ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣಿಸದ ಸಮಗ್ರ ಪ್ರಗತಿಯ ಚಿತ್ರಣ

ಹೂಡಿಕೆಗೆ ಕಾಡುತ್ತಿದೆ ವಿಶ್ವಾಸದ ಕೊರತೆ
Last Updated 1 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ದೇಶದ ಆರ್ಥಿಕ ಪ್ರಗತಿ ದರ ಶೇ 4.8ಕ್ಕೆ ಕುಸಿಯಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಎಚ್ಚರಿಸಿದೆ. ಮತ್ತೊಂದೆಡೆ ಜಿಡಿಪಿಯ ಶೇ 6ರಿಂದ ಶೇ 6.5ರವರೆಗೆ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಈ ಆಶಾವಾದದ ಬೆಳಕಲ್ಲೇ ನಿರ್ಮಲಾ ಸೀತಾರಾಮನ್‌ಮಂಡಿಸಿರುವ ಬಜೆಟ್‌ನಲ್ಲಿ ಅದಕ್ಕೆ ತಕ್ಕಂತಹ ನೀಲನಕಾಶೆ ಮಾತ್ರ ಸ್ಪಷ್ಟವಾಗುತ್ತಿಲ್ಲ.

ಬೇಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಹಳ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಪ್ರಧಾನಿ ಅವರ ಕನಸಿನಂತೆ 2025ರ ವೇಳೆಗೆ 5 ಟ್ರಿಲಿಯನ್‌ ಡಾಲರ್ ಆರ್ಥಿಕತೆಯನ್ನು ತಲುಪಲು ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ವಾಣಿಜ್ಯ, ಕೈಗಾರಿಕೆ ಮತ್ತು ಮೂಲಸೌಲಭ್ಯಗಳೆಂಬ ಎರಡನೇ‘ಆರ್ಥಿಕ ಅಭಿವೃದ್ಧಿ’ಯ ಆಧಾರಸ್ತಂಭದ ಮೇಲೆ ಆರ್ಥಿಕತೆಯನ್ನು ಕಟ್ಟಿ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ.

ಕಳೆದ ಬಾರಿ ಮಂಡಿಸಿದ ಬಜೆಟ್‌ನಂತೆಯೇ ಸಚಿವರು ಈ ಬಾರಿ ಸಹ ದೇಶದ ಮೂಲಸೌಲಭ್ಯ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಪ್ರಕಟಿಸಿದ್ದಾರೆ. 27 ಸಾವಿರ ಕಿ.ಮೀ.ಉದ್ದಕ್ಕೆ ರಾಷ್ಟ್ರೀಯ ಅನಿಲ ಗ್ರಿಡ್‌ ವಿಸ್ತರಣೆ, ₹ 103 ಲಕ್ಷ ಕೋಟಿ ವೆಚ್ಚದ ರಾಷ್ಟ್ರೀಯ ಮೂಲಸೌಲಭ್ಯ ಯೋಜನೆಗಳನ್ನು ಘೋಷಿಸಿದ್ದಾರೆ. ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ, ₹ 18,600 ಕೋಟಿ ವೆಚ್ಚದ ಬೆಂಗಳೂರು ಉಪನಗರ ರೈಲು ಯೋಜನೆ, ಉಡಾನ್‌ ಯೋಜನೆಗೆ ಪೂರಕವಾಗಿ 2024ರ ವೇಳಗೆ ಇನ್ನೂ 100 ವಿಮಾನನಿಲ್ದಾಣಗಳ ಅಭಿವೃದ್ಧಿ, ವಿದ್ಯುತ್‌ ಮತ್ತು ಬರಿದಾಗದ ಇಂಧನ ಕ್ಷೇತ್ರಕ್ಕೆ ₹ 22 ಸಾವಿರ ಕೋಟಿ, 2021ರಲ್ಲಿ ಸಾರಿಗೆ ಮೂಲಸೌಲಭ್ಯಕ್ಕಾಗಿ 1.70 ಲಕ್ಷ ಕೋಟಿ ಒದಗಿಸುವ ಬಜೆಟ್ ಪ್ರಸ್ತಾಪಗಳು ಪ್ರಮುಖವಾದವುಗಳು. ಮೂಲಸೌಲಭ್ಯ ಮತ್ತು ಇತರ ಯೋಜನೆಗಳಲ್ಲಿ ವಿಸ್ತರಣಾ ಕಾರ್ಯಗಳು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ಬಂದರೆಆರ್ಥಿಕತೆಯ ಮೇಲೆ ಒಳ್ಳೆಯ ಪರಿಣಾಮ ಬೀಳುವುದು ನಿಶ್ಚಿತ.ಆದರೆ ಖಾಸಗಿ ಹೂಡಿಕೆಯನ್ನು ಇನ್ನಷ್ಟು ಉತ್ತೇಜಿಸುವುದಕ್ಕೆ ಅಗತ್ಯವಾದ ಆತ್ಮವಿಶ್ವಾಸದ ಕೊರತೆ ಮಾತ್ರ ಎದ್ದು ಕಾಣಿಸುತ್ತಿದೆ. ಮೂಲಸೌಲಭ್ಯ ಸುಧಾರಣೆ ವಿಚಾರದಲ್ಲಿ ಕರ್ನಾಟಕ ಅದರಲ್ಲೂ ಮುಖ್ಯವಾಗಿ ಬೆಂಗಳೂರು ಬಜೆಟ್‌ನ ವಿಶೇಷ ಮನ್ನಣೆಗೆ ಪಾತ್ರವಾಗಿರುವುದು ವಿಶೇಷ.

ಲಾಭಾಂಶ ವಿತರಣಾ ತೆರಿಗೆ ನಿರ್ಮೂಲನೆ, ಸ್ಟಾರ್ಟ್‌ಅಪ್‌ಗಳ ಸ್ಥಾಪನೆಗೆ ಉತ್ತೇಜನ, ಹೂಡಿಕೆಗೆ ಉತ್ತೇಜನ ನೀಡುವ ಘಟಕ ಸ್ಥಾಪನೆ, ಆಮದು ತಗ್ಗಿಸಲಿಕ್ಕಾಗಿ ನಾಲ್ಕು ವರ್ಷಗಳಲ್ಲಿ ₹ 1,480 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್‌ ಸ್ಥಾಪನೆ ಹಾಗೂ 2021ರಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದ ಉತ್ತೇಜನಕ್ಕಾಗಿ ₹ 27,300 ಕೋಟಿ ಒದಗಿಸಿರುವುದು ಪ್ರಮುಖ ಅಂಶಗಳು. ಆದರೆ ಇಷ್ಟು ದೊಡ್ಡ ಮೊತ್ತವನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಸ್ಪಷ್ಟತೆ ಇಲ್ಲ. ಕಂಪನಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪ ಮಾಡಿದ್ದರೂ, ಅದದ ವಿವರ ಇಲ್ಲ. ದೇಶದಲ್ಲಿ ವ್ಯವಹಾರ ಸುಲಲಿತಗೊಳಿಸುವುದಕ್ಕೆ ಒಂದಿಷ್ಟು ಗಮನ ಹರಿಸಿರುವುದು ಸಮಾಧಾನಕರ ಅಂಶ.

ಪ್ರತಿ ಜಿಲ್ಲೆಯೂ ರಫ್ತು ವಲಯವಾಗಬೇಕು ಎಂದು ಹಣಕಾಸು ಸಚಿವರು ಹೇಳಿದ್ದಾರೆ, ಆದರೆ ಹೇಗೆ ಎಂಬುದನ್ನು ಅವರು ವಿವರಿಸಿಲ್ಲ. ರಫ್ತು ಉತ್ತೇಜನದ ಕ್ಷೇತ್ರ ಅಥವಾ ಯಾವುದೇ ಉತ್ಪನ್ನದ ಬಗ್ಗೆ ಉಲ್ಲೇಖಿಸದ ಸಚಿವರು, ಸ್ಪಷ್ಟವಾದ ಮಾರ್ಗಸೂಚಿಯನ್ನೂ ನೀಡಿಲ್ಲ.

ಇಷ್ಟೆಲ್ಲ ಆಶಾವಾದದ ನಡುವೆಯೂ ಸಮಗ್ರ ಪ್ರಗತಿಯ ಚಿತ್ರಣವನ್ನು ಒದಗಿಸದೆ ಇರುವುದು ಈ ಬಜೆಟ್‌ನ ದೊಡ್ಡ ಕೊರತೆ. ಹೂಡಿಕೆದಾರರ ಆತಂಕವನ್ನು ದೂರ ಮಾಡುವ ಪ್ರಯತ್ನ ಅಷ್ಟಾಗಿ ನಡೆದಿಲ್ಲ. ‘ಭಾರತದ ಆಶೋತ್ತರಗಳು’ ಎಂಬ ಶೀರ್ಷಿಕೆಯಡಿಯಲ್ಲಿ ಯುವಜನತೆಗೆ ಉದ್ಯೋಗ ದೊರಕಿಸುವ ಕ್ಷೇತ್ರದಲ್ಲಿಕೆಲವು ಕ್ರಮಗಳನ್ನು ಪ್ರಕಟಿಸಿದ್ದರೂ, ಬೇಡಿಕೆಯ ಕ್ಷೇತ್ರದಲ್ಲೂ ಇಂತಹದೇ ಪ್ರಯತ್ನ ಕಾಣಿಸುತ್ತಿಲ್ಲ. ಪ್ರಸ್ತುತ ಜಾಗತೀಕರಣ ಮತ್ತು ಖಾಸಗೀಕರಣದಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ನೀಡಿರುವ ಮಹತ್ವ ತೀರಾ ಕಡಿಮೆ ಎಂದೇ ಕಾಣಿಸುತ್ತಿದೆ. ಆದರೆ ಉದ್ಯಮಿಗಳನ್ನು ಉತ್ತೇಜಿಸುವ ವಾತಾವರಣ ನಿರ್ಮಿಸುವಲ್ಲಿ ಒಂದಿಷ್ಟು ಪ್ರಯತ್ನ ನಡೆದಿದೆ, ಇದರ ಫಲವಾಗಿ ಉದ್ಯೋಗ ಸೃಷ್ಟಿಯಾಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಖಂಡಿತವಾಗಿಯೂ ಆರ್ಥಿಕತೆಯ ಮೂಲ ಸಮಸ್ಯೆ ಇರುವುದೇ ಇಲ್ಲಿ ಎಂಬುದು ಸ್ಪಷ್ಟ.

–ಡಾ.ಮಾಲಿನಿ ಎಲ್‌.ತಂತ್ರಿ

(ಲೇಖಕರು ಬೆಂಗಳೂರಿನ ಇನ್‌ಸ್ಟಿಟ್ಯೂಟ್‌ ಫಾರ್‌ ಸೋಷಿಯಲ್ ಆ್ಯಂಡ್ ಎಕನಾಮಿಕ್‌ ಚೇಂಜ್‌ನ ಆರ್ಥಿಕ ತಜ್ಞರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT