ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳ ಮಾರುಕಟ್ಟೆ: ನಿವೃತ್ತಿ ಜೀವನಕ್ಕೆ ₹5 ಕೋಟಿ ಗಳಿಕೆ ಹೇಗೆ?

Published 3 ಜೂನ್ 2024, 0:17 IST
Last Updated 3 ಜೂನ್ 2024, 0:17 IST
ಅಕ್ಷರ ಗಾತ್ರ

ನಿವೃತ್ತಿ ಜೀವನಕ್ಕೆ ₹5 ಕೋಟಿ ಗಳಿಸುವುದು ಹೇಗೆ?

ಹೀಗೆ ಕೇಳಿದ ತಕ್ಷಣ ಇದು ಸಾಧ್ಯವೇ ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ತಿಂಗಳಿಗೆ ₹7,698 ಹೂಡಿಕೆ ಮಾಡುವ ಮೂಲಕ ನಿವೃತ್ತಿ ಬದುಕಿಗೆ ಇಷ್ಟು ಕೋಟಿಯನ್ನು ಗಳಿಸಬಹುದು. ಇಷ್ಟು ಹಣ ಸಂಪಾದಿಸಲು ಯಾವಾಗ ಹೂಡಿಕೆ ಆರಂಭಿಸಬೇಕು? ಎಲ್ಲಿ ಹೂಡಿಕೆ ಮಾಡಬೇಕು? ಎಷ್ಟು ಸಮಯ ಹೂಡಿಕೆ ಮಾಡಬೇಕು? ಬನ್ನಿ ಎಲ್ಲವನ್ನೂ ತಿಳಿಯೋಣ.

ನಿವೃತ್ತಿಗೆ ಯಾವಾಗ ಹೂಡಿಕೆ ಆರಂಭಿಸಬೇಕು?:

ನಿವೃತ್ತಿ ಜೀವನಕ್ಕೆ ಸಾಕಷ್ಟು ಸಮಯವಿದೆ ಎಂದು ತಿಳಿದು ಬಹುತೇಕರು ಹೂಡಿಕೆ ಮಾಡುವುದನ್ನು ತಡ ಮಾಡುತ್ತಾರೆ. ಆದರೆ, ನಿಮಗೆ ಗೊತ್ತಿರಲಿ; ನಿವೃತ್ತಿ ಬದುಕಿಗೆ ದೊಡ್ಡ ಮೊತ್ತ ಪೇರಿಸಬೇಕಾದರೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹೂಡಿಕೆ ಆರಂಭಿಸಬೇಕು.

ಯಾಕೆಂದರೆ ಹೂಡಿಕೆ ಮಾಡಿದ ದುಡ್ಡು ಬೆಳವಣಿಗೆಯಾಗಲು ಸಮಯ ಬೇಕಾಗುತ್ತದೆ. ಬೇಗ ಹೂಡಿಕೆ ಆರಂಭಿಸಿದಾಗ ಹೂಡಿಕೆಯ ಮೊತ್ತ ಕಡಿಮೆ ಇದ್ದರೂ ದೀರ್ಘಾವಧಿಯಲ್ಲಿ ಅದು ದೊಡ್ಡ ಗಳಿಕೆಯಾಗಿ ರೂಪುಗೊಳ್ಳುತ್ತದೆ.

ಇಲ್ಲಿ ಹೂಡಿಕೆ ಹಣದ ಬೆಳವಣಿಗೆಗೆ ಹೆಚ್ಚು ಸಮಯ ದಕ್ಕುತ್ತದೆ. ಆದರೆ, ತಡವಾಗಿ ಹೂಡಿಕೆ ಆರಂಭಿಸಿದಾಗ ದುಡ್ಡಿನ ಬೆಳವಣಿಗೆಗೆ ಹೆಚ್ಚು ಸಮಯಾವಕಾಶ ಸಿಗುವುದಿಲ್ಲ. ಹಾಗಾಗಿ, ನಿಮ್ಮ ಹೂಡಿಕೆಯು ಗುರಿ ಮುಟ್ಟಲು ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಾಗುತ್ತದೆ.

ಉದಾಹರಣೆ 1: 40 ವರ್ಷದ ವ್ಯಕ್ತಿಯೊಬ್ಬ ನಿವೃತ್ತಿ ಜೀವನಕ್ಕೆ ₹5 ಕೋಟಿ ಪೇರಿಸಬೇಕು ಎಂದುಕೊಳ್ಳೊಣ. ಆತನಿಗೆ ಇನ್ನು 20 ವರ್ಷ ಮಾತ್ರ ಸೇವಾವಧಿ ಇದೆ ಎಂದುಕೊಳ್ಳಿ. ಇಂತಹ ಸಂದರ್ಭದಲ್ಲಿ ಇಷ್ಟು ಹಣ ಗಳಿಸಲು ಆತ ಪ್ರತಿ ತಿಂಗಳು ₹50,043 ಹೂಡಿಕೆ ಮಾಡಬೇಕಾಗುತ್ತದೆ. ಇಲ್ಲಿ ಹೂಡಿಕೆ ಹಣ ಬೆಳವಣಿಗೆ ಸಾಧಿಸಲು ಹೆಚ್ಚು ಸಮಯ ಸಿಗದ ಕಾರಣ ಹೂಡಿಕೆ ಮಾಡುವಾಗ ದೊಡ್ಡ ಮೊತ್ತವನ್ನೇ ಹಾಕಬೇಕಾಗುತ್ತದೆ.

ಉದಾಹರಣೆ 2: 35 ವರ್ಷದ ವ್ಯಕ್ತಿಯೊಬ್ಬ ನಿವೃತ್ತಿ ಜೀವನಕ್ಕೆ ₹5 ಕೋಟಿ ಪೇರಿಸಬೇಕು ಎಂದುಕೊಳ್ಳೊಣ. ಆತನಿಗೆ ಇನ್ನು 25 ವರ್ಷ ಸೇವಾವಧಿ ಇದೆ ಎಂದು ಭಾವಿಸೋಣ. ಇಂತಹ ಸನ್ನಿವೇಶದಲ್ಲಿ ಆತ ಪ್ರತಿ ತಿಂಗಳು ₹26,349 ಹೂಡಿಕೆ ಮಾಡಬೇಕಾಗುತ್ತದೆ.

ಮೊದಲನೇ ಉದಾಹರಣೆಗೆ ಹೋಲಿಸಿದಾಗ ಇಲ್ಲಿ ಹೂಡಿಕೆ ಮಾಡಬೇಕಾದ ಮಾಸಿಕ ಮೊತ್ತ ಹೆಚ್ಚು ಕಡಿಮೆ ಅರ್ಧದಷ್ಟು ಕಡಿಮೆಯಾಗುತ್ತದೆ. ಹೂಡಿಕೆ ಮಾಡಿದ ಹಣದ ಬೆಳವಣಿಗೆಗೆ ಕೊಂಚ ಜಾಸ್ತಿ ಸಮಯ ಸಿಗುವ ಕಾರಣ ನಿಗದಿತ ಮೊತ್ತ ಗಳಿಸಲು ಸ್ವಲ್ಪ ಕಡಿಮೆ ಮೊತ್ತದ ಹೂಡಿಕೆ ಸಾಕಾಗುತ್ತದೆ.

ಉದಾಹರಣೆ 3: 25 ವರ್ಷದ ವ್ಯಕ್ತಿಯೊಬ್ಬ ನಿವೃತ್ತಿ ಜೀವನಕ್ಕೆ ₹5 ಕೋಟಿ ಪೇರಿಸಬೇಕು ಎಂದುಕೊಳ್ಳೊಣ. ಆತನಿಗೆ ಇನ್ನು 35 ವರ್ಷ ಸೇವಾವಧಿ ಇದೆ ಎಂದು ಭಾವಿಸೋಣ. ಇಂತಹ ಸಂದರ್ಭದಲ್ಲಿ ಆತ ಪ್ರತಿ ತಿಂಗಳು ₹7,698 ಹೂಡಿಕೆ ಮಾಡಬೇಕಾಗುತ್ತದೆ. ಮೊದಲನೇ ಮತ್ತು ಎರಡನೇ ಉದಾಹರಣೆಯನ್ನು ಪರಿಗಣಿಸಿದಾಗ ಇಲ್ಲಿ ಹೂಡಿಕೆ ಮಾಡಿದ ಹಣದ ಬೆಳವಣಿಗೆಗೆ 35 ವರ್ಷಗಳ ಸಮಯ ಸಿಗುತ್ತದೆ. ಹಾಗಾಗಿ, ಇಲ್ಲಿ ಕಡಿಮೆ ಮೊತ್ತ ಅಂದರೆ ಪ್ರತಿ ತಿಂಗಳು ₹7,698 ಹೂಡಿಕೆ ಮಾಡಿದರೆ ಸಾಕು ₹5 ಕೋಟಿ ಗಳಿಕೆ ಸಾಧ್ಯವಿದೆ.

ಎಲ್ಲಿ ಹೂಡಿಕೆ ಮಾಡಬೇಕು?:

ನಿವೃತ್ತಿ ಜೀವನಕ್ಕೆ ಹೂಡಿಕೆ ಮಾಡುವಾಗ ಹಣದುಬ್ಬರವನ್ನು (ಬೆಲೆ ಏರಿಕೆ) ಮೀರಿ ಹೆಚ್ಚು ಲಾಭ ತಂದುಕೊಡುವ ಹೂಡಿಕೆಗಳನ್ನು ಪರಿಗಣಿಸಬೇಕು. ನಿಶ್ಚಿತ ಠೇವಣಿ, ಅಂಚೆ ಕಚೇರಿ ಎಫ್‌ಡಿ, ಅಂಚೆ ಕಚೇರಿ ಆರ್‌ಡಿ, ಮನಿ ಬ್ಯಾಕ್ ಪಾಲಿಸಿ, ಎಂಡೋಮೆಂಟ್ ಪಾಲಿಸಿಗಳಿಂದ ಹೆಚ್ಚಿನ ಲಾಭವಿಲ್ಲ.

ನಿವೃತ್ತಿಗಾಗಿ ಹೂಡಿಕೆ ಮಾಡುವಾಗ ಎನ್‌ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ಪರಿಗಣಿಸಬಹುದು. ಕೇಂದ್ರ ಸರ್ಕಾರ ಆರಂಭಿಸಿರುವ ಈ ಯೋಜನೆಯಡಿ 18 ವರ್ಷ ಮೇಲ್ಪಟ್ಟವರು ಮತ್ತು 70 ವರ್ಷದ ಒಳಗಿನವರು ಹೂಡಿಕೆ ಮಾಡಬಹುದು. ಎನ್‌ಪಿಎಸ್‌ನಲ್ಲಿ ದೀರ್ಘಾವಧಿಯಲ್ಲಿ ಶೇ 10ರಿಂದ ಶೇ 12ರಷ್ಟು ಗಳಿಕೆ ನಿರೀಕ್ಷಿಸಬಹುದು.

ಉಳಿದಂತೆ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಕೂಡ ನಿವೃತ್ತಿ ಜೀವನಕ್ಕೆ ದೊಡ್ಡ ಮೊತ್ತ ಪೇರಿಸಲು ಉತ್ತಮ ಆಯ್ಕೆಯಾಗಿವೆ. ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಶೇ 12ರಿಂದ ಶೇ 15ರ ವರೆಗೆ ಲಾಭಾಂಶ ನಿರೀಕ್ಷೆ ಮಾಡಬಹುದು.

ಇನ್ನು ಹೂಡಿಕೆ ಮೇಲೆ ಹೆಚ್ಚು ರಿಸ್ಕ್ ಬೇಡ ಎನ್ನುವವರು ಇಪಿಎಫ್ (ಕಾರ್ಮಿಕರ ಭವಿಷ್ಯ ನಿಧಿ) ಮತ್ತು ಪಿಪಿಎಫ್ (ಸಾರ್ವಜನಿಕ ಭವಿಷ್ಯ ನಿಧಿ) ಹೂಡಿಕೆಯನ್ನು ಗಣನೆಗೆ ತೆಗೆದುಕೊಳ್ಳಬಹುದು. ಎರಡೂ ಹೂಡಿಕೆಗಳ ಬಡ್ಡಿದರವನ್ನು ಕೇಂದ್ರ ಸರ್ಕಾರ ಕಾಲಕಾಲಕ್ಕೆ ನಿಗದಿ ಮಾಡುತ್ತದೆ. ಸದ್ಯದ ಇಪಿಎಫ್ ಬಡ್ಡಿದರ ಶೇ 8.25ರಷ್ಟಿದೆ. ಪಿಪಿಎಫ್ ಬಡ್ಡಿದರ ಸದ್ಯ ಶೇ 7.1ರಷ್ಟಿದೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್) 

ಎಷ್ಟು ಹೂಡಿಕೆ ಮಾಡಬೇಕು? ಉದಾಹರಣೆ;ಹೂಡಿಕೆದಾರನ ವಯಸ್ಸು;ನಿವೃತ್ತಿಗೆ ಬಾಕಿ ಇರುವ ವರ್ಷಗಳು;ಮಾಸಿಕ ಹೂಡಿಕೆ ಮೊತ್ತಉದಾಹರಣೆ 1;40 ವರ್ಷ;20 ವರ್ಷ;₹50,043ಉದಾಹರಣೆ 2;35 ವರ್ಷ;25 ವರ್ಷ;₹26,349ಉದಾಹರಣೆ 3;25 ವರ್ಷ;35 ವರ್ಷ;₹7,698ಗಮನಿಸಿ: ಶೇ 12ರ ಗಳಿಕೆ ಅಂದಾಜಿನಲ್ಲಿ ಮೇಲಿನ ಲೆಕ್ಕಾಚಾರ ಮಾಡಲಾಗಿದೆ.
ಅನಿಶ್ಚಿತತೆ ಆಟ; ಕುಸಿದ ಸೂಚ್ಯಂಕಗಳು
ಸತತ ಎರಡು ವಾರಗಳಿಂದ ಗಳಿಕೆಯ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಮೇ 31ಕ್ಕೆ ಕೊನೆಗೊಂಡ ವಾರದಲ್ಲಿ ಕುಸಿತ ಕಂಡಿವೆ. 73961 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 1.92ರಷ್ಟು ಇಳಿಕೆಯಾಗಿದೆ. 22530 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 1.86ರಷ್ಟು ಇಳಿಕೆ ದಾಖಲಿಸಿದೆ. ಕಡಿಮೆ ಮತದಾನ ಪ್ರಮಾಣದಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಏನಾಗಬಹುದು ಎಂಬ ಆತಂಕ ಅಮೆರಿಕದಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಾಗಬಹುದೆಂಬ ನಿರೀಕ್ಷೆ ಸುರಕ್ಷಿತ ಹೂಡಿಕೆಗಳಿಗೆ ಹಣ ವರ್ಗಾವಣೆ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣವಾಗಿವೆ. ನಿಫ್ಟಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ ಶೇ 1.53ರಷ್ಟು ಇಳಿಕೆ ಕಂಡಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಹೊರತುಪಡಿಸಿದರೆ ಉಳಿದೆಲ್ಲಾ ಸೂಚ್ಯಂಕಗಳು ಇಳಿಕೆಯಾಗಿವೆ. ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 4.25 ನಿಫ್ಟಿ ಎನರ್ಜಿ ಸೂಚ್ಯಂಕ ಶೇ 3.31 ಅನಿಲ ಮತ್ತು ತೈಲ ಸೂಚ್ಯಂಕ ಶೇ 3.06 ಎಫ್‌ಎಂಸಿಜಿ ಸೂಚ್ಯಂಕ ಶೇ 2.42 ಲೋಹ ಸೂಚ್ಯಂಕ ಶೇ 2.06 ವಾಹನ ಸೂಚ್ಯಂಕ ಶೇ 1.97 ಫಾರ್ಮಾ ಸೂಚ್ಯಂಕ ಶೇ 1.69 ಮತ್ತು ಮಾಧ್ಯಮ ಸೂಚ್ಯಂಕ ಶೇ 1.4ರಷ್ಟು ಕುಸಿದಿವೆ. ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಡಿವೀಸ್ ಲ್ಯಾಬ್ಸ್ ಶೇ 4.42 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 2.4 ಬಜಾಜ್ ಆಟೊ ಶೇ 1.67 ಅದಾನಿ ಪೋರ್ಟ್ಸ್ ಶೇ 1.55 ಇಂಡಸ್‌ ಇಂಡ್ ಬ್ಯಾಂಕ್ ಶೇ 1.24 ಎಲ್‌ ಆ್ಯಂಡ್‌ ಟಿ ಶೇ 1.14 ಎಚ್‌‌ಡಿಎಫ್‌ಸಿ ಬ್ಯಾಂಕ್ ಶೇ 0.94 ಅದಾನಿ ಎಂಟರ್‌ಪ್ರೈಸಸ್ ಶೇ 0.79 ಮತ್ತು ಎಸ್‌ಬಿಐ ಶೇ 0.18ರಷ್ಟು ಗಳಿಸಿಕೊಂಡಿವೆ. ಟೆಕ್ ಮಹೀಂದ್ರ ಶೇ 6.76 ಒಎನ್‌ಜಿಸಿ ಶೇ 6.59 ವಿಪ್ರೊ ಶೇ 5.56 ಗ್ರಾಸಿಮ್ ಇಂಡಸ್ಟ್ರೀಸ್ ಶೇ 4.95 ಟೈಟನ್ ಶೇ 4.75 ಟಿಸಿಎಸ್ ಶೇ 4.71 ಮಾರುತಿ ಸುಜುಕಿ ಶೇ 4.6 ಮತ್ತು ಬಜಾಜ್ ಫಿನ್‌ಸರ್ವ್ ಶೇ 4.55ರಷ್ಟು ಕುಸಿತ ದಾಖಲಿಸಿವೆ. ಮುನ್ನೋಟ: ಲೋಕಸಭಾ ಚುನಾವಣೆ ಫಲಿತಾಂಶ ಷೇರುಪೇಟೆಯ ಮೇಲೆ ನೇರ ಪರಿಣಾಮ ಬೀರಲಿದೆ. ಉಳಿದಂತೆ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಜಾಗತಿಕ ವಿದ್ಯಮಾನಗಳಿಗೆ ಸೂಚ್ಯಂಕಗಳು ಪ್ರತಿಕ್ರಿಯಿಸಲಿವೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT