ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್ 2020 | ಕೈಗಾರಿಕೆ ಸ್ಥಾಪನೆಗೆ ‘ಸಕಾಲ’ ಅನುಕೂಲ

Last Updated 5 ಮಾರ್ಚ್ 2021, 10:58 IST
ಅಕ್ಷರ ಗಾತ್ರ
ADVERTISEMENT
""
""

ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಕೈಗಾರಿಕೆ ಮತ್ತು ಮೂಲಸೌಕರ್ಯಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ, ಈ ಬಾರಿಯ ಬಜೆಟ್‌ನಲ್ಲಿ ಈ ವಲಯಗಳ ಅಭಿವೃದ್ಧಿ, ಬೆಳವಣಿಗೆಯ ನಿಟ್ಟಿನಲ್ಲಿ ಯಾವುದೇ ಮಹತ್ವದ ಘೋಷಣೆಗಳು ಹೊರಬಿದ್ದಿಲ್ಲ.

ಹೀಗಿದ್ದರೂ ಕೈಗಾರಿಕೆ ಸ್ಥಾಪಿಸಲು ಅನುಕೂಲ ಮಾಡಿಕೊಡುವುದು, ಬಂದರುಗಳ ಅಭಿವೃದ್ಧಿ, ಖನಿಜಾನ್ವೇಷಣೆ ವಿಭಾಗ ಸ್ಥಾಪನೆಯಂತಹ ಕೆಲವು ನಿರ್ಧಾರಗಳನ್ನು ಪ್ರಕಟಿಸಲಾಗಿದೆ.

ಉದ್ದಿಮೆದಾರರು ಸುಲಲಿತವಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲ ಆಗುವಂತೆ ಭೂಮಿ ಹಂಚಿಕೆ, ನಕ್ಷೆ ಅನುಮೋದನೆ, ಲೀಸ್‌ ಕಂ ಸೇಲ್‌ ಡೀಡ್‌, ಕ್ರಯಪತ್ರ ಇತ್ಯಾದಿ ಸೇವೆಗಳನ್ನು ತ್ವರಿತವಾಗಿ ಪೂರೈಸಲು ಕೆಐಎಡಿಬಿ ಮತ್ತು ಕೆಸ್‌ಎಸ್‌ಐಡಿಸಿಯ ಮುಖ್ಯವಾದ ಸೇವೆಗಳನ್ನು ‘ಸಕಾಲ’ದ ಅಡಿಯಲ್ಲಿ ತರಲು ಉದ್ದೇಶಿಸಲಾಗಿದೆ.

ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ವಿಶೇಷವಾಗಿ ಹಿಂದುಳಿದ ಎರಡು ಮತ್ತು ಟಯರ್-3 ನಗರಗಳಿಗೆ ಬಂಡವಾಳ ಆಕರ್ಷಿಸಲು ‘ನೂತನ ಕೈಗಾರಿಕಾ ನೀತಿ‘ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಹೊಸ ತಂತ್ರಜ್ಞಾನ ಮತ್ತು ಹೆಚ್ಚಿನ ಉದ್ಯೋಗ ಸೃಷ್ಟಿಗೆ ಅವಕಾಶ ಇರುವ ವಲಯಗಳಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.ಹೂಡಿಕೆ ಉತ್ತೇಜಿಸಲು, ಕೈಗಾರಿಕೆ ಸ್ಥಾಪನೆಗೆ ಗುರುತಿಸುವ ಜಾಗದಲ್ಲಿ ನೇರವಾಗಿ ಭೂಮಾಲೀಕರಿಂದ ಭೂಮಿ ಖರೀದಿಸಲು ಅನುಕೂಲ ಆಗುವಂತೆ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ.

ರಾಜ್ಯದ ವ್ಯಾಪ್ತಿಯಲ್ಲಿ ಅಮೂಲ್ಯ ಖನಿಜಗಳ ನಿಕ್ಷೇಪಗಳನ್ನು ಗುರುತಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಖನಿಜಾನ್ವೇಷನೆ ವಿಭಾಗ ಸ್ಥಾಪನೆಯಾಗಲಿದೆ.

ಎಂಎಸ್‌ಎಂಇ: ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಎಂಎಸ್ಎಂಇ ಬೆಳವಣಿಗೆಗೆ ಪೂರಕವಾಗಿ ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್‌ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ‘ಹೆಲ್ತ್ ಅಂಡ್ ವೆಲ್‍ನೆಸ್ ಕ್ಲಸ್ಟರ್’ ಮತ್ತು ಧಾರವಾಡ ಜಿಲ್ಲೆಯಲ್ಲಿ ‘ಹೋಮ್ ಅಂಡ್ ಪರ್ಸನಲ್ ಕೇರ್ ಕನ್ಸ್ಯೂಮರ್ ಗೂಡ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್’ ಸ್ಥಾಪನೆಯಾಗಲಿವೆ.

ಬಂದರು ಅಭಿವೃದ್ಧಿ
ಖಾಸಗಿ ಸಹಭಾಗಿತ್ವದಲ್ಲಿ ₹ 2500 ಕೋಟಿ ವೆಚ್ಚದಲ್ಲಿ ಉತ್ತರ ಕನ್ನಡ ಜಿಲ್ಲೆ ಪಾವಿನಕುರ್ವೆ/ ಬೇಲೆಕೇರಿ ಬಂದರು ಅಭಿವೃದ್ಧಿಗೆ ಬಿಡ್ ಆಹ್ವಾನ.ರಾಜ್ಯದ ಕಿರು ಬಂದರುಗಳ ಅಭಿವೃದ್ಧಿ, ಕರಾವಳಿ ಸಂರಕ್ಷಣೆ ಮತ್ತು ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗೆ ರೂಪಿಸಲಾಗಿರುವ ಕರ್ನಾಟಕ ಜಲಸಾರಿಗೆಯ ಸಮಗ್ರ ಯೋಜನೆ ಜಾರಿ.

ರೈಲು ಮಾರ್ಗ:ಧಾರವಾಡ–ಬೆಳಗಾವಿ ಮಧ್ಯೆ ಕಿತ್ತೂರಿನ ಮೂಲಕ ನೂತನ ರೈಲು ಮಾರ್ಗ ನಿರ್ಮಾಣದಿಂದ ಧಾರವಾಡ–ಬೆಳಗಾವಿ ನಡುವಣ ಅಂತರ 121 ಕಿ.ಮೀನಿಂದ 73ಕಿ.ಮೀಗೆ ತಗ್ಗಲಿದೆ. ಪ್ರಯಾಣದ ಅವಧಿಯೂ ಒಂದು ಗಂಟೆ ಉಳಿತಾಯವಾಗಲಿದೆ. ಈ ಯೋಜನೆಗೆ ಉಚಿತವಾಗಿ ಭೂಮಿ ನೀಡಲು ಹಾಗೂ ಶೇ 50ರಷ್ಟು ಕಾಮಗಾರಿ ವೆಚ್ಚ ಭರಿಸಲು ಒಪ್ಪಿಗೆ ನೀಡಲಾಗಿದೆ.

ಪ್ರಮುಖ ನಿರ್ಧಾರಗಳು
* ರಾಮನಗರದ ಹಾರೋಹಳ್ಳಿಯಲ್ಲಿ 5ನೇ ಹಂತದ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ ಪ್ರದೇಶದಲ್ಲಿ ಎಲೆಕ್ಟ್ರಿಕ್‌ ವೆಹಿಕಲ್ಸ್‌ ಆ್ಯಂಡ್‌ ಎನರ್ಜಿ ಸ್ಟೋರೇಜ್‌ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್‌ ಸ್ಥಾಪನೆಗೆ ₹10 ಕೋಟಿ ಅನುದಾನ
* ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳ ಅನುಕೂಲಕ್ಕಾಗಿ ಬೆಂಗಳೂರಿನಲ್ಲಿ ಕೈಗಾರಿಕೆಗಳ ಸಹಯೋಗದೊಂದಿಗೆ “Centre for Smart Manufacturing” ಸ್ಥಾಪನೆಗೆ ₹ 5 ಕೋಟಿ ಅನುದಾನ.
ನಾರು ಆಧಾರಿತ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಲು ಮತ್ತು ವ್ಯಾಪಕ ಮಾರುಕಟ್ಟೆ ಒದಗಿಸಲು ₹ 5‌ ಕೋಟಿ ವೆಚ್ಚದಲ್ಲಿ ‘Coir Experience Centre’ ಸ್ಥಾಪನೆ. ತಿಪಟೂರಿನಲ್ಲಿ ‘ತೆಂಗು ಆಧಾರಿತ ಕೈಗಾರಿಕಾ ಪಾರ್ಕ್’ ಅಭಿವೃದ್ಧಿ.
ಕೇಂದ್ರ ಸರ್ಕಾರದ ‘ಪವರ್‌ಟೆಕ್ಸ್‌ ಇಂಡಿಯಾದ ನೂಲು ನಿಧಿ ಯೋಜನೆ’ಯಡಿ ಕೇಂದ್ರ ಸರ್ಕಾರದ ವಂತಿಗೆ ಹಾಗೂ ರಾಜ್ಯ ಸರ್ಕಾರದ ಗರಿಷ್ಠ ₹ 50 ಲಕ್ಷ ಹಾಯಧನದೊಂದಿಗೆ ಎರಡು ಕೇಂದ್ರಗಳಲ್ಲಿ ನೂಲಿನ ಘಟಕ ಸ್ಥಾಪನೆ.

ಉದ್ಯಮಕ್ಕೆ ಉತ್ತೇಜನ
* ಜಾಗತಿಕ ಹೂಡಿಕೆ ಆಕರ್ಷಣೆಗೆ 2020ರ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ‘ಇನ್‌ವೆಸ್ಟ್‌ ಕರ್ನಾಟಕ–2020’
* ₹ 4 ಕೋಟಿ ವೆಚ್ಚದಲ್ಲಿಇನ್ನೋವೇಷನ್ ಹಬ್
* ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು₹ 7ಕೋಟಿ ವೆಚ್ಚದಲ್ಲಿ ಕರ್ನಾಟಕ ತಂತ್ರಜ್ಞಾನ ಮಿಷನ್
* ಗ್ರಾಮೀಣ ಯುವಕ/ಯುವತಿಯರಿಗೆ ಕೌಶಲ್ಯಾಭಿವೃದ್ಧಿಗೆ ₹ 20 ಕೋಟಿ ವೆಚ್ಚದಲ್ಲಿ ವಸತಿ ತರಬೇತಿ ಕಾರ್ಯಕ್ರಮ
* ಇಸ್ರೊ, ಎಚ್‌ಎಎಲ್‌ ಇತ್ಯಾದಿ ಪ್ರತಿಷ್ಠಿತ ಸಂಸ್ಥೆಗಳಿಗೆ ಅಗತ್ಯವಿರುವ ಬಿಡಿಭಾಗ ತಯಾರಿಕೆಗೆ ಅನುವಾಗುವಂತೆ ಬೆಂಗಳೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿನ ಸೇವಾ ಕೇಂದ್ರಗಳ ಸಾಮರ್ಥ್ಯ ವೃದ್ಧಿಗೆ ₹ 20 ಕೋಟಿ
* ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ಪ್ರಾರಂಭ; 3000 ಉದ್ಯೋಗ ಸೃಷ್ಟಿ ನಿರೀಕ್ಷೆ
* ರಾಜ್ಯದ ಜಿ.ಐ. ಟ್ಯಾಗ್ ಹೊಂದಿರುವ ಕೈಮಗ್ಗ ಬಟ್ಟೆ ಉತ್ಪನ್ನಗಳಿಗೆ ರಾಜ್ಯದ ಪ್ರತಿಷ್ಠಿತ ‘ಪ್ರಿಯದರ್ಶಿನಿ’ ಬ್ರ್ಯಾಂಡ್‌ ಮೂಲಕ ಮಾರುಕಟ್ಟೆ ಸೌಲಭ್ಯ
* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹರಳೂರು-ಮುದ್ದೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ‘ಡಿಫೆನ್ಸ್ ಅಂಡ್ ಏರೋಸ್ಪೇಸ್ ಇಕ್ವಿಪ್‌ಮೆಂಟ್‌ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್ ಸ್ಥಾಪನೆ.
* ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆ
* ಚರ್ಮ ಕುಶಲಕರ್ಮಿಗಳು ‘ಚರ್ಮ ಶಿಲ್ಪ’ ಎಂಬ ಯಂತ್ರಾಧಾರಿತ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಡಾ. ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಮೂಲಕ ಘಟಕದ ವೆಚ್ಚ ₹ 10 ಲಕ್ಷದಲ್ಲಿ ₹ 5 ಲಕ್ಷ ಸಹಾಯಧನವನ್ನು 250 ಫಲಾನುಭವಿಗಳಿಗೆ ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ 2020–21ನೇ ಸಾಲಿನಲ್ಲಿ ₹ 12.50 ಕೋಟಿ ಒದಗಿಸಲು ನಿರ್ಧರಿಸಲಾಗಿದೆ.

ನವೋದ್ಯಮಕ್ಕೆ ಉತ್ತೇಜನ
ನವೋದ್ಯಮಗಳಿಗೆ ಪ್ರಮುಖ ಕೇಂದ್ರವಾಗಿರುವ ರಾಜ್ಯದಲ್ಲಿನವೋದ್ಯಮಗಳ ಸ್ಥಾಪನೆಯ ವೇಗ ಹೆಚ್ಚಿಸಲು ಹಾಗೂ ಮಾರುಕಟ್ಟೆ ಪ್ರವೇಶಕ್ಕೆ ನೆರವಾಗಲು ಉದ್ಯಮದವರ ಸಹಯೋಗದೊಂದಿಗೆ ‘Acceleration Programme’ ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ₹ 3 ಕೋಟಿ ಅನುದಾನ ನೀಡಲಿದೆ.

ಎರಡು ಲಕ್ಷ ಮನೆ ನಿರ್ಮಾಣಕ್ಕೆ ₹2,500 ಕೋಟಿ
ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ಈ ಬಾರಿ ಎರಡು ಲಕ್ಷ ಮನೆಗಳ ನಿರ್ಮಾಣಕ್ಕಾಗಿ ಬಜೆಟ್‌ನಲ್ಲಿ ₹2,500 ಕೋಟಿ ನೀಡಲಾಗಿದೆ.

ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆ ನಿರ್ಮಿಸಲು ಸಹಾಯಧನ ಪಡೆದ ಫಲಾನುಭವಿಗಳು ತಮ್ಮ ನಿವೇಶನವನ್ನು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ 10 ವರ್ಷ ಅಡಮಾನ ಇಡಬೇಕಾಗಿತ್ತು. ಹತ್ತು ವರ್ಷಗಳ ನಂತರವೂ, ಈ ನಿವೇಶನವನ್ನು ಹಿಂಪಡೆಯಲು ಫಲಾನುಭವಿಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಈಗ, ಹತ್ತು ವರ್ಷಗಳು ಪೂರ್ಣಗೊಂಡಿದ್ದರೆ, ನಿವೇಶನವು ಸ್ವಯಂಚಾಲಿತವಾಗಿ ಫಲಾನುಭವಿಗಳಿಗೆ ಸೇರಲಿದೆ (ಡೀಮ್ಡ್‌ ರಿಲೀಸ್‌) ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ರಾಜ್ಯದ ಹತ್ತು ಮಹಾನಗರ ಪಾಲಿಕೆಗಳಲ್ಲಿ ಅಧಿಸೂಚಿತವಲ್ಲದ ಹಲವು ಕೊಳೆಗೇರಿ ಪ್ರದೇಶಗಳು ಇವೆ. ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಇಂತಹ ಕೊಳಚೆ ಪ್ರದೇಶಗಳ ಅಭಿವೃದ್ಧಿಗಾಗಿ ₹200 ಕೋಟಿ ಘೋಷಿಸಲಾಗಿದೆ.

ಹಿಂದುಳಿದ ತಾಲ್ಲೂಕು ಅಭಿವೃದ್ಧಿಗೆ ₹3,060 ಕೋಟಿ
ಬೆಂಗಳೂರು ನಗರಕ್ಕೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿದರೆ, ರಾಜ್ಯದ ಉಳಿದ ನಗರಗಳಿಗೆ ನಿರೀಕ್ಷಿತ ಯೋಜನೆ ಅಥವಾ ಕೊಡುಗೆಗಳನ್ನು ಘೋಷಿಸಿಲ್ಲ.

ರಾಜ್ಯದಲ್ಲಿನ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಈ ಬಜೆಟ್‌ನಲ್ಲಿ ₹3,060 ಕೋಟಿ ತೆಗೆದಿರಿಸಲಾಗಿದೆ.

ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶಕ್ಕೆ ಮರುಬಳಕೆ ಮಾಡುವ ಯೋಜನೆಗೆ₹20 ಕೋಟಿ ನಿಗದಿ ಪಡಿಸಲಾಗಿದೆ.

* ಸಾರ್ವಜನಿಕರಿಗೆ ನೀಡುವ ವಿವಿಧ ಪ್ರಮಾಣಪತ್ರಗಳನ್ನು ತಕ್ಷಣ ಒದಗಿಸುವಂತಹ ಸಿದ್ಧ–ಸೇವೆ ಯೋಜನೆಯನ್ನು ರೂಪಿಸಲಾಗಿದ್ದು, ಈ ಸಾಲಿನಿಂದಲೇ ಅನುಷ್ಠಾನಗೊಳಿಸುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ. ಇದಕ್ಕಾಗಿ ₹3 ಕೋಟಿ ಅನುದಾನ ತೆಗೆದಿರಿಸಲಾಗಿದೆ.

2,450 ಬಸ್‌ಗಳ ಖರೀದಿ
ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಸದಾಗಿ 2450 ಬಸ್‌ಗಳನ್ನು ಖರೀದಿಸಲು ಉದ್ದೇಶಿಸಲಾಗಿದೆ.

ಪ್ರಮುಖವಾಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಸಾರ್ವಜನಿಕ ಸಾರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಂಸ್ಥೆಗಳ ವತಿಯಿಂದ ಈ ಬಸ್‌ಗಳನ್ನು ಖರೀದಿಸುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಕಾರ್ಮಿಕರಿಗೆ ಸಿಕ್ಕಿದ್ದೇನು?
ಎಲ್ಲರನ್ನೂ ಒಳಗೊಂಡ ಆರ್ಥಿಕ ಅಭಿವೃದ್ಧಿ ಸರ್ಕಾರದ ಗುರಿ. ಅದಕ್ಕಾಗಿ, ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಕೈಗಾರಿಕೆ, ಮೂಲಸೌಕರ್ಯ, ಇಂಧನ ಮೊದಲಾದ ವಲಯಗಳಿಗೆ ಹೂಡಿಕೆ ಆಕರ್ಷಿಸಲು ಆದ್ಯತೆ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟು,‍ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ಬದ್ಧತೆಯನ್ನೂ ಸರ್ಕಾರ ಹೊಂದಿದೆ ಎಂದು ಹೇಳಲಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಕೆಲವು ಕಾರ್ಯಕ್ರಮಗಳನ್ನೂ ಮುಖ್ಯಮಂತ್ರಿ ಘೋಷಿಸಿದ್ದಾರೆ.

ಚರ್ಮಶಿಲ್ಪ: ಯಂತ್ರ ಆಧರಿತ ತಯಾರಿಕಾ ಘಟಕಗಳ ಸ್ಥಾಪನೆಗೆ 250 ಚರ್ಮ ಕುಶಲಕರ್ಮಿಗಳಿಗೆ ನೆರವು ನೀಡಲಾಗುವುದು. ಇಂತಹ ತಯಾರಿಕಾ ಘಟಕಗಳಿಗೆ ₹10 ಲಕ್ಷ ವೆಚ್ಚವಾಗುತ್ತದೆ. ಅದರಲ್ಲಿ ₹5 ಲಕ್ಷ ಸಹಾಯಧನವನ್ನು ಡಾ. ಬಾಬು ಜಗಜೀವ್‌ರಾಮ್‌ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಮೂಲಕ ನೀಡಲಾಗುವುದು. ಇದಕ್ಕಾಗಿ ₹12.50 ಕೋಟಿ ಮೊತ್ತ ಮೀಸಲಿರಿಸಲಾಗಿದೆ.

ಮುಖ್ಯಮಂತ್ರಿ ಆರೋಗ್ಯ ಸುರಕ್ಷಾ ಯೋಜನೆ: ಒಂದು ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಉಚಿತ ಪ್ರಿಪೇಯ್ಡ್‌ ಹೆಲ್ತ್‌ ಕಾರ್ಡ್‌ ವಿತರಿಸಲು ನಿರ್ಧಾರ. ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಈ ಯೋಜನೆ ಅಡಿ ಅವಕಾಶ ಇದೆ.

ವನಿತಾ ಸಂಗಾತಿ: ಗಾರ್ಮೆಂಟ್‌ ಉದ್ಯಮದಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಬಿಎಂಟಿಸಿ ಮೂಲಕ ಉಚಿತ ಬಸ್‌ ಪಾಸ್‌ ವಿತರಣೆಗೆ ₹25 ಕೋಟಿ ಅನುದಾನ.

ಮೊಬೈಲ್ ಕ್ಲಿನಿಕ್‌: ನಗರ ಪ್ರದೇಶದಲ್ಲಿ ದುಡಿಯುವ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬದವರ ಆರೋಗ್ಯ ರಕ್ಷಣೆಗೆ 10 ಮೊಬೈಲ್‌ ಕ್ಲಿನಿಕ್‌ ಆರಂಭಿಸಲು ನಿರ್ಧರಿಸಲಾಗಿದೆ.

ಶಿಶು ಪಾಲನೆ: ಕಟ್ಟಡ ಕಾರ್ಮಿಕ ಮಕ್ಕಳ ಪಾಲನೆಗೆ ಕಟ್ಟಡ ನಿರ್ಮಾಣಕ್ಕೂ ಯೋಜನೆ ಸಿದ್ಧಪಡಿಸಲು ಅಂದಾಜಿಸಲಾಗಿದೆ. ಕಟ್ಟಡ ನಿರ್ಮಾಣ ಸ್ಥಳಗಳಲ್ಲಿಯೇ 10 ಸಂಚಾರಿ ಶಿಶು ಪಾಲನಾ ಕೇಂದ್ರಗಳು ಸೌಲಭ್ಯ ಒದಗಿಸಲಿವೆ. ಇದಲ್ಲದೆ, ಕಿತ್ತೂರು ರಾಣಿ ಚೆನ್ನಮ್ಮ ಹೆಸರಿನಲ್ಲಿ 110 ಶಿಶು ಪಾಲನಾ ಕೇಂದ್ರಗಳು ಸ್ಥಾಪನೆಯಾಗಲಿವೆ.

ಬಜೆಟ್‌ ಪ್ರತಿಕ್ರಿಯೆಗಳು
ಬೆಂಗಳೂರನ್ನು ಸಂಚಾರ ದಟ್ಟೆಯಿಂದ ಮುಕ್ತಗೊಳಿಸಲು ಹೊರವರ್ತುಲ ರಸ್ತೆ ಅಭಿವದ್ಧಿಗೆ ಸರ್ಕಾರ ಮುಂದಾಗಿದೆ. ಬೆಂಗಳೂರನ್ನು ಸ್ಮಾರ್ಟ್‌ ಮ್ಯಾನುಫ್ಯಾಕ್ಟರಿಂಗ್‌ ಕೇಂದ್ರವಾಗಿಸುವ ಉದ್ದೇಶವು ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲಿದೆ
–ರಮೇಶ್‌ ರಾಮದೊರೈ,ಸಿಐಐ ಉಪಾಧ್ಯಕ್ಷ

**

ಕೈಗಾರಿಕಾ ವಸಾಹತುಗಳಲ್ಲಿ ಸಮಯೋಚಿತ ಮತ್ತು ಅಗತ್ಯವಾದ ಮೂಲಭೂತಸೌಕರ್ಯುಗಳನ್ನು ಒದಗಿಸುವುದರಿಂದ ಉದ್ಯಮಕ್ಕೆ, ಅದರಲ್ಲಿಯೂ ವಿಶೇಷವಾಗಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಹಾಯಕವಾಗಲಿದೆ.
ರಾಜು ಆರ್‌.,ಕಾಸಿಯಾ ಅಧ್ಯಕ್ಷ

**

ಕೈಗಾರಿಕೆಗಳ ಬೆಳವಣಿಗೆ ಪೂರಕ ಕ್ರಮಗಳನ್ನು ಪ್ರಕಟಿಸಲಾಗಿದೆ. ಕೆಐಎಡಿಬಿ ಮತ್ತು ಕೆಎಸ್‌ಎಸ್‌ಐಡಿಸಿ ಸೇವೆಗಳನ್ನುಸಕಾಲ ವ್ಯಾಪ್ತಿಗೆ ತಂದಿರುವುದು, ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವುದು ಉತ್ತಮ ನಿರ್ಧಾರ.
–ಸಿ.ಆರ್‌. ಜನಾರ್ಧನ,ಎಫ್‌ಕೆಸಿಸಿಐ ಅಧ್ಯಕ್ಷ

**

ವಿದೇಶಿ ಹೂಡಿಕೆ ಆಕರ್ಷಿಸುವ ಮತ್ತು ನವೋದ್ಯಮದ ಬೆಳವಣಿಗೆಗೆ ವೇಗ ನೀಡಲು ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಇದರಿಂದ ದೇಶಿ ಮತ್ತು ವಿದೇಶಿ ಮಾರುಕಟ್ಟೆಗಳನ್ನು ತಲುಪಲು ನವೋದ್ಯಮಗಳಿಗೆ ನೆರವಾಗಲಿದೆ.
ಲಘು, ಉದ್ಯೋಗ ಭಾರತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT