ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2020 | ಬರೀ ಮೂಗಿಗೆ ತುಪ್ಪ ಹಚ್ಚುವ ಕೆಲಸ

ವಿತ್ತೀಯ ಕೊರತೆಗೆ ಕಡಿವಾಣ ಹಾಕುವುದು ಅತ್ಯಂತ ಕಠಿಣದ ಹಾದಿ
Last Updated 1 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ದೇಶದ ಜಿಡಿಪಿಯಲ್ಲಿ ಬೆಳವಣಿಗೆಯ ದರ ಕುಸಿಯುತ್ತಿದೆ. ಮತ್ತೊಂದೆಡೆ ಹಣದುಬ್ಬರದ ದರ ಏರಿಕೆಯಾಗುತ್ತಿದೆ. ನಿರುದ್ಯೋಗ ನಿರಂತರವಾಗಿ ಹೆಚ್ಚುತ್ತಿದ್ದು, ಇದರ ಬೆನ್ನಲ್ಲೇ ಹೋರಾಟಗಳು ಗರಿಗಟ್ಟಿವೆ. ಇಂತಹ ದುರ್ಗಮ ಭೂಮಿಕೆಯಲ್ಲಿ ಆ ಸವಾಲುಗಳನ್ನು ಎದುರಿಸುತ್ತಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆಯವ್ಯಯ ಮಂಡಿಸಿದ್ದಾರೆ. ವಿತ್ತೀಯ ಕೊರತೆಗೆ ಕಡಿವಾಣ ಹಾಕುವುದು ಅವರಿಗೆ ಕಠಿಣದ ಕೆಲಸವೇ ಆಗಿದೆ.

ಕಳೆದ ವರ್ಷ ವಿತ್ತೀಯ ಕೊರತೆ ಶೇ 3.3 ಇತ್ತು. ಆದಾಯ ಹೆಚ್ಚಾಗದ ಕಾರಣ ಬೆಳವಣಿಗೆ ಕುಂಠಿತವಾಗಿದೆ. ಇದರಿಂದ ಕೊರತೆ ಪ್ರಮಾಣ ಇನ್ನೂ ಹೆಚ್ಚಾಗಬಹುದು ಎಂಬ ಭೀತಿ ಎದುರಾಗಿದೆ. ಇಂತಹ ಸನ್ನಿವೇಶದಲ್ಲಿಯೇ ಅವರು ಮಹತ್ವಾಕಾಂಕ್ಷೆಯ ಭಾರತ, ಆರ್ಥಿಕ ಬೆಳವಣಿಗೆ ಮತ್ತು ಸಮಾಜದ ಆರೈಕೆ ಎಂಬ ಮೂರು ಸ್ತಂಭಗಳನ್ನು ಮುಕ್ತಗೊಳಿಸುವ ಮಾತುಗಳನ್ನೂ ಆಡಿದ್ದಾರೆ. ಈ ಮೂರೂ ಅಂಶಗಳ ವಿಶೇಷತೆ ಏನೆಂಬುದನ್ನು ವಿಸ್ತೃತವಾಗಿ ವಿವರಿಸುವ ಪ್ರಯತ್ನವನ್ನೂಅವರು ಮಾಡಿದ್ದಾರೆ.

ಮಹತ್ವಾಕಾಂಕ್ಷೆಯ ಭಾರತಕ್ಕೆ ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ ಮತ್ತು ನೈರ್ಮಲ್ಯವನ್ನು ಸೇರಿಸಿದ್ದಾರೆ. ಶಿಕ್ಷಣ ಮತ್ತು ಕೌಶಲವನ್ನೂ ಇದರ ಭಾಗವಾಗಿಸಿದ್ದಾರೆ. ಕೃಷಿಯಲ್ಲಿ 16 ಕ್ರಿಯಾ ಅಂಶಗಳನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ. ಒಟ್ಟಾರೆ ಈ ವಲಯಕ್ಕೆ ಅನುದಾನವನ್ನು ₹1.5 ಲಕ್ಷ ಕೋಟಿಗಳಿಂದ ₹2.83 ಲಕ್ಷ ಕೋಟಿಗಳಿಗೆ ಏರಿಕೆ ಮಾಡಲಾಗಿದೆ. ಇದಕ್ಕೆ ವೇಗೋತ್ಕರ್ಷ ನೀಡಿದ್ದರೆ, ಮತ್ತೊಂದು ಕಡೆ ಗ್ರಾಮೀಣಾಭಿವೃದ್ಧಿಗೆ ಅನುದಾನ ₹1.40 ಲಕ್ಷ ಕೋಟಿಯಿಂದ ₹1.23 ಲಕ್ಷ ಕೋಟಿಗೆ ಇಳಿಸಿದ್ದಾರೆ.

ಆಸಕ್ತಿದಾಯಕ ಕಾರ್ಯಕ್ರಮಗಳಲ್ಲಿ ಮುಖ್ಯವಾದುದೆಂದರೆ, 20 ಲಕ್ಷ ಸೌರ ಕೃಷಿ ಪಂಪ್‌ಗಳ ಅಳವಡಿಕೆ ಮತ್ತು 15 ಲಕ್ಷ ಕೃಷಿಕರ ಸೌರ ವಿದ್ಯುತ್‌ ಘಟಕಗಳನ್ನು ವಿದ್ಯುತ್‌ ಗ್ರಿಡ್‌ಗೆ ಸಂಪರ್ಕ ಕಲ್ಪಿಸುವುದು. ಕೃಷಿಕರ ಸೌರ ವಿದ್ಯುತ್‌ ಉತ್ಪಾದನಾ ಘಟಕಗಳಿಂದ ತಯಾರಾದ ವಿದ್ಯುತ್‌ ಅನ್ನು ಗ್ರಿಡ್‌ಗೆ ನೀಡಲಾಗುವುದು. ತೋಟಗಾರಿಕೆ, ಸಮುದಾಯ ವ್ಯವಸಾಯ ವ್ಯವಸ್ಥೆ, ಶೂನ್ಯ ಬಂಡವಾಳದ ಕೃಷಿಗೂ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ. ರೈತರಿಗಾಗಿ ಕುಸುಮ್‌ ಯೋಜನೆ, ಪ್ರಧಾನಮಂತ್ರಿಯವರ ಫಸಲ್‌ ಭಿಮಾ ಯೋಜನೆ ಈ ಹಿಂದಿನಂತೆಯೇ ಮುಂದುವರೆಯಲಿವೆ.

ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ರೈಲ್ವೆ, ಶಿಕ್ಷಣ, ಆರೋಗ್ಯ, ವಿದ್ಯುತ್‌, ವಸತಿ ಮುಂತಾದ ಕ್ಷೇತ್ರಗಳ 6,500 ಯೋಜನೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ₹100 ಲಕ್ಷ ಕೋಟಿ ಅನುದಾನ ನೀಡುವ ಪ್ರಸ್ತಾವ ಮುಂದಿಟ್ಟಿದ್ದಾರೆ. ಕರ್ನಾಟಕ ಖುಷಿ ಪಡುವ ಸಂಗತಿಯೆಂದರೆ ಸಬ್‌ ಅರ್ಬನ್‌ ರೈಲು ಮತ್ತು ಮೆಟ್ರೊಗಾಗಿ ₹18,600 ಕೋಟಿ ಪ್ರಕಟಿಸಿರುವುದು.

ಅಲ್ಲದೆ, ತಮ್ಮ ಬಜೆಟ್‌ ಭಾಷಣದಲ್ಲಿ 100 ವಿಮಾನ ನಿಲ್ದಾಣಗಳು ಮತ್ತು ವಿಮಾನಗಳ ಸಂಖ್ಯೆಯನ್ನು ಎರಡು ಪಟ್ಟು ಎಂದರೆ 1,200ಕ್ಕೆ ಹೆಚ್ಚಿಸುವುದಾಗಿ ಹೇಳಿದ್ದಾರೆ. ವಿದ್ಯುತ್‌ ಮತ್ತು ರಾಷ್ಟ್ರೀಯ ಅನಿಲ ಗ್ರಿಡ್‌ನಲ್ಲಿ ಸ್ಮಾರ್ಟ್‌ ಮೀಟರ್‌ನ ಭರವಸೆ ನೀಡಿದ್ದಾರೆ. ವಿತ್ತ ಸಚಿವರ ಆದಾಯ ತೆರಿಗೆ ದರ ಸರಳೀಕರಣ ವಾಸ್ತವದಲ್ಲಿ ಹೆಚ್ಚು ಸಂಕೀರ್ಣವಾಗಿದ್ದು, ರಿಯಾಯ್ತಿಗಳನ್ನು ತೆಗೆದಿರುವುದರಿಂದ ವೇತನದಾರರ ವರ್ಗಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ. ಹಿಂದಿನ ನೇರ ತೆರಿಗೆ ವ್ಯವಸ್ಥೆಗಿಂತಲೂ ಈಗ ಹೆಚ್ಚು ಗೊಂದಲಕಾರಿಯಾಗಿದೆ.

ಹಲವು ಭರವಸೆಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಒಲಿಸಿಕೊಳ್ಳುವ ಅಂಶಗಳನ್ನು ಬಜೆಟ್‌ ಭಾಷಣದಲ್ಲಿ ಆಡಿದ್ದಾರೆ. ಮಧ್ಯಮ ಆದಾಯ ವರ್ಗ ಮತ್ತು ಮಹಿಳೆಯರಿಗೆ ಗಣನೀಯ ಪ್ರಮಾಣದ ಹಂಚಿಕೆ ಮಾಡಿದ್ದಾರೆ. ಸಚಿವರ ಭಾಷಣ ತೀರಾ ಉದ್ದವಾಗಿತ್ತಲ್ಲದೆ, ಸರ್ಕಾರದ ವಿರುದ್ಧ ಹೆಚ್ಚುತ್ತಿರುವ ಮತದಾರರ ಅಸಮಾಧಾನದ ಮನಸ್ಥಿತಿಗೆ ಸಮಜಾಯಿಷಿ ನೀಡುವ ರಕ್ಷಣಾತ್ಮಕ ನಡೆಯೂ ಅವರದ್ದಾಗಿತ್ತು. ಹೀಗಾಗಿಯೇ ಸಣ್ಣ ಮತ್ತು ಮಧ್ಯಮ ಕೈಗಾರಿಗಳು ವಿಚಾರವೇ ಇರಲಿ, ಎಲ್‌ಐಸಿ ಮತ್ತು ಐಡಿಬಿಐಗಳ ಬಂಡವಾಳ ಹಿಂತೆಗೆತದಂತಹ ಪ್ರಸ್ತಾವನೆ ಮುಂದಿಟ್ಟಿದ್ದಾರೆ. ಇದರಿಂದ ಆದಾಯ ಹೆಚ್ಚಬಹುದು ಎಂಬುದು ಅವರ ನಿರೀಕ್ಷೆ. ವಾಸ್ತವದಲ್ಲಿ ವೆಚ್ಚದ ಬಾಬ್ತು ಹೆಚ್ಚಾಗಿರುವುದರಿಂದ ಆದಾಯ ಹೆಚ್ಚಿಸುವ ಪ್ರಯತ್ನಗಳು ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗುತ್ತದೆ.

ಒಟ್ಟಿನಲ್ಲಿ ಹೇಳುವುದಾದರೆ, ನಿರ್ಮಲಾ ಸೀತಾರಾಮನ್‌ ಅವರು ಕೆಲವು ಕ್ಷೇತ್ರಗಳಲ್ಲಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿ ಕುಸಿಯುತ್ತಿರುವ ಆರ್ಥಿಕತೆಯ ಗೋಡೆಗೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ವಿವಿಧ ಭಾಷೆಗಳಲ್ಲಿನ ಕೆಲವು ಮಹಾತ್ಮರ ಸಾಲುಗಳನ್ನು ಉದ್ಧರಿಸುವ ಮೂಲಕ ಸಾಹಿತ್ಯದಲ್ಲಿ ತಾನು ಎಷ್ಟು ಹಿಡಿತ ಹೊಂದಿದ್ದೇನೆ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದರೂ, ಬಜೆಟ್‌ಗೂ ಅವರಾಡಿದ ವಾಕ್ಯಗಳಿಗೂ ಹೆಚ್ಚು ಪ್ರಸ್ತುತತೆ ಕಂಡು ಬರಲಿಲ್ಲ.

ಹಿಂದಿನ ಬಜೆಟ್‌ ಮತ್ತು ಪರಿಷ್ಕೃತ ಅಂದಾಜಿನ ಹಿನ್ನೆಲೆಯಲ್ಲಿ ನೋಡಿದಾಗ ವಿತ್ತೀಯ ಗುರಿ ಕಳಪೆ ಎಂದೇ ಹೇಳಬಹುದು. ವಿತ್ತ ಸಚಿವರು ನುಡಿದಿರುವ ಬೆಳವಣಿಗೆಯ ಭವಿಷ್ಯ ದಿಟವಾಗುವುದೇ ಕಾದು ನೋಡಬೇಕು.

- ಆರ್‌.ಎಸ್‌. ದೇಶಪಾಂಡೆ, ಐಸೆಕ್‌ ಮಾಜಿ ನಿರ್ದೇಶಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT