ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Budget ವಿಶ್ಲೇಷಣೆ | ಬಂಡವಾಳ ವೆಚ್ಚ ಹೆಚ್ಚಳ, ಮೂಲಸೌಕರ್ಯ ಅಭಿವೃದ್ಧಿಯಷ್ಟೇ ಸಾಲದು

ಕೇಂದ್ರ ಬಜೆಟ್‌ 2022–23: ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕೆಗಳ ಉತ್ತೇಜನಕ್ಕೆ ಕೈಗೊಂಡ ಕ್ರಮಗಳ ವಿಶ್ಲೇಷಣೆ
Last Updated 1 ಫೆಬ್ರುವರಿ 2022, 19:05 IST
ಅಕ್ಷರ ಗಾತ್ರ

ಕೇಂದ್ರ ಬಜೆಟ್‌ ಬಂಡವಾಳ ವೆಚ್ಚ, ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದೆ. ಮೂಲಸೌಕರ್ಯಗಳಿಗೆ ಹೆಚ್ಚು ವೆಚ್ಚ ಮಾಡಿದಷ್ಟೂ ಹೆಚ್ಚು ಉದ್ಯೋಗ ಸೃಷ್ಟಿ ಸಾಧ್ಯ. ಎಂಎಸ್‌ಎಂಇ ಕೈಗಾರಿಕೆಗಳಿಗೆ ನಗದು ಲಭ್ಯತೆಯ ಬೆಂಬಲವನ್ನು ಪ್ರಕಟಿಸಲಾಗಿದೆ. ತುರ್ತು ಸಾಲ ಖಾತರಿ ಕಾರ್ಯಕ್ರಮಗಳಿಗೆ ಅನುದಾನ ಹೆಚ್ಚಳವಾಗಿದೆ. ಎಂಎಸ್‌ಎಂಇಗಳು ಭಾರಿ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿರುವುದರಿಂದ, ಈ ಕ್ರಮವು ನಿರುದ್ಯೋಗ ಪ್ರಮಾಣವನ್ನು ತಗ್ಗಿಸಲು ನೆರವಾದೀತು.

ರಾಜ್ಯಗಳ ಪಾಲುದಾರಿಕೆಯಲ್ಲಿ ‘ಉದ್ದಿಮೆಗಳು ಮತ್ತು ಸೇವೆ ಅಭಿವೃದ್ಧಿ ಹಬ್‌’ ಸ್ಥಾಪಿಸಲು ಅನುಕೂಲ ಕಲ್ಪಿಸುವ ಸಲುವಾಗಿ ‘ವಿಶೇಷ ಆರ್ಥಿಕ ವಲಯಗಳ ಕಾಯ್ದೆ’ಯ ಬದಲು ಬೇರೊಂದು ಕಾಯ್ದೆ ಜಾರಿಗೆ ತರುವ ಘೋಷಣೆ ಮಾಡಲಾಗಿದೆ. ಭಾರತೀಯ ಎಸ್‌ಇಜೆಡ್‌ಗಳು ದಕ್ಷತೆ ಹೊಂದಿಲ್ಲ, ಅವುಗಳ ರಫ್ತು ಸ್ಪರ್ಧಾತ್ಮಕವಾಗಿಲ್ಲ. ‘ಉದ್ದಿಮೆಗಳು ಮತ್ತು ಸೇವೆ ಹಬ್‌’ಗಳ ಯಶಸ್ಸು ಅವುಗಳನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತದೆ ಎಂಬುದನ್ನು ಆಧರಿಸಿದೆ.

2021–22ನೇ ಸಾಲಿನ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ, ದೇಶದ ಮಹತ್ವಾಕಾಂಕ್ಷಿ ಉದ್ಯೋಗ ಖಾತರಿ ಯೋಜನೆಯಾದ ನರೇಗಾಕ್ಕೆ ಅನುದಾನ ಹಂಚಿಕೆಯಲ್ಲಿ ಶೇ 25ರಷ್ಟು ಕಡಿತವಾಗಿದೆ. ಗ್ರಾಮೀಣ ಆರ್ಥಿಕತೆಯು ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನರೇಗಾ ಕಾರ್ಯಕ್ರಮಕ್ಕೆ ಅನುದಾನ ಕಡಿತ ಮಾಡಿರುವುದು ಗ್ರಾಮೀಣ ಪ್ರದೇಶದ ಅಭಿವೃದ್ಧಿ ಕುಂಠಿತಗೊಳ್ಳುವುದಕ್ಕೆ ಕಾರಣವಾಗಬಹುದು.

ಬೇಡಿಕೆಯನ್ನಷ್ಟೇ ನೋಡಿಕೊಂಡರೆ ಸಾಲದು, ಪೂರೈಕೆಯ ಬಗ್ಗೆಯೂ ಗಮನ ಹರಿಸಬೇಕು–ಉದ್ಯೋಗಾಕಾಂಕ್ಷಿಗಳನ್ನು ಮಾರುಕಟ್ಟೆಯ ಬೇಡಿಕೆಗಳಿಗೆ ತಕ್ಕಂತೆ ಸಜ್ಜುಗೊಳಿಸಲು ನೆರವಾಗುವುದು ಹೇಗೆ ಎಂಬ ಬಗ್ಗೆಯೂ ದೃಷ್ಟಿಹರಿಸಬೇಕು. ಕೌಶಲ ಅಭಿವೃದ್ಧಿ ವಿಚಾರದಲ್ಲಿ ಬಜೆಟ್‌ ಹೆಚ್ಚಿನ ಕಾರ್ಯಕ್ರಮಗಳೇನನ್ನೂ ಹೊಂದಿಲ್ಲ. 2021–22ನೇ ಸಾಲಿನ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ, ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯಕ್ಕೆ ಅನುದಾನ ಹಂಚಿಕೆಯಲ್ಲಾಗಲೀ, ಕಾರ್ಯವಿಧಾನದಲ್ಲಾಗಲೀ ಯಾವುದೇ ಬದಲಾವಣೆಗಳು ಕಾಣಿಸುತ್ತಿಲ್ಲ. ಪುರುಷ ಕಾರ್ಮಿಕರ ಪಾಲ್ಗೊಳ್ಳುವಿಕೆ ದರಕ್ಕೆ (ಶೇ 55.6) ಹೋಲಿಸಿದರೆ ಮಹಿಳಾ ಕಾರ್ಮಿಕರ ಪಾಲ್ಗೊಳ್ಳುವಿಕೆ ದರ (ಎಲ್‌ಎಫ್‌ಪಿಆರ್‌) ತೀರಾ ತಳಮಟ್ಟಕ್ಕೆ (ಶೇ 18.6) ಕುಸಿದಿದೆ. ಮಹಿಳೆಯರು ಕಾರ್ಮಿಕ ಬಲದಲ್ಲಿ ಹೆಚ್ಚಿನ ಪಾಲು ಪಡೆಯುವುದನ್ನು ಉತ್ತೇಜಿಸಲು ಕೇಂದ್ರ ಬಜೆಟ್‌ನಲ್ಲಿ ಯಾವುದಾದರೂ ಕಾರ್ಯಕ್ರಮ ಹಮ್ಮಿಕೊಳ್ಳಬಹುದಿತ್ತು.

ಬಂಡವಾಳ ವೆಚ್ಚ ಹಾಗೂ ಮೂಲಸೌಕರ್ಯ ಅಭಿವೃದ್ಧಿಯಷ್ಟೇ ಅಲ್ಲ; ಉದ್ದಿಮೆ ಸ್ಥಾಪನೆಗೆ, ಅವುಗಳನ್ನು ಮುನ್ನಡೆಸುವುದಕ್ಕೆ ಹಾಗೂ ಅವುಗಳನ್ನು ಮುಚ್ಚುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಸರಳೀಕರಿಸುವ ಮೂಲಕ ಕೈಗಾರಿಕೆಗಳಿಗೆ ಬೆಂಬಲ ನೀಡುವ ಉದ್ದೇಶವನ್ನೂ ಸರ್ಕಾರ ಹೊಂದಿದೆ. ಹಸಿರು ಪರವಾನಗಿ ಪಡೆಯುವುದಕ್ಕೆ ಏಕಗವಾಕ್ಷಿ ಪೋರ್ಟಲ್‌ ಸ್ಥಾಪಿಸುವುದರಿಂದ ಸಮಯ ಉಳಿತಾಯವಾಗಬಲ್ಲುದು. ಸೆಂಟರ್‌ ಫಾರ್‌ ಪ್ರೊಸೆಸಿಂಗ್‌ ಆಕ್ಸಲರೇಟೆಡ್ ಕಾರ್ಪೊರೇಟ್‌ ಎಕ್ಸಿಟ್‌ (ಸಿ–ಪೇಸ್‌) ಸಂಸ್ಥೆಯು ಕಂಪನಿಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಚುರುಕುಗೊಳಿಸಬಲ್ಲುದು. ಭಾರತದಲ್ಲಿ ಉದ್ದಿಮೆಯನ್ನು ಸ್ಥಾಪಿಸುವುದು ಸುಲಭದ ವಿಚಾರವಲ್ಲ. ಆದರೆ, ಅದಕ್ಕಿಂತಲೂ ತ್ರಾಸದಾಯಕವಾದುದು ಅದನ್ನು ಮುಚ್ಚುವ ಪ್ರಕ್ರಿಯೆ. ಕಂಪನಿ ಮುಚ್ಚುವ ಅವಧಿಯನ್ನು 2 ವರ್ಷಗಳಿಂದ 6 ತಿಂಗಳುಗಳಿಗೆ ಇಳಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಆಶಯವನ್ನು ಸಿ–ಪೇಸ್‌ ಹೊಂದಿದೆ.

ಆ್ಯನಿಮೇಷನ್‌, ವಿಷುವಲ್‌ ಎಫೆಕ್ಟ್ಸ್‌, ಗೇಮಿಂಗ್‌ ಮತ್ತು ಕಾಮಿಕ್‌ (ಎವಿಜಿಸಿ) ವಲಯವು ರಫ್ತು ಹಾಗೂ ಉದ್ಯೋಗ ಸೃಷ್ಟಿಯ ವಿಚಾರದಲ್ಲಿ ಹೇರಳ ಅವಕಾಶ ಹೊಂದಿದೆ. ಈ ವಲಯಕ್ಕೆ ಕಾರ್ಯಪಡೆಯನ್ನು ಸ್ಥಾಪಿಸುವುದನ್ನು ಹೊರತುಪಡಿಸಿ ಬೇರಾವುದೇ ಸ್ಪಷ್ಟ ಪ್ರಸ್ತಾವಗಳು ಕೇಂದ್ರ ಬಜೆಟ್‌ನಲ್ಲಿಲ್ಲ. ಸರ್ಕಾರ ಕೃತಕ ಬುದ್ಧಿಮತ್ತೆ (ಎ.ಐ), ಜಿಯೋಸ್ಪೇಷಿಯಲ್‌ ಸಿಸ್ಟಮ್‌ಗಳು ಮತ್ತು ಡ್ರೋನ್‌ಗಳು, ಸೆಮಿಕಂಡಕ್ಟರ್‌ಗಳು, ಸ್ಪೇಸ್‌ ಎಕಾನಮಿ, ಜೀನೋಮಿಕ್ಸ್‌ ಮತ್ತು ಫಾರ್ಮಾಸ್ಯುಟಿಕಲ್ಸ್‌, ಹಸಿರು ಇಂಧನ ಮತ್ತು ಸ್ವಚ್ಛ ಸಾರಿಗೆ ವ್ಯವಸ್ಥೆಗಳನ್ನು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಮತ್ತು ಭಾರತೀಯ ಕೈಗಾರಿಕೆಗಳ ಕ್ಷಮತೆಯನ್ನು ಇನ್ನಷ್ಟು ಹೆಚ್ಚಿಸಬಲ್ಲ ‘ಉದಯೋನ್ಮುಖ ವಲಯಗಳು’ (ಸನ್ ರೈಸ್‌ ಸೆಕ್ಟರ್ಸ್‌) ಎಂದು ಗುರುತಿಸಿದೆ. ಆದರೆ, ಇವುಗಳ ಸಲುವಾಗಿ ಸ್ಪಷ‌್ಟವಾದ ಪ್ರಸ್ತಾವಗಳನ್ನು ಹೊಂದುವ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ ಹೆಚ್ಚು ಧಾರಾಳವಾಗಿ ನಡೆದುಕೊಂಡಿಲ್ಲ.

ಕೋವಿಡ್‌ ಸಾಂಕ್ರಾಮಿಕವು ಈಗಲೂ ಇದೆ. ಅದರಿಂದ ಸೃಷ್ಟಿಯಾಗಿರುವ ಆರ್ಥಿಕ ಪರಿಣಾಮಗಳನ್ನು ಇನ್ನಷ್ಟೇ ನಿವಾರಿಸಬೇಕಾಗಿದೆ. ಹಾಗಾಗಿ ಉದ್ಯೋಗ ಸೃಷ್ಟಿ ಹಾಗೂ ಕೈಗಾರಿಕಾ ಅಭಿವೃದ್ಧಿ ಈಗಿನ ತುರ್ತು ಅಗತ್ಯ. ಕೇಂದ್ರ ಬಜೆಟ್‌ ಈ ನಿಟ್ಟಿನಲ್ಲಿ ಪ್ರಯತ್ನಪಟ್ಟಿದೆಯಾದರೂ, ಅದು ಏನೇನೂ ಸಾಲದು.

ಲೇಖಕ: ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನಲ್ಲಿ ಅಸೋಸಿಯೇಟ್ ಫೆಲೊ

ಇವನ್ನೂ ಓದಿ
*

*
*
*
*
*
*
*
*
*
*
*
*
*
*

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT