ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್ ಅಧಿವೇಶನ: ಭಾರತ ಬದಲಾಗಿದೆ ಎನ್ನುವುದಕ್ಕೆ ಪ್ರವಾಸೋದ್ಯಮವೇ ಸಾಕ್ಷಿ

ರಾಷ್ಟ್ರಪತಿ ಭಾಷಣ
Last Updated 31 ಜನವರಿ 2020, 7:30 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ ಭವನದಲ್ಲಿಬಜೆಟ್ ಅಧಿವೇಶನಕ್ಕೆ ಚಾಲನೆ ದೊರೆತಿದ್ದು ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡುತ್ತಿದ್ದಾರೆ.

ಸರ್ಕಾರದ ಸಾಧನೆಗಳನ್ನು ಪ್ರಸ್ತಾಪಿಸಿದ ರಾಷ್ಟ್ರಪತಿ, ಸಮಾಜದ ಸರ್ವಾಂಗೀಣ ಅಭ್ಯುದಯಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಪ್ರತಿಭಟನೆ ನೆಪದಲ್ಲಿ ನಡೆಯುವ ಹಿಂಸಾಚಾರಗಳು ಸಮಾಜ ಮತ್ತು ದೇಶವನ್ನು ದುರ್ಬಲಗೊಳಿಸುತ್ತವೆ ಎಂದರು.

ರಾಷ್ಟ್ರಪತಿ ಭಾಷಣ ಲೈವ್ ನೋಡಿ

ರಾಷ್ಟ್ರಪತಿ ಭಾಷಣದ ಕನ್ನಡ ಅನುವಾದ ಇಲ್ಲಿದೆ...

* ಭಾರತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವಿಶ್ವ ಪ್ರವಾಸೋದ್ಯಮ ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನ ಸುಧಾರಿಸಿದೆ. ಈ ಹಿಂದೆ 52ನೇ ಸ್ಥಾನದಲ್ಲಿದ್ದ ಭಾರತ ಈಗ 34ನೇ ಸ್ಥಾನಕ್ಕೆ ಬಂದಿದೆ. ಕಳೆದ ಕೆಲ ವರ್ಷಗಳಲ್ಲಿ ಭಾರತ ಎಷ್ಟು ಬದಲಾಗಿದೆ ಎಂಬುದಕ್ಕೆ ಇದು ಸಾಕ್ಷಿ.

* 8 ಕೋಟಿ ಜನರಿಗೆ ಅಡುಗೆ ಅನಿಲ ಸಂಪರ್ಕ ನೀಡಿದ್ದೇವೆ. 2 ಕೋಟಿ ಜನರಿಗೆ ಮನೆಗಳನ್ನು ಕಟ್ಟಿಕೊಟ್ಟಿದ್ದೇವೆ. 38 ಕೋಟಿ ಜನರಿಗೆ ಬ್ಯಾಂಕ್ ಖಾತೆಗಳ ಮೂಲಕ ನೆರವಾಗಿದ್ದೇವೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮೂಲಕ 50 ಕೋಟಿ ಜನರಿಗೆ ₹ 5 ಲಕ್ಷದವರೆಗಿನ ಚಿಕಿತ್ಸೆ ಪಡೆಯಲು ನೆರವಾಗಿದ್ದೇವೆ. 24 ಕೋಟಿ ಜನರಿಗೆ ವಿಮಾ ಯೋಜನೆಗಳ ಸೌಲಭ್ಯ ಸಿಕ್ಕಿದೆ. 2.5 ಕೋಟಿ ಜನರಿಗೆ ಉಚಿತ ವಿದ್ಯುತ್‌ ಸಂಪರ್ಕ ಒದಗಿಸಲಾಗಿದೆ ಎಂದು ರಾಷ್ಟ್ರಪತಿಗಳು ಸರ್ಕಾರದ ಸಾಧನೆಗಳ ಪಟ್ಟಿ ಓದಿದರು.

* ಅಭಿವೃದ್ಧಿಯಲ್ಲಿ ಹಿಂದುಳಿದಿರುವ ದೇಶದ 112 ಜಿಲ್ಲೆಗಳಿಗೆ ಮುಂದಿನ ದಿನಗಳಲ್ಲಿಆದ್ಯತೆ ಮತ್ತು ವಿಶೇಷ ಕಾಳಜಿ ವಹಿಸಲಾಗುವುದು. ಈ ಹಿಂದೆ ಹಿಂದುಳಿದಿದ್ದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಸಾಕಷ್ಟು ಕೆಲಸಗಳಾಗಿವೆ.

* ಇತರ ದೇಶಗಳ ನಾಗರಿಕರಿಗೆ ಭಾರತೀಯ ಪೌರತ್ವ ನೀಡಲು ಈ ಹಿಂದೆ ಇದ್ದ ಯಾವುದೇ ಕಾನೂನನ್ನು ನಾವು ಬದಲಿಸಿಲ್ಲ.

* ಬೊಡೊ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ₹ 1,500 ಕೋಟಿ ಖರ್ಚು ಮಾಡಲಿದೆ.

* ಮೇಕ್‌ ಇನ್‌ ಇಂಡಿಯಾ ಆಶಯವನ್ನು ಸರ್ಕಾರ ರೈಲ್ವೆಗೂ ಅನ್ವಯಿಸುತ್ತಿದೆ. ತೇಜಸ್ ಮತ್ತು ವಂದೇ ಭಾರತ್ ರೈಲುಗಳು ಹೆಮ್ಮೆಯ ಪ್ರತೀಕವಾಗಿವೆ. ಜನರು ದೇಶದಲ್ಲಿ ಉತ್ಪಾದನೆಯಾದ ಸ್ಥಳೀಯ ಉತ್ಪನ್ನಗಳ ಖರೀದಿಗೆ ಗಮನ ಕೊಡಬೇಕು.

* ವಿದೇಶ ಮೀಸಲು ನಿಧಿ ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯೂ ಸುಧಾರಿಸಿದೆ. 5 ಲಕ್ಷ ಕೋಟಿ ಡಾಲರ್‌ ಅರ್ಥ ವ್ಯವಸ್ಥೆ ರೂಪಿಸಲು ನಾವು ಬದ್ಧರಾಗಿದ್ದೇವೆ.

* ನಮ್ಮ ಸರ್ಕಾರವು ಡಿಜಿಟಲ್ ವ್ಯವಸ್ಥೆಗೆ ಒತ್ತು ಕೊಡುತ್ತಿದೆ. ಯುವಜನರಲ್ಲಿ ಉದ್ಯಮಶೀಲತೆ ಬೆಳೆಸಲು ಅಗತ್ಯಕ್ರಮ ತೆಗೆದುಕೊಂಡಿದ್ದೇವೆ. ಸ್ಟಾರ್ಟ್‌ಅಪ್‌ಗಳಿಗೆ ಪೂರಕ ವ್ಯವಸ್ಥೆ ಇರುವ ವಿಶ್ವದ 3ನೇ ದೇಶವಾಗಿ ಭಾರತ ಬೆಳಗುತ್ತಿದೆ. ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ಎಲ್ಲ ಅವಕಾಶಗಳನ್ನೂ ನಾವು ಬಳಸಿಕೊಳ್ಳುತ್ತಿದ್ದೇವೆ.

* ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಖಂಡಿಸುತ್ತೇವೆ. ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಎಲ್ಲರಿಗೂ ಪೌರತ್ವ ನೀಡಲು ಬದ್ಧರಾಗಿದ್ದೇವೆ.

* ಮಹಿಳಾ ಸಬಲೀಕರಣ ನಮ್ಮ ಸರ್ಕಾರದ ಮುಖ್ಯ ಆದ್ಯತೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ನೇಮಕಾತಿ ಹೆಚ್ಚಿಸಿದ್ದೇವೆ. ಈ ಹಿಂದೆ ಕಾರ್ಯನಿರ್ವಹಿಸಲು ಅವಕಾಶ ಇಲ್ಲದ ಹುದ್ದೆಗಳಲ್ಲಿಯೂ ಮಹಿಳೆಯರೂ ಈಗ ಸೇವೆ ಸಲ್ಲಿಸುತ್ತಿದ್ದಾರೆ.

* ನಮ್ಮ ಸರ್ಕಾರದ ಕೋರಿಕೆಯ ನಂತರ ಸೌದಿ ಅರೇಬಿಯಾ ಹಜ್ ಕೋಟಾ ಮಿತಿಯನ್ನು ಹೆಚ್ಚಿಸಿತು. ಈ ಬಾರಿ ದಾಖಲೆ ಸಂಖ್ಯೆಯಲ್ಲಿ ಅಂದರೆ 2 ಲಕ್ಷ ಮುಸ್ಲಿಮರು ಹಜ್ ಯಾತ್ರೆ ಪೂರ್ಣಗೊಳಿಸಿದರು. ವಿಶ್ವದಲ್ಲಿ ಭಾರತದಲ್ಲಿ ಮಾತ್ರ ಹಜ್ ಯಾತ್ರೆಯ ಎಲ್ಲ ಪ್ರಕ್ರಿಯೆಗಳನ್ನು ಡಿಜಿಟಲ್ ಮತ್ತು ಆನ್‌ಲೈನ್‌ನಲ್ಲಿ ನಿರ್ವಹಿಸಲಾಗುತ್ತದೆ.

* ಸ್ವಚ್ಛ ಭಾರತ ನಮ್ಮ ಸರ್ಕಾರದ ಮುಖ್ಯ ಗುರಿ. ಜಲ್ ಜೀವನ್ ಮಿಷನ್‌ ಲಕ್ಷಾಂತರ ಜನರಿಗೆ ಅನುಕೂಲ ಮಾಡಿಕೊಟ್ಟಿದೆ.

* ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್‌ ಯೋಜನೆಯನ್ನು ದಾಖಲೆ ಸಮಯದಲ್ಲಿ ಪೂರ್ಣಗೊಳಿಸಿದ್ದೇವೆ. ಗುರು ನಾನಕರ 550ನೇ ಪ್ರಕಾಶ್‌ ಪರ್ವ್‌ದಲ್ಲಿ ಅದನ್ನು ಲೋಕಾರ್ಪಣೆ ಮಾಡಿದ್ದೇವೆ.

* ಪೌರತ್ವ ತಿದ್ದುಪಡಿ ಕಾಯ್ದೆಯ ಮೂಲಕ ಮಹಾತ್ಮ ಗಾಂಧಿ ಅವರ ಆಶಯಗಳನ್ನು ಈಡೇರಿಸಿದ್ದೇವೆ. (ಪೌರತ್ವ ಕಾಯ್ದೆ ಪ್ರಸ್ತಾಪಿಸಿದಾಗ ಸದನದಲ್ಲಿ ಗದ್ದಲ)

* ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ಹೊರಬಿದ್ದ ನಂತರ ದೇಶದ ಜನರು ನಡೆದುಕೊಂಡ ರೀತಿಯೂ ಶ್ಲಾಘನಾರ್ಹ.

* 2020 ಭಾರತಕ್ಕೆ ತುಂಬಾ ಮುಖ್ಯವಾದ ವರ್ಷ. ಇದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷವೂ ಹೌದು. ಸಂವಿಧಾನದ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಗ್ಗೂಡಿ ನಡೆಯಬೇಕು.2020ನೇ ದಶಕವನ್ನು ಭಾರತದ ದಶಕವನ್ನಾಗಿಸಲು ನನ್ನ ಸರ್ಕಾರ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಹೊಸ ಭಾರತ ರೂಪಿಸಲು ಜನರು ನಮಗೆ ಆಶೀರ್ವಾದ ಮಾಡಿದ್ದಾರೆ.

* ದೇಶದ ಇತಿಹಾಸದಲ್ಲಿ ಮೈಲಿಗಲ್ಲಾಗುವ ಹಲವು ಕಾಯ್ದೆಗಳನ್ನು2019ರಲ್ಲಿ ಜಾರಿ ಮಾಡಲಾಯಿತು.

* ಸಂಸತ್ತು ಮತ್ತು ಇಲ್ಲಿರುವ ಎಲ್ಲ ಸದಸ್ಯರೂ ದೇಶದ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಕೆಲಸ ಮಾಡಬೇಕು. ಜನರ ರಕ್ಷಣೆ ಮತ್ತು ಅವರ ಆಶೋತ್ತರ ಈಡೇರಿಸುವಂಥ ಕಾನೂನು ರೂಪಿಸಬೇಕು ಎಂದು ನಮ್ಮ ಸಂವಿಧಾನ ಬಯಸುತ್ತದೆ.

* ಸತತ ಚರ್ಚೆ ಮತ್ತು ಸಂವಾದಗಳು ಪ್ರಜಾಪ್ರಭುತ್ವವನ್ನು ಮತ್ತಷ್ಟು ದೃಢಗೊಳಿಸುತ್ತವೆ ಎಂಬುದು ನಮ್ಮ ಸರ್ಕಾರದ ದೃಷ್ಟಿಕೋನವಾಗಿದೆ. ಪ್ರತಿಭಟನೆ ಹೆಸರಿನಲ್ಲಿ ನಡೆಯುವ ಯಾವುದೇ ರೀತಿಯ ಹಿಂಸಾಚಾರಗಳು ದೇಶ ಮತ್ತು ಸಮಾಜವನ್ನು ದುರ್ಬಲಗೊಳಿಸುತ್ತವೆ.

* ಜಮ್ಮ ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂವಿಧಾನದ 370 ಮತ್ತು 35ಎ ವಿಧಿಗಳನ್ನು ರದ್ದುಪಡಿಸಲಾಯಿತು. ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡು (2/3) ಬಹುಮತದಿಂದ ಈ ನಿರ್ಣಯ ಅಂಗೀಕಾರವಾಯಿತು.

ಬಜೆಟ್ ಮಾಹಿತಿಗೆ:www.prajavani.net/budget-2020

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT