ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Union Budget 2021: ತಮಗಿಷ್ಟದ ಎಸ್ಕಾಂ ಆಯ್ಕೆಗೆ ಗ್ರಾಹಕರಿಗೆ ಅವಕಾಶ

Last Updated 1 ಫೆಬ್ರುವರಿ 2021, 19:51 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಹಕರು ತಮಗೆ ಇಷ್ಟವಾದ ವಿದ್ಯುತ್‌ ವಿತರಣಾ ಕಂಪನಿಯನ್ನು (ಎಸ್ಕಾಂ) ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಯೋಜನೆಯನ್ನು ಆರಂಭಿಸುವುದಾಗಿ ಹಣಕಾಸು ಸಚಿವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ವಿದ್ಯುತ್‌ ವಿತರಣಾ ಕ್ಷೇತ್ರದಲ್ಲಿ ಏಕಸ್ವಾಮ್ಯ ತಪ್ಪಿಸುವುದು ಹಾಗೂ ಗ್ರಾಹಕರಿಗೆ ನಿರಂತರ ವಿದ್ಯುತ್‌ ಪೂರೈಕೆ ನೀಡುವುದಕ್ಕೆ ಆದ್ಯತೆ ನೀಡಲಾಗುವುದು. ಇದರಿಂದ ಗ್ರಾಹಕರು ತಮಗೆ ಇಷ್ಟವಾದ ಎಸ್ಕಾಂ ಅನ್ನು ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುವುದು ಎಂದು ಅವರು ಪ್ರತಿಪಾದಿಸಿದರು.

ದೇಶದ ಅನೇಕ ರಾಜ್ಯಗಳಲ್ಲಿ ಎಸ್ಕಾಂಗಳು ಅಸ್ತಿತ್ವದಲ್ಲಿದ್ದು, ಅವುಗಳು ರಾಜ್ಯ ಸರ್ಕಾರಗಳ ಒಡೆತನದಲ್ಲಿವೆ. ‌ಅನೇಕ ಕಂಪನಿಗಳು ಹಣಕಾಸು ಬಿಕ್ಕಟ್ಟು ಇಲ್ಲವೇ ನಷ್ಟದಲ್ಲಿವೆ. ಹೀಗಾಗಿ ಅವುಗಳಿಂದ ನಿರಂತರ ವಿದ್ಯುತ್‌ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮುಂದಿನ ಐದು ವರ್ಷಗಳಲ್ಲಿ ವಿದ್ಯುತ್‌ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರಲು ಇದು ಸಹಕಾರಿಯಾಗಲಿದೆ. ಹೈಡ್ರೋಜನ್‌ (ಜಲ ವಿದ್ಯುತ್‌) ಇಂಧನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ₹3 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಅವರು ಘೋಷಿಸಿದರು. ಇದಕ್ಕಾಗಿ ರಾಷ್ಟ್ರೀಯ ಹೈಡ್ರೋಜನ್‌ ಮಿಷನ್‌ ಯೋಜನೆ ಪ್ರಕಟಿಸಿದರು.

ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ ನೀಡಲಾಗಿದೆ. ಸೌರ ವಿದ್ಯುತ್‌ ವಿತರಣೆಯಲ್ಲೂ ಸುಧಾರಣೆ ತರಲು ಆದ್ಯತೆ ನೀಡಲಾಗಿದ್ದು, ಇದಕ್ಕಾಗಿ ₹2,369 ಸಾವಿರ ಕೋಟಿ ಮೀಸಲಿಡಲಾಗಿದೆ. ಸೌರ ಶಕ್ತಿ ಉತ್ಪಾದನೆಯನ್ನು ಉತ್ತೇಜಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು.

ಪ್ಲಾಸ್ಟಿಕ್‌ ನಿಯಂತ್ರಣಕ್ಕೆ ಒತ್ತು: ಸ್ವಚ್ಛ ಭಾರತ್‌ ಯೋಜನೆಯಡಿ ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಲು ಸೋಮವಾರ ಮಂಡಿಸಿದ ಕೇಂದ್ರದ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. 2022ಕ್ಕೆ ಭಾರತವು ಸ್ವತಂತ್ರಗೊಂಡು 75 ವರ್ಷಗಳು ಆಗುತ್ತಿರುವುದರಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕೊಳೆಗೇರಿಗಳಲ್ಲಿ ಮಾಲಿನ್ಯ ನಿಯಂತ್ರಿಸಲು, ತ್ಯಾಜ್ಯ ನೀರಿನ ಸಂಸ್ಕರಣೆ, ಹಸಿ ಮತ್ತು ಒಣ ಕಸದ ವಿಭಜನೆ, ಏಕ-ಬಳಕೆಯ ಪ್ಲಾಸ್ಟಿಕ್ ಕಡಿತ, ವಾಯುಮಾಲಿನ್ಯವನ್ನು ಕಡಿಮೆ ಮಾಡುವುದರ ಮೂಲಕ ನಿರ್ಮಾಣ ಮತ್ತು ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಉದ್ದೇಶಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT