ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 1ಕ್ಕೆ ಕೇಂದ್ರ ಬಜೆಟ್‌; ಆರ್ಥಿಕತೆಗೆ ಚೇತರಿಕೆ ನೀಡುವ ಸವಾಲು

Last Updated 9 ಜನವರಿ 2020, 9:01 IST
ಅಕ್ಷರ ಗಾತ್ರ

ಬೆಂಗಳೂರು:2020–21ನೇ ಹಣಕಾಸು ವರ್ಷದ ಕೇಂದ್ರ ಬಜೆಟ್‌ ಫೆಬ್ರುವರಿ 1ರಂದು ಮಂಡನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ವರ್ಷ ಮೇನಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರಮಂಡನೆಯಾಗುತ್ತಿರುವ ಮೊದಲ ಪೂರ್ಣ ವಾರ್ಷಿಕ ಬಜೆಟ್‌ ಆಗಿದೆ. ಬಜೆಟ್‌ಗೂ ಮುನ್ನ ದೇಶದ ಆರ್ಥಿಕತೆಗೆ ಚೇತರಿಗೆ ನೀಡುವ ಬಗ್ಗೆ ಹಾಗೂ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬಹುದಾದ ಕ್ರಮಗಳ ಕುರಿತು ಆರ್ಥಿಕ ಮತ್ತು ಹಣಕಾಸು ತಜ್ಞರೊಂದಿಗೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ. ಆರ್ಥಿಕತೆ ಕುಸಿದಿರುವುದು ಹಾಗೂ ಬೇಡಿಕೆ ಕುಸಿತದಿಂದ ಹಲವು ವಲಯಗಳಲ್ಲಿ ಉತ್ಪಾದನೆ ಇಳಿಕೆಯ ಪರಿಣಾಮ ಉದ್ಯೋಗ ಕಡಿತಗೊಂಡಿರುವುದು 2020ರ ಬಜೆಟ್‌ಗೆ ಪ್ರಮುಖ ಸವಾಲಾಗಿದೆ. ಆರ್ಥಿಕತೆಗೆ ಚೇತರಿಗೆ ನೀಡಲು ಸರ್ಕಾರ ದಿಟ್ಟ ಕ್ರಮಕ್ಕೆ ಮುಂದಾಗಬೇಕು ಎಂದು ಹಲವು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

ಅಧಿಕ ವೆಚ್ಚದ ಯೋಜನೆಗಳನ್ನು ಮಂಡಿಸುವುದಕ್ಕೂ ಸರ್ಕಾರಕ್ಕೆ ಸೀಮಿತಿ ಅವಕಾಶವಿದೆ ಎಂದು ಕೆಲವು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಕೇಂದ್ರ ಬಜೆಟ್‌ ವಿತ್ತೀಯ ಕೊರತೆ ಪ್ರಮಾಣವು ಶೇ 3.8ಕ್ಕೆ ಹೆಚ್ಚುವ ಸಾಧ್ಯತೆಯಿದೆ. ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.3ಕ್ಕೆ ಮಿತಿಗೊಳಿಸುವ ಉದ್ದೇಶ ಹೊಂದಲಾಗಿದೆ.

2024ರ ವೇಳೆಗೆ ಭಾರತ 5 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಪ್ರತಿ ವರ್ಷ ಸುಮಾರು 1.2 ಕೋಟಿ ಯುವಕರು ಕಾರ್ಯ ವಲಯಕ್ಕೆ ಪ್ರವೇಶಿಸುತ್ತಿದ್ದು, ಅವರಿಗೆ ಸೂಕ್ತ ಉದ್ಯೋಗ ಸೃಷ್ಟಿಸುವ ಸವಾಲು ಸಹ ಸರ್ಕಾರದ ಮುಂದಿದೆ.

ದೇಶದ ಆರ್ಥಿಕ ವೃದ್ಧಿ ದರ ಆರು ವರ್ಷಗಳ ಕೆಳಮಟ್ಟಕ್ಕೆ ಕುಸಿದಿರುವುದು ಹಾಗೂ ಹಣಕಾಸು ಸಂಸ್ಥೆಗಳು ವೃದ್ಧಿ ದರದ ಅಂದಾಜು ಕಡಿತಗೊಳಿಸುವುದು ಆತಂಕಕಾರಿಯಾಗಿದೆ. ಮಾರ್ಚ್‌ 2020ರ ಅಂತ್ಯಕ್ಕೆ ಜಿಡಿಪಿ ಶೇ 5ರಷ್ಟು ಇರಲಿದೆ ಎಂದು ಸರ್ಕಾರ ಅಂದಾಜಿಸಿದೆ. ಜಿಡಿಪಿ ಶೇ 5ಕ್ಕೆ ಮಿತಿಯಾದರೆ ಕಳೆದ 11 ವರ್ಷಗಳಲ್ಲೇ ಅತ್ಯಂತ ನಿಧಾನಗತಿಯವೃದ್ಧಿ ದಾಖಲಾಗಲಿದೆ.

ಜನವರಿ 31ರಂದು ಆರ್ಥಿಕ ಸಮೀಕ್ಷೆ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT