ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ವೇಗದ ಆರ್ಥಿಕ ಬೆಳವಣಿಗೆಗೆ ಪೂರಕ ಬಜೆಟ್‌: ಬಸವರಾಜ ಬೊಮ್ಮಾಯಿ

Last Updated 1 ಫೆಬ್ರುವರಿ 2022, 11:19 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಆರ್ಥಿಕತೆ ಇನ್ನಷ್ಟು ವೇಗವಾಗಿ ಬೆಳವಣಿಗೆ ಹೊಂದಲು ಪೂರಕವಾಗಿರುವ ಬಜೆಟ್‌ ಅನ್ನು ಮಂಡಿಸಲಾಗಿದೆ. ಇದು ದೂರದೃಷ್ಟಿಯುಳ್ಳ, ಆರ್ಥಿಕ ಬೆಳವಣಿಗೆಗೆ ಪೂರಕವಾದ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರ ಅಭ್ಯದಯಕ್ಕೆ ಕಾರಣವಾಗುವ ಬಜೆಟ್‌ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಜೆಟ್‌ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೋವಿಡ್‌ ಕರಿನೆರಳಿನಲ್ಲಿ ಮಂಡಿಸಿದ ಮೂರನೇ ಬಜೆಟ್‌ ಇದಾಗಿದೆ. ಆರ್ಥಿಕ ಹಿಂಜರಿತದ ನಡುವೆಯೂ, ದೇಶದ ಆರ್ಥಿಕತೆಯನ್ನು ಇನ್ನಷ್ಟು ವೇಗವಾಗಿ ಬೆಳವಣಿಗೆ ಮಾಡುವ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.ಕೋವಿಡ್‌ ನಂತರದ ದಿನಗಳಲ್ಲಿ ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಾಗಲಿದೆ ಎಂದರು.

ಮೂಲಸೌಕರ್ಯಗಳ ಮೇಲೆ ಬಂಡವಾಳ ಹೂಡಿಕೆ ಹೆಚ್ಚಾಗಿದೆ. ಶೇ 9.2 ಆರ್ಥಿಕ ಬೆಳವಣಿಗೆ ಗುರಿ ಇದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೇ, ಡಿಜಿಟಲ್ ಆರ್ಥಿಕತೆ, ಮಲ್ಟಿ ಮಾಡೆಲ್‌ ಕನೆಕ್ಟಿವಿಟಿ ಸೇರಿ ಹಲವು ರಂಗಗಳಲ್ಲಿ ಬಂಡವಾಳ ಹೂಡಿಕೆ ಆಗಲಿದೆ. ಒಂದು ವರ್ಷದಲ್ಲಿ ಆರ್ಥಿಕ ಸುಧಾರಣೆ, ಆರ್ಥಿಕ ಬೆಳವಣಿಗೆ ಸ್ಥಿರೀಕರಣ ಮತ್ತು ಬೆಳವಣಿಗೆಗೆ ಬಜೆಟ್‌ ಪೂರಕವಾಗಲಿದೆ ಎಂದು ಬೊಮ್ಮಾಯಿ ಹೇಳಿದರು.

ರಾಜ್ಯ ಬಂಡವಾಳ ಖಾತೆಗೆ ಈ ಬಾರಿ ₹3,000 ಕೋಟಿ ಅಧಿಕವಾಗಿ ಬರುವ ನಿರೀಕ್ಷೆ ಇದೆ. ಹಿಂದೆ ₹26,000 ಕೋಟಿ ಬರುತ್ತಿತ್ತು. ಈ ಬಾರಿ ₹29,000 ಕೋಟಿ ಬರಲಿದೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ಮೂಲಸೌಕರ್ಯ ಯೋಜನೆಗಳು ಮತ್ತು ಮೆಟ್ರೋಗೆ ಹೆಚ್ಚಿನ ಅನುದಾನ ಸಿಗಲಿದೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಚೇತರಿಕೆಗೆ ₹50 ಸಾವಿರ ಕೋಟಿಯಿಂದ ₹5 ಲಕ್ಷ ಕೋಟಿಗೆ ಹಣ ನೀಡಲಾಗುವುದು. ಇಡೀ ದೇಶದಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಸಣ್ಣ ಕೈಗಾರಿಕೆಗಳು ಇದ್ದು, ಆ ಪ್ರಯೋಜನ ರಾಜ್ಯದ ಉದ್ಯಮಿಗಳಿಗೆ ಸಿಗಲಿದೆ ಎಂದರು.

ರಾಜ್ಯದ ಪಾಲಿನ ನೀರು ನಿಗದಿ ಆದ ಬಳಿಕ ಒಪ್ಪಿಗೆ: ಕಾವೇರಿ, ಕೃಷ್ಣಾ ಮತ್ತು ಪೆನ್ನಾರ್‌ ನದಿ ಜೋಡಣೆ ಪ್ರಸ್ತಾಪವೂ ಇದೆ. ಡಿಪಿಆರ್‌ಗೆ ಎಲ್ಲ ರಾಜ್ಯಗಳ ಒಪ್ಪಿಗೆ ಸಿಕ್ಕಿದ ನಂತರವೇ ಮುಂದುವರೆಯುವುದಾಗಿ ಬಜೆಟ್‌ನಲ್ಲಿ ತಿಳಿಸಲಾಗಿದೆ. ನಮ್ಮ ರಾಜ್ಯದ ಪಾಲು ನಿರ್ಧಾರ ಆದ ಬಳಿಕವೇ ಇದಕ್ಕೆ ಒಪ್ಪಿಗೆ ನೀಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಕಡಿಮೆ ನೀರನ್ನು ಹಂಚಿಕೆ ಮಾಡಲಾಗಿತ್ತು. ಈಗ ಕೇಂದ್ರ ಸರ್ಕಾರ ಹೊಸ ಡಿಪಿಆರ್‌ ಮಾಡಲಿದೆ. ಇದರಲ್ಲಿ ನಮ್ಮ ಪಾಲು ನಿರ್ಧಾರ ಆಗಬೇಕು ಎಂದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT