ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯ ಬಜೆಟ್ 2023: ಶುಲ್ಕ ವಿನಾಯಿತಿ, ಮಕ್ಕಳ ಬಸ್– ಶಿಕ್ಷಣಕ್ಕೆ ಸಿಕ್ಕಿದ್ದೇನು?

Last Updated 17 ಫೆಬ್ರುವರಿ 2023, 8:57 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ವರ್ಷದಲ್ಲಿ ಕೊನೆಯ ಬಜೆಟ್ ಮಂಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಶಿಕ್ಷಣಕ್ಕೆ ಕೆಲ ಕೊಡುಗಗಳನ್ನು ನೀಡಿದ್ದಾರೆ.

* ರಾಜ್ಯದ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಹೊಂದಲು ಅನುವು ಮಾಡಿಕೊಡುವ ದೃಷ್ಟಿಯಿಂದ ʻಮುಖ್ಯಮಂತ್ರಿ ವಿದ್ಯಾಶಕ್ತಿʼ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಇದರಡಿಯಲ್ಲಿ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ನೀಡಲಾಗುವುದು. ಈ ಉಚಿತ ಉನ್ನತ ಶಿಕ್ಷಣದಿಂದ ರಾಜ್ಯದ 8 ಲಕ್ಷ ವಿದ್ಯಾರ್ಥಿಗಳು ಅನುಕೂಲ ಪಡೆಯಲಿದ್ದಾರೆ.

* ರಾಜ್ಯದಲ್ಲಿ ಈಗಾಗಲೇ 19 ಲಕ್ಷ ಶಾಲಾ-ಕಾಲೇಜು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಸಾರ್ವಜನಿಕ ಬಸ್ಸುಗಳ ಸೇವೆಯನ್ನು ಅವಲಂಬಿಸಿರುತ್ತಾರೆ. ಇಂತಹ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವರ್ಷದಲ್ಲಿ ಸಾರಿಗೆ ನಿಗಮಗಳ ಮೂಲಕಳಿಂದ 100 ಕೋಟಿ ರೂ. ವೆಚ್ಚದಲ್ಲಿ 1,000 ಹೊಸ ಕಾರ್ಯಾಚರಣೆಗಳನ್ನು ಮಾಡಲು ʻಮಕ್ಕಳ ಬಸ್ಸುʼ ಎಂಬ ಯೋಜನೆಯನ್ನು ಪ್ರಾರಂಭಿಸಲಾಗುವುದು. ಉದ್ದೇಶಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

* ಉತ್ತಮ ಮೂಲಭೂತ ಸೌಕರ್ಯಗಳು ಮತ್ತು ಸೂಕ್ತ ಕಲಿಕಾ ಸಂಪನ್ಮೂಲಗಳನ್ನು ಮಕ್ಕಳಿಗೆ ಒದಗಿಸಲು ಹೊಸ ಕೇಂದ್ರ ಪುರಸ್ಕೃತ ಯೋಜನೆಯಾದ ಪಿಎಂ ಶ್ರೀಯನ್ನು 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

* ನರೇಗಾ ಸಂಯೋಜನೆಯೊಂದಿಗೆ 250 ಕೋಟಿ ರೂ. ಅಂದಾಜು ವೆಚ್ಚದಲ್ಲಿ 7,750 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ಸಂಪೂರ್ಣ ಬೇಡಿಕೆಯನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆಯಡಿ ಮಾರ್ಚ್ 2023ರ ಅಂತ್ಯದಲ್ಲಿ 2,169 ಶೌಚಾಲಯಗಳು ಪೂರ್ಣಗೊಳ್ಳಲಿವೆ. ಉಳಿದ 5,581 ಶೌಚಾಲಯಗಳನ್ನು 2023-24ನೇ ಸಾಲಿನಲ್ಲಿ ನಿರ್ಮಿಸಲಾಗುವುದು. ಇದಕ್ಕೆ ಒಟ್ಟು 80 ಕೋಟಿ ರೂ. ಹಂಚಿಕೆ ಮಾಡಿದ್ದು, ಅದರಲ್ಲಿ 50 ಕೋಟಿ ರೂ. ಗಳನ್ನು ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ಒದಗಿಸಲಾಗಿದೆ.

ರಾಜ್ಯದ 93 ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಒದಗಿಸಲು ಎಲ್ಲಾ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ 632 ಕೋಟಿ ರೂ. ಗಳ ವೆಚ್ಚದಲ್ಲಿ ಈ ಕೆಳಗಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.

–ಕಳೆದ ವರ್ಷದಲ್ಲಿ 2,284 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದ್ದು, ಪ್ರಸಕ್ತ ವರ್ಷದಲ್ಲಿ ಹೆಚ್ಚುವರಿಯಾಗಿ 1,230 ಕೊಠಡಿಗಳ ನಿರ್ಮಾಣ.

– ಹಳೆಯ ಮತ್ತು ಅಧಿಕ ಮಳೆಯಿಂದಾಗಿ ಹಾನಿಯಾಗಿರುವ 2,777 ಕೊಠಡಿಗಳ ದುರಸ್ತಿ.

– ಅಧಿಕ ದಾಖಲಾತಿಯಿರುವ ಶಾಲಾ-ಕಾಲೇಜುಗಳಲ್ಲಿ ಹೆಚ್ಚುವರಿ ಶೌಚಾಲಯಗಳ ನಿರ್ಮಾಣ.

– ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ 260 ತರಗತಿ ಕೊಠಡಿಗಳ ನಿರ್ಮಾಣ.

– ಆಯ್ದ 60 ತಾಲ್ಲೂಕುಗಳಲ್ಲಿ ತಲಾ ಒಂದು ಪದವಿ ಪೂರ್ವ ಕಾಲೇಜನ್ನು ಗುರುತಿಸಿ ವಿಜ್ಞಾನ ಶಿಕ್ಷಣಕ್ಕಾಗಿ ಅಗತ್ಯ ಸೌಲಭ್ಯ ನೀಡುವ ಮೂಲಕ ಆದರ್ಶ ಪದವಿ ಪೂರ್ವ ಕಾಲೇಜುಗಳ ಅಭಿವೃದ್ಧಿಗೆ ಕ್ರಮ.

–30 ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯಗಳಲ್ಲಿ Dormitory ನಿರ್ಮಾಣ, 47 ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್ರೂಮ್ ಗಳ ಅಭಿವೃದ್ಧಿ.

ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಮೂಲಕ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಹೆಚ್ಚಿಸಿ, ಫಲಿತಾಂಶ ಉತ್ತಮ ಪಡಿಸಲು 135 ಕೋಟಿ ರೂ. ಅನುದಾನದಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುವುದು:

– ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮತ್ತು ಆವಿಷ್ಕಾರಾತ್ಮಕ ಮನೋಭಾವ ಬೆಳೆಸಲು 73 ಕರ್ನಾಟಕ ಪಬ್ಲಿಕ್ ಶಾಲೆಗಳು ಮತ್ತು 50 ಆದರ್ಶ ವಿದ್ಯಾಲಯಗಳಲ್ಲಿ 15 ಕೋಟಿ ರೂ. ವೆಚ್ಚದಲ್ಲಿ “ʻಸೃಷ್ಟಿʼ” ಟಿಂಕರಿಂಗ್ ಪ್ರಯೋಗಾಲಯಗಳ ಸ್ಥಾಪನೆ.
– ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಹೊಂದಿಲ್ಲದ 23 ತಾಲ್ಲೂಕುಗಳಲ್ಲಿ ಹೊಸದಾಗಿ ಶಾಲೆಗಳನ್ನು ನಿರ್ಮಿಸಲು ಮತ್ತು ಕಾರ್ಯನಿರ್ವಹಿಸುತ್ತಿರುವ 46 ಶಾಲೆಗಳ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಒದಗಿಸಲಾಗುವುದು.

– ಪ್ರಚಲಿತ ವಿದ್ಯಮಾನಗಳ ಕುರಿತು ಆಸಕ್ತಿ ಹಾಗೂ ಅರಿವು ಹೊಂದಲು ಅನುವಾಗುವಂತೆ 24,347 ಶಾಲೆಗಳಲ್ಲಿ 20 ಕೋಟಿ ರೂ. ಅನುದಾನದಲ್ಲಿ ಪುಸ್ತಕ, ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಒದಗಿಸುವ ಮೂಲಕ ಗ್ರಂಥಾಲಯಗಳ ಬಲವರ್ಧನೆ ಹಾಗೂ ರೀಡಿಂಗ್ ಕಾರ್ನರ್ಗಳನ್ನು ಸ್ಥಾಪಿಸಲಾಗುವುದು.

– ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಜೆ-ಪಾಲ್ ಲ್ಯಾಬ್ ಸಹಯೋಗದೊಂದಿಗೆ ಪರಿಹಾರಾತ್ಮಕ ಚಟುವಟಿಕೆ ʻಅಭ್ಯುದಯʼ ಕಾರ್ಯಕ್ರಮ ಅನುಷ್ಠಾನ.

– ಬೀದರ್, ಹಾವೇರಿ, ಚಾಮರಾಜನಗರ, ಬಾಗಲಕೋಟೆ, ಕೊಡಗು, ಕೊಪ್ಪಳ ಮತ್ತು ಹಾಸನ ಜಿಲ್ಲೆಗಳಲ್ಲಿ 7 ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ ಮತ್ತು ಮಂಡ್ಯ ವಿಶ್ವವಿದ್ಯಾಲಯವನ್ನು ಸಂಯೋಜಿತ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸಲಾಗಿದೆ. ಈ ವರ್ಷದಲ್ಲಿ ಚಿಕ್ಕಮಗಳೂರಿನಲ್ಲಿ ಹೊಸ ವಿಶ್ವವಿದ್ಯಾಲಯವನ್ನು ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಮತ್ತು ಕಡಿಮೆ ಮಾನವ ಸಂಪನ್ಮೂಲಗಳನ್ನು ಒಳಗೊಂಡಂತೆ ಸ್ಥಾಪಿಸಲಾಗುವುದು ಮತ್ತು ಶಿಗ್ಗಾಂವ್ ತಾಲ್ಲೂಕಿನ ಬಂಕಾಪುರದಲ್ಲಿರುವ ಪಾಲಿಟೆಕ್ನಿಕನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನಾಗಿ ಉನ್ನತೀಕರಿಸಲಾಗುವುದು.

* ಕಳೆದ ಆಯವ್ಯಯದಲ್ಲಿ ಘೋಷಿಸಿದಂತೆ ಮುಂದಿನ 5 ವರ್ಷಗಳಲ್ಲಿ ಐಐಟಿ ಮಾದರಿಯಲ್ಲಿ ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (KIT) ಗಳಾಗಿ ಉನ್ನತೀಕರಿಸಲು ಬೆಂಗಳೂರು, ಹಾವೇರಿ, ಹಾಸನ, ಕೆ.ಆರ್.ಪೇಟೆ, ತಳ್ಕಲ್, ರಾಮನಗರ ಹಾಗೂ ಕಾರವಾರ ಸರ್ಕಾರಿ ಎಂಇಂಜಿನಿಯರಿಂಗ್ ಕಾಲೇಜುಗಳನ್ನು ಗುರುತಿಸಲಾಗಿದೆ. ಪ್ರೊ. ಸಡಗೋಪನ್ ನೇತೃತ್ವದ ತಜ್ಞರ ಸಮಿತಿಯು ಕೆಐಟಿಗಳಾಗಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳ ಕುರಿತು ವರದಿ ಸಲ್ಲಿಸಿದೆ. ಸದರಿ ಸಮಿತಿಯ ಶಿಫಾರಸ್ಸಿನನ್ವಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶಕ್ಕಾಗಿ 50 ಕೋಟಿ ರೂ. ಗಳನ್ನು ನೀಡಲಾಗಿದೆ.

* ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳು ಹಾಗೂ ಪಠ್ಯ ವಿಷಯಗಳನ್ನು ಮುಂದಿನ ಒಂದು ವರ್ಷದಲ್ಲಿ ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು.

* ವಿಜ್ಞಾನ ಮತ್ತು ತಂತ್ರಜ್ಞಾನದ ವೃತ್ತಿಪರ ಕೋರ್ಸ್ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸುವುದಕ್ಕೆ ರಾಜ್ಯದಲ್ಲಿ 100 ಆಯ್ದ ಪದವಿ ಕಾಲೇಜುಗಳಲ್ಲಿ ಪ್ರೊ. ಸಿ.ಎನ್.ಆರ್. ರಾವ್ ವಿಜ್ಞಾನ ಕಾರ್ಯಕ್ರಮದಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಗುವುದು.

*ʻಹಳ್ಳಿ ಮುತ್ತುʼ ಎಂಬ ಯೋಜನೆಯಡಿ ಗ್ರಾಮೀಣ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಾಲಾ ಶಿಕ್ಷಣವನ್ನು ಪೂರೈಸುವ 500 ಅತ್ಯುತ್ತಮ ವಿದ್ಯಾರ್ಥಿಗಳಿಗೆ ಅವರು CET ಮೂಲಕ ಸರ್ಕಾರಿ ಕೋಟಾದಲ್ಲಿ ಆಯ್ಕೆಯಾದ ವೃತ್ತಿಪರ ಶಿಕ್ಷಣದ ಸಂಪೂರ್ಣ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಭರಿಸಲಾಗುವುದು.

* ಸಾರ್ವಜನಿಕ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆಯನ್ನು ಉತ್ತಮ ಪಡಿಸಲು 10 ಸುಶಾಸನ ಸೂಚ್ಯಂಕಗಳನ್ನು ರಚಿಸಲಾಗಿದೆ. ಇದರನ್ವಯ ಅತ್ಯುತ್ತಮ ಸಾಧನೆ ಮಾಡುವ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷ ರೂ. ಗಳಂತೆ ಪ್ರೋತ್ಸಾಹಧನ ನೀಡಲಾಗುವುದು.

* ಬೆಂಗಳೂರು ನಗರದ ಕೇಂದ್ರ ಭಾಗದ 5 ಕಿ.ಮೀ. ವ್ಯಾಪ್ತಿಯೊಳಗಿರುವ ಪಾರಂಪರಿಕ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿರುವ ಪ್ರದೇಶವನ್ನು ಪಾರಂಪರಿಕ ಮತ್ತು ಶೈಕ್ಷಣಿಕ ಜಿಲ್ಲೆಯಾಗಿ ಘೋಷಿಸುವ ನಿಟ್ಟಿನಲ್ಲಿ ಕಾರ್ಯಸಾಧ್ಯತೆ ಅಧ್ಯಯನ ಮಾಡಲಾಗುವುದು.

* ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ Academic Bank of Credits ಮತ್ತು Digilocker ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಲಾಗುವುದು. ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಸರಳ ಹಾಗೂ ಪಾರದರ್ಶಕ ಪ್ರವೇಶಾವಕಾಶಕ್ಕೆ ಏಕರೂಪ ವ್ಯವಸ್ಥೆ ಕಲ್ಪಿಸಲಾಗುವುದು.

* ಪ್ರತಿ ಜಿಲ್ಲೆಯಲ್ಲಿ ಒಂದರಂತೆ, ಅತಿ ಹೆಚ್ಚು ದಾಖಲಾತಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ಗಳಿಗೆ ʻವೃದ್ಧಿʼ ಯೋಜನೆಯಡಿ ತಲಾ 2 ಕೋಟಿ ರೂ. ನಂತೆ ಒಟ್ಟು 124 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಇವುಗಳನ್ನು ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳಾಗಿ ರೂಪಿಸಲಾಗುವುದು.

* ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಅನ್ನು ಪ್ರಾರಂಭಿಸಲಾಗುವುದು.

* ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ದೇಶಕ್ಕಾಗಿ ಸಮರ್ಪಣಾ ಭಾವವನ್ನು ಮೂಡಿಸಲು ರಾಜ್ಯದಲ್ಲಿ ಈ ವರ್ಷ 2 ಹೊಸ ಎನ್.ಸಿ.ಸಿ. ಘಟಕಗಳನ್ನು ಸ್ಥಾಪಿಸಲಾಗುವುದು.

ಇವನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT