೆ.

ದೇಶಿ ಆರ್ಥಿಕತೆಯು 11 ವರ್ಷಗಳಲ್ಲಿಯೇ ಕನಿಷ್ಠ ಮಟ್ಟದ (ಶೇ 5) ಮಂದಗತಿಯ ಪ್ರಗತಿ ಸಾಧಿಸುತ್ತಿರುವಾಗ ಆರ್ಥಿಕತೆಯ ವಿವಿಧ ವಲಯಗಳು ಪುಟಿದೇಳುವಂತೆ ಮಾಡಲು ನಿರ್ಮಲಾ ಅವರು ತಮ್ಮ ಎರಡನೇ ಬಜೆಟ್‌ನಲ್ಲಿ ಯಾವ ಮಂತ್ರದಂಡ ಬಳಸಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. 

ಆರ್ಥಿಕತೆಯ ಪ್ರಮುಖ ಮಾನದಂಡಗಳಾದ ಆರ್ಥಿಕ ವೃದ್ಧಿ ದರ (ಜಿಡಿಪಿ), ರಫ್ತು, ಬಂಡವಾಳ ಹೂಡಿಕೆ, ಸರಕು ಮತ್ತು ಸೇವೆಗಳ ಬೇಡಿಕೆ, ವಾಹನಗಳ ಮಾರಾಟ, ಉದ್ಯೋಗ ಅವಕಾಶ ಮುಂತಾದ ವಲಯಗಳು ಕಳಪೆ ಸಾಧನೆ ಪ್ರದರ್ಶಿಸುತ್ತಿವೆ. ಬಳಕೆ ಹೆಚ್ಚಿಸಿ ಆರ್ಥಿಕತೆಗೆ ಚೇತರಿಕೆ ನೀಡಲು ಮೂಲ ಸೌಕರ್ಯ ವಲಯದಲ್ಲಿನ ಬಂಡವಾಳ ಹೂಡಿಕೆಯು ಗಮನಾರ್ಹವಾಗಿ ಹೆಚ್ಚಳಗೊಳ್ಳಬೇಕಾಗಿದೆ. ಬೇಡಿಕೆ ಹೆಚ್ಚಿಸಲು ಬಳಕೆದಾರರ ಕಿಸೆಯಲ್ಲಿ ಹೆಚ್ಚು ಹಣ ಇರುವಂತೆ ಮಾಡಬೇಕಾಗಿದೆ. ತೆರಿಗೆ ಸಂಗ್ರಹ ಕುಸಿತಗೊಂಡಿರುವಾಗ, ಪರ್ಯಾಯ ಸಂಪನ್ಮೂಲಗಳನ್ನು ಕಂಡುಕೊಳ್ಳುವಲ್ಲಿ ನಿರ್ಮಲಾ ಸಫಲರಾಗುವರೇ ಎನ್ನುವ ಪ್ರಶ್ನೆಗಳು ಮೂಡಿವೆ.

ಸವಾಲುಗಳು ನಿರ್ವಹಣೆ: ಸರ್ಕಾರದ ವೆಚ್ಚ ಹೆಚ್ಚಿಸಿದರೆ ಆರ್ಥಿಕ ಕೊರತೆಯನ್ನು ಜಿಡಿಪಿಯ ಶೇ 3.3ಕ್ಕೆ ಮಿತಿಗೊಳಿಸುವ ಉದ್ದೇಶ ವಿಫಲಗೊಳ್ಳಲಿದೆ. ವರಮಾನ ಕೊರತೆ, ವೆಚ್ಚ ಹೆಚ್ಚಳ, ಕೊರತೆಗೆ ಕಡಿವಾಣ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವರೇ ಎನ್ನುವ ಕುತೂಹಲ ಗರಿಗೆದರಿದೆ.

ಬೇಡಿಕೆ ಹೆಚ್ಚಿಸಲು ಆದಾಯ ತೆರಿಗೆಯಲ್ಲಿ ಗಮನಾರ್ಹ ರಿಯಾಯ್ತಿ ನೀಡಬಹುದು ಎಂಬುದು ವೇತನ ವರ್ಗದ ನಿರೀಕ್ಷೆಯಾಗಿದೆ. ತೆರಿಗೆ ಸಂಗ್ರಹದಲ್ಲಿನ ಕೊರತೆಯ ಕಾರಣಕ್ಕೆ ಮಧ್ಯಮ ವರ್ಗ ಮತ್ತು ವೇತನದಾರರಿಗೆ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಅರ್ಥಪೂರ್ಣ ಕೊಡುಗೆ ಇರಲಿಕ್ಕಿಲ್ಲ ಎಂದೂ ವಿಶ್ಲೇಷಿಸಲಾಗುತ್ತಿದೆ.

ಪರಿಣತರ ವಿಭಿನ್ನ ನಿಲುವು: ‘ಆರ್ಥಿಕತೆ ಪುಟಿದೇಳಲು ಹಣಕಾಸು ನೀತಿಯಿಂದಷ್ಟೇ ಸಾಧ್ಯವಿಲ್ಲ. ವಿತ್ತೀಯ ನೀತಿ ಮತ್ತು ಸುಧಾರಣಾ ಕ್ರಮಗಳೂ ಕೈಜೋಡಿಸಿದರೆ ಮಾತ್ರ ದೇಶಿ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳಲಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಇತ್ತೀಚೆಗಷ್ಟೇ ಹೇಳಿದ್ದರು.

‘ಆರ್ಥಿಕತೆ ಮೇಲೆತ್ತಲು ದೊಡ್ಡ ಪ್ರಮಾಣದ ಹಣಕಾಸು ನೆರವು (ವಿತ್ತೀಯ ಉತ್ತೇಜನೆ) ನೀಡಲು ಸಾಧ್ಯವಿಲ್ಲದಿರುವಾಗ ಸರ್ಕಾರ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ’ ಎಂದು ಸರ್ಕಾರಿ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ. 

ಸರ್ಕಾರವು ವಿತ್ತೀಯ ಕೊರತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಬಗ್ಗೆ ಪರಿಣತರು ವಿಭಿನ್ನ ಧೋರಣೆ ತಳೆದಿದ್ದಾರೆ. ಈ ಗೊಂದಲವು ಬಜೆಟ್‌ನಲ್ಲಿಯೂ ಪ್ರತಿಫಲನಗೊಳ್ಳುವುದೇ ಅಥವಾ ಸ್ಪಷ್ಟ ಮಾರ್ಗ ಗೋಚರಿಸುವುದೇ ಎನ್ನುವುದು ಶನಿವಾರ ನಿಚ್ಚಳಗೊಳ್ಳಲಿದೆ.

ಪರಿಣತರ ಭಿನ್ನ ನಿಲುವು

‘ಆರ್ಥಿಕತೆ ಪುಟಿದೇಳಲು ಹಣಕಾಸು ನೀತಿಯಿಂದಷ್ಟೇ ಸಾಧ್ಯವಿಲ್ಲ. ವಿತ್ತೀಯ ನೀತಿ ಮತ್ತು ಸುಧಾರಣಾ ಕ್ರಮಗಳೂ ಕೈಜೋಡಿಸಿದರೆ ಮಾತ್ರ ದೇಶಿ ಅರ್ಥ ವ್ಯವಸ್ಥೆ ಚೇತರಿಸಿಕೊಳ್ಳಲಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರು ಇತ್ತೀಚೆಗಷ್ಟೇ ಹೇಳಿದ್ದರು.

‘ಆರ್ಥಿಕತೆ ಮೇಲೆತ್ತಲು ದೊಡ್ಡ ಪ್ರಮಾಣದ ಹಣಕಾಸು ನೆರವು (ವಿತ್ತೀಯ ಉತ್ತೇಜನೆ) ನೀಡಲು ಸಾಧ್ಯವಿಲ್ಲದಿರುವಾಗ ಸರ್ಕಾರ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ’ ಎಂದು ಸರ್ಕಾರಿ ಚಿಂತಕರ ಚಾವಡಿಯಾಗಿರುವ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಹೇಳಿದ್ದಾರೆ. 

ಸರ್ಕಾರವು ವಿತ್ತೀಯ ಕೊರತೆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಮಂದಗತಿಯ ಆರ್ಥಿಕತೆಗೆ ಉತ್ತೇಜನ ನೀಡುವುದರ ಬಗ್ಗೆ ಪರಿಣತರು ವಿಭಿನ್ನ ಧೋರಣೆ ತಳೆದಿದ್ದಾರೆ. ಈ ಗೊಂದಲವು ಬಜೆಟ್‌ನಲ್ಲಿಯೂ ಪ್ರತಿಫಲನಗೊಳ್ಳುವುದೇ ಅಥವಾ ಸ್ಪಷ್ಟ ಮಾರ್ಗ ಗೋಚರಿಸುವುದೇ ಎನ್ನುವುದು ಶನಿವಾರ ನಿಚ್ಚಳಗೊಳ್ಳಲಿದೆ.

ಅಂಕಿಅಂಶಗಳು: 2019–20ರ ಜಿಡಿಪಿ ಪ್ರಗತಿ ಅಂದಾಜು ಶೇ 5. ಸರ್ಕಾರದ ವರಮಾನ ಸಂಗ್ರಹದಲ್ಲಿನ ಕೊರತೆ ಅಂದಾಜು ₹ 3.75 ಲಕ್ಷ ಕೋಟಿ. ವಾರ್ಷಿಕೆ ಬಜೆಟ್ ವೆಚ್ಚ ₹ 27.86 ಲಕ್ಷ ಕೋಟಿ, ಸಾಲ ಹೊರತುಪಡಿಸಿದ ಸರ್ಕಾರದ ವರಮಾನ ₹ 20.82 ಲಕ್ಷ ಕೋಟಿ.

 

ಬಜೆಟ್ ಮಾಹಿತಿಗೆ: www.prajavani.net/budget-2020

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು