ಗುರುವಾರ , ಮಾರ್ಚ್ 4, 2021
24 °C
ಸರ್ಕಾರದ ಪಾಲಿಗೆ ಇದು ಮಾಡು ಅಥವಾ ಮಡಿ ಬಜೆಟ್

ಬೆಟ್ಟದಷ್ಟು ನಿರೀಕ್ಷೆ: ಆರ್ಥಿಕ ಚೇತರಿಕೆಯ ಭರವಸೆ ನೀಡಬಲ್ಲದೇ ಬಜೆಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮನೆಯ ಕಾಂಪೌಂಡ್‌ಗೆ ಸೈಕಲ್ ಒರಗಿಸಿ ಬೆವರು ಒರೆಸಿಕೊಂಡ ಶ್ರೀಕಂಠಪ್ಪ ಅವರ ಮುಖದಲ್ಲಿ ಮುಂದೇನು ಎಂಬ ಪ್ರಶ್ನೆಯಿತ್ತು. ಪ್ರತಿದಿನ ರಸ್ತೆ ತಿರುವು ತಲುಪಿದಾಗಲೇ ಬೆಲ್ ಮೊಳಗಿಸುವುದು ಅವರು ರೂಢಿಸಿಕೊಂಡ ಪದ್ಧತಿ. ಅದೇ ಬೆಲ್ ದನಿಯೇ ಮಕ್ಕಳು ಹೊಸಿಲ ಮೇಲೆ ಖುಷಿಯಿಂದ ನಿಲ್ಲಲು ಅಲಾರಾಂ ಸಹ ಆಗಿತ್ತು. ಆದರೆ ಅವತ್ತು ಬೆವರಿನಲ್ಲಿ ಬೆರೆತುಹೋಗಿದ್ದ ಕಣ್ಣೀರು ಮಕ್ಕಳಿಗೆ ಕಾಣಿಸಬಾರದೆಂಬ ಎಚ್ಚರಿಕೆಯೊಂದಿಗೆ ಅವರು ಮನೆಯೊಳಗೆ ಹೆಜ್ಜೆಯಿಟ್ಟಿದ್ದರು.

ಗುರುಗ್ರಾಮದಲ್ಲಿರುವ ಕಾರು ತಯಾರಿಸುವ ಕಂಪನಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿಯ ಒಂದಿಷ್ಟು ಸಣ್ಣ ಕೈಗಾರಿಕೆಗಳು ಬಿಡಿಭಾಗ ಪೂರೈಸುತ್ತವೆ. ಆರ್ಥಿಕ ಹಿಂಜರಿತದ ಹೊಡೆತಕ್ಕೆ ತತ್ತರಿಸಿ ಕಣ್ಮುಚ್ಚಿದ ಇಂಥದ್ದೊಂದು ಕೈಗಾರಿಕೆ ಶ್ರೀಕಂಠಪ್ಪ ಅವರ ಕೆಲಸವನ್ನೂ ಕಿತ್ತುಕೊಂಡಿತ್ತು. 50ರ ಆಸುಪಾಸಿನ ಅವರಿಗೆ ಈಗ ಹೊಸ ಕೆಲಸ ಹುಡುಕುವ ಸಂಕಷ್ಟ. ಕೆಲಸ ಸಿಗುವುದು ತಡವಾದರೆ ಸಂಸಾರ ನಡೆಸುವುದು ಹೇಗೆಂಬ ಪ್ರಶ್ನೆ. ಅದೆಲ್ಲದರ ಜೊತೆಗೆ ಫೆಬ್ರುವರಿ 1ರ ಬಜೆಟ್‌ನಲ್ಲಿ ಏನಾದರೂ ಮ್ಯಾಜಿಕ್ ಆಗಿ, ಮುಚ್ಚಿಹೋದ ಕೈಗಾರಿಕೆಯ ಬಾಗಿಲು ತೆರೆದೀತು ಎಂಬ ನಿರೀಕ್ಷೆ.

ಕಣ್ಣೀರು ಅಡಗಿಸಿಕೊಂಡ ಇಂಥ ಲಕ್ಷಾಂತರ ಬೆವರುಜೀವಿಗಳ ನಿರೀಕ್ಷೆಯ ಭಾರ ಹೊತ್ತು ಸಿದ್ಧವಾಗುತ್ತಿದೆ ಈ ವರ್ಷದ ಬಜೆಟ್. ದೇಶದ ಆರ್ಥಿಕ ಇತಿಹಾಸದಲ್ಲಿಯೇ ಜನರು ಬಜೆಟ್‌ಗಾಗಿ ಇಷ್ಟು ಕಾತರದಿಂದ ಎಂದೂ ಕಾದಿದ್ದಿಲ್ಲ ಎಂದು ಹಿರಿಯರು ಹೇಳುತ್ತಿದ್ದಾರೆ. ಕುಸಿಯುತ್ತಿರುವ ಆರ್ಥ ವ್ಯವಸ್ಥೆಗೆ ಜೀವ ತುಂಬಿ, ಇಂದಲ್ಲದಿದ್ದರೆ ನಾಳೆ ಒಳ್ಳೇ ದಿನ ಬಂದೇ ಬರುತ್ತೆ ಎಂಬ ಭರವಸೆಯನ್ನು ಜನರಲ್ಲಿ ತುಂಬಬಲ್ಲ ಬಜೆಟ್‌ ಮಂಡಿಸುತ್ತಾರೆಯೇ ನಿರ್ಮಲಾ ಸೀತಾರಾಮನ್ ಎಂದು ಜನರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ದೇಶದ ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಚೆನ್ನಾಗಿಲ್ಲ. ಅರಗಿಸಿಕೊಳ್ಳಲು ಕಹಿ ಎನಿಸಿದರೂ ಇದು ಒಪ್ಪಿಕೊಳ್ಳಲೇಬೇಕಾದ ಸತ್ಯ.

ಇದನ್ನೂ ಓದಿ: ಟೀಂ ನಿರ್ಮಲಾ | ಬಜೆಟ್ ರೂಪಿಸಲು ಇವರೇ ಆಧಾರ


2019ರ ಬಜೆಟ್‌

ಒಂದೊಳ್ಳೆ ಬಜೆಟ್‌ ಹೇಗಿರುತ್ತೆ?

ಇದು ಈ ಕ್ಷಣದ ಕೋಟಿ ರೂಪಾಯಿ ಪ್ರಶ್ನೆ. ಈ ಒಳ್ಳೇದು ಎನ್ನುವುದು ಅವರವರ ಭಾವಕ್ಕೆ ತಕ್ಕಂಥ ಉತ್ತರ ಬೇಡುವ ಪ್ರಶ್ನೆ ಆಗಿರುವುದರಿಂದ ಈ ಪ್ರಶ್ನೆಗೆ ಸಿಗುವ ಉತ್ತರವೂ ಹತ್ತಾರು ಬಗೆಯದ್ದು. ಅದಕ್ಕೆ ಸಿಗುವ ಉತ್ತರ ಹೆಚ್ಚಿನ ಸಂದರ್ಭಗಳಲ್ಲಿ ನಾವು ಯಾರಿಗೆ ಈ ಪ್ರಶ್ನೆ ಕೇಳುತ್ತಿದ್ದೇವೆ ಎನ್ನುವುದನ್ನು ಆಧರಿಸಿರುತ್ತದೆ.

ಅರ್ಥಶಾಸ್ತ್ರಜ್ಞರಿಗೆ ಅಂಕಿಅಂಶಗಳ ಮೇಲೆ ಹೆಚ್ಚು ನಂಬುಗೆ, ಕೈಗಾರಿಕೋದ್ಯಮಿಗಳಿಗೆ ತಮ್ಮ ವ್ಯವಹಾರ ಪ್ರಭಾವಿಸುವ ಕ್ಷೇತ್ರಗಳ ಬಗ್ಗೆಯೇ ಹೆಚ್ಚು ಆಸಕ್ತಿ. ಇದೇ ರೀತಿ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ವೈದ್ಯರು, ಸಾಫ್ಟ್‌ವೇರ್ ಕ್ಷೇತ್ರದ ತಂತ್ರಜ್ಞರು... ಎಲ್ಲರೂ ಅವರವರ ಮೂಗಿನ ನೇರಕ್ಕೇ ಉತ್ತರ ಕೊಡುತ್ತಾರೆ.

ಆದರೆ ಸರ್ಕಾರವನ್ನು ಮುನ್ನಡೆಸುವ ಸ್ಥಾನದಲ್ಲಿರುವವರು ಮಾತ್ರ ಎಲ್ಲರ ಅಭಿಪ್ರಾಯ ಕೇಳಿ, ಪ್ರಸ್ತುತ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು, ಭವಿಷ್ಯದ ಲೆಕ್ಕಾಚಾರ ಹಾಕಿ ನಾಜೂಕು ಹೆಜ್ಜೆ ಇಡಬೇಕಾಗುತ್ತದೆ. ಈ ಬಾರಿಯಂತೂ ಬಜೆಟ್ ಮಾಡುವವರು ಅಂಕಿಅಂಶಗಳಲ್ಲಿ ಕಣ್ಣುನೆಟ್ಟ ಒಣ ಅರ್ಥಶಾಸ್ತ್ರಜ್ಞರಾಗಿದ್ದರೆ ಪ್ರಯೋಜನವಿಲ್ಲ. ಆ ಅಂಕಿಆಂಶಗಳ ತಿರುಳನ್ನು ತಾಯಿಕರುಳಿನಿಂದ ವಿಶ್ಲೇಷಿಸಬಲ್ಲ ಮಾನವೀಯ ನೆಲೆಯ ಬಜೆಟ್‌ ದೇಶಕ್ಕೆ ಬೇಕಿದೆ.

ಭಾರತ ಪಾಲಿಗೆ ಬಜೆಟ್ ಎಂಬುದು ಕೇವಲ ಅಂಕಿಅಂಶಗಳ, ತಾರ್ಕಿಕ ಲೆಕ್ಕಾಚಾರದ ಆಡುಂಬೋಲವಷ್ಟೇ ಅಲ್ಲ. ಬೃಹತ್ ಅಂಕಿಅಂಶಗಳ ಕಂತೆಯಲ್ಲಿ ಅಡಗಿರುವ ಆಶಯವನ್ನೇ ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಾರೆ. ಅದು ವಿಶ್ವದ ಬೃಹತ್ ಪ್ರಜಾಪ್ರಭುತ್ವ ದೇಶವೊಂದರ ಮುಂದಿನ ಒಂದಿಡೀ ವರ್ಷದ ನಡೆಯನ್ನು ನಿರ್ಧರಿಸುವ ಮಹತ್ವದ ದಿನ.

ಇದನ್ನೂ ಓದಿ: ವಿತ್ತ ಸಚಿವರ ಹೇಳಿಕೆ ಜನರನ್ನು ಬೆಚ್ಚಿಬೀಳಿಸಿತ್ತು, ಆದರೆ ಬಜೆಟ್ ಜನಪರವಾಗಿತ್ತು


ಪಿ.ವಿ.ನರಸಿಂಹರಾವ್ ಅವರೊಡನೆ ಗಹನವಾದ ಚರ್ಚೆಯಲ್ಲಿ ಮನಮೋಹನ್ ಸಿಂಗ್

ಒಮ್ಮೆ ನೆನಪಿಸಿಕೊಳ್ಳಿ

ದೇಶದ ಇತಿಹಾಸವನ್ನು ಬದಲಿಸಿದ ಹಲವು ನಿರ್ಧಾರಗಳನ್ನು ಭಾರತ ಬಜೆಟ್ ಮೂಲಕವೇ ವಿಶ್ವಕ್ಕೆ ಸಾರಿಹೇಳಿದೆ. ನಮ್ಮ ಮಾರುಕಟ್ಟೆಯ ದಿಡ್ಡಿ ಬಾಗಿಲನ್ನು ವಿಶ್ವಕ್ಕೆ ತೆರೆದಿಟ್ಟ 1991ರ ಮನಮೋಹನ್ ಸಿಂಗ್ ಬಜೆಟ್ ಇದಕ್ಕೆ ಅತ್ಯುತ್ತಮ ಸಾಕ್ಷಿ. ಸ್ವಯಂ ಘೋಷಣೆಯನ್ನು ಆರ್ಥಿಕತೆಯ ಭಾಗವಾಗಿಸಿ, ಭಾರತೀಯರ ಉದ್ಯಮಶೀಲತೆಗೆ ಬೆನ್ನುತಟ್ಟಿದ 1968ರ ಮೊರಾರ್ಜಿ ದೇಸಾಯಿ ಬಜೆಟ್‌ ವಿಚಾರವನ್ನೂ ಕೆಲ ಹಿರಿಯರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. 1973ರ ಬಜೆಟ್‌ನಲ್ಲಿ ವೈ.ಬಿ.ಚವಾಣ್ ಕಲ್ಲಿದ್ದಲು ಗಣಿಗಳ ರಾಷ್ಟ್ರೀಕರಣ ಘೋಷಿಸಿದರು. 1997ರ ಬಜೆಟ್ ಮೂಲಕ ಪಿ.ಚಿದಂಬರಂ ಭಾರತೀಯ ಆರ್ಥಿಕತೆಯ ದಿಗಂತ ವಿಸ್ತರಿಸುವ ಕನಸು ಬಿತ್ತಿದರು. 1998ರಿಂದ 2002ರವರೆಗೆ ವಿತ್ತ ಸಚಿವರಾಗಿದ್ದ ಯಶವಂತ್ ಸಿನ್ಹಾ ದೂರಸಂಪರ್ಕ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರುವುದರ ಜೊತೆಗೆ ಪೆಟ್ರೋಲಿಯಂ ಕ್ಷೇತ್ರದಲ್ಲಿ ಸರ್ಕಾರದ ಹಿಡಿತ ಸಡಿಲಿಸಿದರು. ಹೀಗೆ ಪ್ರತಿ ಬಜೆಟ್‌ಗೂ ತನ್ನದೇ ಆಶಯವೊಂದು ಇದ್ದೇ ಇರುತ್ತದೆ.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಡಿಜಿಟಲ್ ಇಂಡಿಯಾ, ಸ್ಮಾರ್ಟ್‌ ಸಿಟಿ ಯೋಜನೆಗಳ ಕಡೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಪ್ರಧಾನ ಮಂತ್ರಿ ಉಜ್ವಲ ಯೋಜನಾ, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ, ಸ್ವಚ್ಛ ಭಾರತ ಅಭಿಯಾನ ಇತ್ಯಾದಿ ವಿಚಾರಗಳು ಬಜೆಟ್ ಭಾಷಣಗಳಲ್ಲಿ ಎದ್ದು ಕಾಣಿಸುತ್ತಿದ್ದವು. ಮೋದಿ ಸರ್ಕಾರವು ಎರಡನೇ ಅವಧಿಗೆ ಅಧಿಕಾರ ಭದ್ರಪಡಿಸಿಕೊಂಡ ನಂತರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಮೊದಲ ಬಜೆಟ್‌ನಲ್ಲಿ 2024ರ ವೇಳೆಗೆ ಭಾರತದ ಆರ್ಥಿಕತೆಯನ್ನು 5 ಲಕ್ಷ ಕೋಟಿ ಡಾಲರ್‌ಗೆ ವಿಸ್ತರಿಸುವ ಕನಸು ಬಿತ್ತಲಾಯಿತು. ನಮ್ಮ ಅರ್ಥ ಸಚಿವರು ಈ ಕನಸು ಹಂಚಿಕೊಂಡಾಗ ನಮ್ಮ ಆರ್ಥಿಕತೆಯ ಗಾತ್ರ ಇದ್ದುದು 2.75 ಲಕ್ಷ ಕೋಟಿ ಡಾಲರ್ ಮಾತ್ರ.

ನಿರ್ಮಲಾ ಅವರು ಈ ಕನಸು ಬಿತ್ತಿದ ಕೆಲವೇ ತಿಂಗಳ ಅವಧಿಯಲ್ಲಿ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆ ಎನ್ನುವುದು ಎಂದಿಗೂ ನನಸಾಗದ ಕನ್ನಡಿಯೊಳಗಿನ ಗಂಟು ಎಂಬಷ್ಟು ದೂರವಿರುವಂತೆ ಭಾಸವಾಗುತ್ತಿದೆ. ಕಳೆದ ಆರು ತ್ರೈಮಾಸಿಕಗಳಿಂದ (ಒಂದೂವರೆ ವರ್ಷಗಳಿಂದ) ಭಾರತದ ಆರ್ಥಿಕತೆ ಸತತ ಕುಸಿಯುತ್ತಿದೆ. 2019–20ರ ಆರ್ಥಿಕ ವರ್ಷ ಮುಗಿಯುವ ಹೊತ್ತಿಗೆ ಜಿಡಿಪಿ ಪ್ರಗತಿ ಶೇ 5ಕ್ಕಿಂತಲೂ ಕೆಳಗಿಳಿಯಬಹುದು ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.

ನಿರ್ಮಲಾ ಹೇಳಿದಂತೆ 2024ರ ವೇಳೆಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ದೇಶವಾಗಲು ಭಾರತ ಪ್ರತಿ ವರ್ಷ ಶೇ 9ರಷ್ಟು ಜಿಡಿಪಿ ಪ್ರಗತಿ ಕಾಯ್ದುಕೊಳ್ಳಬೇಕು ಎಂದು ಪ್ರತಿಷ್ಠಿತ ಹಣಕಾಸು ಸಲಹಾ ಸಂಸ್ಥೆ ಅರ್ನಸ್ಟ್‌ ಅಂಡ್ ಯಂಗ್ ಗ್ಲೋಬಲ್ ಲಿಮಿಟೆಡ್ (ಇವೈ) ಅಂದಾಜು ಮಾಡಿತ್ತು.

ಇದನ್ನೂ ಓದಿ: 20 ವರ್ಷಗಳಲ್ಲಿ ಮೊದಲ ಬಾರಿಗೆ ಕೇಂದ್ರದ ವರಮಾನ ಇಳಿಕೆ

ಇದೆಂಥಾ ಹಿಂಜರಿತ?

ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದನ್ನು ಸರ್ಕಾರ ಗಮನಿಸಿಲ್ಲ, ಸುಧಾರಿಸಲು ಏನೂ ಮಾಡುತ್ತಿಲ್ಲ ಎಂದರೆ ತಪ್ಪಾದೀತು. ಕಾರ್ಪೊರೇಟ್ ತೆರಿಗೆ ಕಡಿತ, ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಬಂಡವಾಳ ಒದಗಿಸುವುದು ಸೇರಿದಂತೆ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ ಈ ಯತ್ನಗಳಿಗೆ ಹೇಳಿಕೊಳ್ಳುವಂಥ ಪ್ರತಿಫಲ ಸಿಕ್ಕಿದ್ದನ್ನು ಅಂಕಿಅಂಶಗಳು ನಿರೂಪಿಸುವುದಿಲ್ಲ.

ಆರ್ಥಿಕ ವಲಯದ ಪುನಶ್ಚೇತನಕ್ಕೆ ಸರ್ಕಾರ ತೆಗೆದುಕೊಳ್ಳುತ್ತಿರುವ ಬಹುತೇಕ ಕ್ರಮಗಳ ಹಿಂದೆ ಚಿಲ್ಲರೆ ಬೇಡಿಕೆ ಹೆಚ್ಚಿಸುವ ಆಶಯ ಇರುವುದು ಎದ್ದುಕಾಣುತ್ತದೆ. ಒಮ್ಮೆ ಬೇಡಿಕೆ ಮತ್ತು ಪೂರೈಕೆಯ ಬಂಡಿ ಹಳಿಗೆ ಬಂದರೆ ಉಳಿದದ್ದು ತನ್ನಿಂತಾನೆ ಸರಿಯಾದೀತು ಎನ್ನುವುದು ಈ ಕ್ರಮಗಳ ಹಿಂದಿರುವ ತರ್ಕ. 

ಮೇಲ್ನೋಟಕ್ಕೆ ತೀರಾ ಸರಳವಾಗಿ ಕಾಣಿಸುವ ಈ ತರ್ಕ ಕಾರ್ಯಸಾಧುವಾಗಲು ತೆರಿಗೆ ಕಡಿತ, ಮೂಲಸೌಕರ್ಯ ವಲಯದಲ್ಲಿ ಬಂಡವಾಳ ಹೂಡಿಕೆ, ಗ್ರಾಮೀಣ ಪ್ರದೇಶದಲ್ಲಿ ಮಾನವ ಶ್ರಮ ಹೆಚ್ಚು ಬೇಡುವ ಮತ್ತು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗಳ ಅನುಷ್ಠಾನದಂಥ ವಿಚಾರಗಳ ಕಡೆಗೂ ಸರ್ಕಾರ ಗಮನಕೊಡಬೇಕಿದೆ. ಹಣ ಹರಿಸಬೇಕಿದೆ.

‘ಆಂತರಿಕ ಬೇಡಿಕೆ ವ್ಯಾಪಕವಾಗಿ ಕುಸಿದಿರುವುದೇ ಈಗಿನ ಎಲ್ಲ ಸಮಸ್ಯೆಗೂ ಮೂಲ ಕಾರಣ. ಜನರು ಅಗತ್ಯ ವಸ್ತುಗಳನ್ನು ನಿರ್ಭಿಡೆಯಿಂದ ಖರೀದಿಸುವಂತಾದರೆ ಆರ್ಥಿಕತೆ ಮರಳಿ ಹಳಿಗೆ ಬರುತ್ತದೆ. ಇದು ಸಾಧ್ಯವಾಗುವಂಥ ನಿರ್ಧಾರಗಳನ್ನು ಸರ್ಕಾರ ಬಜೆಟ್‌ನಲ್ಲಿ ಪ್ರಕಟಿಸಬೇಕು’ ಎನ್ನುವುದು ಕ್ರಿಸಿಲ್ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞ ಡಿ.ಕೆ.ಜೋಶಿ ಅವರ ಸಲಹೆ.

ಇದನ್ನೂ ಓದಿ: ಆನ್‌ಲೈನ್‌ ನೇಮಕಾತಿ ಶೇ 5ರಷ್ಟು ಕುಸಿತ

ನಿರುದ್ಯೋಗ ತಾಂಡವ

ಒಟ್ಟು ದೇಶೀಯ ಆಂತರಿಕ ಉತ್ಪನ್ನ ಅಥವಾ ಆರ್ಥಿಕ ವೃದ್ಧಿ ದರ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್– ಜಿಡಿಪಿ) ಈ ಬಾರಿ (2019) ಶೇ 5ಕ್ಕಿಂತ ಕಡಿಮೆ ಪ್ರಮಾಣಕ್ಕೆ ಕುಸಿದಿದೆ. ನೀತಿ ಆಯೋಗ ರೂಪುಗೊಳ್ಳುವುದಕ್ಕೆ ಮೊದಲು ಅನುಸರಿಸುತ್ತಿದ್ದ ಮಾನದಂಡಗಳ ಆಧಾರದ ಮೇಲೆ ಇಂದಿನ ಜಿಡಿಪಿ ಅಳೆಯುವುದಾದರೆ ಅದು ಶೇ 3ಕ್ಕಿಂತ ಕಡಿಮೆಯಾಗುತ್ತೆ. ಜಿಡಿಪಿ ಕುಸಿತ ಮತ್ತು ಅದರ ಪರಿಣಾಮಗಳ ತೀವ್ರತೆಯನ್ನೇ ಆಧರಿಸಿ ‘ಆರ್ಥಿಕ ಹಿಂಜರಿತ’ ಪದವನ್ನು ಬಳಸಲಾಗುತ್ತಿದೆ.

ಆರ್ಥಿಕ ಹಿಂಜರಿತದ ಕಾರಣಗಳು ಹತ್ತಾರು. ಆದರೆ ಮೇಲ್ನೋಟಕ್ಕೆ ಕಂಡುವುದು ಇದು. ನಿರೀಕ್ಷಿತ ಪ್ರಮಾಣದಲ್ಲಿ ಖಾಸಗಿ ಹೂಡಿಕೆ ಆಗುತ್ತಿಲ್ಲ. ಬಜೆಟ್‌ನಲ್ಲಿ ಘೋಷಿತ ಯೋಜನೆಗಳಿಗೂ ಸರ್ಕಾರ ಲೆಕ್ಕದಂತೆ ಹಣ ಖರ್ಚು ಮಾಡುತ್ತಿಲ್ಲ. ವಿವಿಧ ಇಲಾಖೆಗಳಿಗೆ ಕಳೆದ ವರ್ಷದ ಬಜೆಟ್‌ನಲ್ಲಿ ಮಂಜೂರಾದ ₹ 1 ಲಕ್ಷ ಕೋಟಿಗೂ ಹೆಚ್ಚಿನ ಹಣ ಖರ್ಚಾಗದೆ ಉಳಿದಿದೆ ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಚೆಗೆ ಒಪ್ಪಿಕೊಂಡಿದ್ದರು. ಕೈಗಾರಿಕಾ ಚಟುವಟಿಕೆಗಳು ನಿಧಾನಗತಿಯಲ್ಲಿವೆ. ಉತ್ಪಾದನೆ ಮತ್ತು ಬಳಕೆಯ ಪ್ರಮಾಣ ಕಡಿಮೆಯಾಗಿದೆ.

ಈ ಎಲ್ಲದರ ಪ್ರತಿಫಲ ಎಂಬಂತೆ ಸಮಾಜದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಈ ಪರಿಸ್ಥಿತಿಗೆ ಕಾರಣವಾದ ಕೆಲ ಅಂಶಗಳು ಮಾತ್ರ ಸರ್ಕಾರದ ಸ್ವಯಂಕೃತ ಅಪರಾಧಗಳಿಂದ ಉದ್ಭವಿಸಿದ್ದು. ಆರ್ಥಿಕ ಆವೃತ್ತದ (ಎಕನಾಮಿಕ್ ಸೈಕಲ್) ಸಂಕೀರ್ಣ ವೃತ್ತವನ್ನು ಎಲ್ಲದಕ್ಕೂ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಆಗುವುದಿಲ್ಲ. ಉದಾಹರಣೆಗೆ ಈ ಹಿಂದೆ ಉದ್ಯೋಗ ಒದಗಿಸುತ್ತಿದ್ದ ಅತಿಸಣ್ಣ ಮತ್ತು ಸಣ್ಣ ಉದ್ಯಮಗಳು ಈಗ ನಲುಗಿದ ಅರ್ಥಿಕತೆಯ ಫಲ ತಿಂದು ಒಣಗಿಹೋಗಿವೆ. ಈ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ. ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆಯ ಗೊಂದಲಗಳು (ಗೂಡ್ಸ್‌ ಅಂಡ್ ಸರ್ವೀಸ್ ಟ್ಯಾಕ್ಸ್‌ – ಜಿಎಸ್‌ಟಿ) ಇದಕ್ಕೆ ಮುಖ್ಯ ಕಾರಣ.

ಸರ್ಕಾರ ಕೊಡುವ ಉದ್ಯೋಗ ಸ್ಥಿತಿಗತಿಯ ಅಂಕಿಅಂಶಗಳು ಸದಾ ಚರ್ಚಾರ್ಹ ವಿಷಯ. ಆದರೆ ಆಡಳಿತ ಪಕ್ಷದ ಹಲವು ಜನಪ್ರತಿನಿಧಿಗಳು ಜನರು ಕೆಲಸ ಕಳೆದುಕೊಳ್ಳುತ್ತಿರುವುದನ್ನು ಖಾಸಗಿಯಾಗಿ, ಆಫ್‌ ದಿ ರೆಕಾರ್ಡ್‌ ಒಪ್ಪಿಕೊಳ್ಳುತ್ತಾರೆ. ‘ಈ ಹಿಂದೆ ಕೆಲಸ ಕೊಡಿಸಿ ಎಂಬ ಬೇಡಿಕೆಯೊಂದಿಗೆ ನನ್ನನ್ನು ಭೇಟಿಯಾಗುತ್ತಿದ್ದವರ ವಯಸ್ಸು ಸರಾಸರಿ 20ರಿಂದ 25 ವರ್ಷ ಇರುತ್ತಿತ್ತು. ಅವರಿಗೆ ಎಲ್ಲಿಯಾದರೂ ಕೆಲಸ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೆ. ಬಹುಮಟ್ಟಿಗೆ ಯಶಸ್ವಿಯೂ ಆಗುತ್ತಿದ್ದೆ. ಆದರೆ ಈಗ 45 ವರ್ಷ ದಾಟಿದವರೂ ಕೆಲಸ ಕೇಳಿಕೊಂಡು ಬರುತ್ತಿದ್ದಾರೆ. ಎಷ್ಟೋ ಸಲ ಮಗ ಮತ್ತು ಅಪ್ಪ ಇಬ್ಬರೂ ಕೆಲಸ ಕೇಳಿಕೊಂಡು ನಮ್ಮ ಮನೆಗೆ ಬರುತ್ತಾರೆ. ಎಲ್ಲಿ ಹುಡುಕಿದರೂ ಕೆಲಸ ಮಾತ್ರ ಸಿಗುತ್ತಿಲ್ಲ. ಬಂದವರಿಗೆ ಊಟ ಹಾಕಿ ಕಳಿಸಲು ಮಾತ್ರ ನನ್ನಿಂದ ಸಾಧ್ಯವಾಗುತ್ತಿದೆ’ ಎಂದು ‘ನನ್ನ ಹೆಸರು ಬರೆಯಬೇಡಿ’ ಎನ್ನುವ ಷರತ್ತಿನೊಂದಿಗೆ ಮಾಹಿತಿ ನೀಡಿದವರು ಕೇಂದ್ರದಲ್ಲಿ ಚುಕ್ಕಾಣಿ ಹಿಡಿದಿರುವ ಪಕ್ಷದ ಸಂಸದರು.

ಇದನ್ನೂ ಓದಿ: ಉದ್ಯೋಗ ಕಡಿತದ ಸುದ್ದಿಯಿಂದಲೇ ನಿದ್ದೆಗೆಡುತ್ತಿರುವ ಕಾರ್ಮಿಕರು

ವಾಸ್ತವದೊಂದಿಗೆ ತಾಳೆಯಾಗದ ಆಶಯಗಳು

ಸರ್ಕಾರದ ಸಂದೇಶಗಳು ಮತ್ತು ನೆಲದ ವಾಸ್ತವಗಳು ಸಂಪೂರ್ಣ ಭಿನ್ನವಾಗಿರುವುದೇ ನಮ್ಮ ಅರ್ಥ ವ್ಯವಸ್ಥೆ ಈಗ ಎದುರಿಸುತ್ತಿರುವ ಬಹುತೇಕ ಗೊಂದಲಗಳಿಗೆ ಇರುವ ಮುಖ್ಯ ಕಾರಣ. ಹೀಗಾಗಿಯೇ ಈ ಬಾರಿಯ ಬಜೆಟ್‌ ಭಾಷಣದಲ್ಲಿ ಹೊಸ ಬೆಳಕಿನ ಕೈದೀವಿಗೆಯನ್ನು ಜನರು ಹುಡುಕುತ್ತಿದ್ದಾರೆ. ಬಜೆಟ್ ಭಾಷಣ ಮತ್ತು ನಂತರದ ಚರ್ಚೆಯಲ್ಲಿ ಸಚಿವರು ಮತ್ತು ಸಂಸದರು ಬಳಸುವ ಪ್ರತಿ ಪದಕ್ಕೂ ತೂಕವಿದೆ. ಸರ್ಕಾರದ ಮುಂದಿನ ಆರ್ಥಿಕ ನಡೆ, ನೀತಿ ನಿರೂಪಣೆಯಲ್ಲಿ ಈವರೆಗೆ ಆಗಿರುವ ಲೋಪಗಳಿಗೆ ಪರಿಹಾರ, ಖಾಸಗಿ ಹೂಡಿಕೆ ಬಗ್ಗೆ ಸ್ಪಷ್ಟ ನಿಲುವು, ಪ್ರಗತಿಯ ಖಾತ್ರಿಗೆ ಹೊಸ ಯೋಜನೆಗಳ ಘೋಷಣೆಯ ದಾಖಲೆಯಾಗಿ ಈ ಬಾರಿಯ ಬಜೆಟ್‌ಗೆ ಪ್ರಾಮುಖ್ಯತೆ ಇದೆ. 

ಈಚಿನ ದಿನಗಳಲ್ಲಿ ಸರ್ಕಾರ ಕೆಲ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಟ್ಟಿದೆ. ವಿಮಾನಯಾನ, ಆಹಾರ ಸಂಸ್ಕರಣೆ, ರಕ್ಷಣಾ ಕೈಗಾರಿಕೆಗಳು, ಔಷಧ ತಯಾರಿಕೆಯಲ್ಲಿ ಬಂಡವಾಳ ಹೂಡಿಕೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ 2015ರಲ್ಲಿ ಅವಕಾಶ ಕಲ್ಪಿಸಿಕೊಡಲಾಯಿತು. ಇದು ಆಶಯ. ಆದರೆ ಇದಾದ ನಾಲ್ಕು ವರ್ಷಗಳ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ. ಇದು ವಾಸ್ತವ.

2015ರಲ್ಲಿ ಹೊಸ ಯೋಜನೆಗಳಿಗಾಗಿ  ಭಾರತಕ್ಕೆ 60 ಶತಕೋಟಿ ಡಾಲರ್‌ ವಿದೇಶಿ ಸಾಂಸ್ಥಿಕ ಹೂಡಿಕೆ  ಘೋಷಣೆಯಾಗಿತ್ತು. ಆದರೆ 2018ರಲ್ಲಿ ಆ ಸಂಖ್ಯೆ 55 ಶತಕೋಟಿ ಡಾಲರ್‌ಗೆ ಕುಸಿಯಿತು. ಈ ಅವಧಿಯಲ್ಲಿ ಚೀನಾ 107 ಶತಕೋಟಿ ಡಾಲರ್ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಆಶಯಕ್ಕೂ ವಾಸ್ತವಕ್ಕೂ ಇರುವ ಅಂತರ ಈಗ ಅರ್ಥವಾಯಿತೆ?

ಅನುಷ್ಠಾನದ ಲೋಪಗಳು

ಸರ್ಕಾರದ ಪ್ರಮುಖ ಯೋಜನೆಗಳ ವಿವರಣೆಯನ್ನು ಸರ್ಕಾರ ಬಹಳ ಸುಂದರವಾಗಿ ಕಟ್ಟಿಕೊಡುತ್ತದೆ. ಆದರೆ ಅವುಗಳನ್ನು ಅಷ್ಟೇ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ವಿಚಾರದಲ್ಲಿ ಮಾತ್ರ ಅಕ್ಷರಶಃ ಎಡವಿದೆ.

ಸರಕು ಮತ್ತು ಸೇವಾ ತೆರಿಗೆ ಜಾರಿ (ಜಿಎಸ್‌ಟಿ) ಜಾರಿ ಮಾಡಿದಾಗ ಅದನ್ನು ಉತ್ತಮ ಮತ್ತು ಸರಳ ತೆರಿಗೆ (ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್), ತೆರಿಗೆ ವ್ಯವಸ್ಥೆಯ ಹಲವು ಲೋಪ ಮತ್ತು ಗೊಂದಲಗಳಿಗೆ ಉತ್ತರ ಎಂಬ ವಿವರಣೆ ನೀಡಲಾಗಿತ್ತು. ಆದರೆ ಅನುಷ್ಠಾನದ ಲೋಪಗಳು, ಜಾಗೃತಿ ಅಭಿಮಾನದ ವೈಫಲ್ಯ, ಕೆಟ್ಟ ಪೋರ್ಟಲ್, ಆಡಳಿತಾತ್ಮಕ ಸಮಸ್ಯೆಗಳು, ಪದೇಪದೆ ಬದಲಾದ ತೆರಿಗೆ ನೀತಿಗಳಿಂದಾಗಿ ಅದು ಅತ್ಯಂತ ಕೆಟ್ಟ ಮತ್ತು ಸಂಕೀರ್ಣ ತೆರಿಗೆಯಾಗಿ ಮಾರ್ಪಾಟಾಯಿತು. ಅಪ್ರಬುದ್ಧ ರೀತಿಯಲ್ಲಿ ಅನುಷ್ಠಾನಗೊಂಡ ಜಿಎಸ್‌ಟಿಯಿಂದಾಗಿ ಕೈಗಾರಿಕೋದ್ಯಮಿಗಳು ಮತ್ತು ವ್ಯಾಪಾರಿಗಳು ತತ್ತರಿಸಿದರು. ತೆರಿಗೆ ಮೂಲಕ ಸರ್ಕಾರಕ್ಕೆ ಸಂಗ್ರಹವಾಗಬೇಕಿದ್ದ ಆದಾಯಕ್ಕೂ ಹೊಡೆತ ಬಿತ್ತು.


‘ಬಜೆಟ್ ಹಲ್ವಾ’ಗೆ ಕೈಮುಗಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಸರ್ಕಾರದ ಸಾಧ್ಯತೆಗಳಿಗೂ ಮಿತಿಯಿದೆ

ದೇಶವಾಸಿಗಳ ನಿರೀಕ್ಷೆಯ ಭಾರ ಹೊತ್ತ ಬಜೆಟ್‌ಗೆ ಭರವಸೆ ಈಡೇರಿಸಲು ಸಾಧ್ಯವಾಗುವುದು ಕಷ್ಟ. ಈಗ ದೇಶ ಎದುರಿಸುತ್ತಿರುವ ಸಂದಿಗ್ಧ ಸ್ಥಿತಿಯಿಂದ ಹೊರಬರಲು ಇರುವ ಅವಕಾಶಗಳ ಮಿತಿಯೇ ಅದಕ್ಕಿರುವ ಮುಖ್ಯ ಕಾರಣ. ಆರ್ಥಿಕತೆ ಸುಧಾರಿಸಲು ಸರ್ಕಾರ ಮಾಡುವ ವೆಚ್ಚ ಹೆಚ್ಚಾಗಬೇಕು ಎಂಬ ದೊಡ್ಡ ಕೂಗು ಕೇಳಿಬರುತ್ತಿದೆ. ಒಂದು ವೇಳೆ ಹೀಗೆ ಮಾಡಿದರೆ ಸರ್ಕಾರವು ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡುವ ಖರ್ಚು ಹೆಚ್ಚಾಗುತ್ತದೆ. ಇಂಥ ನಿರ್ಧಾರದಿಂದ ಸಹಜವಾಗಿಯೇ ಸರ್ಕಾರದ ಆದಾಯ ಮತ್ತು ಖರ್ಚಿನ ನಡುವಣ ಅಂತರ (ವಿತ್ತೀಯ ಕೊರತೆ) ದೊಡ್ಡದಾಗುತ್ತದೆ. ಸದ್ಯದ ಹಣಕಾಸು ಪರಿಸ್ಥಿತಿಯಲ್ಲಿ ಸರ್ಕಾರ ದೊಡ್ಡಮಟ್ಟದಲ್ಲಿ ಇಂಥ ಕ್ರಮಕ್ಕೆ ಮುಂದಾಗುವುದು ಅನುಮಾನ.

ಸರ್ಕಾರದ ಸಾಲಪತ್ರಗಳು ಅಥವಾ ಬಾಂಡ್‌ಗಳನ್ನು ರಿಸರ್ವ್‌ ಬ್ಯಾಂಕ್‌ಗೆ ಮಾರಾಟ ಮಾಡುವ ಮೂಲಕ ಅಗತ್ಯ ಬಂಡವಾಳ ಸಂಚಯಿಸಬಹುದು ಎಂದು ಕೆಲ ನೀತಿ ನಿರೂಪಕರು ಸಲಹೆ ನೀಡುತ್ತಿದ್ದಾರೆ. ಈ ಹಣವನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಂಥವುಗಳ ವ್ಯಾಪ್ತಿ ಹಿಗ್ಗಿಸಲು ಬಳಸಿದರೆ ಗ್ರಾಮೀಣ ಪ್ರದೇಶದಲ್ಲಿ ಬೇಡಿಕೆ ವೃದ್ಧಿಸಿ, ಆರ್ಥಿಕತೆ ದೊಡ್ಡ ಮಟ್ಟದಲ್ಲಿ ಚೇತರಿಸಿಕೊಳ್ಳಬಹುದು ಎಂಬ ನಿರೀಕ್ಷೆ ವ್ಯಕ್ತವಾಗುತ್ತಿದೆ.

ರಿಸರ್ವ್‌ ಬ್ಯಾಂಕ್‌ನಲ್ಲಿ ಈ ಹಿಂದೆ ಗವರ್ನರ್ ಆಗಿದ್ದ ಡಿ.ಸುಬ್ಬರಾವ್ ಈ ವಾದವನ್ನು ಒಪ್ಪುವುದಿಲ್ಲ. ‘ಭಾರತದಲ್ಲಿ ಈಗ ಹೂಡಿಕೆ ಹೆಚ್ಚಾಗಲು ಗಮನಕೊಡಬೇಕು. ಬೇಡಿಕೆ ಹೆಚ್ಚಿಸುವುದರಿಂದ ಅಷ್ಟೇನೂ ಉಪಯೋಗವಾಗದು. ನಿಧಾನಗತಿ ಎನ್ನುವುದು ಈಗ ಭಾರತದ ಆರ್ಥಿಕತೆಯ ಭಾಗವಾಗಿಯೇ ಕಾಣಿಸುತ್ತಿದೆ. ಇದನ್ನು ಆರ್ಥಿಕ ಆವೃತ್ತದ ಹಿಂಜರಿಕೆ ಎಂದು ಪರಿಗಣಿಸಲು ಆಗುವುದಿಲ್ಲ. ಬೇಡಿಕೆ ವೃದ್ಧಿಸುವುದರಿಂದ ಅದನ್ನು ಸರಿಪಡಿಸಬಹುದು ಎಂದುಕೊಳ್ಳುವುದು ಸರಿಯಲ್ಲ’ ಎನ್ನುತ್ತಾರೆ ಅವರು.

ಸುಧಾರಣೆ ಹೇಗೆ?

ಈ ಹಿಂದೆ ಭಾರತದಲ್ಲಿ ಹೂಡಿಕೆ ಮತ್ತು ರಫ್ತು ವಲಯದಲ್ಲಿ ಹಿಂಜರಿಕೆ ಕಂಡು ಬಂದಾಗ ದೇಶೀ ಬಳಕೆ ಮತ್ತು ಬೇಡಿಕೆ ಆರ್ಥಿಕತೆಯನ್ನು ಕುಸಿಯದಂತೆ ಕಾಪಾಡುತ್ತಿತ್ತು. 1991 ಮತ್ತು 2008ರಲ್ಲಿ ಹೆಚ್ಚುಕಡಿಮೆ ಇಂಥ ವಿದ್ಯಮಾನಗಳು ಕಂಡುಬಂದಿದ್ದವು. ‘ದೇಶೀ ಬೇಡಿಕೆ ವೃದ್ಧಿಯಿಂದ ಆರ್ಥಿಕತೆ ಸುಧಾರಿಸಬಹುದು’ ಎನ್ನುವ ಹಲವು ಅರ್ಥಶಾಸ್ತ್ರಜ್ಞರ ಅಭಿಪ್ರಾಯದ ಹಿಂದಿರುವುದು ಸಹ ಇಂಥದ್ದೇ ತರ್ಕ.

ಇದನ್ನೂ ಓದಿ: ಆದಾಯ ತೆರಿಗೆ ಕಡಿತಗೊಳಿಸಲು ಭಾರೀ ಚರ್ಚೆ, ಮಧ್ಯಮ ವರ್ಗ ಟಾರ್ಗೆಟ್ 

ತೆರಿಗೆ ವಿಚಾರ; ನಿರೀಕ್ಷೆಯ ಮಹಾಪೂರ

ತೆರಿಗೆ ಕಡಿತದಿಂದ ಗ್ರಾಹಕದಲ್ಲಿ ಹೆಚ್ಚಿನ ಹಣ ಸಂಚಯಗೊಂಡು ಬೇಡಿಕೆ ವೃದ್ಧಿಗೆ ಕಾರಣವಾಗುತ್ತದೆ ಎನ್ನುವುದು ಚಾಲ್ತಿಯಲ್ಲಿರುವ ಸರಳ ಲೆಕ್ಕಾಚಾರ. ಈ ಬಾರಿ ತೆರಿಗೆಯ ಸ್ಲಾಬ್ ಹೆಚ್ಚಾಗಬಹುದು ಅಥವಾ ತೆರಿಗೆಯ ವಿಧಿಸುವ ಪ್ರಮಾಣ ಕಡಿಮೆಯಾಗಬಹುದು ಅಥವಾ ಈ ಎರಡರ ಸಂಯೋಜನೆಯಿಂದ ತೆರಿಗೆ ಪಾವತಿದಾರರಿಗೆ ಲಾಭವಾಗಬಹುದು ಎಂಬ ನಿರೀಕ್ಷೆ ಇದೆ. ಆದಾಯ ತೆರಿಗೆ ನಿಯಮಗಳ ಸುಧಾರಣೆಗೆ ಕೈಹಾಕುವುದು ನಿರ್ಮಲಾ ಸೀತಾರಾಮನ್ ಅವರಿಗೆ ಹಗ್ಗದ ಮೇಲಿನ ನಡಿಗೆಯಂಥ ಕಸರತ್ತು.

ದೀರ್ಘಾವಧಿಯಲ್ಲಿ ಲಾಭ ಗಳಿಸುವ ಷೇರುಗಳ ಮಾರಾಟಕ್ಕೆ ವಿಧಿಸುವ ತೆರಿಗೆ, ಷೇರುಗಳ ಲಾಭಾಂಶದ ಮೇಲೆ ವಿತರಿಸುವ ತೆರಿಗೆಯ ವಿಧಾನದಲ್ಲಿಯೂ ಸುಧಾರಣೆ ಆಗಬೇಕಿದೆ. ಮ್ಯೂಚುವಲ್ ಫಂಡ್‌ಗಳ ಹೂಡಿಕೆಗೆ ಸಿಗುವ ಆದಾಯ ತೆರಿಗೆ ವಿನಾಯ್ತಿಯ ಮೌಲ್ಯವೂ ಹೆಚ್ಚಾಗಬೇಕಿದೆ. ದೇಶದ ಆರ್ಥಿಕತೆಗೆ ಕೇವಲ ಸಾಲಪತ್ರಗಳನ್ನೇ (ಡೆಟ್) ಬಂಡವಾಳದ ಮಾರ್ಗ ಮಾಡಿಕೊಳ್ಳಲು ಸಾಧ್ಯವಿಲ್ಲ. ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ಷೇರು ಮಾರುಕಟ್ಟೆಯಲ್ಲಿ (ಈಕ್ವಿಟಿ) ಹೂಡಿಕೆ ಮಾಡಲು ಏನೆಲ್ಲಾ ಆಗಬೇಕು ಎಂಬುದನ್ನು ಸರ್ಕಾರ ಗಮನದಲ್ಲಿರಿಸಿಕೊಂಡು ಸುಧಾರಣಾ ಕ್ರಮಗಳನ್ನು ಘೋಷಿಸಬೇಕು.

ಈಗ ಅಸ್ತಿತ್ವದಲ್ಲಿರುವ ವ್ಯವಸ್ಥೆಯಂತೆ ಷೇರುಪೇಟೆಯಲ್ಲಿ ಹೂಡಿಕೆ ಮಾಡಿರುವ ಸಾರ್ವಜನಿಕರಿಗೆ ಕಂಪನಿಗಳು ಲಾಭಾಂಶ ವಿತರಿಸುವ ಮೊದಲೇ ಶೇ 21ರಷ್ಟು ತೆರಿಗೆಯನ್ನು ಮುರಿದುಕೊಳ್ಳುತ್ತಿವೆ. ತೆರಿಗೆ ಕಡಿತದ ನಂತರದ ಮೊತ್ತವನ್ನು ಲಾಭಾಂಶವಾಗಿ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿವೆ. ಈ ಪ್ರಮಾಣವನ್ನು ಶೇ 21ಕ್ಕಿಂತ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಕಂಪನಿಗಳು ಷೇರುದಾರರಿಗೆ ಸಂಪೂರ್ಣ ಲಾಭಾಂಶ ವರ್ಗಾಯಿಸಬೇಕು. ಲಾಭಾಂಶ ಪಡೆದವರು ತಮ್ಮ ಆದಾಯದ ಸ್ಲಾಬ್‌ಗಳಿಗೆ ತಕ್ಕಂತೆ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡಬೇಕು.

ಇದನ್ನೂ ಓದಿ: ಶೋಚನೀಯ ಸ್ಥಿತಿಯಲ್ಲಿ ಭಾರತದ ಆರ್ಥಿಕತೆ: ಅಭಿಜಿತ್‌ ಬ್ಯಾನರ್ಜಿ

ಸುಧಾರಿಸೀತೇ ಗ್ರಾಮೀಣ ಆರ್ಥಿಕತೆ?

ನಮ್ಮ ದೇಶದ ನಗರ ಆರ್ಥಿಕತೆಯು ಗ್ರಾಮೀಣ ಆರ್ಥಿಕತೆಯನ್ನು ಮೀರಿ ಬೆಳೆದಿದೆ. ಕಳೆದ 28 ವರ್ಷಗಳಲ್ಲಿ ದಾಖಲಾಗಿರುವ ಗಮನಾರ್ಹ ಬದಲಾವಣೆ ಇದು. ಭಾರತ ಇಂದಿಗೂ ಹಳ್ಳಿಗಳ ದೇಶವೇ ಆಗಿ ಉಳಿದಿದೆ. ಆದರೆ ಒಂದೆಡೆ ನಗರಗಳು ಕೊಬ್ಬಿ ಬೆಳೆಯುತ್ತಿದ್ದರೆ, ಹಳ್ಳಿಗಳು ಸೊರಗಿ ಒಣಗುತ್ತಿವೆ. 1991ರಲ್ಲಿ ನಮ್ಮ ಜಿಡಿಪಿಯಲ್ಲಿ ಗ್ರಾಮೀಣ ಆರ್ಥಿಕತೆಯು ಶೇ 55ರ ಪಾಲು ಹೊಂದಿತ್ತು. ಆದರೆ 2019ರಲ್ಲಿ ನಗರ ಆರ್ಥಿಕತೆಯು ಒಟ್ಟಾರೆ ಜಿಡಿಪಿಯಲ್ಲಿ ಶೇ 72ರ ಪಾಲು ಪಡೆಯಿತು. ಅಬ್ದುಲ್ ಕಲಾಂ ಪ್ರಣೀತ ‘ಪುರ’ ಸೇರಿದಂತೆ ಹತ್ತಾರು ಯೋಜನೆಗಳು ಈ ನಡುವಣ ಅವಧಿಯಲ್ಲಿ ಜಾರಿಗೆ ಬಂದಿದ್ದು ನಿಜವಾದರೂ ಹಳ್ಳಿಗಳ ಆರ್ಥಿಕತೆ ಹೇಳಿಕೊಳ್ಳುವಂಥ ಚೇತರಿಕೆ ಕಾಣಲಿಲ್ಲ.

ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರವು ಗ್ರಾಮೀಣ ಆರ್ಥಿಕತೆಗೆ ಚೈತನ್ಯ ತುಂಬುವ ಯೋಜನೆಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹಣ ತೊಡಗಿಸಿದ್ದು ನಿಜ. 2013–14ರಲ್ಲಿ ₹80,253 ಕೋಟಿ ಇದ್ದ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಮೊತ್ತ 2019–20ರಲ್ಲಿ ₹ 1,19,875 ಕೋಟಿಯಷ್ಟು ಹೆಚ್ಚಾಗಿತ್ತು. ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಜೊತೆಗೆ ನೀರಾವರಿ, ವಿದ್ಯುತ್ ಸರಬರಾಜು, ಅಡುಗೆ ಇಂಧನ ಮತ್ತು ವಸತಿ, ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಇತ್ಯಾದಿ ಕ್ರಮಗಳಿಗೂ ಸರ್ಕಾರ ಗಮನ ನೀಡಿತು. ಆದರೆ ನೋಟು ರದ್ದತಿಯ ಹೊಡೆತದ ಎದುರು ಈ ಸುಧಾರಣಾ ಕ್ರಮಗಳ ಫಲಿತಾಂಶ ಕಣ್ಣಿಗೆ ಬೀಳುವ ಮಟ್ಟಿಗೆ ಕಾಣಿಸಲೇ ಇಲ್ಲ.

ಗ್ರಾಮೀಣ ಜನರ ಕೈಲಿ ಹಣ ಹರಿದಾಡುವಂಥ ಯೋಜನೆಗಳನ್ನು ಸರ್ಕಾರ ರೂಪಿಸಬೇಕು ಎನ್ನುವುದು  ಬ್ಯಾಂಕೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ಬೇಡಿಕೆಯೂ ಹೌದು. ಹೀಗೆ ಮಾಡುವುದರಿಂದ ಸಾಕಷ್ಟು ಉದ್ಯೋಗ ಸೃಷ್ಟಿಯಾಗುವುದರೊಂದಿಗೆ ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ಬಂದಂತೆ ಆಗುತ್ತದೆ. ಬಾಕಿ ಉಳಿದಿರುವ ದೊಡ್ಡಮಟ್ಟದ ಸಾಲ ಮರುಪಾವತಿಯೂ ಸಾಧ್ಯವಾಗುತ್ತದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಮತ್ತು ಉದ್ಯೋಗ ಖಾತ್ರಿಯಂಥ ಯೋಜನೆಗಳ ವ್ಯಾಪ್ತಿ ಮತ್ತು ಸ್ವರೂಪ ಹಿಗ್ಗಿಸಬೇಕು ಎಂಬ ಬೇಡಿಕೆಗಳೂ ಈ ಬಾರಿ ಕೇಳಿ ಬರುತ್ತಿವೆ.

ಇದನ್ನೂ ಓದಿ: ಸಂಪಾದಕೀಯ | ಆರ್ಥಿಕತೆ ಚೇತರಿಕೆಗೆ ಇನ್ನಷ್ಟು ತುರ್ತು ಕ್ರಮ ಅಗತ್ಯ

ಮೂಲಸೌಕರ್ಯಕ್ಕೆ ಬಂಡವಾಳ

ಕಳೆದ ಡಿಸೆಂಬರ್ 31ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಾಕಿ ಉಳಿದಿರುವ ಮೂಲಸೌಕರ್ಯ ಯೋಜನೆಗಳ ವರದಿಯೊಂದನ್ನು ಬಿಡುಗಡೆ ಮಾಡಿದ್ದರು. 2020ರಿಂದ 2025ರ ಅವಧಿಯಲ್ಲಿ ತಾಂತ್ರಿಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಿರುವ ಮತ್ತು ಆರ್ಥಿಕವಾಗಿ ಕಾರ್ಯಸಾಧುವಾದ ಯೋಜನೆಗಳನ್ನು ಗುರುತಿಸಿ ಹಣಕಾಸು ಇಲಾಖೆಯ ಆರ್ಥಿಕ ವ್ಯವಹಾರಗಳ ವಿಭಾಗ ಈ ವರದಿಯನ್ನು ರೂಪಿಸಿತ್ತು.

ವರದಿ ಬಿಡುಗಡೆ ವೇಳೆ ವಿತ್ತ ಸಚಿವರು ಬಾಕಿಯಿರುವ ಯೋಜನೆಗಳು ಬೇಡುವ ಬಂಡವಾಳವನ್ನು ₹ 102 ಲಕ್ಷ ಕೋಟಿ ಎಂದು ಲೆಕ್ಕ ಮಾಡುವುದರೊಂದಿಗೆ, ಶೀಘ್ರದಲ್ಲಿಯೇ ಇದು ₹ 300 ಲಕ್ಷ ಕೋಟಿ ಮುಟ್ಟಬಹುದು ಎಂದು ವಿಶ್ಲೇಷಿಸಿದ್ದರು. ಅವರ ಲೆಕ್ಕಾಚಾರ ಒತ್ತಟ್ಟಿಗಿಡೋಣ. ಕಳೆದ ಆರು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಗೂಡಿ ಮಾಡಿರುವ ಖರ್ಚು ₹ 51 ಲಕ್ಷ ಕೋಟಿ ಮುಟ್ಟುತ್ತದೆ. ಅಂದರೆ ಬಂಡವಾಳದ ಅಗತ್ಯಕ್ಕೂ–ಪೂರೈಕೆಗೂ ಅಗಾಧ ಅಂತರ ಇದೆ ಎಂಬುದು ನಿಚ್ಚಳವಾದಂತೆ ಆಯಿತಲ್ಲ.

ಮೂಲಸೌಕರ್ಯ ಕ್ಷೇತ್ರ ಎದುರಿಸುತ್ತಿರುವ ಬಂಡವಾಳ ಕೊರತೆ ನಿವಾರಿಸಲು ಈ ಬಜೆಟ್‌ನಲ್ಲಿ ವಿತ್ತ ಸಚಿವರು ಮೂಲ ಸೌಕರ್ಯ ಅಭಿವೃದ್ಧಿ ಹಣಕಾಸು ಸಂಸ್ಥೆಗಳ ಸ್ಥಾಪನೆಗೆ (development finance institutions– IDF) ನೀಲ ನಕಾಶೆ ಪ್ರಸ್ತಾಪಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ಮರುಪಾವತಿಗೆ ಅವಕಾಶವಿರುವ ಸಾಲ ನೀಡುವುದು ಇಂಥ ಸಂಸ್ಥೆಗಳ ಪ್ರಾಥಮಿಕ ಜವಾಬ್ದಾರಿಯಾಗಿರಬೇಕು. ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆತರೆ ಯೋಜನೆಗಳ ಒಟ್ಟಾರೆ ವೆಚ್ಚವೂ ಕಡಿಮೆಯಾಗುತ್ತದೆ. ಜನವರಿ 12ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಭೇಟಿಯಾಗಿ ಇಂಥ ಹಣಕಾಸು ಸಂಸ್ಥೆಗಳ ಅಗತ್ಯವನ್ನು ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಬಿಜೆಪಿ ಸರ್ಕಾರದ ಸೈದ್ಧಾಂತಿಕ ಚಾಲನಾಶಕ್ತಿಯಾಗಿರುವ ಆರ್‌ಎಸ್‌ನ ಅಂಗ ಸಂಸ್ಥೆ ಸ್ವದೇಶಿ ಜಾಗರಣ ಮಂಚ್‌ ಸಹ ಇಂಥ ಹಣಕಾಸು ಸಂಸ್ಥೆಗಳ ಸ್ಥಾಪನೆಯ ಪರವಾಗಿದೆ.

‘ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಇಂಥ ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು ಘೋಷಿಸಿದರೆ, ಅವು ತಮ್ಮ ಬಂಡವಾಳ ಹೂಡಿಕೆಯ 30 ಪಟ್ಟು ಹೆಚ್ಚು ಬಂಡವಾಳವನ್ನು ಇತರರಿಂದ ಆಕರ್ಷಿಸಲು ಅವಕಾಶ ಇರಬೇಕು. ಈಗಂತೂ ವಿಶ್ವದೆಲ್ಲೆಡೆಯಿಂದ ಭಾರತದಲ್ಲಿ ಹಣ ಹೂಡಲು ಹೂಡಿಕೆದಾರರು ಸಿದ್ಧರಿದ್ದಾರೆ. ಇಂಥ ಬಂಡವಾಳದಿಂದ ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ದೇಶೀ ಆರ್ಥಿಕತೆಯ ಪುನರುಜ್ಜೀವನವೂ ಸಾಧ್ಯವಾಗುತ್ತದೆ’ ಎಂದು ಬಿಜೆಪಿಯ ಆರ್ಥಿಕ ವ್ಯವಹಾರಗಳ ವಿಭಾಗದ ರಾಷ್ಟ್ರೀಯ ವಕ್ತಾರ ಗೋಪಾಲ್ ಅಗರ್‌ವಾಲ್ ಹೇಳುತ್ತಾರೆ.

ಇದನ್ನೂ ಓದಿ: ರಿಯಲ್‌ ಎಸ್ಟೇಟ್‌ಗೆ ಉತ್ತೇಜನಾ ಕೊಡುಗೆ ಸಾಲದು– ಕ್ರೆಡಾಯ್‌

ರಿಯಲ್‌ ಎಸ್ಟೇಟ್: ಕವಿದಿದೆ ದೂಳು

ಎನ್‌ಡಿಎ ಸರ್ಕಾರವು ಕಳೆದ ಎರಡು ಬಜೆಟ್‌ಗಳಲ್ಲಿಯೂ ರಿಯಲ್ ಎಸ್ಟೇಟ್‌ ಕ್ಷೇತ್ರಕ್ಕೆ ಬಲತುಂಬುವ ಪ್ರಯತ್ನ ಮಾಡಿತ್ತು. 2016ರ ನಂತರ ರಿಯಲ್‌ ಎಸ್ಟೇಟ್ ವಹಿವಾಟು ಕಳಾಹೀನವಾಗಿರುವ ರಿಯಲ್‌ ಕ್ಷೇತ್ರದ ಬಲವರ್ಧನೆಗೆ ಇಂಥ ಬಿಡಿಬಿಡಿ ಪ್ರಯತ್ನಗಳ ಬದಲು ಕ್ಷೇತ್ರದ ಸಮಸ್ಯೆಗಳನ್ನು ಒಟ್ಟಾರೆಯಾಗಿ ಗ್ರಹಿಸಿ ಪರಿಹಾರ ರೂಪಿಸಬೇಕಾದ ಅಗತ್ಯವಿದೆ.

ಮನೆ ಕೊಳ್ಳುವವರ ಸಂಖ್ಯೆ ಕುಸಿದಿರುವುದರಿಂದ ಹಲವು ಕಂಪನಿಗಳು ದಿವಾಳಿಯಂಚಿಗೆ ಬಂದಿವೆ. ಮಂಜೂರಾಗಿರುವ ಸಾಲಗಳು ಮರುಪಾವತಿಯಾಗದೆ ಸುಸ್ತಿಯಾಗಿವೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಂಕಷ್ಟ ಸ್ಥಿತಿಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಬಂಡವಾಳ ಹರಿವು ಕಡಿತಗೊಂಡಿದೆ. ಉದ್ಯಮಿಗಳು ಪ್ರಸ್ತಾಪಿಸುವ ಹೊಸ ಯೋಜನೆಗಳಿಗೆ ಸಾಲ ರೂಪದಲ್ಲಿ ಬಂಡವಾಳ ಸುಲಭವಾಗಿ ಸಿಗುತ್ತಿಲ್ಲ. ಇನ್ನೊಂದೆಡೆ ಸಿದ್ಧವಾಗಿರುವ ಮನೆಗಳ ಮಾರಾಟ ಕಡಿಮೆಯಾಗಿರುವುದರಿಂದ ಹೂಡಿಕೆ ಮಾಡಿದ ಬಂಡವಾಳ ಹಿಂದಿರುಗುತ್ತಿಲ್ಲ. ಅಂತಿಮ ಹಂತದಲ್ಲಿರುವ ಗೃಹ ನಿರ್ಮಾಣ ಯೋಜನೆಗಳಿಗೆ ಬಂಡವಾಳ ಒದಗಿಸಲೆಂದು ಸರ್ಕಾರ ಕಳೆದ ವರ್ಷ ಒದಗಿಸಿದ್ದ ₹ 25 ಸಾವಿರ ಕೋಟಿ ಹಣವು, ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ ಎಂಬ ಮಾತನ್ನು ಇದು ನಿಜ ಮಾಡಿತ್ತು.

ಈ ಬಾರಿಯ ಬಜೆಟ್‌ನಲ್ಲಿ ತಮ್ಮ ಬಹುಕಾಲದ ಬೇಡಿಕೆಗಳು ಈಡೇರಬೇಕು ಎಂದು ರಿಯಲ್‌ ಎಸ್ಟೇಟ್ ಕಂಪನಿಗಳು ನಿರೀಕ್ಷಿಸುತ್ತಿವೆ. ಯೋಜನೆಗಳಿಗೆ ಏಕಗವಾಕ್ಷಿ ಅನುಮೋದನೆ, ರೆರಾ ನಿಯಮಗಳಲ್ಲಿ ಪಾರದರ್ಶಕತೆ, ಗೃಹ ನಿರ್ಮಾಣ ಉಪಕರಣ ಮತ್ತು ಮಾರಾಟ ವಹಿವಾಟಿನ ಮೇಲೆ ವಿಧಿಸುವ ಜಿಎಸ್‌ಟಿ ದರದಲ್ಲಿ ಕಡಿತ ಇತ್ಯಾದಿ ಬೇಡಿಕೆಗಳು ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿಯಲ್ಲಿವೆ. ಗೃಹ ಸಾಲದ ಮೇಲೆ ತೆರಿಗೆ ಮತ್ತು ಮರುಪಾವತಿ ವಿನಾಯ್ತಿಯಂಥ ಕ್ರಮಗಳು ಘೋಷಣೆಯಾದರೆ ಸಿದ್ಧಮನೆಗಳ ಮಾರಾಟಕ್ಕೆ ಅನುಕೂಲವಾಗಬಹುದು.

ಇದನ್ನೂ ಓದಿ: ಐಸಿಯುನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ; ಶೇ 70ರಷ್ಟು ವಹಿವಾಟು ಕುಸಿತ

ಅತಿಸಣ್ಣ, ಸಣ್ಣ, ಮಧ್ಯಮ ಗಾತ್ರದ ಉದ್ದಿಮೆಗಳ ಆಸೆಗಣ್ಣು

ಬೇಡಿಕೆಯ ಕೊರತೆಯು ಹೂಡಿಕೆಯ ಮಿತಿಯಲ್ಲಿ ಪರ್ಯಾವಸಾನಗೊಳ್ಳುತ್ತದೆ ಎನ್ನುವುದು ಆರ್ಥಿಕ ಜಗತ್ತಿನ ಸರಳ ನಿಯಮ. ಬೇಡಿಕೆಯಲ್ಲಿ ಚೈತನ್ಯ ಕಾಣಿಸದಿದ್ದರೆ ಉತ್ಪಾದನೆಯ ಸಾಮರ್ಥ್ಯ ವೃದ್ಧಿ ಯತ್ನಗಳನ್ನು ಕಂಪನಿಗಳು ಮುಂದಕ್ಕೆ ಹಾಕುತ್ತಲೇ ಬರುತ್ತವೆ. ಇಂಥ ಪರಿಸ್ಥಿತಿಯಲ್ಲಿ ಹೂಡಿಕೆ ಸಾಧ್ಯವಾಗಬೇಕಾದರೆ ಹೂಡಿಕೆಗೆ ಬಳಕೆಯಾಗುವ ಬಂಡವಾಳಕ್ಕೆ ವಿಧಿಸುವ ಬಡ್ಡಿಯ ಪ್ರಮಾಣ ಸಾಕಷ್ಟು ಕಡಿಮೆ ಇರಬೇಕು.

ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಮೊದಲ ಸ್ಥಾನದಲ್ಲಿರುವ ಸಣ್ಣ ಕಂಪನಿಗಳ ಶೇ 10ರಷ್ಟು ಸಾಮರ್ಥ್ಯ ಈಗ ಬಳಕೆಯಾಗುತ್ತಿಲ್ಲ. ಸಂಕಷ್ಟ ಸ್ಥಿತಿಯಲ್ಲಿರುವ ಉದ್ದಿಮೆಗಳ ಎನ್‌ಪಿಎ (ವಸೂಲಿಯಾದ ಸಾಲ) ವಿಚಾರದಲ್ಲಿ ಬ್ಯಾಂಕ್‌ಗಳು ನಡೆದುಕೊಳ್ಳುವ ರೀತಿ ಬದಲಾಗಬೇಕು. ಹೊಸ ಬಂಡವಾಳ ಒದಗಿಸುವ ಉದ್ದೇಶದಿಂದ ಮಂಜೂರು ಮಾಡುವ ಸಾಲಗಳಿಗೆ ಆಧಾರವಾಗಿ ಪರಿಗಣಿಸುವ ಆಸ್ತಿಯ ವಿಚಾರದಲ್ಲಿ ಬ್ಯಾಂಕ್ ಅಧಿಕಾರಿಗಳ ವಿವೇಚನಾಧಿಕಾರ ಹೆಚ್ಚಾಗಬೇಕು. ತನಿಖಾ ಸಂಸ್ಥೆಗಳ ಮಧ್ಯಪ್ರವೇಶದ ನಿಯಮಾವಳಿಗಳೂ ಬದಲಾಗಬೇಕು ಎನ್ನುತ್ತಾರೆ ಆರ್‌ಬಿಐ ಮಾಜಿ ಗವರ್ನರ್ ಸುಬ್ಬರಾವ್.

ಸಾಲಮನ್ನಾ ಅಥವಾ ತೆರಿಗೆ ಕಡಿತಕ್ಕಿಂತಲೂ ನಾವು ಪೂರೈಸಿದ ಉತ್ಪನ್ನಗಳಿಗೆ ದೊಡ್ಡ ಕಂಪನಿಗಳು ಮತ್ತು ಸರ್ಕಾರಗಳು ಕಾಲಮಿತಿಯಲ್ಲಿ ಹಣ ಪಾವತಿಯನ್ನು ಖಾತ್ರಿಯಾಗಿ ಮಾಡುವಂಥ ವ್ಯವಸ್ಥೆ ಜಾರಿಯಾಗಬೇಕು ಎನ್ನುವುದು ಸಣ್ಣ ಮಟ್ಟದ ಕೈಗಾರಿಕೆಗಳನ್ನು ನಡೆಸುವ ಉದ್ಯಮಿಗಳು ಮುಖ್ಯ ಒತ್ತಾಯವಾಗಿದೆ. ಇದಕ್ಕಾಗಿ ಪಾವತಿ ಕಾಯ್ದೆ (ಪೇಮೆಂಟ್ ಆಕ್ಟ್) ಜಾರಿ ಮಾಡಬೇಕು ಎನ್ನುತ್ತಾರೆ ಅವರು.

‘ಕಾರ್ಪೊರೇಟ್ ಟ್ಯಾಕ್ಸ್ ಕಡಿತದಿಂದ ದೊಡ್ಡ ಕಂಪನಿಗಳಿಗೆ ಲಾಭ ಸಿಕ್ಕಿರಬಹುದು. ಆದರೆ ಏಕವ್ಯಕ್ತಿ ಮಾಲೀಕತ್ವ ಅಥವಾ ಪಾಲುದಾರಿಕೆಯ ಉದ್ದಿಮೆಗಳಿಗೆ ಹೆಚ್ಚೇನೂ ಅನುವಾಲವಾಗಲಿಲ್ಲ’ ಎನ್ನುತ್ತಾರೆ ಅತಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಪ್ರಾತಿನಿಧಕ ಸಂಸ್ಥೆ ಲಘು ಉದ್ಯೋಗ ಭಾರತಿಯ ಉಪಾಧ್ಯಕ್ಷ ಆರ್‌.ಕೆ.ಭಾರದ್ವಾಜ್.

ಇದನ್ನೂ ಓದಿ: ಸಂಪಾದಕೀಯ | ಆರ್ಥಿಕತೆಗೆ ಉತ್ತೇಜನ ಸ್ವಾಗತಾರ್ಹ, ಇನ್ನಷ್ಟು ಸುಧಾರಣೆ ಬೇಕಾಗಿದೆ

ಬಂದೇ ಬಿಡ್ತಾ ಒಳ್ಳೇಕಾಲ?

ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳುವ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ ಎಂದು ಹಲವರು ವಿಶ್ಲೇಷಿಸುತ್ತಿದ್ದಾರೆ. ಡಿಸೆಂಬರ್‌ ತಿಂಗಳಲ್ಲಿ ಕಂಡು ಬಂದ ಬೇಡಿಕೆ ಪ್ರಮಾಣದ ಹೆಚ್ಚಳವು ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಸೂಚನೆಗಳನ್ನು ನೀಡಿತ್ತು. ಮಾರುಕಟ್ಟೆ ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ಐಎಚ್‌ಎಸ್‌ ಮಾರ್ಕಿಟ್‌ ಮೇ ತಿಂಗಳಿನಿಂದ ಈವರೆಗಿನ ಅವಧಿಯಲ್ಲಿ ಅತಿಹೆಚ್ಚು ಪ್ರಮಾಣದ ವಹಿವಾಟು ನಡೆದಿರುವುದನ್ನು ತನ್ನ ವರದಿಯಲ್ಲಿ ತೋರಿಸಿಕೊಟ್ಟಿತ್ತು.

ನವೆಂಬರ್ ಮತ್ತು ಡಿಸೆಂಬರ್‌ ತಿಂಗಳಲ್ಲಿ ಸತತ ₹ 1 ಲಕ್ಷ ಕೋಟಿಗೂ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿದೆ. ಖ್ಯಾತ ಆಟೊಮೊಬೈಲ್ ಸಂಸ್ಥೆ ಮಾರುತಿ ಸುಜುಕಿ ಸಹ ಕಾರುಗಳ ಮಾರಾಟ ಪ್ರಮಾಣ ಹೆಚ್ಚಾಗಿರುವುದನ್ನು ದಾಖಲಿಸಿದೆ. ಜೂನ್ 2018ರ ನಂತರ ಇದೇ ಮೊದಲ ಬಾರಿಗೆ ಸಿಎಂಐಸಿ ಕ್ಯಾಪೆಕ್ಸ್‌ ಹೊಸ ಹೂಡಿಕೆ ಘೋಷಣೆಗಳು ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿರುವುದನ್ನು ದಾಖಲಿಸಿದೆ.

‘ನಾವು ಎಷ್ಟೋ ಕಷ್ಟಗಳನ್ನು ಅನುಭವಿಸಿ ಆಗಿದೆ. ದೇಶದ ಹಿತದ ದೃಷ್ಟಿಯಿಂದ ಇನ್ನು ಸ್ವಲ್ಪ ದಿನ ಕಷ್ಟ ಅನುಭವಿಸಬೇಕು ಎಂದರೆ ಅದಕ್ಕೂ ಸಿದ್ಧ. ನೀವು ಮಾತ್ರ ಸದ್ಯದ ಪರಿಸ್ಥಿತಿಯ ಜೊತೆಗೆ ಭವಿಷ್ಯದ ಸುಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಸಮತೋಲನದ ಬಜೆಟ್ ಮಂಡಿಸಿ. ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಮುನ್ನಡೆ ಖಾತ್ರಿಗೊಳಿಸಿ. ಮೋದಿ ಭರವಸೆ ಕೊಟ್ಟಿದ್ದ ಒಳ್ಳೇ ದಿನಗಳಿಗಾಗಿ ಐದು ವರ್ಷ ಕಾದಿದ್ದೇವೆ. ಅಂಥದ್ದೊಂದು ಭರವಸೆಯನ್ನು ಜೀವಂತವಾಗಿರಿಸುವ ಬಜೆಟ್ ಮಂಡಿಸಿ’ ಎಂಬುದು ಬಹುತೇಕ ಉದ್ಯಮಿಗಳು, ರೈತರು ಮತ್ತು ಜನಸಾಮಾನ್ಯರ ಅಭಿಪ್ರಾಯವಾಗಿದೆ.

---

ಮಾಹಿತಿ: ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಹಳೆಯ ಸಂಚಿಕೆಗಳು, ಇಂಡಿಯಾ ಟುಡೆ, ಔಟ್‌ಲುಕ್, ದಿ ವೀಕ್, ದಲಾಲ್ ಸ್ಟ್ರೀಟ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಆಫ್ ಇಂಡಿಯಾ, ಔಟ್‌ಲುಕ್ ಮನಿ, ಹಣಕಾಸು ಸಚಿವಾಲಯದ ವೆಬ್‌ಸೈಟ್.

ಬರಹ: ಡಿ.ಎಂ.ಘನಶ್ಯಾಮ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು