ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌ 2023: ಇವರು ಹಿಗಂದರು...

Last Updated 1 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಕೌಶಲ ಅಭಿವೃದ್ಧಿಗೆ ಒತ್ತು

ಶಿಕ್ಷಣ, ಯುವಜನರಿಗೆ ಉದ್ಯೋಗ ಮತ್ತು ಕೌಶಲಾಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಡಿಜಿಟಲ್ ಪರಿಸರ ವ್ಯವಸ್ಥೆಯಿಂದ ಆನ್‌ಲೈನ್ ತರಬೇತಿ ಮೂಲಕ ನಾಗರಿಕರ ಕೌಶಲ ಹೆಚ್ಚಿಸಲು ಉದ್ದೇಶಿಸಲಾಗಿದೆ. ಪಿಎಂ ಇ-ವಿದ್ಯಾದ ‘ಒಂದು ತರಗತಿ ಒಂದು ಟಿವಿ ಚಾನೆಲ್’ ಕಾರ್ಯಕ್ರಮವನ್ನು 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸುವುದು ಉತ್ತಮ ನಿರ್ಣಯ. ಡಿಜಿಟಲ್ ಶಿಕ್ಷಣದ ಮೂಲಕ ಉತ್ತಮ ಗುಣಮಟ್ಟದ ಇ-ಕಂಟೆಂಟ್ ಅಭಿವೃದ್ಧಿ ಮತ್ತು ಸಾರ್ವತ್ರಿಕ ಶಿಕ್ಷಣಕ್ಕಾಗಿ ಡಿಜಿಟಲ್ ವಿಶ್ವವಿದ್ಯಾಲಯದ ಸ್ಥಾಪನೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಸಾಧ್ಯವಾಗಲಿದೆ.
- ಸುಮಾ ಟಿ.ಹೊಸಮನಿ, ಅರ್ಥಶಾಸ್ತ್ರದ ಉಪನ್ಯಾಸಕಿ, ಮಾನ್ವಿ

***

ಕೃಷಿ ಕ್ಷೇತ್ರ ವಿರೋಧಿ ಬಜೆಟ್‌

ಕೇಂದ್ರ ಬಜೆಟ್‌ ಕೃಷಿ ವಿರೋಧಿಯಾಗಿದ್ದು, ಕಾರ್ಪೊರೇಟ್‌ ಶಕ್ತಿಗಳ ಪರವಾಗಿದೆ. ಕೃತಕ ಬುದ್ಧಿಮತ್ತೆಯನ್ನು ಕೃಷಿ ಕ್ಷೇತ್ರಕ್ಕೆ ಅಳವಡಿಸುವುದರಿಂದ ಅನಾಹುತಗಳಾಗುತ್ತವೆ. ಈ ತಂತ್ರಜ್ಞಾನದಿಂದ ಈಗಾಗಲೇ ಹತ್ತಿ ಬೆಳೆಗಾರರಿಗೆ ತೊಂದರೆಯಾಗಿದೆ. ಹಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರಿಗೆ ಅನುಕೂಲ ಕಲ್ಪಿಸುವ ದೂರದೃಷ್ಟಿಯ ಯೋಜನೆಗಳೇ ಇಲ್ಲ. ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರಿಗೆ ಪ್ರಯೋಜನವಿಲ್ಲದ ಬಜೆಟ್‌. ಕೃಷಿ ಕ್ಷೇತ್ರಕ್ಕೆ ₹ 20 ಲಕ್ಷ ಕೋಟಿ ಸಾಲ ‌ಏನೇನೂ ಸಾಲದು. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು.

–ಬಡಗಲಪುರ ನಾಗೇಂದ್ರ, ರಾಜ್ಯ ರೈತ ಸಂಘದ ಅಧ್ಯಕ್ಷ

***

ಬಂಡವಾಳಶಾಹಿಗಳಿಗೆ ಉತ್ತೇಜನ

ಮತ್ಸ್ಯ ಸಂಪದ ಯೋಜನೆ ಅಡಿ ಸಾಗರ ಉತ್ಪನ್ನ ಆಹಾರ, ಮೀನು ಮಾರುಕಟ್ಟೆ ವಿಸ್ತರಣೆಗೆ ₹6 ಸಾವಿರ ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಆದರೆ ಕೇಂದ್ರ ಸರ್ಕಾರದ ದೃಷ್ಟಿಕೋನ ಕೇವಲ ಬಂಡವಾಳಶಾಹಿಗಳಿಗೆ ಉತ್ತೇಜನ ನೀಡುವುದೇ ಆಗಿದೆ. ಮತ್ಸ್ಯ ಸಂಪದ ಯೋಜನೆ ಸಾಂಪ್ರದಾಯಿಕ ಮೀನುಗಾರರಿಗೆ ಅನುಕೂಲ ಒದಗಿಸದೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡುವ ಉದ್ಯಮಿಗಳಿಗೆ ಮಾತ್ರ ಅನುಕೂಲ ಕಲ್ಪಿಸಿದ್ದನ್ನು ಈಗಾಗಲೇ ನೋಡಿದ್ದೇವೆ. ಈಗಲೂ ಅದೇ ಸ್ಥಿತಿ ಮುಂದುವರಿಯಲಿದೆ.

- ರಾಜು ತಾಂಡೇಲ, ಅಧ್ಯಕ್ಷ, ಉತ್ತರ ಕನ್ನಡ ಜಿಲ್ಲೆ ಮೀನು ಮಾರಾಟಗಾರರ ಸಹಕಾರ ಫೆಡರೇಷನ್

***

‘ಅಭಿವೃದ್ಧಿ, ಸುಸ್ಥಿರತೆಯತ್ತ ಗಮನ ಹರಿಸಿದ ಬಜೆಟ್‌’

ಅಭಿವೃದ್ಧಿ, ಸುಸ್ಥಿರತೆ ಹಾಗೂ ಉದ್ಯೋಗ ಸೃಷ್ಟಿಯತ್ತ ಗಮನ ಹರಿಸಿರುವ ಅಭಿವೃದ್ಧಿಪರ ಬಜೆಟ್‌ ಇದು. ₹ 10 ಲಕ್ಷ ಕೋಟಿ ಬಂಡವಾಳ ವೆಚ್ಚ ಸಾರ್ವಕಾಲಿಕ ಗರಿಷ್ಠವಾದುದು. ಸರ್ಕಾರ ಜನಪ್ರಿಯ ಕಾರ್ಯಕ್ರಮಗಳಿಗೆ ಹೋಗದೆಯೇ, ನವೋದ್ಯಮ, ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ, ಪ್ರವಾಸೋದ್ಯಮಕ್ಕೆ, ಹಸಿರು ಇಂಧನಕ್ಕೆ, ಯುವಶಕ್ತಿಗೆ ಮತ್ತು ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹಕ ಕ್ರಮಗಳನ್ನು ಪ್ರಕಟಿಸಿದೆ. ಉದ್ದಿಮೆ ವಹಿವಾಟುಗಳನ್ನು ಸುಲಭಗೊಳಿಸುವುದನ್ನು ಉತ್ತೇಜಿಸಲು ಆರಂಭಿಸಿರುವ ಕಾರ್ಯಕ್ರಮಗಳು ಸ್ವಾಗತಾರ್ಹ.

ಎಂ.ಗಣೇಶ್‌ ಕಾಮತ್‌, ಅಧ್ಯಕ್ಷ, ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ

***

ಎಂಎಸ್‌ಎಂಇಗಳಿಗೆ ಸಾಲ ಖಾತರಿ ಯೋಜನೆ ನವೀಕರಿಸಿರುವುದು ಸ್ವಾಗತಾರ್ಹ. ಆದರೆ, ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವ ಉದ್ಯಮಕ್ಕೆ ಇನ್ನೂ ಹೆಚ್ಚಿನ ನೆರವಿನ ಅಗತ್ಯ ಇದೆ. ಬಂಡವಾಳ ಕೊರತೆಯಿಂದ ಬಳಲುತ್ತಿರುವ ಉದ್ಯಮಕ್ಕೆ ಕೈಗೆಟಕುವ ದರದಲ್ಲಿ ಮೇಲಾಧಾರ ರಹಿತ ಸಾಲ ಪಡೆಯಲು ಅವಕಾಶ ಕಲ್ಪಿಸಬಹುದಿತ್ತು. ಎಂಎಸ್‌ಎಂಇಗಳಿಗೆ ಡಿಜಿ ಲಾಕರ್‌ ವ್ಯವಸ್ಥೆಯ ವಿಸ್ತರಣೆ ಮತ್ತು 42 ಕಾನೂನುಗಳಿಗೆ ತಿದ್ದುಪಡಿ ಮಾಡುವ ಜನ್‌ ವಿಶ್ವಾಸ್‌ ಮಸೂದೆಯ ಪ್ರಸ್ತಾವವು ಉದ್ಯಮಕ್ಕೆ ಅನುಕೂಲ ಮಾಡಿಕೊಡಲಿದೆ
–ಕೆ.ಎನ್‌. ನರಸಿಂಹಮೂರ್ತಿ, ಕಾಸಿಯಾ ಅಧ್ಯಕ್ಷ

***

ಸಿರಿಧಾನ್ಯ ಆಧಾರಿತ ಉತ್ಪನ್ನಗಳಿಗೆ ಸರ್ಕಾರ ಬೆಂಬಲ ನೀಡಿದೆ. ಆದರ ಜೊತೆಗೆ ಸಿರಿಧಾನ್ಯ ಆಧಾರಿತ ಉತ್ಪನ್ನಗಳಿಗೆ ಸಂಬಂಧಿಸಿದ ಪೂರಕ ಕೈಗಾರಿಕೆಗಳನ್ನೂ ಬೆಂಬಲಿಸಬೇಕು. ರಾಜ್ಯ ರಾಜಧಾನಿ ಅಥವಾ ಪ್ರವಾಸಿ ತಾಣದಲ್ಲಿ ಏಕತಾ ಮಾಲ್ ಸ್ಥಾಪನೆ, ಗಡಿ ಗ್ರಾಮಗಳಲ್ಲಿ ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಬೆಂಬಲ ಸಿಗಲಿದೆ. ವ್ಯಾಪಾರ ನಡೆಸುವುದನ್ನು ಇನ್ನಷ್ಟು ಸುಲಭಗೊಳಿಸಲು ಕೆಲವೊಂದು ಅಂಗೀಕಾರಗಳನ್ನು ತೆಗೆದುಹಾಕುತ್ತಿರುವುದು ಉತ್ತಮ ಕ್ರಮ
–ಬಿ.ವಿ. ಗೋಪಾಲ್‌ ರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷ

***

ಬಂಡವಾಳ ವೆಚ್ಚ ಹೆಚ್ಚು ಮಾಡಿರುವುದು ಅರ್ಥ ವ್ಯವಸ್ಥೆಯಲ್ಲಿ ಬೆಳವಣಿಗೆಗೆ ಇಂಬು ಕೊಡಲಿದೆ. ಇದರಿಂದ ಆಟೊಮೊಬೈಲ್ ಉದ್ಯಮದ ಮೇಲೆ ಒಳ್ಳೆಯ ಪರಿಣಾಮ ಆಗಲಿದೆ. ವೈಯಕ್ತಿಕ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿ ಜನರ ಕೈಯಲ್ಲಿ ಇನ್ನಷ್ಟು ಹಣ ಇರುವಂತೆ ಮಾಡಿರುವುದರ ಪರಿಣಾಮವಾಗಿ ಮಾರುಕಟ್ಟಿಯಲ್ಲಿ ಖರೀದಿ ಹೆಚ್ಚಲಿದೆ, ಬೇಡಿಕೆಯೂ ಹೆಚ್ಚಾಗಲಿದೆ.
–ವಿನೋದ್ ಅಗರ್ವಾಲ್, ಅಧ್ಯಕ್ಷ, ಭಾರತೀಯ ಆಟೊಮೊಬೈಲ್‌ ತಯಾರಕರ ಸಂಘ

***

ಇದು ಪ್ರಗತಿಪರ ಹಾಗೂ ಬೆಳವಣಿಗೆ ಆಧಾರಿತ ಬಜೆಟ್. ರೈತರು, ಯುವಕರು, ಮಹಿಳೆಯರು ಮತ್ತು ತಳವರ್ಗದ ಜನರಲ್ಲಿ ಪರಿವರ್ತನೆ ತರುವಂತೆ ಇದೆ ಈ ಬಜೆಟ್. ಕೃಷಿ ವಲಯದಲ್ಲಿ ನವೋದ್ಯಮಗಳಿಗೆ ಉತ್ತೇಜನ, ಕೃಷಿಗೆ ಸಾಲ ನೀಡುವ ಗುರಿಯನ್ನು ಹೆಚ್ಚಿಸಿರುವುದು ಗ್ರಾಮೀಣ ಅರ್ಥ ವ್ಯವಸ್ಥೆಗೆ ಪೂರಕವಾಗಿವೆ. ಬಂಡವಾಳ ವೆಚ್ಚ ಏರಿಕೆ, ಭೌತಿಕ, ಡಿಜಿಟಲ್ ಹಾಗೂ ಸಾಮಾಜಿಕ ಮೂಲಸೌಕರ್ಯಕ್ಕೆ ಹೆಚ್ಚಿನ ಗಮನ, ಪ್ರವಾಸೋದ್ಯಮಕ್ಕೆ ಒತ್ತು... ಇವೆಲ್ಲ ವಿಕಾಸ ಹೊಂದಿದ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡಲಿವೆ.
–ಸಂಜೀವ್ ಪುರಿ, ಅಧ್ಯಕ್ಷ, ಐಟಿಸಿ ಲಿಮಿಟೆಡ್

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT