ಗುರುವಾರ , ಫೆಬ್ರವರಿ 20, 2020
26 °C

ಬಜೆಟ್‌ 2020: ರಕ್ಷಣಾ ಕ್ಷೇತ್ರಕ್ಕೆ ಸಾಕಾಗ್ತಿಲ್ಲ ಅನುದಾನ, ದೇಶದ ಭದ್ರತೆಗೇ ಆತಂಕ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

Defence sector of India

ಕೇಂದ್ರ ಬಜೆಟ್‌ಗೆ ದಿನಗಣನೆ ಆರಂಭವಾಗಿದ್ದು, ರಕ್ಷಣಾ ಕ್ಷೇತ್ರಕ್ಕೆ ಮೋದಿ ಸರ್ಕಾರ ಅನುದಾನ ಹೆಚ್ಚಿಸಲಿದೆಯೇ ಎಂಬ ಕುತೂಹಲ ಗರಿಗೆದರಿದೆ. ದೇಶದ ಇತಿಹಾಸದಲ್ಲೇ ಅತಿ ಹೆಚ್ಚು, ಅಂದರೆ ₹3 ಲಕ್ಷ ಕೋಟಿ ಅನುದಾನವನ್ನು 2019ರ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಘೋಷಿಸಲಾಗಿತ್ತು. ಆದರೂ ಆ ಕ್ಷೇತ್ರಕ್ಕೆ ಅನುದಾನ ಸಾಕಾಗುತ್ತಿಲ್ಲ. ಈ ಕುರಿತು ಭಾರತೀಯ ಸೇನೆಯ ಮೂರೂ ಪಡೆಗಳ ಮುಖ್ಯಸ್ಥರೂ ಹಲವು ಬಾರಿ ಪ್ರಸ್ತಾಪಿಸಿದ್ದಿದೆ.

ನಮಗಿಂತಲೂ ಮುಂದಿವೆ ಚೀನಾ, ಪಾಕಿಸ್ತಾನ: ಕಳೆದ ವರ್ಷದ ಮಧ್ಯಂತರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ₹3 ಲಕ್ಷ ಕೋಟಿ ಅನುದಾನ ನೀಡಿದ್ದರೂ ನೆರೆಯ ಪಾಕಿಸ್ತಾನ ಮತ್ತು ಚೀನಾಗೆ ಹೋಲಿಸಿದರೆ ಅದು ಕಡಿಮೆಯೇ. ಭಾರತದ ರಕ್ಷಣಾ ಅನುದಾನ ದೇಶದ ಜಿಡಿಪಿಯ ಶೇ 2ಕ್ಕಿಂತಲೂ ಕಡಿಮೆ ಇದೆ. ಆದರೆ ಪಾಕಿಸ್ತಾನವು ಜಿಡಿಪಿಯ ಶೇ 3.5 ಮತ್ತು ಚೀನಾವು ಜಿಡಿಪಿಯ ಶೇ 3ರರಷ್ಟನ್ನು ರಕ್ಷಣಾ ಕ್ಷೇತ್ರಕ್ಕೆ ಅನುದಾನ ನೀಡುತ್ತಿವೆ. ಭಾರತದಲ್ಲಿ 1,000 ಮಂದಿಗೆ ಒಬ್ಬನಂತೆ ಯೋಧರಿದ್ದರೆ ಪಾಕಿಸ್ತಾನದಲ್ಲಿ 4.25 ಮತ್ತು ಚೀನಾದಲ್ಲಿ 2.23ರಂತೆ ಇದ್ದಾರೆ.

ಅನುದಾನ ಹೆಚ್ಚಳಕ್ಕೆ ನೌಕಾಪಡೆ ಬೇಡಿಕೆ: ಒಟ್ಟಾರೆಯಾಗಿ ರಕ್ಷಣಾ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನದಲ್ಲಿ ನೌಕಾಪಡೆಗೆ ದೊರೆಯುತ್ತಿರುವ ಪ್ರಮಾಣ ಬಹಳ ಕಡಿಮೆ ಇದೆ. ಬಹು ವಿಸ್ತಾರವಾದ ಸಾಗರ ಗಡಿ ಹೊಂದಿರುವ ಭಾರತದ ಪಾಲಿಗೆ ನೌಕಾಪಡೆಯ ಬಲವೃದ್ಧಿ ಅಗತ್ಯ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪೂರಕವಾಗಿ, ‘ದೇಶದ ಬಜೆಟ್‌ನಲ್ಲಿ ರಕ್ಷಣೆಗೆ ವಿನಿಯೋಗಿಸುತ್ತಿರುವ ಮೊತ್ತದಲ್ಲಿ ನೌಕಾಪಡೆಯ ಪಾಲು ಪ್ರತಿ ವರ್ಷ ಕಡಿಮೆಯಾಗುತ್ತಿದೆ. ಆದರೆ, ಚೀನಾ ತನ್ನ ನೌಕಾಪಡೆಯ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ. ನಮಗೆ ನೀಡುತ್ತಿರುವ ಅನುದಾನ ಸಾಲುತ್ತಿಲ್ಲ’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. 2012–13ನೇ ಸಾಲಿನಲ್ಲಿ ರಕ್ಷಣೆಗೆ ಮೀಸಲಿರಿಸಿದ್ದ ಅನುದಾನದಲ್ಲಿ ನೌಕಾಪಡೆಗೆ ಶೇ 18ರಷ್ಟು ದೊರೆತಿದ್ದರೆ, 2019–20ನೇ ಸಾಲಿನಲ್ಲಿ ಈ ಪ್ರಮಾಣ ಶೇ 13ಕ್ಕೆ ಇಳಿಕೆಯಾಗಿರುವುದು ಗಮನಾರ್ಹ.

ಅನುದಾನ ಕಡಿಮೆಯಾಗಿರುವುದರಿಂದ 2027ರ ವೇಳೆಗೆ 200 ಯುದ್ಧ ನೌಕೆಗಳನ್ನು ಹೊಂದುವ ಗುರಿ ನಿಗದಿಪಡಿಸಿರುವ ನೌಕಾಪಡೆಗೆ ಅದು ಸವಾಲಾಗಿ ಪರಿಣಮಿಸಿದೆ. ಗುರಿಯನ್ನೇ ಪರಿಷ್ಕರಿಸಬೇಕಾಗಿ ಬಂದಿದ್ದು, 200ರ ಬದಲಿಗೆ 175ರ ಗುರಿ ನಿಗದಿಪಡಿಸಲಾಗಿದೆ. ಸದ್ಯ ನೌಕಾಪಡೆಯ ಬಳಿ ಸುಮಾರು 130 ಯುದ್ಧ ನೌಕೆಗಳಿವೆ.

ದೇಶವು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ಬೆಳವಣಿಗೆಗಳಿಗೆ ಪೂರಕವಾಗಿ, ಒಟ್ಟು 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್‌ಮರೀನ್‌ಗಳು, 16 ಸಾಂಪ್ರದಾಯಿಕ ಸಬ್‌ಮರೀನ್‌ಗಳು, 32 (ದಾಳಿ) ಯುದ್ಧ ನೌಕೆಗಳು, ಸೈನಿಕರನ್ನು ದೂರ ದೇಶಗಳ ತೀರಕ್ಕೆ ಕ್ಷಿಪ್ರಗತಿಯಲ್ಲಿ ಸಾಗಿಸಬಲ್ಲ 4 ಸಾಗಣೆ (ಆಂಫೀಬಿಯಸ್) ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್‌ಗಳು, 12 ಕ್ಷಿಪಣಿ ಉಡಾವಣಾ ನೌಕೆಗಳು, 12 ಮೈನ್‌ (ಸಾಗರದಾಳದ ಬಾಂಬ್) ನಾಶಕ ನೌಕೆಗಳು, 12 ಗಸ್ತು ನೌಕೆಗಳು, 20 ವೇಗವಾಗಿ ಸಂಚರಿಸಬಲ್ಲ ದಾಳಿ ನೌಕೆಗಳು, 12 ಗಸ್ತು ವಿಮಾನಗಳು, ತಲಾ 12ರಿಂದ 24 ಯುದ್ಧ ವಿಮಾನಗಳಿರುವ ನಾಲ್ಕು ವೈಮಾನಿಕ ಯುದ್ಧ ತಂಡಗಳು, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್‌ಗಳು ನೌಕಾದಳದಲ್ಲಿ ಇರಬೇಕು’ ಎಂದು ಕೆಲವು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಆದರೆ ಇವೆಲ್ಲವನ್ನೂ ಹೊಂದಿಸಿಕೊಳ್ಳಲು ಹೆಚ್ಚಿನ ಮೊತ್ತದ ಅನುದಾನ ಅಗತ್ಯವಾಗಿದೆ.

ವಾಯುಪಡೆಗೂ ಬೇಕಿದೆ ಹೆಚ್ಚಿನ ಅನುದಾನ: ಕಳೆದ ವರ್ಷದ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ನೀಡಲಾದ ಅನುದಾನದ ಪೈಕಿ ಶೇ 38ರಷ್ಟು, ಅಂದರೆ, ₹1.03 ಲಕ್ಷ ಕೋಟಿ ಪೈಕಿ ₹39,303 ಮಾತ್ರ ವಾಯುಪಡೆಗೆ ದೊರೆತಿದೆ. ಕಡಿಮೆ ಅನುದಾನದಿಂದಾಗಿ ವಿಶ್ವದ ನಾಲ್ಕನೇ ಅತಿದೊಡ್ಡ ವಾಯುಪಡೆಯಾಗಿರುವ ಭಾರತೀಯ ವಾಯುಪಡೆಗೆ ತನ್ನ ಯುದ್ಧ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. 2002ರಲ್ಲಿ 42 ಸ್ಕ್ವಾಡ್ರನ್‌ಗಳನ್ನು (ಯುದ್ಧವಿಮಾನಗಳ ತಂಡ) ಹೊಂದಿದ್ದ ವಾಯುಪಡೆ ಬಳಿ ಈಗ 28 ಮಾತ್ರವೇ ಇವೆ. 104 ಯುದ್ಧವಿಮಾನಗಳ ಸ್ವಾಧೀನ ಪ್ರಕ್ರಿಯೆ ಇನ್ನೂ ಆರಂಭಿಕ ಹಂತದಲ್ಲಿದೆ. ದೇಶೀಯವಾಗಿ, 83 ಲಘು ಯುದ್ಧವಿಮಾನ ‘ತೇಜಸ್ ಮಾರ್ಕ್‌ 1’ ಖರೀದಿಗೆ ಸಂಬಂಧಿಸಿ ವಾಯುಪಡೆ ಮತ್ತು ಹಿಂದುಸ್ತಾನ್ ಏರೊನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ನಡುವೆ ಮಾತುಕತೆ ಪ್ರಗತಿಯಲ್ಲಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಎಚ್‌ಎಎಲ್ ಬಹಳ ಬೇಗನೆ ಯುದ್ಧವಿಮಾನ ಒದಗಿಸಿಕೊಡಬಹುದು ಎಂದು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಎನ್ನುತ್ತಾರೆ ತಜ್ಞರು.

ಇನ್ನು ಮೊದಲ ರಫೇಲ್‌ ಯುದ್ಧವಿಮಾನವನ್ನು ಭಾರತಕ್ಕೆ ಈಗಾಗಲೇ ಫ್ರಾನ್ಸ್‌ ಹಸ್ತಾಂತರ ಮಾಡಿದ್ದರೂ ಮೊದಲ ಹಂತದ ಹಸ್ತಾಂತರ ಪ್ರಕ್ರಿಯೆ ಈ ವರ್ಷ ಮೇ ತಿಂಗಳಿಗಷ್ಟೇ ಪೂರ್ಣಗೊಳ್ಳಬಹುದು. 36 ರಫೇಲ್ ಯುದ್ಧವಿಮಾನಗಳು ಭಾರತಕ್ಕೆ ಸಿಗುವಾಗ 2022 ಏಪ್ರಿಲ್ ಆಗಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಬಾರಿ ವಾಯುಪಡೆಯೂ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ.

ಭೂಸೇನೆಗೂ ಅನುದಾನ ಕೊರತೆ: ಭೂಸೇನೆಗೂ ಅನುದಾನ ಕೊರತೆಯಾಗಿರುವುದು ರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಪ್ರಕಟಿಸಿರುವ ವರದಿಯಲ್ಲಿ ಇತ್ತೀಚೆಗೆ ಉಲ್ಲೇಖವಾಗಿತ್ತು. ಭೂಸೇನೆಯು 2019–20ನೇ ಸಾಲಿನಲ್ಲಿ ಕೇಳಿದ್ದಕ್ಕಿಂತ ಕಡಿಮೆ ಅನುದಾನವನ್ನು ರಕ್ಷಣಾ ಸಚಿವಾಲಯ ನೀಡಿದೆ. ಭೂಸೇನೆಯ ಅಗತ್ಯಗಳು ಮತ್ತು ರಕ್ಷಣಾ ಸಚಿವಾಲಯದ ನೀತಿಗಳು ತಾಳೆಯಾಗುತ್ತಿಲ್ಲ. ಸೇನೆಯ ಆಧುನೀಕರಣಕ್ಕೆ ಹಿಂದಿನ ಐದು ಹಣಕಾಸು ವರ್ಷಗಳಲ್ಲೂ ಅಗತ್ಯಕ್ಕಿಂತ ಕಡಿಮೆ ಮೊತ್ತವನ್ನು ನೀಡಲಾಗಿದೆ. ಇದರಿಂದ ಭೂಸೇನೆಯ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ತೊಡಕಾಗುತ್ತಿದೆ. ನೌಕಾಪಡೆಯು ಕೇಳಿದ್ದಕ್ಕಿಂತ ₹53,035 ಕೋಟಿ ಮತ್ತು ವಾಯುಪಡೆ ಕೇಳಿದ್ದಕ್ಕಿಂತ ₹23,048 ಕೋಟಿಯಷ್ಟು ಕಡಿಮೆ ಮೊತ್ತವನ್ನು ರಕ್ಷಣಾ ಸಚಿವಾಲಯವು ಹಂಚಿಕೆ ಮಾಡಿದೆ. ದೇಶದ ಭದ್ರತೆ ದೃಷ್ಟಿಯಿಂದ ಇದು ಅಪಾಯಕಾರಿ ಎಂದು ಸಮಿತಿಯು ಕಳವಳ ವ್ಯಕ್ತಪಡಿಸಿತ್ತು. 2019ರ ಡಿಸೆಂಬರ್‌ನಲ್ಲಿ ಲೋಕಸಭೆಗೆ ಸಲ್ಲಿಸಲಾಗಿರುವ ‘ಅನುದಾನಕ್ಕಾಗಿ ಬೇಡಿಕೆ ಕುರಿತ ಪರಿಶೀಲನಾ ವರದಿ’ಯಲ್ಲಿ ಈ ಮಾಹಿತಿ ಇತ್ತು.

ವರದಿಯ ಪ್ರಕಾರ, ಭೂಸೇನೆಯು ₹1.98 ಲಕ್ಷ ಕೋಟಿ ಅನುದಾನಕ್ಕೆ ಬೇಡಿಕೆ ಇಟ್ಟಿದ್ದು, ₹1.68 ಲಕ್ಷ ಕೋಟಿ ಮಾತ್ರ ಹಂಚಿಕೆ ಮಾಡಲಾಗಿತ್ತು. ಇದರೊಂದಿಗೆ ಅನುದಾನದಲ್ಲಿ ₹30,687 ಕೋಟಿ, ಅಂದರೆ ಶೇ 15ರಷ್ಟು ಕಡಿತವಾಗಿತ್ತು. ಭೂಸೇನೆಯ ಒಟ್ಟು ವೆಚ್ಚದಲ್ಲಿ, ಸಿಬ್ಬಂದಿಯ ವೇತನಕ್ಕೆ ಶೇ 62ರಷ್ಟು, ಉಳಿದ ಶೇ 38ರಷ್ಟು ಅನುದಾನವನ್ನು ಕಾರ್ಯನಿರ್ವಹಣೆ, ನಿರ್ವಹಣೆ ಮತ್ತು ಆಧುನೀಕರಣಕ್ಕೆ ವೆಚ್ಚ ಮಾಡಬೇಕು. ಅನುದಾನದಲ್ಲಿ ಕೊರತೆಯಾದರೆ ಸೇನೆಯ ಈ ಎಲ್ಲಾ ಚಟುವಟಿಕೆಗಳಿಗೆ ತೊಡಕಾಗುತ್ತದೆ. ಹೀಗಾಗಿ ಸೇನೆಯ ಅಗತ್ಯಗಳನ್ನು ಬಜೆಟ್‌ನಲ್ಲಿ ಪೂರೈಸಬೇಕು ಎಂದು ಸಮಿತಿಯು ಮನವಿ ಮಾಡಿದೆ.

ಉದ್ಯಮ ಒಕ್ಕೂಟದ ಬೇಡಿಕೆ ಏನು?: ರಕ್ಷಣಾ ಸಲಕರಣೆಗಳನ್ನು ನೇರವಾಗಿ ಆಮದು ಮಾಡಿಕೊಳ್ಳುವುದಕ್ಕಾಗಿ ರಕ್ಷಣಾ ಪಡೆಗಳಿಗೆ ಮತ್ತು ಸಚಿವಾಲಯಕ್ಕೆ ಆಮದು ಸುಂಕ ವಿನಾಯಿತಿ ನೀಡಿರುವ ಬಗ್ಗೆ ಪರಿಶೀಲಿಸಬೇಕು ಎಂದು ಭಾರತೀಯ ಉದ್ಯಮ ಒಕ್ಕೂಟ ಸಲಹೆ ನೀಡಿದೆ. ಸುಂಕ ವಿನಾಯಿತಿಯನ್ನು ಕಳೆದ ಬಜೆಟ್‌ನಲ್ಲಿ ಘೋಷಿಸಿರುವುದರಿಂದ ದೇಶಿ ಉತ್ಪಾದಕರ ಮೇಲೆ ಪರಿಣಾಮವಾಗಿದೆ ಎಂದು ಬಜೆಟ್ ಪೂರ್ವ ಜ್ಞಾಪಕ ಪತ್ರದಲ್ಲಿ ಉದ್ಯಮ ಒಕ್ಕೂಟ ಉಲ್ಲೇಖಿಸಿದೆ. ಸುಂಕ ವಿನಾಯಿತಿಯಿಂದ ಭಾರತದ ಉದ್ಯಮ ಕ್ಷೇತ್ರಕ್ಕೆ ಹೊಡೆತವಾಗುತ್ತಿದೆ ಎಂದೂ ಒಕ್ಕೂಟ ಪ್ರತಿಪಾದಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು