ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ಸಿಗುವುದೇ ವಿಶೇಷ ಕೊಡುಗೆಗಳು?

ಇದೇ 5ರಂದು ರಾಜ್ಯ ಬಜೆಟ್‌: ಈ ವರ್ಷ ಆಗದಿರಲಿ ನಿರಾಸೆ: ಜನರ ಆಶಯ
Last Updated 2 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ:ಇದೇ 5ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಮಂಡಿಸಲಿರುವ ಬಜೆಟ್‌ನಲ್ಲಿ ಗಡಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಕೊಡುಗೆಗಳು ಇರಲಿವೆ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

‘ಹಿಂದುಳಿದ ಜಿಲ್ಲೆ’ ಎಂಬ ಹಣೆಪಟ್ಟಿಯನ್ನೂ ಇನ್ನೂ ಕಳಚಿಕೊಳ್ಳದ ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‌ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡಿದ್ದರು. ಆ ಬಳಿಕವಷ್ಟೇ ಜಿಲ್ಲಾ ಕೇಂದ್ರ ಸೇರಿದಂತೆ ಪ್ರಮುಖ ಪಟ್ಟಣಗಳಲ್ಲಿ ಒಂದಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದವು.

ಕಳೆದ ವರ್ಷ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಡಿಸಿದ್ದ ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಕೊಡುಗೆಗಳು ಏನೂ ಇರಲಿಲ್ಲ. ಹೀಗಾಗಿ ಜಿಲ್ಲೆಯ ಜನರು ನಿರಾಸೆ ಅನುಭವಿಸಿದ್ದರು.

ಕೊಳ್ಳೇಗಾಲದ ಮುಡಿಗುಂಡದಲ್ಲಿರುವನಗರ ರೇಷ್ಮೆ ಕಾರ್ಖಾನೆಯ ಪುನರುಜ್ಜೀವನಕ್ಕೆ ₹ 5 ಕೋಟಿ, ಸಂತೇಮರಹಳ್ಳಿಯಲ್ಲಿರುವ ರೇಷ್ಮೆ ನೂಲಿನ ಕಾರ್ಖಾನೆಯಲ್ಲಿ ಹೊಸ ರೀಲಿಂಗ್‌ ಯಂತ್ರ ಅಳವಡಿಸಲು ಹಾಗೂ ಯುವಜನರಿಗೆ ತರಬೇತಿ ನೀಡುವ ಉದ್ದೇಶಕ್ಕೆ ₹2 ಕೋಟಿ ಹಾಗೂ ಬಾಲಕಿಯರ ಕ್ರೀಡಾ ಹಾಸ್ಟೆಲ್‌ ನಿರ್ಮಾಣಕ್ಕೆ ₹1.5 ಕೋಟಿ ಹಂಚಿಕೆ ಮಾಡಿದ್ದು ಬಿಟ್ಟರೆ, ಜಿಲ್ಲೆಗೆ ಪ‍್ರತ್ಯೇಕವಾದ ಯೋಜನೆಗಳು ಏನೂ ಇರಲಿಲ್ಲ. ವರ್ಷದ ಅವಧಿಯಲ್ಲಿ ರೇಷ್ಮೆ ಕಾರ್ಖಾನೆಗಳ ಪುನರುಜ್ಜೀವನ ವಿಷಯದಲ್ಲಿ ಏನೂ ಪ್ರಗತಿಯಾಗಿಲ್ಲ.

ಈ ವರ್ಷದ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿರುವಂತಹ ಕೆಲವು ಯೋಜನೆಗಳಾದರೂ ಇರಲಿದೆ ಎಂಬ ನಿರೀಕ್ಷೆ ಜನರಲ್ಲಿದೆ. ಜಿಲ್ಲೆಗಾಗಿ ವಿಶೇಷ ಪ್ಯಾಕೇಜ್‌ ಘೋಷಿಸಿದರೆ ಜಿಲ್ಲೆ ಪ್ರಗತಿ ಪಥದಲ್ಲಿ ಸಾಗಬಹುದು ಎಂಬುದು ಜನರ ಅಭಿಪ್ರಾಯ.

ಉದ್ದಿಮೆಗಳು ಬರಬೇಕು: ಜಿಲ್ಲೆಯಲ್ಲಿ 1,400 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿದರೂ ಉದ್ದಿಮೆಗಳು ಬಂದಿಲ್ಲ. ಹಾಗಾಗಿ ಉದ್ಯೋಗ ಸೃಷ್ಟಿಯಲ್ಲಿ ಜಿಲ್ಲೆ ಹಿಂದೆ ಬಿದ್ದಿದೆ‌. ಬಜೆಟ್‌ನಲ್ಲಿ ಉದ್ಯಮಿಗಳ ಸೆಳೆಯಲು ವಿಶೇಷ ಕೊಡುಗೆಗಳನ್ನು ನೀಡಿದರೆಜಿಲ್ಲೆಗೆ ಅನುಕೂಲವಾಗಲಿದೆ ಎಂದು ಜಿಲ್ಲಾಡಳಿತ ಉನ್ನತ ಅಧಿಕಾರಿಗಳು ಹೇಳುತ್ತಾರೆ.

ಶಿಕ್ಷಣಕ್ಕೆ ಒತ್ತು ಬೇಕು: ಜಿಲ್ಲೆಯು ಶಿಕ್ಷಣದಲ್ಲಿ ಹಿಂದುಳಿದಿದೆ. 10 ಲಕ್ಷದಷ್ಟಿರುವ ಜನಸಂಖ್ಯೆಯಲ್ಲಿ ಶೇ 30ಕ್ಕಿಂತಲೂ ಹೆಚ್ಚು ಮಂದಿ ಅಕ್ಷರಸ್ಥರಲ್ಲ. ಬುಡಕಟ್ಟು ಸಮುದಾಯದವರು, ದಲಿತರು ಹಾಗೂ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸುರೇಶ್‌ ಕುಮಾರ್‌ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿರುವುದರಿಂದ ಜಿಲ್ಲೆಯ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಅವರಿಗೆ ಹೆಚ್ಚು ಅರಿವಿದೆ.

ಜಿಲ್ಲೆಗೆ ಕಾನೂನು ಕಾಲೇಜು ಮಂಜೂರಾಗಿದ್ದರೂ, ಕಳೆದ ವರ್ಷ ಅದು ಆರಂಭವಾಗಿರಲಿಲ್ಲ. ಮುಂದಿನ ಶೈಕ್ಷಣಿಕ ವರ್ಷದಿಂದಲಾದರೂ ಆರಂಭವಾಗಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ಸ್ವಂತ ಕಟ್ಟಡ ಹಾಗೂ ಅಗತ್ಯಕ್ಕೆ ತಕ್ಕಷ್ಟು ಬೋಧಕ, ಬೋಧಕೇತರ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳಬೇಕಿದೆ. ಕಾನೂನು ಕಾಲೇಜು ಒಂದು ವರ್ಷದಿಂದಿಚೇಗೆ ಕಾರ್ಯನಿರ್ವಹಿಸುತ್ತಿದ್ದರೂ, ಅದಕ್ಕೆ ಸ್ವಂತ ಕಟ್ಟಡ ಇಲ್ಲ. ಸರ್ಕಾರ ಈ ಬಗ್ಗೆಯೂ ಗಮನಹರಿಸಬೇಕು.

ಕೃಷಿಗೆ ಸಿಕ್ಕೀತೇ ಉತ್ತೇಜನ: ಇದು ಕೃಷಿ ಪ್ರಧಾನ ಜಿಲ್ಲೆ. ಹೆಚ್ಚಿನವರು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸಾವಯವ ಕೃಷಿ ಪದ್ಧತಿಯಲ್ಲಿ ತೊಡಗಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ರೈತರು ನಿರೀಕ್ಷಿಸುತ್ತಿದ್ದಾರೆ.

ಕೆರೆ ತುಂಬಿಸುವುದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ: ಜಿಲ್ಲೆಯ ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿರುವುದರಿಂದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಹನೂರು ಹಾಗೂ ಯಳಂದೂರು ತಾಲ್ಲೂಕುಗಳಲ್ಲೂ ಮೊದಲ ಹಂತದ ಈ ಯೋಜನೆ ಅನುಷ್ಠಾನವಾಗುತ್ತಿದೆ. ಎರಡನೇ ಹಂತದ ಯೋಜನೆಗೆ ಅನುದಾನ ಬಿಡುಗಡೆಯಾಗಬೇಕಿದೆ.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ರೂಪಿಸಲಾಗಿದ್ದ ಕೆರೆಗಳ ತುಂಬಿಸುವ ಯೋಜನೆಯೂ ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ಅದನ್ನು ಎಲ್ಲ ಕೆರೆಗಳಿಗೂ ವಿಸ್ತರಿಸಬೇಕು ಎಂಬ ಕೂಗು ಕೂಡ ಕೇಳಿ ಬರುತ್ತಿದೆ.ಕೆರೆಗಳ ಹೂಳು ತೆಗೆದು ಅವುಗಳನ್ನು ಅಭಿವೃದ್ಧಿ ಪಡಿಸುವ ಕೆಲಸವೂ ಆಗಬೇಕಿದೆ.

ಜಿಲ್ಲಾ ಕೇಂದ್ರ ಚಾಮರಾಜನಗರಕ್ಕೆ ಕುಡಿಯುವ ನೀರು ಪೂರೈಸುವ, ಎರಡನೇ ‌ಹಂತದ ಯೋಜನೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದ್ದು, ಈ ಬಜೆಟ್‌ನಲ್ಲಿ ಅದಕ್ಕೆ ಅನುದಾನ ಸಿಗಬಹುದು ಎಂಬ ನಿರೀಕ್ಷೆ ನಗರ ನಿವಾಸಿಗಳಲ್ಲಿದೆ.

ಹನೂರಿಗೆ ಬೇಕಿದೆ ವಿಶೇಷ ಆಸ್ಥೆ

ಗುಡ್ಡಗಾಡು ಪ್ರದೇಶಗಳಿಂದಲೇ ಆವೃತವಾಗಿರುವ ಹನೂರು ಪ್ರತ್ಯೇಕ ತಾಲ್ಲೂಕು ಎಂದು ಘೋಷಣೆಯಾಗಿ ಎರಡು ವರ್ಷಗಳು ಕಳೆದರೂ, ಕಚೇರಿಗಳು ಇನ್ನೂ ಸ್ಥಳಾಂತರಗೊಂಡಿಲ್ಲ. ಇನ್ನೂ ಅದು ಹೋಬಳಿ ಕೇಂದ್ರವಾಗಿಯೇ ಇದೆ. ತಾಲ್ಲೂಕು ಕೇಂದ್ರವಾಗಿ ಅಭಿವೃದ್ಧಿ ಮಾಡುವ ಕೆಲಸ ತುರ್ತಾಗಿ ಆಗಬೇಕಿದೆ. ಅಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿದೆ.

ಯಳಂದೂರು ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ಹಲವು ಸಮಯದಿಂದ ನನೆಗುದಿಗೆ ಬಿದ್ದಿದೆ.

ಗ್ರಾಮೀಣ ರಸ್ತೆಗಳಿಗೆ ಕಾಯಕಲ್ಪ: ಹನೂರು ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಬಹುತೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ದುರಸ್ತಿಪಡಿಸಲು ಸರ್ಕಾರ ಗಮನ ನೀಡಬೇಕಿದೆ.

ಪ್ರವಾಸೋದ್ಯಮಕ್ಕೆ ಸಿಕ್ಕೀತೇ ಪ್ರೋತ್ಸಾಹ?

ಹಲವು ಪ್ರವಾಸಿತಾಣಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಇದೆ. ಭರಚುಕ್ಕಿ ಜಲಪಾತದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆಯೊಂದನ್ನು ಅರಣ್ಯ ಇಲಾಖೆ ಸಿದ್ಧಪಡಿಸಿದೆ. ಸರ್ಕಾರ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿ ಮಾಡಿದರೆ, ಭರಚುಕ್ಕಿ ಜಲ‍‍ಪಾತ ಅತ್ಯುತ್ತಮ ಪ್ರವಾಸಿ ತಾಣ ಆಗುವುದರಲ್ಲಿ ಸಂಶಯವೇ ಇಲ್ಲ.

ಅದೇ ರೀತಿ, ಇತರ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ಮೂಲಸೌಕರ್ಯ ಕಲ್ಪಿಸಲು ಅನುದಾನವನ್ನು ಬಜೆಟ್‌ನಲ್ಲಿ ಹಂಚಿಕೆ ಮಾಡುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT