ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಷೇರುಗಳ ಬೆಲೆ ಏರಿಳಿತ ಕಾಣುವುದೇಕೆ?

Published 14 ಜನವರಿ 2024, 21:40 IST
Last Updated 14 ಜನವರಿ 2024, 21:40 IST
ಅಕ್ಷರ ಗಾತ್ರ

ಷೇರುಪೇಟೆಯಲ್ಲಿ ಷೇರುಗಳ ಬೆಲೆ ಏರಿಳಿತ ಕಾಣುವುದು ಸರ್ವೇ ಸಾಮಾನ್ಯ ಸಂಗತಿ. ಇಂದು ₹100 ಇದ್ದ ಕಂಪನಿಯೊಂದರ ಷೇರಿನ ಬೆಲೆ ನಾಳೆ ₹120 ಆಗಿಬಿಡುತ್ತದೆ ಅಥವಾ ₹90ಕ್ಕೆ ಕುಸಿಯುತ್ತದೆ. ಅಸಲಿಗೆ ಷೇರುಗಳ ಬೆಲೆ ಧುತ್ತೆಂದು ಮೇಲೆ ಹೋಗುವುದು, ದಿಢೀರ್ ಕುಸಿತ ಕಾಣುವುದೇಕೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಬನ್ನಿ ಷೇರುಗಳ ಬೆಲೆಯ ಹಗ್ಗಜಗ್ಗಾಟಕ್ಕೆ ಅಸಲಿ ಕಾರಣ ಏನು ತಿಳಿಯೋಣ.

ಷೇರುಪೇಟೆ ಬೇಡಿಕೆ ಮತ್ತು ಪೂರೈಕೆ ಲೆಕ್ಕಾಚಾರ:

ಟೊಮೆಟೊ ಬೆಲೆಯು ಕೆಲ ಸಂದರ್ಭಗಳಲ್ಲಿ ₹10 ಆಗಿರುತ್ತದೆ. ಆದರೆ, ಇನ್ನು ಕೆಲ ಸಂದರ್ಭಗಳಲ್ಲಿ ₹100ರ ಗಡಿ ದಾಟುತ್ತದೆ. ಇದಕ್ಕೆ ಕಾರಣಏನೆಂದರೆ ಬೇಡಿಕೆ ಮತ್ತು ಪೂರೈಕೆ ಲೆಕ್ಕಾಚಾರ. ಮಾರುಕಟ್ಟೆಯಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಾದರೆ ಬೆಲೆ ಜಾಸ್ತಿಯಾಗುತ್ತದೆ. ಹಾಗೆಯೇ ಟೊಮೆಟೊಗೆ ಬೇಡಿಕೆ ಕಡಿಮೆ ಇದ್ದು ಪೂರೈಕೆ ಹೆಚ್ಚಿದ್ದರೆ ಬೆಲೆ ಕಡಿಮೆಯಾಗುತ್ತದೆ.

ಇದೇ ಲೆಕ್ಕಾಚಾರದಲ್ಲಿ ಷೇರು ಮಾರುಕಟ್ಟೆಯೂ ಕೆಲಸ ಮಾಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಗ್ರಾಹಕರಾದರೆ ವಿವಿಧ ಕಂಪನಿಗಳ ಷೇರುಗಳು ಉತ್ಪನ್ನಗಳ ಸ್ಥಾನ ಪಡೆಯುತ್ತವೆ. ನಿರ್ದಿಷ್ಟ ಷೇರು ಒಂದಕ್ಕೆ ಬೇಡಿಕೆ ಜಾಸ್ತಿ ಇದ್ದು, ಆ ಷೇರಿನ ಪೂರೈಕೆ ಕಡಿಮೆ ಇದ್ದರೆ ಅದರ ಬೆಲೆ ಹೆಚ್ಚಾಗುತ್ತದೆ. ಬೇಡಿಕೆ ಕಡಿಮೆ ಇದ್ದು ಪೂರೈಕೆ ಜಾಸ್ತಿ ಇದ್ದರೆ ಷೇರಿನ ಬೆಲೆ ತಗ್ಗುತ್ತದೆ. ಹಲವು ಅಂಶಗಳು ಷೇರಿನ ಬೇಡಿಕೆ ಮತ್ತು ಪೂರೈಕೆಯನ್ನು ನಿರ್ಧರಿಸುತ್ತವೆ.

1. ಕಂಪನಿಗೆ ಸಂಬಂಧಿಸಿದ ಅಂಶಗಳು:

ನಿರ್ದಿಷ್ಟ ಕಂಪನಿ ಯಾವ ರೀತಿ ಬೆಳವಣಿಗೆ ಸಾಧಿಸಿದೆ ಎನ್ನುವುದು ಆ ಷೇರಿನ ಬೇಡಿಕೆಯನ್ನು ನಿರ್ಧರಿಸುತ್ತದ. ಉದಾಹರಣೆಗೆ ಕಂಪನಿಯೊಂದರ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು ಆ ಕಂಪನಿ ಉತ್ತಮ ಬೆಳವಣಿಗೆಯ ಜೊತೆ ಲಾಭಾಂಶ ಗಳಿಸುತ್ತಿದ್ದರೆ ಷೇರಿನ ಬೆಲೆ ಸಹಜವಾಗಿ ಹೆಚ್ಚಾಗುತ್ತದೆ. ಕಂಪನಿಯ ಬೆಳವಣಿಗೆಯಲ್ಲಿ ಹಿನ್ನಡೆಯಾದರೆ, ನಿರ್ವಹಣಾ ವೆಚ್ಚ ಹೆಚ್ಚಾಗಿ ಲಾಭಾಂಶ ತಗ್ಗಿದರೆ ಷೇರಿನ ಬೆಲೆ ಇಳಿಕೆ ಕಾಣುತ್ತದೆ. ಹೀಗೆ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳು ಷೇರಿನ ಬೆಲೆ ನಿರ್ಧರಿಸುತ್ತವೆ.

2. ವಲಯ ಕೇಂದ್ರಿತ ಅಂಶಗಳು: ಷೇರು ಮಾರುಕಟ್ಟೆಯಲ್ಲಿ ಬ್ಯಾಂಕಿಂಗ್, ರಿಯಲ್ ಎಸ್ಟೇಟ್, ಮಾಧ್ಯಮ, ಫಾರ್ಮಾ, ಮಾಹಿತಿ ತಂತ್ರಜ್ಞಾನ, ಲೋಹ ಹೀಗೆ ಹಲವು ವಲಯಗಳಿರುತ್ತವೆ. ಈ ವಲಯಗಳ ಮಟ್ಟದಲ್ಲಿ ದೊಡ್ಡ ಬೆಳವಣಿಗೆಗಳು ನಡೆದರೆ ಷೇರಿನ ಬೆಲೆ ಮೇಲೆ ಅದು ಪರಿಣಾಮ ಉಂಟು ಮಾಡುತ್ತದೆ. ಉದಾಹರಣೆಗೆ 2020ರ ಕೋವಿಡ್ ಸಮಯದಲ್ಲಿ ಫಾರ್ಮಾ ವಲಯದ ಷೇರುಗಳು ಭಾರೀ ಜಿಗಿತ ಕಂಡವು. ಭಾರತ್ ಸ್ಟೇಜ್ 6 ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದಾಗ ವಾಹನ ಉತ್ಪಾದನಾ ಕಂಪನಿಗಳ ಷೇರುಗಳು ಕುಸಿತ ದಾಖಲಿಸಿದವು. ಹೀಗೆ ದೊಡ್ಡಮಟ್ಟದ ವಲಯ ಕೇಂದ್ರಿತ ನಿರ್ಧಾರಗಳು ಷೇರಿನ ಬೆಲೆ ಮೇಲೆ ನಕಾರಾತ್ಮಕ ಮತ್ತು ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತವೆ.

3. ಮಾರುಕಟ್ಟೆ ಚಕ್ರಗಳು (ಮಾರ್ಕೆಟ್ ಸೈಕಲ್ಸ್): ಜಾಗತಿಕ ಮಾರುಕಟ್ಟೆಗಳಲ್ಲಿ ಉತ್ತಮ ಪ್ರಗತಿಯಿದ್ದು ಸಕಾರಾತ್ಮಕತೆ ಕಂಡುಬಂದಾಗ ಷೇರುಪೇಟೆಯಲ್ಲಿ ಗೂಳಿ ಓಟ ಶುರುವಾಗಿ ಸೂಚ್ಯಂಕಗಳು ಏರುಗತಿಯಲ್ಲಿ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಉತ್ತಮ ಕಂಪನಿಗಳ ಷೇರಿನ ಬೆಲೆಯೂ ಗಣನೀಯ ಏರಿಕೆ ಕಾಣುತ್ತದೆ. ಆದರೆ, ಆರ್ಥಿಕ ಹಿನ್ನಡೆಯಾಗಿದ್ದು ಒಟ್ಟಾರೆ ಪ್ರಗತಿ ಕುಂಠಿತಗೊಂಡರೆ ಮಾರುಕಟ್ಟೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಿ ಕರಡಿ ಹಿಡಿತದ ಕಾರಣಕ್ಕಾಗಿ ಸೂಚ್ಯಂಕಗಳು ಕುಸಿತ ಕಾಣುತ್ತವೆ. ಇಂತಹ ಸಂದರ್ಭಗಳಲ್ಲಿ ಉತ್ತಮ ಕಂಪನಿಗಳ ಷೇರುಗಳು ಸಹಿತ ಕುಸಿತಕ್ಕೆ ಒಳಗಾಗುತ್ತವೆ. ಮಾರುಕಟ್ಟೆ ಬಗ್ಗೆ ಒಟ್ಟಾರೆ ಯಾವ ಮನಸ್ಥಿತಿ ಇದೆ ಎನ್ನುವುದು ಸಹ ಷೇರಿನ ಬೆಲೆಯ ಏರಿಳಿತಕ್ಕೆ ಕಾರಣವಾಗುತ್ತದೆ.

4. ಕಂಪನಿಗೆ ಸಂಬಂಧಿಸಿದ ಸುದ್ದಿಗಳು:
ನಿರ್ದಿಷ್ಟ ಕಂಪನಿಯ ಕಾರ್ಯವೈಖರಿ ಬಗ್ಗೆ ಸಕಾರಾತ್ಮಕ ಅಥವಾ ನಕಾರಾತ್ಮಕ  ಸುದ್ದಿಗಳು ಬಿತ್ತರಗೊಂಡರೆ ಅದು ಷೇರಿನ ಬೆಲೆ ಏರಿಕೆ ಅಥವಾ ಇಳಿಕೆಗೆ ಕಾರಣವಾಗುತ್ತದೆ. ಉದಾಹರಣೆಗೆ ಯಾವುದೋ ಕಂಪನಿಗೆ ಸರ್ಕಾರ ತೆರಿಗೆ ನೋಟಿಸ್ ಕೊಟ್ಟಿದೆ ಅಂತಾದರೆ ಆ ಕಂಪನಿಯ ಷೇರಿನ ಬೆಲೆ ದಿಢೀರ್ ಕುಸಿತ ಕಾಣುತ್ತದೆ. ಯಾವುದೋ ದೊಡ್ಡ ಕಂಪನಿ ಬೆಳವಣಿಗೆ ದೃಷ್ಟಿಯಿಂದ 

ಮತ್ತೊಂದು ಸಣ್ಣ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎನ್ನುವ ಸುದ್ದಿ ಬಂದಾಗ ಆ ಕಂಪನಿಯ ಷೇರಿನ ಬೆಲೆ ಹೆಚ್ಚಾಗುತ್ತದೆ. ಹೀಗೆ ಯಾವುದೇ ಕಂಪನಿಯ ಷೇರಿನ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ಸುದ್ದಿಗಳು ಬೆಲೆ ಏರಿಳಿತಕ್ಕೆ ದಾರಿ ಮಾಡಿಕೊಡುತ್ತವೆ.

5. ಸ್ಥೂಲ ಅರ್ಥಶಾಸ್ತ್ರದ ಅಂಶಗಳು:
2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿತು. ಆಗ 17,000 ಅಂಶಗಳಲ್ಲಿದ್ದ ಸೆನ್ಸೆಕ್ಸ್ 8000 ಅಂಶಗಳಿಗೆ ಕುಸಿತ ಕಂಡಿತ್ತು. 2020ರಲ್ಲಿ ಕೋವಿಡ್ ಉಲ್ಬಣಗೊಂಡಾಗ 40,000 ಅಂಶಗಳಿಂದ 25,000 ಅಂಶಗಳಿಗೆ ಸೆನ್ಸೆಕ್ಸ್ ಇಳಿಕೆಯಾಗಿತ್ತು. ಹೀಗೆ ಸ್ಥೂಲ ಅರ್ಥಶಾಸ್ತ್ರದ ಅಂಶಗಳು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತವೆ. ದೇಶದ ಹಣದುಬ್ಬರ ಪ್ರಮಾಣ, ಜಿಡಿಪಿ, ಬಡ್ಡಿದರ, ಉತ್ಪಾದನಾ ಬೆಳವಣಿಗೆ, ಅಂತರರಾಷ್ಟ್ರೀಯ ವಿದ್ಯಮಾನಗಳು ಮಾರುಕಟ್ಟೆಯ ಗತಿಯನ್ನು ನಿರ್ಧರಿಸುತ್ತವೆ.

ದಾಖಲೆ ಮಟ್ಟದ ಏರಿಕೆ ಕಂಡ ಷೇರುಪೇಟೆ

ಜನವರಿ 12ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ದಾಖಲೆ ಮಟ್ಟದ ಏರಿಕೆ ಕಂಡಿವೆ. 72,568 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.75ರಷ್ಟು ಗಳಿಸಿಕೊಂಡಿದೆ. 21,894 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 0.84ರಷ್ಟು ಜಿಗಿದಿದೆ. ಈ ಹಣಕಾಸು ವರ್ಷದ ಕೊನೆಯಲ್ಲಿ ಬಡ್ಡಿದರ ಇಳಿಕೆಯಾಗಲಿದೆ ಎಂಬ ಮುನ್ಸೂಚನೆ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸ್ಥಿರತೆ ಕಾರಣದಿಂದ ಷೇರುಪೇಟೆ ಪುಟಿದೆದ್ದಿದೆ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 4.5, ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 4.3, ಬಿಎಸ್ಇ ಎನರ್ಜಿ, ಅನಿಲ ಹಾಗೂ ತೈಲ ಸೂಚ್ಯಂಕ ಮತ್ತು ವಾಹನ ಸೂಚ್ಯಂಕ ತಲಾ ಶೇ 2ರಷ್ಟು ಗಳಿಸಿಕೊಂಡಿವೆ. ಬಿಎಸ್ಇ ಎಫ್ಎಂಸಿಜಿ ಸೂಚ್ಯಂಕ ಶೇ 1.7ರಷ್ಟು ಕುಸಿತ ಕಂಡಿದ್ದರೆ ಬ್ಯಾಂಕ್ ಸೂಚ್ಯಂಕ ಶೇ 0.9ರಷ್ಟು ಇಳಿಕೆ ಕಂಡಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,901.27 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹6,858.47 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಹೀರೊ ಮೋಟೋ ಕಾರ್ಪ್, ನೈಕಾ, ಮ್ಯಾನ್‌ಕೈಂಡ್ ಫಾರ್ಮಾ, ಎಚ್ ಸಿಎಲ್ ಟೆಕ್ನಾಲಜೀಸ್, ಡಿಎಲ್ಎಫ್, ಇನ್ಫೊಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಗಳಿಕೆ ಕಂಡಿವೆ. ಬಂಧನ್ ಬ್ಯಾಂಕ್, ಎಸ್ಆರ್‌ಎಫ್, ಗೋದ್ರೇಜ್ ಕನ್ಸ್ಯೂಮರ್ ಪ್ರಾಡೆಕ್ಟ್ಸ್,ನೆಸ್ಟ್ಲೆ ಇಂಡಿಯಾ ಡಿವೀಸ್ ಲ್ಯಾಬ್ಸ್ ಮತ್ತು ಡಾಬರ್ ಇಂಡಿಯಾ ಕುಸಿತ ಕಂಡಿವೆ.

ಮುನ್ನೋಟ: ಏಂಜಲ್ ಒನ್ , ಜಿಯೋ ಫೈನಾನ್ಶಿಯಲ್ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ನೆಟ್‌ವರ್ಕ್‌ 18, ಪಾಲಿಕ್ಯಾಬ್, ಇಂಡಸ್ ಇಂಡ್ ಬ್ಯಾಂಕ್, ಇಂಡಿಯಾ ಮಾರ್ಟ್, ರಿಲಯನ್ಸ್ ಇಂಡಸ್ಟ್ರೀಸ್, ಜೆಕೆ ಸಿಮೆಂಟ್, ಐಸಿಐಸಿಐ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸೇರಿದಂತೆ ಪ್ರಮುಖ ಕಂಪನಿಗಳು ತ್ರೈಮಾಸಿಕ ಸಾಧನೆ ವರದಿ ಪ್ರಕಟಿಸಲಿವೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು, ಮುಂಬರುವ ಬಜೆಟ್ ಮೇಲಿನ ನಿರೀಕ್ಷೆಗಳು ಸೇರಿ ಹಲವು ಅಂಶಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಚಾರ್ಟರ್ಡ್ ಅಕೌಂಟೆಂಟ್ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT