ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್‌ 2020: ಮುಖ್ಯಾಂಶಗಳು

Last Updated 5 ಮಾರ್ಚ್ 2020, 10:39 IST
ಅಕ್ಷರ ಗಾತ್ರ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್‌ ಮಂಡಿಸಿದರು. ಆರ್ಥಿಕ ಹಿಂಜರಿತ, ಕೇಂದ್ರದಿಂದ ಬಾರದ ನಿರೀಕ್ಷಿತ ಅನುದಾನ ಮತ್ತು ವಿತ್ತೀಯ ಕೊರತೆಗಳ ಸವಾಲುಗಳ ನಡುವೆ ಯಡಿಯೂರಪ್ಪ ಬಜೆಟ್‌ ಮಂಡಿಸಿದರು. ಈ ಬಜೆಟ್‌ನಪ್ರಮುಖಾಂಶಗಳ ಸಂಪೂರ್ಣ ಮಾಹಿತಿ ಇಲ್ಲಿದೆ...

ಸುಭಿಕ್ಷ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳುವ ಮೂಲಕಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 2020-21ನೇ ಸಾಲಿನ ಬಜೆಟ್‌ ಭಾಷಣವನ್ನು ಆರಂಭಿಸಿದರು.ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳ ಸಮನ್ವಯ ಸಾಧಿಸಲು ಇಲಾಖಾವಾರು ವಿಂಗಡಿಸದೇ ಆರು ವಲಯಗಳನ್ನಾಗಿ ವಿಂಗಡಿಸಿ ಆಯವ್ಯಯ ಮಂಡನೆ ಮಾಡಲಾಗಿದೆ.

1) ಕೃಷಿ ಮತ್ತು ಪೂರಕ ಚಟುವಟಿಕೆಗಳು

2) ಸರ್ವೋದಯ ಮತ್ತು ಕ್ಷೇಮಾಭಿವೃದ್ದಿ

3) ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ

4) ಬೆಂಗಳೂರು ಸಮಗ್ರ ಅಭಿವೃದ್ಧಿ

5) ಸಂಸ್ಕೃತಿ ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ

6) ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು

ವಲಯ 1: ಕೃಷಿ ಮತ್ತು ಪೂರಕ ಚಟುವಟಿಕೆಗಳು

*ನೀರಿನ ಭದ್ರತೆ, ಭೂ ಸಂಚಯ ಮತ್ತು ಸಾಮೂಹಿಕ ಕೃಷಿ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಮಾರುಕಟ್ಟೆಗೆ ಉತ್ತೇಜನ ನೀಡಲು ಮತ್ತು ಕೃಷಿ ಹಾಗೂ ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ಅನುಷ್ಠಾನ.

*“ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ” ಫಲಾನುಭವಿಗಳಿಗೆ ರಾಜ್ಯ ಸರ್ಕಾರ 4000 ರೂ. ಹೆಚ್ಚುವರಿ ನೆರವು ನೀಡುವ ಯೋಜನೆಯನ್ನು ಮುಂದುವರೆಸಲು 2600 ಕೋಟಿ ರೂ. ಅನುದಾನ.

*ಎಲ್ಲಾ ರೈತರಿಗೆ ಹಾಗೂ ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ.

*ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ರಾಜ್ಯದ ವಿಮಾ ಕಂತಿನ ಪಾಲು ಬಿಡುಗಡೆಗೆ 900 ಕೋಟಿ ರೂ.

*ರೈತ ಸಿರಿ ಯೋಜನೆಯಡಿ ಟೆಫ್, ಚಿಯಾ ಮತ್ತು ಕ್ವಿನೋವಾ ಸಿರಿಧಾನ್ಯಗಳ ಸೇರ್ಪಡೆ.

*ಮಣ್ಣು, ನೀರು ಪರೀಕ್ಷೆ ಮತ್ತು ರೈತರಿಗೆ ತಾಂತ್ರಿಕ ನೆರವು ನೀಡಲು “ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್” ಪ್ರಾರಂಭ.

*ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ರೂ. ಅನುದಾನ.

*ರೈತರಿಗೆ ಪ್ರದೇಶವಾರು ಸೂಕ್ತ ಬೆಳೆಯನ್ನು ಬೆಳೆಯಲು, ಅಗತ್ಯ ಬೀಜಗಳು, ರಸಗೊಬ್ಬರಗಳು, ಸಣ್ಣ ಪೌಷ್ಟಿಕಾಂಶಗಳ ಬಳಕೆಗೆ ಮಾರ್ಗದರ್ಶನ ನೀಡಲು ಹೊಸ ನೀತಿ ರಚನೆ.

*ರೈತರ ಸಾಮಥ್ರ್ಯ ಅಭಿವೃದ್ಧಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳಿಗಾಗಿ 40 ಪ್ರಾತ್ಯಕ್ಷಿಕೆ ಕ್ಷೇತ್ರಗಳ ಅಭಿವೃದ್ಧಿ.

*ಕೃಷಿ ಮಹಾಮಂಡಳಗಳು, ರಫ್ತುದಾರರು, ಆಹಾರ ಸಂಸ್ಕರಣಾ ಸಂಸ್ಥೆಗಳು ಮತ್ತು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್‍ಗಳ ಬಗ್ಗೆ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸಲು ಕ್ರಮ.

*ವಿಶ್ವಬ್ಯಾಂಕ್ ಪ್ರಾಯೋಜಿತ ಸುಜಲಾ-III ಯೋಜನೆಯನ್ನು ಜಾರಿಗೊಳಿಸಿರುವ 12 ಮಳೆ ಆಶ್ರಿತ ಜಿಲ್ಲೆಗಳ 2500 ಗ್ರಾಮಗಳ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಭೂ ಸಂಪನ್ಮೂಲ ಯಾದಿಯ ತರಬೇತಿ ನೀಡಿ, ಕಾರ್ಡ್ ವಿತರಿಸಲು 10 ಕೋಟಿ ರೂ. ಅನುದಾನ.

*ವಿಶ್ವಬ್ಯಾಂಕ್ ಅನುದಾನಿತ ಹೊಸ ಬಹು-ರಾಜ್ಯ ಜಲಾನಯನ ಅಭಿವೃದ್ಧಿ ಯೋಜನೆಯಲ್ಲಿ (REWARD) ಮುಂದಿನ ಆರು ವರ್ಷದ ಅವಧಿಗೆ ಕರ್ನಾಟಕ ರಾಜ್ಯ ಭಾಗಿ.

*ಅಂತರ್ಜಲ ಸ್ಥಿತಿ ಗಂಭೀರವಾಗಿರುವ 76 ತಾಲ್ಲೂಕುಗಳಲ್ಲಿ ಮುಂದಿನ ಮೂರು ವರ್ಷದಲ್ಲಿ ನಾಲ್ಕು ಲಕ್ಷ ಹೆಕ್ಟೇರ್‍ನಲ್ಲಿ 810 ಅತಿ ಸಣ್ಣ ಜಲಾನಯನಗಳಲ್ಲಿ ಜಲಾಮೃತ ಯೋಜನೆ ಅನುಷ್ಠಾನ.

*ಸಾಗರದ ಇರುವಕ್ಕಿ ಗ್ರಾಮದಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಬಾಕಿ ಕಾಮಗಾರಿ ಪೂರ್ಣಗೊಳಿಸಿ, ತರಗತಿ ಪ್ರಾರಂಭಿಸಲು ಕ್ರಮ.

*ತೋಟಗಾರಿಕೆ ಉತ್ಪನ್ನಗಳ ಸಮರ್ಪಕ ಕೊಯ್ಲೋತ್ತರ ನಿರ್ವಹಣೆಗೆ ವಿವಿಧ ಜಿಲ್ಲೆಗಳ 10 ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ 5000 ಮೆಟ್ರಿಕ್ ಟನ್ ಸಾಮಥ್ರ್ಯದ ಶೀತಲ ಗೃಹಗಳ ನಿರ್ಮಾಣ.

**ಹೊಸದಾಗಿ ತೋಟಗಾರಿಕೆ ಕೃಷಿ ಪದ್ಧತಿಗೆ ವರ್ಗಾವಣೆಗೊಳ್ಳುವ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರತಿ ಹೆಕ್ಟೇರಿಗೆ 5000 ರೂ.ಗಳಂತೆ ಗರಿಷ್ಠ 10,000 ರೂ. ನೆರವು.

*ಹಾಪ್‍ಕಾಮ್ಸ್ ಸಂಸ್ಥೆಯನ್ನು ಬಲಪಡಿಸಲು ಕ್ರಮ.

*ಕೊಳೆತು ಹೋಗಬಹುದಾದ ಹೂವು, ಹಣ್ಣು ತರಕಾರಿಗಳನ್ನು ಬೆಂಗಳೂರಿನಿಂದ ದೆಹಲಿ, ಮುಂಬಯಿ ಹಾಗೂ ತಿರುವನಂತಪುರಕ್ಕೆ ಸಾಗಿಸಲು ಕೇಂದ್ರ ಸರ್ಕಾರದ ಕೃಷಿ ರೈಲ್ ಯೋಜನೆಯ ಸೌಲಭ್ಯದ ಬಳಕೆ.

*ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ.

*ರಾಜ್ಯದ ಪ್ರತಿ ಗ್ರಾಮದಲ್ಲಿ “ಜಲಗ್ರಾಮ ಕ್ಯಾಲೆಂಡರ್” ಸಿದ್ಧಪಡಿಸಲು ಕ್ರಮ.

*ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ “ಕಿಂಡಿ ಅಣೆಕಟ್ಟು ಯೋಜನೆ”ಗಳ (Vented Dams) ವ್ಯಾಪಕ ಅನುಷ್ಠಾನಕ್ಕೆ ಮಾಸ್ಟರ್ ಪ್ಲಾನ್.

*ಅಟಲ್ ಭೂ-ಜಲ ಯೋಜನೆಯಡಿ 1202 ಕೋಟಿ ರೂ.ಗಳನ್ನು ಬಳಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ.

*ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ Flood Irrigation ಪದ್ಧತಿಯನ್ನು ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸಲು ಕ್ರಮ.

*ಜಲಸಂಪನ್ಮೂಲ ಇಲಾಖೆಯ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ.

*ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 500 ಕೋಟಿ ರೂ. ಅನುದಾನ.

*‘ಎತ್ತಿನಹೊಳೆ ಯೋಜನೆ’ಗೆ 1500 ಕೋಟಿ ರೂ. ಅನುದಾನ; ಮೊದಲನೆಯ ಹಂತದ Lift component ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕ್ರಮ.

*ಹೂಳು ತುಂಬಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮಥ್ರ್ಯದ ಕೊರತೆಯನ್ನು ನೀಗಿಸಲು ಪರ್ಯಾಯ ಹರಿವು ನಾಲೆ ಮೂಲಕ ನವಲೆ ಹತ್ತಿರ ಸಮತೋಲನಾ ಜಲಾಶಯ ನಿರ್ಮಾಣದ ವಿಸ್ತøತ ಯೋಜನಾ ವರದಿ ತಯಾರಿಕೆಗೆ 20 ಕೋಟಿ ರೂ. ಅನುದಾನ

*ರಾಜ್ಯದಲ್ಲಿ 5000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನ

*ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗೆ ತಿಂತಿಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣ- ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕ್ರಮ.

*ರಾಮನಗರ ಜಿಲ್ಲೆಯ ಕಣ್ವ ಫಾರ್ಮ್‍ನಲ್ಲಿ ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ.

*ರಾಜ್ಯದಲ್ಲಿ ಪಶುಸಂಗೋಪನಾ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಸಮೀಕ್ಷೆ ನಡೆಸಿ, ಸಮಗ್ರ ನೀತಿ ರಚನೆ.

*ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳುವ “ಸಮಗ್ರ ವರಾಹ ಅಭಿವೃದ್ಧಿ” ಯೋಜನೆಗೆ ಐದು ಕೋಟಿ ರೂ. ಅನುದಾನ.

*ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕುಕ್ಕುಟ ತ್ಯಾಜ್ಯ ಸಂಸ್ಕರಣೆ ಮತ್ತು ಮೌಲ್ಯವರ್ಧನ ಕೇಂದ್ರ ಸ್ಥಾಪನೆ.

*ಲಿಂಗ ನಿರ್ಧಾರಿತ ವೀರ್ಯನಳಿಕೆಗಳಿಂದ ಕೃತಕ ಗರ್ಭಧಾರಣೆ ಮೂಲಕ ಹೆಣ್ಣು ಕರುಗಳ ಜನನ ಹೆಚ್ಚಿಸಲು ಎರಡು ಕೋಟಿ ರೂ. ಅನುದಾನ.

*ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕೆ 1.5 ಕೋಟಿ ರೂ. ವೆಚ್ಚದಲ್ಲಿ “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ” ಜಾರಿ.

*“ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ.

*ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.

*ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.

*ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲ್ಲಿ ಪರಿಷ್ಕøತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ.

*ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ.

*ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ.

*ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು ಕೋಟಿ ರೂ.

*ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನ.

*ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಕೋಟಿ ರೂ. ಅನುದಾನ.

*ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (DCC), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (PCARD) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS) ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ. 466 ಕೋಟಿ ರೂ. ನೆರವು. 92 ಸಾವಿರ ರೈತರಿಗೆ ಪ್ರಯೋಜನ.

*ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿ

*ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ 100 FPO ರಚನೆ, FPO ಗಳ ಮೂಲಕ ಮೌಲ್ಯ ಸರಪಳಿ ಅಭಿವೃದ್ಧಿಗೆ ಎಂಟು ಕೋಟಿ ರೂ. ನೆರವು.

*ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗಾಗಿ ಸ್ಥಾಪಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಯ ಮೊತ್ತ ಅಗತ್ಯಕ್ಕೆ ಅನುಗುಣವಾಗಿ 2000 ಕೋಟಿ ರೂ. ವರೆಗೆ ಹೆಚ್ಚಳ.

*ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನ.

ವಲಯ 2: ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರ ಕಲ್ಯಾಣಕ್ಕೆ ಎಸ್‍ಸಿಎಸ್‍ಪಿ/ ಟಿಎಸ್‍ಪಿ ಅಡಿ 26,930 ಕೋಟಿ ರೂ. ಅನುದಾನ ನಿಗದಿ. ಇದು ನಿಯಮಾನುಸಾರ ಹಂಚಿಕೆ ಮಾಡಬೇಕಾದ ಮೊತ್ತಕ್ಕಿಂತ ಹೆಚ್ಚು.

*ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ನಡೆಸುವ ವಸತಿ ಶಾಲೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ರಷ್ಟು ಸೀಟು ಹಂಚಿಕೆಗೆ ಕ್ರಮ. ಈ ವಸತಿ ಶಾಲೆಗಳಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ.

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ/ಯುವತಿಯರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಮೂಲಕ ವಾಹನ ಚಾಲನಾ ತರಬೇತಿ, ವಿವಿಧ ಪ್ಯಾರಾಮೆಡಿಕಲ್ ಸರ್ಟಿಫಿಕೇಟ್ ಕೋರ್ಸುಗಳೊಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸಣ್ಣ ಸರಕು ಸಾಗಾಣಿಕೆ ವಾಹನ ಖರೀದಿಗೆ ಸಾಲದ ಸೌಲಭ್ಯ ನೀಡಲು ಕ್ರಮ.

*ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ನಿರ್ವಹಿಸುತ್ತಿರುವ ಸಹಕಾರ ಸಂಘಗಳಿಗೆ ಆರ್ಥಿಕ ಚಟುವಟಿಕೆಗಳಿಗಾಗಿ ನೀಡುವ ಷೇರು ಬಂಡವಾಳ ದ್ವಿಗುಣಗೊಳಿಸಿ 20 ಲಕ್ಷ ರೂ. ಗಳಿಗೆ ಹೆಚ್ಚಳ.

*ಪ್ರತಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ, ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಾಲ ಇವರ ಹೆಸರಿನಲ್ಲಿ ಒಂದು ಲಕ್ಷ ರೂ. ನಗದು ಪ್ರಶಸ್ತಿ ನೀಡಲು ಕ್ರಮ. 60 ಲಕ್ಷ ರೂ. ಅನುದಾನ.

*ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ ಮತ್ತು ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಿಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಎರಡು ಕೋಟಿ ರೂ. ಅನುದಾನ.

*“ಚರ್ಮ ಶಿಲ್ಪ” ಎಂಬ ಯಂತ್ರಾಧಾರಿತ ಉತ್ಪಾದನಾ ಘಟಕಗಳ ಸ್ಥಾಪನೆಗೆ 250 ಚರ್ಮ ಕುಶಲಕರ್ಮಿಗಳಿಗೆ ಡಾ|| ಬಾಬು ಜಗಜೀವನ್‍ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ಘಟಕ ವೆಚ್ಚ 10 ಲಕ್ಷ ರೂ.ಗಳಲ್ಲಿ ಐದು ಲಕ್ಷ ರೂ. ಸಹಾಯಧನ. 12.50 ಕೋಟಿ ರೂ. ಅನುದಾನ.

*ಅಲೆಮಾರಿ/ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ 78 ಕೋಟಿ ರೂ. ಅನುದಾನ.

*ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹಾಗೂ ವಿವಿಧ ನಿಗಮಗಳಿಗೆ 125 ಕೋಟಿ ರೂ. ಅನುದಾನ.

*ಇ-ವಾಣಿಜ್ಯ ಉತ್ಪನ್ನಗಳನ್ನು ಸರಬರಾಜು ಮಾಡುವ ಯುವಕರಿಗೆ ಬೈಕ್ ಕೊಳ್ಳಲು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾವಿರ ಯುವಕರಿಗೆ ತಲಾ 25,000 ರೂ.ಗಳಂತೆ 2.5 ಕೋಟಿ ರೂ. ಆರ್ಥಿಕ ನೆರವು

*ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಅಧಿಸೂಚಿತವಲ್ಲದ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ

*ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜನ್ನಾಗಿ ಉನ್ನತೀಕರಿಸಲು ಕ್ರಮ.

*ಕ್ರೈಸ್ತ ಸಮುದಾಯದವರ ಸರ್ವತೋಮುಖ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ.

*ಅಪೂರ್ಣ ಹಂತದ ಎರಡು ಲಕ್ಷ ಮನೆಗಳನ್ನು ಪೂರ್ಣಗೊಳಿಸಿ, ವಸತಿ ರಹಿತರಿಗೆ ಹಂಚಿಕೆ ಮಾಡಲು 2500 ಕೋಟಿ ರೂ.

*ಸರ್ಕಾರದ ವಸತಿ ಯೋಜನೆಗಳಡಿ ಮನೆಗಳನ್ನು ನಿರ್ಮಿಸಿಕೊಂಡು ಹತ್ತು ವರ್ಷವಾಗಿದ್ದಲ್ಲಿ, ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಅಡಮಾನವಿಡಲಾದ ನಿವೇಶನವನ್ನು ಡೀಮ್ಡ್ ರಿಲೀಸ್ ಎಂದು ಪರಿಗಣಿಸಲು ಕ್ರಮ.

*ಒಂದೇ ಸೂರಿನಡಿ ಪೂರ್ವ ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿವರೆಗೆ ಶಿಕ್ಷಣ ನೀಡುವ 276 ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.

*ನಬಾರ್ಡ್ ಸಹಯೋಗದಲ್ಲಿ 758 ಕೋಟಿ ರೂ. ವೆಚ್ಚದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ 26 ಜಿಲ್ಲೆಗಳ 3386 ಸರ್ಕಾರಿ ಶಾಲೆಗಳ 6469 ಶಾಲಾ ಕೊಠಡಿಗಳ ಪುನರ್ ನಿರ್ಮಾಣಕ್ಕೆ ಕ್ರಮ.

*ಶಾಸಕರು ತಮ್ಮ ಕ್ಷೇತ್ರದ ವ್ಯಾಪ್ತಿಯ ತಲಾ ಮೂರು ಶಾಲೆಗಳ ದತ್ತು ಸ್ವೀಕಾರ ಮತ್ತು ಅಭಿವೃದ್ಧಿಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕ್ರಮ.

*ಪ್ರತಿ ತಿಂಗಳಲ್ಲಿ ಎರಡು ಶನಿವಾರಗಳಂದು ಬ್ಯಾಗ್ ರಹಿತ ದಿನ, “ಸಂಭ್ರಮ ಶನಿವಾರ” ಆಚರಣೆ.

*ದಾವಣಗೆರೆ, ಉಡುಪಿ ಮತ್ತು ದೊಡ್ಡಬಳ್ಳಾಪುರದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಕೇಂದ್ರಗಳಿಗೆ ನಾಲ್ಕು ಕೋಟಿ ರೂ. ಅನುದಾನ

*ಶಿಕ್ಷಕರ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು “ಶಿಕ್ಷಕ ಮಿತ್ರ” ಎಂಬ ಮೊಬೈಲ್ ಆ್ಯಪ್ ಅಭಿವೃದ್ಧಿ.

*400 ಸರ್ಕಾರಿ ಉರ್ದು ಶಾಲೆಗಳಲ್ಲಿ ಉರ್ದು ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಒಂದು ಕೋಟಿ ರೂ. ಅನುದಾನ.

*ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು ಐ.ಐ.ಟಿ. ಮಾದರಿಯಲ್ಲಿ ಸ್ವಾಯತ್ತಗೊಳಿಸಿ ಅಭಿವೃದ್ಧಿಪಡಿಸಲು 10 ಕೋಟಿ ರೂ. ಅನುದಾನ.

*ತಂತ್ರಜ್ಞಾನದ ನೆರವಿನಿಂದ ರಾಜ್ಯದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಆಡಳಿತ ವ್ಯವಸ್ಥೆಯ ಸಮರ್ಥ ನಿರ್ವಹಣೆಗೆ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಶಾಶ್ವತ ವ್ಯವಸ್ಥೆ.

*ಇಂಟರ್ಯಾಕ್ಟೀವ್ ಆನ್-ಲೈನ್ ಕೋರ್ಸ್‍ಗಳನ್ನು (M.O.O.C) ಪ್ರಾರಂಭ ಹಾಗೂ ಗುಣಾತ್ಮಕ ಇ-ಕಂಟೆಂಟ್ ಅಭಿವೃದ್ಧಿಗೆ ಒಂದು ಕೋಟಿ ರೂ. ವೆಚ್ಚ

*ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯಡಿ ತಲಾ ಐದು ಕೋಟಿ ರೂ. ವೆಚ್ಚದಲ್ಲಿ ಜಿಯೋಸ್ಪೇಶಿಯಲ್ ತಂತ್ರಜ್ಞಾನ ಕೇಂದ್ರ ಸ್ಥಾಪನೆ.

*ಏಷ್ಯಾ ಖಂಡದ ದೇಶಗಳ ಶಿಕ್ಷಣ ಸಚಿವರ ಶೈಕ್ಷಣಿಕ ಸಮಾವೇಶ ಮತ್ತು ಬೃಹತ್ ವಸ್ತು ಪ್ರದರ್ಶನ ಆಯೋಜನೆ.

*ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ / ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಹಂತ ಹಂತವಾಗಿ 19 ಕೋಟಿ ರೂ. ವೆಚ್ಚದಲ್ಲಿ ಟೆಲಿಮೆಡಿಸನ್ ಸೇವೆ ವಿಸ್ತರಣೆ.

*ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ 200 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ.

*ಆರು ವರ್ಷದೊಳಗಿನ ಮಕ್ಕಳಲ್ಲಿ ಜನ್ಮಜಾತ ಕಿವುಡುತನ ಪತ್ತೆ ಹಚ್ಚಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿ, ಶ್ರವಣಯಂತ್ರ ಒದಗಿಸಿ ಗುಣಪಡಿಸುವ ಯೋಜನೆಗೆ 28 ಕೋಟಿ ರೂ. ಅನುದಾನ.

*ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ತಾಲ್ಲೂಕು ಆಸ್ಪತ್ರೆಗಳ ತೀವ್ರ ನಿಗಾ ಘಟಕ ನಿರ್ವಹಣೆ.

*ರಾಜ್ಯದ ಆಯ್ದ ಐದು ಜಿಲ್ಲೆಗಳಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಬಡ ರೋಗಿಗಳಿಗೆ ಉಚಿತ ಪೆರಿಟೋನಿಯಲ್ ಡಯಾಲಿಸಿಸ್ ಸೇವೆ.

*ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಇತರೆ ಐದು ಆಸ್ಪತ್ರೆಗಳ ತುರ್ತು ವೈದ್ಯಕೀಯ ಚಿಕಿತ್ಸಾ ವಿಭಾಗಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಿ ಉತ್ಕøಷ್ಟತಾ ಕೇಂದ್ರಗಳನ್ನಾಗಿ (Centre of Excellence) ಅಭಿವೃದ್ಧಿಪಡಿಸಲು ಐದು ಕೋಟಿ ರೂ. ಅನುದಾನ.

*ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಮತ್ತು ಸಿ.ವಿ. ರಾಮನ್ ಆಸ್ಪತ್ರೆಗಳಲ್ಲಿ ಹೃದಯ ರೋಗದ ಚಿಕಿತ್ಸೆಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದೊಂದಿಗೆ ಕ್ಯಾತ್‍ಲ್ಯಾಬ್ ಸ್ಥಾಪನೆ.

*ಹಾವೇರಿ ಜಿಲ್ಲೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 20 ಹಾಸಿಗೆಗಳ ಆಯುಷ್ ಸಂಯುಕ್ತ ಆಸ್ಪತ್ರೆ ಪ್ರಾರಂಭ. ಐದು ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.

*ರಾಜ್ಯದ 17 ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ನವಜಾತ ಶಿಶುವಿನ ತೀವ್ರ ನಿಗಾ ಘಟಕಗಳ (Neonatal Intensive Care Unit) ಹಂತ ಹಂತವಾಗಿ ಉನ್ನತೀಕರಣ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ಮಂಗಳೂರಿನ ವಿಭಾಗೀಯ ಆಧುನಿಕ ಮಕ್ಕಳ ಆರೋಗ್ಯ ಕೇಂದ್ರದ ಮಾದರಿಯ ಕೇಂದ್ರಗಳ ಸ್ಥಾಪನೆ.

*ಎಲ್ಲಾ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ತಲಾ ಮೂರು ಕೋಟಿ ರೂ. ವೆಚ್ಚದಲ್ಲಿ ಸಿಮ್ಯುಲೇಷನ್ ಲ್ಯಾಬ್ ಮತ್ತು ತಲಾ 30 ಲಕ್ಷ ರೂ. ವೆಚ್ಚದಲ್ಲಿ ಮಾಲಿಕ್ಯುಲಾರ್ ಬಯಾಲಜಿ ಲ್ಯಾಬ್ ಸ್ಥಾಪನೆ.

*ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಆರ್ಥಿಕ ನೆರವಿನೊಂದಿಗೆ ಚರ್ಮಶಾಸ್ತ್ರ ಮತ್ತು ಸೌಂದರ್ಯವರ್ಧಕ ಶಾಸ್ತ್ರದ ಸಂಸ್ಥೆ ಮತ್ತು ಜಿರಿಯಾಟ್ರಿಕ್ಸ್ ಸಂಸ್ಥೆಗಳ ಸ್ಥಾಪನೆ.

*ವೈದ್ಯಕೀಯ, ಶುಶ್ರೂಷಾ, ಅರೆ-ವೈದ್ಯಕೀಯ ಮತ್ತು ಫಾರ್ಮಸಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಒಂದು ಕೇಂದ್ರೀಕೃತ ಉದ್ಯೋಗ ಕೋಶ ಸ್ಥಾಪನೆ.

*ಆಯವ್ಯಯದಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ 37,783 ಕೋಟಿ ರೂ.ಗಳ 953 ಕಾರ್ಯಕ್ರಮಗಳ ನಿಗದಿ. ಇದು ಒಟ್ಟಾರೆ ಆಯವ್ಯಯ ಗಾತ್ರದ ಶೇ.15.88 ರಷ್ಟು.

*ರಾಜ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಕ್ಕಳ ಆಯವ್ಯಯ ಮಂಡನೆ. ರಾಜ್ಯದಲ್ಲಿರುವ 18 ವರ್ಷದ ಕೆಳಗಿರುವ ಎಲ್ಲಾ ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಅಡಕ. 2020-21ನೇ ಸಾಲಿನ ಆಯವ್ಯಯದಲ್ಲಿ 36,340 ಕೋಟಿ ರೂ.ಗಳ 279 ಕಾರ್ಯಕ್ರಮಗಳ ಪ್ರಸ್ತಾಪ. ಇದು ಒಟ್ಟಾರೆ ಆಯವ್ಯಯ ಗಾತ್ರದ 15.28 ರಷ್ಟು.

*ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರಾಜ್ಯದಲ್ಲಿ ಏಳು ಹೊಸ ಬಾಲಮಂದಿರಗಳ ಸ್ಥಾಪನೆ. 5.67 ಕೋಟಿ ರೂ. ಅನುದಾನ.

*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಸುಧಾರಣಾ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್. ಐದು ಕೋಟಿ ರೂ. ಅನುದಾನ.

*ನೆರೆಹಾವಳಿಯಿಂದ ಹಾನಿಯಾದ 842 ಅಂಗನವಾಡಿ ಕೇಂದ್ರಗಳ ಪುನರ್ ನಿರ್ಮಾಣಕ್ಕೆ 138 ಕೋಟಿ ರೂ.

*ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಮಹಿಳೆಯರಿಗೆ ತಲುಪಿಸಲು ಮಹಿಳಾ ಸುರಕ್ಷತಾ ಪೋರ್ಟಲ್ ಪ್ರಾರಂಭ.

*ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವವರಿಗೆ ಜೀವನೋಪಾಯ ರೂಪಿಸಿಕೊಳ್ಳಲು “ಉಪಕಾರ” ಯೋಜನೆಯಡಿ ಮೂರು ವರ್ಷ ಅವಧಿಗೆ ಮಾಸಿಕ 5000 ರೂ. ಆರ್ಥಿಕ ನೆರವು; ಕೌಶಲ್ಯಾಭಿವೃದ್ಧಿ ತರಬೇತಿಗೆ ಕ್ರಮ. ಒಂದು ಕೋಟಿ ರೂ. ಅನುದಾನ.

*ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಮಹಿಳಾ ಪೂರಕ ಪೌಷ್ಟಿಕ ಉತ್ಪಾದನಾ ಕೇಂದ್ರಗಳ ಆಧುನೀಕರಣಕ್ಕೆ ಮಹಿಳಾ ಅಭಿವೃದ್ಧಿ ನಿಗಮದಿಂದ 20 ಲಕ್ಷ ರೂ. ವರೆಗೆ ಬಡ್ಡಿ ರಹಿತ ಕಿರು ಸಾಲ ಸೌಲಭ್ಯ. 20 ಕೋಟಿ ರೂ. ಅನುದಾನ.

*ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಉತ್ಪನ್ನಗಳನ್ನು ಸರ್ಕಾರದ ಇಲಾಖೆಗಳಲ್ಲಿ ಅವಶ್ಯಕತೆಗನುಸಾರ ಖರೀದಿಸಲು ಕ್ರಮ.

*ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಟ್ರಾನ್ಸ್‍ಜೆಂಡರ್‍ರವರ ಮೂಲಹಂತದ (Base line) ಸಮೀಕ್ಷೆ ಕೈಗೊಳ್ಳಲು 70 ಲಕ್ಷ ರೂ. ಅನುದಾನ.

*ಶ್ರವಣದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ವಿತರಿಸಲು 60 ಲಕ್ಷ ರೂ. ಅನುದಾನ

*ದೃಷ್ಟಿದೋಷವುಳ್ಳ ವ್ಯಕ್ತಿಗಳಿಗಾಗಿ ಬೆಂಗಳೂರಿನಲ್ಲಿ ಹಾಗೂ ಕಲಬುರಗಿಯಲ್ಲಿ 30 ಲಕ್ಷ ರೂ.ಗಳ ವೆಚ್ಚದಲ್ಲಿ ಬ್ರೈಲ್ ಕಂ ಟಾಕಿಂಗ್ ಲೈಬ್ರರಿ ಸ್ಥಾಪನೆ. ಮೈಸೂರಿನ ಸರ್ಕಾರಿ ಬ್ರೈಲ್ ಮುದ್ರಣಾಲಯಕ್ಕೆ 80 ಲಕ್ಷ ರೂ.ಗಳ ವೆಚ್ಚದಲ್ಲಿ ಆಧುನಿಕ ಮುದ್ರಣ ಯಂತ್ರ ಖರೀದಿ.

*ರಾಜ್ಯದ 500 ಅಂಧ ವಿದ್ಯಾರ್ಥಿಗಳಿಗೆ ತಲಾ 25,000 ರೂ.ಗಳ ಮೊತ್ತದ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್ ಹಾಗೂ ವಾಕಿಂಗ್ ಸ್ಟಿಕ್‍ಗಳನ್ನೊಳಗೊಂಡ ಕಿಟ್ ವಿತರಣೆ. 1.25 ಕೋಟಿ ರೂ. ಅನುದಾನ.

*ಅಂಧ ತಾಯಂದಿರಿಗೆ ನೀಡುವ ಮಾಸಿಕ 2000 ರೂ. ಶಿಶುಪಾಲನಾ ಭತ್ಯೆ ಯೋಜನೆ ಮಗುವಿನ ಮೊದಲ ಎರಡು ವರ್ಷಗಳಿಂದ ಐದು ವರ್ಷದ ವರೆಗೆ ವಿಸ್ತರಣೆ.

*“ಮುಖ್ಯಮಂತ್ರಿಗಳ ಆರೋಗ್ಯ ಸುರಕ್ಷಾ” ಯೋಜನೆಯಡಿಯಲ್ಲಿ ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ಅನುಮೋದಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು “ಉಚಿತ ಪ್ರಿಪೇಯ್ಡ್ ಹೆಲ್ತ್ ಕಾರ್ಡ್” ವಿತರಣೆ.

*“ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ ಉದ್ಯಮಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಕಾರ್ಮಿಕರಿಗೆ ಉಚಿತ ಬಿಎಂಟಿಸಿ ಮಾಸಿಕ ಬಸ್ ಪಾಸ್ ವಿತರಣೆಗೆ 25 ಕೋಟಿ ರೂ. ಅನುದಾನ.

*ನಗರ ಪ್ರದೇಶಗಳಲ್ಲಿ ದುಡಿಯುತ್ತಿರುವ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರ ಆರೋಗ್ಯ ರಕ್ಷಣೆಗೆ 10 “ಮೊಬೈಲ್ ಕ್ಲಿನಿಕ್” ಪ್ರಾರಂಭ.

*ಕಟ್ಟಡ ಕಾರ್ಮಿಕರ ಮಕ್ಕಳ ಪಾಲನೆಗೆ ಕಟ್ಟಡ ನಿರ್ಮಾಣ

*ಸ್ಥಳದಲ್ಲಿ 10 ಸಂಚಾರಿ ಶಿಶುಪಾಲನಾ ಕೇಂದ್ರಗಳನ್ನು ಒಳಗೊಂಡಂತೆ

*ಒಟ್ಟು 110 “ಕಿತ್ತೂರು ರಾಣಿ ಚೆನ್ನಮ್ಮ” ಶಿಶು ಪಾಲನಾ ಕೇಂದ್ರಗಳ ಸ್ಥಾಪನೆ.

*“ಆಹಾರ” ತಂತ್ರಾಂಶ ಉನ್ನತೀಕರಿಸಲು ಕ್ರಮ.

*ಕಾನೂನು ಮಾಪನ ಶಾಸ್ತ್ರ ಇಲಾಖೆಯ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ಉಸ್ತುವಾರಿ ಬಿಗಿಗೊಳಿಸಲು “ಇ-ಮಾಪನ” ತಂತ್ರಾಂಶ ಉನ್ನತೀಕರಣ.

*2020-21ನೇ ಸಾಲಿನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ನಿಗದಿ ಪಡಿಸಿದ ಒಟ್ಟು ಅನುದಾನ 72,093 ಕೋಟಿ ರೂ.

ವಲಯ 3: ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ

*ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ವಿಶೇಷ ಅಭಿವೃದ್ಧಿ ಯೋಜನೆ ಮುಂದುವರಿಕೆ, 3060 ಕೋಟಿ ರೂ. ಅನುದಾನ.

*ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ರೂ.

*ಹೊಸದಾಗಿ ರಚಿಸಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಚಟುವಟಿಕೆಗಳಿಗೆ ಮುಂದಿನ ವರ್ಷಗಳಲ್ಲಿ 500 ಕೋಟಿ ರೂ.

*ಪಂಚಾಯತ್ ಸಂಸ್ಥೆಗಳ ವಿಕೇಂದ್ರೀಕರಣ ಮತ್ತು ಬಲವರ್ಧನೆಗೆ ಪಂಚಾಯತ್‍ರಾಜ್ ಆಯುಕ್ತಾಲಯ ಪ್ರಾರಂಭ.

*“ಗ್ರಾಮೀಣ ಸುಮಾರ್ಗ ಯೋಜನೆ” ಯಡಿ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ 780 ಕೋಟಿ ರೂ. ಅನುದಾನ.

*“ಜಲಧಾರೆ” ಯೋಜನೆಯಡಿಯಲ್ಲಿ Asian Infrastructure Investment Bank (AIIB) ನೆರವಿನೊಂದಿಗೆ 700 ಕೋಟಿ ರೂ. ವೆಚ್ಚದಲ್ಲಿ ವಿಜಯಪುರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೃಹತ್ ಕುಡಿಯುವ ನೀರಿನ ಯೋಜನೆ ಜಾರಿ.

*ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಮತ್ತು ರಾಜ್ಯದ ಸಂಪನ್ಮೂಲ ಬಳಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು “ಮನೆ ಮನೆಗೆ ಗಂಗೆ” ನೂತನ ಯೋಜನೆ ಜಾರಿ.

*ಗ್ರಾಮೀಣ ಮತ್ತು ನಗರ ಪ್ರದೇಶಗಳ ನೀರು ಪೂರೈಕೆ ಸಮನ್ವಯಕ್ಕೆ ಸಮಗ್ರ ನೀತಿ ಜಾರಿ. ಒಂದೇ ಸಚಿವಾಲಯದಡಿ ಸಂಬಂಧಿಸಿದ ಇಲಾಖೆ ಮತ್ತು ಸಂಸ್ಥೆಗಳ ಸೇರ್ಪಡೆ.

*ರಾಜ್ಯದ 17 ನದಿ ಪಾತ್ರದ ಮಲಿನತೆಯನ್ನು ತಡೆಗಟ್ಟಲು 1690 ಕೋಟಿ ರೂ. ಮೊತ್ತದಲ್ಲಿ 20 ನಗರ ಪ್ರದೇಶಗಳ ಒಳಚರಂಡಿ ವ್ಯವಸ್ಥೆ ಹಾಗೂ ಒಂದು ಪಟ್ಟಣಕ್ಕೆ ಮಲತ್ಯಾಜ್ಯ ಸಂಸ್ಕರಣಾ ಘಟಕ(Faecal Sludge and Septage Management) ಅಳವಡಿಕೆಗೆ ಕ್ರಮ, 100 ಕೋಟಿ ರೂ. ಅನುದಾನ

*ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶದ ಮರುಬಳಕೆಗೆ 20 ಕೋಟಿ ರೂ. ವೆಚ್ಚದ ಯೋಜನೆ.

*ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕಾರ್ಯಕ್ರಮ ಜಾರಿ.

*ಕರ್ನಾಟಕ ನಗರ ವೀಕ್ಷಣಾಲಯದ (KARNATAKA URBAN OBSERVATORY) ಸ್ಥಾಪನೆಗೆ ಕ್ರಮ.

*ರಾಜ್ಯದಲ್ಲಿ ಹೂಡಿಕೆದಾರರಿಗೆ ಉತ್ತೇಜನ ನೀಡಲು, ಕೈಗಾರಿಕೆ ಸ್ಥಾಪನೆಗೆ ಗುರುತಿಸುವ ಜಾಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿಗೆ ಕ್ರಮ.

*2020ರ ನವೆಂಬರ್‍ನಲ್ಲಿ “ಇನ್‍ವೆಸ್ಟ್ ಕರ್ನಾಟಕ-2020” ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜನೆ.

*“ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ” ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ “ಹೆಲ್ತ್ ಅಂಡ್ ವೆಲ್‍ನೆಸ್ ಕ್ಲಸ್ಟರ್” ಮತ್ತು ಧಾರವಾಡ ಜಿಲ್ಲೆಯಲ್ಲಿ “ಹೋಮ್ ಅಂಡ್ ಪರ್ಸನಲ್ ಕೇರ್ ಕನ್ಸ್ಯೂಮರ್ ಗೂಡ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್” ಸ್ಥಾಪನೆ.

*ರಾಮನಗರ ತಾಲ್ಲೂಕಿನ ಹಾರೋಹಳ್ಳಿ 5ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ “ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಎನರ್ಜಿ ಸ್ಟೋರೇಜ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್” ಸ್ಥಾಪನೆಗೆ 10 ಕೋಟಿ ರೂ. ಅನುದಾನ.

*ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹರಳೂರು-ಮುದ್ದೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ “ಡಿಫೆನ್ಸ್ ಅಂಡ್ ಏರೋಸ್ಪೇಸ್ ಎಕ್ಯುಪ್‍ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್” ಸ್ಥಾಪನೆ.

*ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ.

*ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಕೈಗಾರಿಕೆಗಳ ಸಹಯೋಗದೊಂದಿಗೆ “Centre for Smart Manufacturing” ಸ್ಥಾಪನೆಗೆ ಐದು ಕೋಟಿ ರೂ. ಅನುದಾನ.

*ನಾರು ಆಧಾರಿತ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಮತ್ತು ವ್ಯಾಪಕ ಮಾರುಕಟ್ಟೆ ಒದಗಿಸಲು ಐದು ಕೋಟಿ ರೂ.ಗಳ ವೆಚ್ಚದಲ್ಲಿ “Coir Experience Centre” ಸ್ಥಾಪನೆ.

*ತಿಪಟೂರಿನಲ್ಲಿ ‘ತೆಂಗು ಆಧಾರಿತ ಕೈಗಾರಿಕಾ ಪಾರ್ಕ್’ ಅಭಿವೃದ್ಧಿ.

*ಕೇಂದ್ರ ಸರ್ಕಾರದ “ಪವರ್‍ಟೆಕ್ಸ್ ಇಂಡಿಯಾದ ನೂಲು ನಿಧಿ ಯೋಜನೆ”ಯಡಿ ಕೇಂದ್ರ ಸರ್ಕಾರದ ವಂತಿಗೆ ಹಾಗೂ ರಾಜ್ಯ ಸರ್ಕಾರದ ಗರಿಷ್ಠ 50 ಲಕ್ಷ ರೂ. ಸಹಾಯಧನದೊಂದಿಗೆ ಎರಡು ಕೇಂದ್ರಗಳಲ್ಲಿ ನೂಲಿನ ಘಟಕ ಸ್ಥಾಪನೆ.

*ಹೊಸ ಜವಳಿ ಮತ್ತು ಸಿದ್ಧ ಉಡುಪು ನೀತಿಯ ಪ್ರೋತ್ಸಾಹಕಗಳಡಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರ್ಪಡೆ.

*ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ಪ್ರಾರಂಭ; 3000 ಉದ್ಯೋಗ ಸೃಷ್ಟಿ.

*ರಾಜ್ಯದ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಬಟ್ಟೆ ಉತ್ಪನ್ನಗಳಿಗೆ ರಾಜ್ಯದ ಪ್ರತಿಷ್ಠಿತ “ಪ್ರಿಯದರ್ಶಿನಿ” ಬ್ರಾಂಡ್ ಮೂಲಕ ಮಾರುಕಟ್ಟೆ ಸೌಲಭ್ಯ.

*ನೇಕಾರರ ಸಾಲ ಮನ್ನಾ ಯೋಜನೆ ಪೂರ್ಣಗೊಳಿಸಲು 79.57 ಕೋಟಿ ರೂ. ಅನುದಾನ.

*ಹಿಂದುಳಿದ ಪ್ರದೇಶಗಳು ಮತ್ತು ಟಯರ್-2 ಹಾಗೂ ಟಯರ್-3ರ ನಗರಗಳಿಗೆ ಬಂಡವಾಳ ಆಕರ್ಷಿಸುವ ನೂತನ ಕೈಗಾರಿಕಾ ನೀತಿ ಜಾರಿ. ಉದ್ಯೋಗ ಸೃಷ್ಟಿಗೆ ಆದ್ಯತೆ.

*ರಾಜ್ಯದ ವ್ಯಾಪ್ತಿಯಲ್ಲಿ ಅಮೂಲ್ಯ ಖನಿಜಗಳ (High Value Minerals) ನಿಕ್ಷೇಪಗಳನ್ನು ಗುರುತಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕೇಂದ್ರ ಕಛೇರಿಯಲ್ಲಿ ಖನಿಜಾನ್ವೇಷಣೆ ವಿಭಾಗ ಸ್ಥಾಪನೆ.

*KIADB ಹಾಗೂ KSSIDC ಸಂಸ್ಥೆಗಳ ಮುಖ್ಯ ಸೇವೆಗಳು “ಸಕಾಲ”ದ ವ್ಯಾಪ್ತಿಗೆ ಸೇರ್ಪಡೆ.

*ಕಿತ್ತೂರು ಮೂಲಕ ಧಾರವಾಡ-ಬೆಳಗಾವಿ ರೈಲು ಮಾರ್ಗ ಯೋಜನೆಗೆ ಉಚಿತವಾಗಿ ಭೂಮಿ ನೀಡಲು ಹಾಗೂ ಶೇ. 50 ರಷ್ಟು ಕಾಮಗಾರಿ ವೆಚ್ಚ ಭರಿಸಲು ರಾಜ್ಯ ಸರ್ಕಾರದ ಒಪ್ಪಿಗೆ.

*ಹಾಸನ-ಮಂಗಳೂರು ರೈಲ್ ಡೆವಲಪ್‍ಮೆಂಟ್ ಕಾರ್ಪೋರೇಷನ್‍ನಿಂದ ಸಕಲೇಶಪುರ, ಸುಬ್ರಮಣ್ಯ ನಿಲ್ದಾಣಗಳ ನಡುವಿನ ಘಾಟಿ ಪ್ರದೇಶದ ರೈಲು ಮಾರ್ಗದ ಕ್ಷಮತೆ ಹೆಚ್ಚಳಕ್ಕೆ ಕ್ರಮ.

*ಬೆಂಗಳೂರಿನ ಆನಂದರಾವ್ ವೃತ್ತದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಕಚೇರಿಗಳಿಗಾಗಿ 25 ಅಂತಸ್ತುಗಳ ಬಹುಮಹಡಿಯ “ಅವಳಿ ಗೋಪುರ” ನಿರ್ಮಾಣ-ಯೋಜನಾ ವರದಿ ತಯಾರಿಕೆಗೆ ಕ್ರಮ.

*ಎಲ್ಲಾ ಇಲಾಖೆಗಳಿಗೆ ಹಾಗೂ ನಿಗಮ-ಮಂಡಳಿಗಳಿಗೆ ವಿವಿಧ ಕಾಮಗಾರಿಗಳಿಗೆ ಏಕರೂಪ ಅನುಸೂಚಿ ದರಗಳನ್ನು ರೂಪಿಸಲು ಕ್ರಮ.

*ಖಾಸಗಿ ಸಹಭಾಗಿತ್ವದಲ್ಲಿ 2500 ಕೋಟಿ ರೂ.ಗಳ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆ ಪಾವಿನಕುರ್ವೆ/ ಬೇಲೆಕೇರಿ ಬಂದರು ಅಭಿವೃದ್ಧಿಗೆ ಬಿಡ್ ಆಹ್ವಾನ.

*ರಾಜ್ಯದ ಕಿರು ಬಂದರುಗಳ ಅಭಿವೃದ್ಧಿ, ಕರಾವಳಿ ಸಂರಕ್ಷಣೆ ಮತ್ತು ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪಿಸಲಾಗಿರುವ ಕರ್ನಾಟಕ ಜಲಸಾರಿಗೆಯ ಸಮಗ್ರ ಯೋಜನೆ ಜಾರಿ.

*ಕೇಂದ್ರ ಸರ್ಕಾರದ ಭಾರತೀಯ ಒಳನಾಡು ಜಲಸಾರಿಗೆ ಪ್ರಾಧಿಕಾರ (Inland Waterways Authority of India) ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯದ ಜಲಸಾರಿಗೆ ನದಿಗಳಾದ ಕಾಳಿ, ಶರಾವತಿ, ಹಂಗಾರಕಟ್ಟೆ, ಗುರುಪುರ ಮತ್ತು ನೇತ್ರಾವತಿ ಜಲಸಾರಿಗೆ ಮಾರ್ಗಗಳು ಹಾಗೂ ದ್ವೀಪಗಳ ಅಭಿವೃದ್ಧಿ.

*ರಾಜ್ಯದ ಎಲ್ಲಾ ನಾವೀನ್ಯತಾ ಚಟುವಟಿಕೆಗಳನ್ನು ಕ್ರೋಢೀಕರಿಸಿ ಸಂಯೋಜಿಸಲು ನಾಲ್ಕು ಕೋಟಿ ರೂ. ವೆಚ್ಚದಲ್ಲಿ “ಇನ್ನೋವೇಷನ್ ಹಬ್”(Innovation Hub) ಸ್ಥಾಪನೆ.

*STPI ಸಂಸ್ಥೆಯ ಸಹಭಾಗಿತ್ವದೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ Efficiency Augmentation ಕುರಿತು ಉತ್ಕøಷ್ಟತಾ ಕೇಂದ್ರ ಸ್ಥಾಪನೆ.

*ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ “Artificial Intelligence Research Translation Park” ಸ್ಥಾಪನೆಗೆ ಕ್ರಮ. ಮುಂದಿನ ಮೂರು ವರ್ಷಗಳಲ್ಲಿ 60 ಕೋಟಿ ರೂ.ಗಳ ಇಡಿಗಂಟು ಅನುದಾನ

*ಬೆಂಗಳೂರು ಬಯೋ ಇನ್ನೋವೇಷನ್ ಕೇಂದ್ರದ ಆಶ್ರಯದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ “ಕೃಷಿ ನಾವೀನ್ಯತಾ ಕೇಂದ್ರ” ಸ್ಥಾಪನೆ.

*ವಿದೇಶಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಹಾಗೂ ವಿದೇಶಿ ಸರ್ಕಾರ ಮತ್ತು ಕಂಪನಿಗಳೊಂದಿಗೆ ಸಂಬಂಧಗಳನ್ನು ಬಲಪಡಿಸಲು ಏಳು ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ತಂತ್ರಜ್ಞಾನ ಮಿಷನ್ ಸ್ಥಾಪನೆ.

*ಮುಂದಿನ ಎರಡು ವರ್ಷಗಳಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಎರಡು ಕೋಟಿ ರೂ. ವೆಚ್ಚದಲ್ಲಿ ಸಾವಿರ ಪದವೀಧರರಿಗೆ Talent Acceleration Programme ಅನುಷ್ಠಾನ

*2025ರ ವೇಳೆಗೆ ಭಾರತದ ಜೈವಿಕ ಆರ್ಥಿಕತೆಗೆ ಕರ್ನಾಟಕದ ಕೊಡುಗೆಯನ್ನು ಶೇ. 50 ಕ್ಕೆ ಹೆಚ್ಚಿಸಲು ಮಾರ್ಗಸೂಚಿ ಮತ್ತು ಕಾರ್ಯತಂತ್ರವನ್ನು ರೂಪಿಸಲು ಕ್ರಮ.

*ದಾವೋಸ್‍ನ ವಿಶ್ವ ಆರ್ಥಿಕ ವೇದಿಕೆಯ ಸಹಭಾಗಿತ್ವದೊಂದಿಗೆ ‘Internet of Ethical Things’ ವಿಷಯದಲ್ಲಿ ಉತ್ಕøಷ್ಟತಾ ಕೇಂದ್ರ ಸ್ಥಾಪನೆ. 2020-21ರಲ್ಲಿ 7.5 ಕೋಟಿ ರೂ. ಅನುದಾನ.

*ನವೋದ್ಯಮಗಳ ವೇಗ ವರ್ಧಿಸಲು ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ನೆರವಾಗಲು ಉದ್ಯಮದವರ ಸಹಯೋಗದೊಂದಿಗೆ ‘Acceleration Programme’ ಪ್ರಾರಂಭಿಸಲು ಮೂರು ಕೋಟಿ ರೂ. ಅನುದಾನ.

*ಹನ್ನೊಂದು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸಂಚಾರಿ ಡಿಜಿಟಲ್ ತಾರಾಲಯ’ ಐದು ಕೋಟಿ ರೂ. ವೆಚ್ಚದಲ್ಲಿ ಇತರ ಐದು ಜಿಲ್ಲೆಗಳಿಗೆ ವಿಸ್ತರಣೆ.

*ಪದವಿ ಪೂರ್ವ ವಿದ್ಯಾರ್ಥಿಗಳಿಗೆ ‘ವಿಜ್ಞಾನ ಪ್ರತಿಭಾ ಶೋಧನೆ’ ಕಾರ್ಯಕ್ರಮ ಪ್ರಾರಂಭ. ಆಯ್ಕೆಯಾದ 500 ವಿದ್ಯಾರ್ಥಿಗಳಿಗೆ ಎರಡು ವರ್ಷ ಶಿಕ್ಷಣ, ಒಂದು ಸಾವಿರ ರೂ. ಮಾಸಿಕ ಶಿಷ್ಯವೇತನ.

*ಗ್ರಾಮೀಣ ಯುವಕ/ಯುವತಿಯರಿಗೆ ಕೌಶಲ್ಯಾಭಿವೃದ್ಧಿಗಾಗಿ 20 ಕೋಟಿ ರೂ. ವೆಚ್ಚದಲ್ಲಿ ವಸತಿ ತರಬೇತಿ ಕಾರ್ಯಕ್ರಮ.

*ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ಹಾಸನ, ತುಮಕೂರು ಮತ್ತು ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ 353 ಕೋಟಿ ರೂ. ವೆಚ್ಚದಲ್ಲಿ ಉತ್ಕøಷ್ಟತಾ ಕೇಂದ್ರಗಳ ಸ್ಥಾಪನೆ. ಮುಂದಿನ ಐದು ವರ್ಷಗಳಲ್ಲಿ 12,600 ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ.

*ರಾಜ್ಯದ ಐ.ಟಿ.ಐ.ಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಸಂಸ್ಥೆಗಳ ಸಹಯೋಗದೊಂದಿಗೆ ಉಭಯ ತರಬೇತಿ ವ್ಯವಸ್ಥೆ(Dual System of Training) ಅಳವಡಿಕೆ.

*ಇಸ್ರೋ, ಹೆಚ್.ಎ.ಎಲ್. ಇತ್ಯಾದಿ ಪ್ರತಿಷ್ಠಿತ ಸಂಸ್ಥೆಗಳಿಗೆ ಅಗತ್ಯವಿರುವ ಬಿಡಿಭಾಗ ಉತ್ಪಾದನೆಗೆ ಅನುವಾಗುವಂತೆ ಬೆಂಗಳೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ ಸೇವಾ ಕೇಂದ್ರಗಳ ಸಾಮಥ್ರ್ಯ ವೃದ್ಧಿಗೆ 20 ಕೋಟಿ ರೂ.

*ದೀನ್ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿಯಲ್ಲಿ ರಾಜ್ಯದ ನಗರಗಳ ಬೀದಿ ವ್ಯಾಪಾರಿಗಳಿಗೆ ಇ-ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲು ತಂತ್ರಾಂಶ ಅಭಿವೃದ್ಧಿ.

*ವಾಯು ಮಾಲಿನ್ಯ ಕಡಿಮೆಗೊಳಿಸಲು ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ‘ಫ್ಲೂ ಗ್ಯಾಸ್ ಡಿಸಲ್ಫರೈಸೇಷನ್’ (FGD) 2510 ಕೋಟಿ ರೂ. ವೆಚ್ಚದಲ್ಲಿ ವ್ಯವಸ್ಥೆ ಸ್ಥಾಪಿಸಲು ಕ್ರಮ.

*ಸಣ್ಣ ಮತ್ತು ಮಧ್ಯಮ ಕಾಫಿ ಮತ್ತು ಟೀ ಬೆಳೆಗಾರರ 10 HP ವರೆಗಿನ ಪಂಪ್ ಸೆಟ್‍ಗಳ ವಿದ್ಯುತ್ ಶುಲ್ಕ ಮರುಪಾವತಿಗೆ ಕ್ರಮ.

*ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ವಲಯಕ್ಕೆ ಒದಗಿಸಲಾದ ಅನುದಾನ- 55,732 ಕೋಟಿ ರೂ.

ವಲಯ 4: ಬೆಂಗಳೂರು ಸಮಗ್ರ ಅಭಿವೃದ್ಧಿ

*ಪರಿಣಾಮಕಾರಿ ಆಡಳಿತ ಹಾಗೂ ನಾಗರಿಕ ಸೇವೆಗಳನ್ನು ನೀಡಲು, ಬೆಂಗಳೂರು ನಗರಕ್ಕೆ ಸೀಮಿತವಾಗಿ, ಪ್ರತ್ಯೇಕ ಪೌರನಿಗಮ ಕಾಯ್ದೆ ರಚನೆ.

*ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗೆ 8344 ಕೋಟಿ ರೂ. ಮೊತ್ತದ “ಮುಖ್ಯಮಂತ್ರಿಗಳ ನವ ನಗರೋತ್ಥಾನ” ಯೋಜನೆ ಅನುಷ್ಠಾನ.

*ಬೆಂಗಳೂರು ನಗರದ ಘನತ್ಯಾಜ್ಯ ನಿರ್ವಹಣೆಗೆ “ಶುಭ್ರ ಬೆಂಗಳೂರು” ಯೋಜನೆಯಡಿ 999 ಕೋಟಿ ರೂ. ಅನುದಾನದ ಕ್ರಿಯಾಯೋಜನೆ ಅನುಷ್ಠಾನ.

*ಬೆಂಗಳೂರು ನಗರದ ಕೆರೆಗಳ ಸರ್ವತೋಮುಖ ಅಭಿವೃದ್ಧಿಗೆ ಶುಭ್ರ ಬೆಂಗಳೂರು ಹಾಗೂ ಮುಖ್ಯಮಂತ್ರಿಗಳ ನವ ನಗರೋತ್ಥಾನ ಕ್ರಿಯಾ ಯೋಜನೆಗಳಡಿ ಒಟ್ಟು 417 ಕೋಟಿ ರೂ. ನಿಗದಿ.

*ಬೆಂಗಳೂರು ನಗರದ ಬೃಹತ್ ನೀರುಗಾಲುವೆಗಳ ಜಾಲದಲ್ಲಿರುವ ಕೊರತೆಗಳನ್ನು (Missing gap) ಅಭಿವೃದ್ಧಿ ಕಾಮಗಾರಿಗೆ 200 ಕೋಟಿ ರೂ. ಅನುದಾನ.

*ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡಿರುವ 110 ಹಳ್ಳಿಗಳಲ್ಲಿ ದುಃಸ್ಥಿತಿಯಲ್ಲಿರುವ ರಸ್ತೆಗಳ ಪುನಶ್ಚೇತನಕ್ಕೆ ಮುಂದಿನ ಎರಡು ವರ್ಷಗಳಿಗೆ 1000 ಕೋಟಿ ರೂ. ಅನುದಾನ.

*ಕರ್ನಾಟಕ ವಿದ್ಯುತ್ ನಿಗಮದಿಂದ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಬಿಬಿಎಂಪಿ ಸಹಯೋಗದೊಂದಿಗೆ 210 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಬೇರ್ಪಡಿಸಿದ ತ್ಯಾಜ್ಯ ಬಳಸಿಕೊಂಡು 11.5 ಮೆಗಾ ವ್ಯಾಟ್ ಸಾಮಥ್ರ್ಯದ ಹೊಸ “Waste to Energy” (ತ್ಯಾಜ್ಯದಿಂದ ವಿದ್ಯುತ್) ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪನೆ. ವಾರ್ಷಿಕ 70 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಗುರಿ.

*“ಬೆಂಗಳೂರು ಸ್ಮಾರ್ಟ್ ಸಿಟಿ” ಯೋಜನೆಯಡಿ ಆಯ್ದ ಸರ್ಕಾರಿ ಕಛೇರಿಗಳಲ್ಲಿ ಮಹಿಳಾ ವಿಶ್ರಾಂತಿ ಕೋಣೆಗಳ ಸೌಲಭ್ಯ.

*ಬೆಂಗಳೂರಿನ ವಿವಿಧ ಭಾಗಗಳಲ್ಲಿ ನಾಲ್ಕು ವಿದ್ಯುತ್ ಚಿತಾಗಾರಗಳ ಸ್ಥಾಪನೆ.

*ನಮ್ಮ ಮೆಟ್ರೊ ಯೋಜನೆಯಡಿ ಮೈಸೂರು ರಸ್ತೆಯಲ್ಲಿ ಕೆಂಗೇರಿಯವರೆಗೆ ಮತ್ತು ಕನಕಪುರ ರಸ್ತೆಯಲ್ಲಿ ಅಂಜನಾಪುರ ಟೌನ್‍ಷಿಪ್ ವರೆಗೆ ಒಟ್ಟು 12.8 ಕಿ.ಮೀ. ಉದ್ದದ ಮೆಟ್ರೋ ಕಾಮಗಾರಿ ಪೂರ್ಣಗೊಳಿಸಿ, 2020 ರಲ್ಲಿ ಸೇವೆ ಒದಗಿಸಲು ಕ್ರಮ.

*ಮೆಟ್ರೋ ಪ್ರಯಾಣಿಕರಲ್ಲದ ಪಾದಚಾರಿಗಳಿಗೆ 24 ಮೆಟ್ರೋ ನಿಲ್ದಾಣಗಳ ಮೂಲಕ ಮೇಲ್ಸೇತುವೆ ಸೌಲಭ್ಯ.

*ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 14,500 ಕೋಟಿ ರೂ. ಅಂದಾಜು ವೆಚ್ಚದಲ್ಲಿ 56 ಕಿ.ಮೀ. ಉದ್ದದ ಹೊರ ವರ್ತುಲ ರಸ್ತೆ – ಏರ್‍ಪೋರ್ಟ್ ಮೆಟ್ರೋ ನಿರ್ಮಾಣ ಪ್ರಾರಂಭ.

*ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ 44 ಕಿ.ಮೀ. ಹೊಸ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಸಿದ್ಧತೆ.

*ಸಬ್-ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದ ವತಿಯಿಂದ ಪ್ರಸಕ್ತ ಸಾಲಿನಲ್ಲಿ 500 ಕೋಟಿ ರೂ. ಅನುದಾನ.

*ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ಜೋಡಿ ರೈಲು ಮಾರ್ಗ ಯೋಜನೆಯ ಶೇ. 50 ರಷ್ಟು ವೆಚ್ಚ ಭರಿಸಲು ರಾಜ್ಯದ ನಿರ್ಧಾರ.

*ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸಲು ಮೂಲಸೌಲಭ್ಯ, ಟ್ರಾನ್ಸಿಟ್ ಆಧಾರಿತ ಬೆಳವಣಿಗೆ ಹಾಗೂ ಇತರ ಅಗತ್ಯ ನಿಯಂತ್ರಣಾ ಕ್ರಮಗಳಿಗೆ ಆದ್ಯತೆ.

*ಹೆಬ್ಬಾಳ, ಸಿಲ್ಕ್ ಬೋರ್ಡ್ ಹಾಗೂ ಕೆ.ಆರ್.ಪುರಂ ಜಂಕ್ಷನ್‍ಗಳಲ್ಲಿ ಸಂಚಾರ ಸಾಮಥ್ರ್ಯ ಹೆಚ್ಚಳಕ್ಕೆ ಕ್ರಮ.

*ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರದ ಮೂಲಕ ವಾಹನ ದಟ್ಟಣೆ ಇರುವ ರಸ್ತೆಗಳ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ.

*ಸಮೂಹ ಸಾರಿಗೆಯನ್ನು ಉತ್ತೇಜಿಸಲು ಹಾಗೂ ಮೆಟ್ರೋ ಪ್ರಯಾಣಿಕರಿಗೆ ಸಮರ್ಪಕ ಮೆಟ್ರೋ ಫೀಡರ್ ಸಾರಿಗೆ ಸೌಲಭ್ಯ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ 890 ಎಲೆಕ್ಟ್ರಿಕ್ ಬಸ್‍ಗಳೂ ಸೇರಿದಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 2390 ಹೊಸ ಬಸ್‍ಗಳ ಸೇರ್ಪಡೆ.

*ಸಾರ್ವಜನಿಕ ಸಾರಿಗೆಯ ಕೊನೆಯ ಮೈಲಿನ ಸಂಪರ್ಕ ಸುಧಾರಣೆಗೆ “ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ” ಯೋಜನೆ

*ಸಂಚಾರ ದಟ್ಟಣೆಯ 12 ಕಾರಿಡಾರ್‍ಗಳಲ್ಲಿ ಎರಡನೇ ಹಂತದ ಬಸ್ ಆದ್ಯತಾ ಪಥ ಅನುಷ್ಠಾನ.

*ರಸ್ತೆ ಸುರಕ್ಷತಾ ಚಟುವಟಿಕೆ ಕೈಗೊಳ್ಳುವ ರಸ್ತೆ ಸುರಕ್ಷತಾ ನಿಧಿಗೆ 200 ಕೋಟಿ ರೂ. ಅನುದಾನ.

*ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಿಗೆ 20 ಕೋಟಿ ರೂ. ವೆಚ್ಚದಲ್ಲಿ Vehicle Location Tracking ವ್ಯವಸ್ಥೆ ಅಳವಡಿಕೆ.

*ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು ನಗರದ ಹೊರವಲಯದಲ್ಲಿ‘Integrated Multi Modal Transport Hub’ ಅಭಿವೃದ್ಧಿ ಕುರಿತು ಕಾರ್ಯಾಧ್ಯಯನ

*ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ‘ಅಂಡರ್‍ಗ್ರೌಂಡ್ ವಾಹನ ಪಾರ್ಕಿಂಗ್’ ಯೋಜನೆ ಜಾರಿ.

*ಬೆಂಗಳೂರು ನಗರದಲ್ಲಿರುವ ಎಲ್ಲಾ ಗ್ರಾಹಕರಿಗೆ ಅತೀ ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸಲು ಆಪ್ಟಿಕಲ್ ಫೈಬರ್ ಅಳವಡಿಕೆ.

*ಸೆಪ್ಟೆಂಬರ್ 2021ರ ಅಂತ್ಯಕ್ಕೆ ಟಿ.ಜಿ.ಹಳ್ಳಿ ನೀರಿನ ಮೂಲದ ಪುನರುಜ್ಜೀವನ ಯೋಜನೆ ಪೂರ್ಣ

*ಬೆಂಗಳೂರು ಜಲಮಂಡಲಿಯ ತ್ಯಾಜ್ಯ ನೀರು ಸಂಸ್ಕರಣೆಯ ಸಾಮಥ್ರ್ಯವು 2020-21ನೇ ಸಾಲಿನ ಅಂತ್ಯಕ್ಕೆ 1587 ದಶಲಕ್ಷ ಲೀಟರ್‍ಗೆ ಹೆಚ್ಚಿಸಲು ಕ್ರಮ. ಹಳೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ನವೀಕರಣಕ್ಕೆ 1000 ಕೋಟಿ ರೂ. ಅನುದಾನ.

*ಕಾವೇರಿ ನೀರು ಸರಬರಾಜು ಐದನೇ ಹಂತದ ಯೋಜನೆ 5550 ಕೋಟಿ ರೂ. ವೆಚ್ಚದಲ್ಲಿ 2023ರ ಅಂತ್ಯಕ್ಕೆ ಪೂರ್ಣ

*ಬೆಂಗಳೂರು ಅಭಿವೃದ್ಧಿ ವಲಯಕ್ಕೆ ಒಟ್ಟಾರೆಯಾಗಿ ಒದಗಿಸಿರುವ ಮೊತ್ತ 8,772 ಕೋಟಿ ರೂ.

ವಲಯ 5: ಸಂಸ್ಕೃತಿ, ಪರಂಪರೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ

*ಬಸವಕಲ್ಯಾಣದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಅನುಭವ ಮಂಟಪ ನಿರ್ಮಾಣ.

*ಚಿತ್ರದುರ್ಗದ ಶ್ರೀ ಮುರುಘಾ ಮಠದ ಆವರಣದಲ್ಲಿ 325 ಅಡಿ ಎತ್ತರದ ಶ್ರೀ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ 20 ಕೋಟಿ ರೂ. ನೆರವು.

*ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ “ವಿಜ್ಞಾನೇಶ್ವರ ಅಧ್ಯಯನ ಪೀಠ” ಸ್ಥಾಪನೆ.

*ಬೆಂಗಳೂರಿನಲ್ಲಿ ವಿವೇಕಾನಂದ ಯುವ ಕೇಂದ್ರ ಸ್ಥಾಪನೆ.

*ರಾಜ್ಯದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಬಲಪಡಿಸಲು, ಕ್ರೀಡಾಪಟುಗಳಿಗೆ ಉತ್ತಮ ತರಬೇತಿ, ಉತ್ತೇಜನ ನೀಡಲು, ತರಬೇತುದಾರರು ಮತ್ತು ತಾಂತ್ರಿಕ ಸಿಬ್ಬಂದಿಯ ಕೌಶಲ್ಯ ಅಭಿವೃದ್ಧಿಗೆ ಐದು ಕೋಟಿ ರೂ.ಗಳ ಅನುದಾನ

*ಅನಂತ ಕುಮಾರ್ ಪ್ರತಿಷ್ಠಾನದ ವತಿಯಿಂದ ನಾಯಕತ್ವ ನಿರ್ಮಾಣ ಹಾಗೂ ನೀತಿ ನಿರೂಪಣಾ ಸಂಶೋಧನಾ ಸಂಸ್ಥೆ ಸ್ಥಾಪನೆಗೆ 20 ಕೋಟಿ ರೂ. ಅನುದಾನ. ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ನಿಗದಿ.

*ಸರ್ಕಾರದ ವತಿಯಿಂದ ಜನವರಿ 1 ರಂದು ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನ ಆಚರಣೆಗೆ ಕ್ರಮ.

*ಬೆಂಗಳೂರು ನಗರದ ನಾಲ್ಕೂ ದಿಕ್ಕಿನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ಕಲಾಕ್ಷೇತ್ರಗಳ ನಿರ್ಮಾಣ.

*ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರದೇಶದಲ್ಲಿ 66 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ 100 ಅಡಿ ಎತ್ತರದ ಕಂಚಿನ ಪ್ರತಿಮೆ ನಿರ್ಮಾಣ.

*ಸಂತ ಶಿಶುನಾಳ ಶರೀಫರ ಸಮಾಧಿಯಿರುವ ಹಾವೇರಿ ಜಿಲ್ಲೆ ಶಿಶುನಾಳದ ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನ.

*ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ನಿಜಲಿಂಗಪ್ಪನವರ ಚಿತ್ರದುರ್ಗದ ಮನೆಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಐದು ಕೋಟಿ ರೂ. ಅನುದಾನ.

*ಖ್ಯಾತ ಸಾಹಿತಿ ಶ್ರೀ ಎಸ್. ಎಲ್. ಭೈರಪ್ಪನವರ ಹುಟ್ಟೂರು, ಹಾಸನ ಜಿಲ್ಲೆಯ ಸಂತೆಶಿವರ ಗ್ರಾಮದ ಅಭಿವೃದ್ಧಿಗೆ ಐದು ಕೋಟಿ ರೂ.

*ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸ್ಥಾಪನೆಗೆ 50 ಲಕ್ಷ ರೂ. ಅನುದಾನ

*ಚಿತ್ರಸಂತೆ ಕಾರ್ಯಕ್ರಮಕ್ಕೆ ಒಂದು ಕೋಟಿ ರೂ. ನೆರವು

*ಬೆಂಗಳೂರಿನಲ್ಲಿ ಒಟ್ಟು 500 ಕೋಟಿ ರೂ.ಗಳ ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ಸ್ಥಾಪನೆ.

*ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಐದು ಕೋಟಿ ರೂ.

*ವಿವಿಧ ಮಠಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಲು ಸರ್ಕಾರದ ಕ್ರಮ.

*ಭಾರತದ ವಿವಿಧ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಕರ್ನಾಟಕ ಸರ್ಕಾರವು ನಡೆಸುತ್ತಿರುವ ಅತಿಥಿಗೃಹಗಳ ಮೂಲಸೌಕರ್ಯ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ.

*ಹಾವೇರಿ ಜಿಲ್ಲೆಯಲ್ಲಿರುವ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರೋತ್ಸಾಹ.

*ರಾಜ್ಯದ 60 ವರ್ಷ ಮೀರಿದ ಬಡವರಿಗೆ ಉಚಿತವಾಗಿ ರಾಜ್ಯದ ಹಾಗೂ ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರ ದರ್ಶಿಸಲು “ಜೀವನ ಚೈತ್ರ ಯಾತ್ರೆ” ಯೋಜನೆ ಜಾರಿ; 20 ಕೋಟಿ ರೂ. ಅನುದಾನ.

*ರಾಜ್ಯದಲ್ಲಿರುವ 25,000ಕ್ಕೂ ಹೆಚ್ಚು ಐತಿಹಾಸಿಕ ಮಹತ್ವವುಳ್ಳ ದೇವಸ್ಥಾನಗಳು, ಪ್ರಾಚೀನ ಸ್ಥಳಗಳು, ಸ್ಮಾರಕಗಳ ಪುನರುಜ್ಜೀವನಕ್ಕೆ “ಸಂರಕ್ಷಣಾ” ಯೋಜನೆ ಜಾರಿ.

*ಪ್ರವಾಸಿ ಸ್ನೇಹಿ ಯೋಜನೆಗಳನ್ನು ಒಳಗೊಂಡ ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ಕ್ರಮ.

*ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ

*ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ.

*ವೀರ ಮದಕರಿ ನಾಯಕ ಹಾಗೂ ಒನಕೆ ಓಬವ್ವರ ನೆನಪಿಸುವ ಚಿತ್ರದುರ್ಗದ ಸಮಗ್ರ ಅಭಿವೃದ್ಧಿಗೆ ಕ್ರಮ.

*ಐತಿಹಾಸಿಕ ಪ್ರವಾಸಿ ತಾಣ ಬಾದಾಮಿಯ ಸಮಗ್ರ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ.

*ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆಯ ಶಿಫಾರಸುಗಳಂತೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕ್ರಮ. ಪ್ರವಾಸಿಗರನ್ನು ಸೆಳೆಯುವ ಜಾಹೀರಾತು ಮತ್ತು ಇತರ ಚಟುವಟಿಕೆಗಳಿಗೆ 100 ಕೋಟಿ ರೂ ಹಾಗೂ ರಾಜ್ಯದ ಪ್ರವಾಸೋದ್ಯಮದ ಸರ್ವತೋಮುಖ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ.

*ಪ್ರವಾಸಿ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆದಾರರನ್ನು ಆಕರ್ಷಿಸಲು “ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ” (Global Tourism Investors Meet).

*ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ ಜಲಪಾತ ಮತ್ತು ಇತರ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಒದಗಿಸಿ, ಟೂರಿಸಂ ಸಕ್ರ್ಯೂಟ್ ಅಭಿವೃದ್ಧಿಗೆ ಕ್ರಮ.

*ರಾಜ್ಯದಲ್ಲಿರುವ ಶೋಲಾ ಅರಣ್ಯಗಳ ಸರ್ವೇಕ್ಷಣೆ, ಜೀವ ವೈವಿಧ್ಯ ಸಂರಕ್ಷಣೆಗೆ ಐದು ಕೋಟಿ ರೂ. ಅನುದಾನ

*ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿರುವ ಮಿನಿ ಮೃಗಾಲಯ ಉನ್ನತೀಕರಿಸಲು ಐದು ಕೋಟಿ ರೂ.ಗಳ ಅನುದಾನ

*ರಾಮನಗರ ಜಿಲ್ಲೆಯ ರಣಹದ್ದು ಧಾಮದಲ್ಲಿ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪನೆ.

*ಮಂಗಗಳ ಪುನರ್ವಸತಿಗೆ ಐದು ವರ್ಷಗಳಿಗೆ ಒಟ್ಟಾರೆ 6.25 ಕೋಟಿ ರೂ. ಅನುದಾನ. 2020-21ನೇ ಸಾಲಿನಲ್ಲಿ 1.25 ಕೋಟಿ ರೂ. ನೆರವು.

*ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಮೊದಲ ಕಡಲಧಾಮವನ್ನು Marine Eco Park) ಸ್ಥಾಪನೆ.

*ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ವಲಯಕ್ಕೆ ನಿಗದಿಪಡಿಸಿದ ಒಟ್ಟಾರೆ ಅನುದಾನ – 4552 ಕೋಟಿ ರೂ.

ವಲಯ 6: ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆಗಳು

*ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ “ಜನ ಸೇವಕ” ಯೋಜನೆ ವಿಸ್ತರಣೆ.

*ಸರ್ಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ತರಲು ಖಾಸಗಿ ಸಹಭಾಗಿತ್ವದೊಂದಿಗೆ ಪ್ರತಿ ಗ್ರಾಮದಲ್ಲಿ ಗ್ರಾಮ-1 ಕೇಂದ್ರಗಳ ಸ್ಥಾಪನೆ.

*ರಾಜ್ಯದ ನಾಗರಿಕರು ಜಾಲತಾಣದ ಮೂಲಕ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿ ಪಡೆಯಲು “ಮಾಹಿತಿ ಕಣಜ” ತಂತ್ರಾಂಶ ಅಭಿವೃದ್ಧಿ.

*ಸಕಾಲ ಯೋಜನೆಯ ಅನುಷ್ಠಾನದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ.

*ರಾಜ್ಯದ ಸರ್ಕಾರಿ ಜಮೀನುಗಳ ಸಂರಕ್ಷಣೆಗೆ ಸಮಿತಿ ರಚನೆ. ಬೆಂಗಳೂರು ಮತ್ತು ಇತರ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ಭೂ ಕಬಳಿಕೆ ಮತ್ತು ಅವ್ಯವಹಾರದ ಬಗ್ಗೆ ಸಮಿತಿ ನಿರ್ದೇಶನದಂತೆ ಕ್ರಮ.

*ಸಾರ್ವಜನಿಕರಿಗೆ ಒದಗಿಸಲಾಗುವ ವಿವಿಧ ಪ್ರಮಾಣ ಪತ್ರಗಳನ್ನು ತಕ್ಷಣ ಒದಗಿಸುವಂತಹ ಸಿದ್ಧ-ಸೇವೆ ಯೋಜನೆಯ ಅನುಷ್ಠಾನಕ್ಕೆ ಮೂರು ಕೋಟಿ ರೂ. ಅನುದಾನ.

*ರಾಜ್ಯ ಸರ್ಕಾರದ ಕೆಲವು ಕಚೇರಿಗಳನ್ನು ಹಂತ ಹಂತವಾಗಿ ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸಲು ಕ್ರಮ.

*ರಾಜ್ಯದ 22.5 ಲಕ್ಷ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತರಿಗೆ ಜ್ಯೋತಿ ಸಂಜೀವಿನಿ ಯೋಜನೆ ಮಾರ್ಪಡಿಸಿ, ಶಸ್ತ್ರ ಚಿಕಿತ್ಸಾ ವಿಧಾನಗಳಿಗೆ ನಗದುರಹಿತ ಚಿಕಿತ್ಸಾ ಸೌಲಭ್ಯ. ಇದರ ಅಂದಾಜು ವಾರ್ಷಿಕ ವೆಚ್ಚ 50 ಕೋಟಿ ರೂ.

*ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ “ಜನಸ್ನೇಹಿ ಸಹಾಯ ವೇದಿಕೆ” ಯೋಜನೆಯನ್ನು ಬಲ ಪಡಿಸಲು ಐದು ಕೋಟಿ ರೂ. ನೆರವು.

*ಡಿಜಿಟಲ್ ಮಾಧ್ಯಮ ಜಾಹೀರಾತು ನೀತಿ ಜಾರಿಗೆ ಕ್ರಮ. ಇದಕ್ಕಾಗಿ ಹಿರಿಯ ಪತ್ರಕರ್ತರೂ ಆಗಿದ್ದ ಖ್ಯಾತ ಸಾಹಿತಿ ಡಾ|| ಡಿ.ವಿ. ಗುಂಡಪ್ಪ ಅವರ ಹೆಸರಿನಲ್ಲಿ ನಿಧಿ ಸ್ಥಾಪನೆ.

*“ಪೊಲೀಸ್ ಗೃಹ-2020” ಯೋಜನೆಯ ಕಾಮಗಾರಿ ಮುಂದುವರೆಸಲು 200 ಕೋಟಿ ರೂ. ಅನುದಾನ.

*ಬೆಂಗಳೂರು ಮಹಿಳೆಯರ ಸುರಕ್ಷತೆಗಾಗಿ ಅಭಿವೃದ್ಧಿ ಪಡಿಸಿರುವ ‘ಸುರಕ್ಷಾ ಆ್ಯಪ್’ ರಾಜ್ಯಾದ್ಯಂತ ವಿಸ್ತರಣೆ. ತುರ್ತು ಸ್ಪಂದನಾ ವಾಹನಗಳ ಮೂಲಕ ಮಹಿಳೆಯರ ರಕ್ಷಣೆಗೆ ಕ್ರಮ.

*ಬೆಂಗಳೂರಿನ ಕಾನೂನು ಸುವ್ಯವಸ್ಥೆ ಕಾಪಾಡಲು ಪಿಂಕ್ ಹೊಯ್ಸಳ ಸೇರಿದಂತೆ 75 ಹೊಯ್ಸಳ ವಾಹನ ಹಾಗೂ ಇನ್ನಿತರೆ ಜಿಲ್ಲೆಗಳಿಗೆ ರಾಷ್ಟ್ರೀಯ ತುರ್ತು ಸ್ಪಂದನಾ ವ್ಯವಸ್ಥೆಯಡಿ (National Emergency Response System) ಬಳಸಲು 75 ವಾಹನ ಖರೀದಿಗೆ ಕ್ರಮ.

*ವೈಟ್‍ಫೀಲ್ಡ್‌ಹೊಸದಾಗಿ ಸಂಚಾರ ಉಪ ವಿಭಾಗ ಸ್ಥಾಪನೆ.

*ಪೊಲೀಸ್ ಶ್ವಾನದಳದ ಬಲವರ್ಧನೆಗೆ 2.5 ಕೋಟಿ ರೂ. ಅನುದಾನ

*ಕೆ-ಸೇಫ್ ಅಡಿಯಲ್ಲಿ 10 ಹೊಸ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಕ್ರಮ.

*ಕಾರವಾರ ಬಂದರಿನಲ್ಲಿ ಸುಮಾರು 19 ಕೋಟಿ ರೂ.ಗಳ ಅಂದಾಜಿನಲ್ಲಿ ಅಗ್ನಿಶಾಮಕ ಉಪಕರಣ ಅಳವಡಿಕೆಗೆ ಕ್ರಮ.

*ಪೊಲೀಸ್ ತರಬೇತಿ ಶಾಲೆಗಳಲ್ಲಿ ಹಾಗೂ ಸಿ.ಎ.ಆರ್., ಡಿ.ಎ.ಆರ್. ಕೇಂದ್ರ ಸ್ಥಾನಗಳಲ್ಲಿ ರಿಯಾಯಿತಿ ದರದಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣೆ ತರಬೇತಿ

*ರಾಜ್ಯದ ರಸ್ತೆ ಸಾರಿಗೆ ನಿಗಮಗಳ ವತಿಯಿಂದ 2450 ಹೊಸ ಬಸ್‍ಗಳನ್ನು ಖರೀದಿಸಲು ಕ್ರಮ.

*ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 2000 ರೂ. ನೆರವು. 40 ಕೋಟಿ ರೂ. ಅನುದಾನ.

*ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಸೇವೆಗಳ ವಲಯಕ್ಕೆ ಒಟ್ಟಾರೆ ನಿಗದಿ ಪಡಿಸಿದ ಅನುದಾನ- 10,194 ಕೋಟಿ ರೂ .

ಬಜೆಟ್‌ ಗಾತ್ರ:₹ 2,37,893 ಕೋಟಿ

ಒಟ್ಟು ಸ್ವೀಕೃತಿ:₹ 2,33,134 ಕೋಟಿ

ರಾಜಸ್ವ ಸ್ವೀಕೃತಿ:1,79,920 ಕೋಟಿ.

ಸಾರ್ವಜನಿಕ ಋಣ:₹ 52,918 ಕೋಟಿ

ಬಂಡವಾಳ ಸ್ವೀಕೃತಿ: ₹ 53,214 ಕೋಟಿ

ಒಟ್ಟು ವೆಚ್ಚ:₹ 2,37,893 ಕೋಟಿ

ರಾಜಸ್ವ ವೆಚ್ಚ:₹ 1,79,776 ಕೋಟಿ

ಬಂಡವಾಳ ವೆಚ್ಚ:₹ 46,512 ಕೋಟಿ

ಸಾಲ ಮರುಪಾವತಿ:₹ 11,605 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT