ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ: ಕ್ರೆಡಿಟ್ ಸ್ಕೋರ್ ಸುಧಾರಣೆ ಹೇಗೆ?

Last Updated 13 ಮಾರ್ಚ್ 2022, 21:41 IST
ಅಕ್ಷರ ಗಾತ್ರ

ಕಡಿಮೆ ಬಡ್ಡಿ ದರಕ್ಕೆ, ಸುಲಭದಲ್ಲಿ ಸಾಲ ಸಿಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಸುಲಭವಾಗಿ ಸಾಲ ಸಿಗಲು ಇರುವ ಮಾನದಂಡ ಕ್ರೆಡಿಟ್ ಸ್ಕೋರ್. ನಿಮ್ಮ ಹಣಕಾಸಿನ ವ್ಯವಹಾರದ ಶಿಸ್ತು ಅಥವಾ ಅಶಿಸ್ತಿಗೆ ಕ್ರೆಡಿಟ್ ಸ್ಕೋರ್ ಕನ್ನಡಿ ಇದ್ದಂತೆ.

ಬ್ಯಾಂಕುಗಳಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸಿದ ಕೂಡಲೇ ಅಧಿಕಾರಿಗಳು ಕ್ರೆಡಿಟ್ ಸ್ಕೋರ್ ಕೇಳುತ್ತಾರೆ. ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರಷ್ಟೇ ಸಾಲ ಸಿಗುತ್ತದೆ. 300ರಿಂದ 900ರವರೆಗೆ ಕ್ರೆಡಿಟ್ ಸ್ಕೋರ್ ಅಂಕಗಳನ್ನು ನೀಡಲಾಗುತ್ತದೆ. 750ಕ್ಕಿಂತ ಹೆಚ್ಚು ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಕ್ರೆಡಿಟ್ ರೇಟಿಂಗ್ ಬ್ಯೂರೊಗಳಾದ ಕ್ರೆಡಿಟ್ ಇನ್ಫಾರ್ಮೇಷನ್ ಬ್ಯೂರೋ ಆಫ್ ಇಂಡಿಯಾ ಲಿ. (CIBIL), ಈಕ್ವಿಫ್ಯಾಕ್ಸ್, ಎಕ್ಸ್‌ಪೀರಿಯಾನ್ ಸಂಸ್ಥೆಗಳು ಬ್ಯಾಂಕುಗಳಿಂದ ಮಾಹಿತಿ ಪಡೆದು, ಸಾಲಗಾರರ ಕ್ರೆಡಿಟ್ ಸ್ಕೋರ್ ನೀಡುತ್ತವೆ. ಬನ್ನಿ, ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳು ಮತ್ತು ಕ್ರೆಡಿಟ್ ಸ್ಕೋರ್ ಸುಧಾರಣೆ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ.

ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳು
1) ಹಲವು ಬ್ಯಾಂಕ್‌ಗಳಲ್ಲಿ ಸಾಲಕ್ಕೆ ಅರ್ಜಿ:
ಸಾಲ ಬಯಸಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರವಾಗುತ್ತದೆ ಎಂದು ಭಾವಿಸಿ. ಆಗ ನೀವು ಏಜೆಂಟ್ ಮೂಲಕ ಐದಾರು ಕಡೆ ಸಾಲಕ್ಕೆ ಅರ್ಜಿ ಹಾಕುತ್ತೀರಿ. ಎಲ್ಲ ಕಡೆ ಅರ್ಜಿ ತಿರಸ್ಕೃತವಾದಾಗ ಕ್ರೆಡಿಟ್ ಸ್ಕೋರ್ ತಗ್ಗುತ್ತದೆ. ಸಾಲಕ್ಕೆ ಒಂದು ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿದಾಗ ಅದು ತಿರಸ್ಕೃತಗೊಂಡರೆ ಅದರ ಹಿಂದಿರುವ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ. ಸರಿಯಾದ ಕಾರಣ ಅರಿತ ನಂತರವಷ್ಟೇ ಮತ್ತೊಂದು ಅರ್ಜಿ ಹಾಕುವ ಬಗ್ಗೆ ಚಿಂತನೆ ಮಾಡಿ. ಪದೇ ಪದೇ ಸಾಲಕ್ಕೆ ಅರ್ಜಿ ಹಾಕಿದರೆ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.

2) ಸಾಲ ಮರುಪಾವತಿ ಇತಿಹಾಸ: ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡದಿದ್ದರೆ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ. ಸಾಲ ಮರುಪಾವತಿ ಸರಿಯಾಗಿ ಮಾಡುತ್ತಿದ್ದೀರಾ ಎನ್ನುವುದನ್ನು ಸಾಲ ಮರುಪಾವತಿ ಇತಿಹಾಸ ಹೇಳುತ್ತದೆ. ಸಾಲ ಮರುಪಾವತಿ ಮಾಡದೆ, ಸಾಲ ‘ಸೆಟಲ್ಮೆಂಟ್’ ಮಾಡಿಕೊಂಡರೂ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಬೇರೆಯವರ ಸಾಲಕ್ಕೆ ಖಾತರಿದಾರರಾಗಿ ಅವರು ಸಾಲ ಮರುಪಾವತಿ ಮಾಡಿದಿದ್ದರೆ ಅದೂ ಕೂಡ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಕ್ರೆಡಿಟ್ ರಿಪೋರ್ಟ್‌ನಲ್ಲಿ ತಪ್ಪು ಮಾಹಿತಿಯಿದ್ದು ಅದನ್ನು ಸರಿಪಡಿಸಿಕೊಳ್ಳದಿದ್ದರೂ ಕ್ರೆಡಿಟ್ ಸ್ಕೋರ್‌ಗೆ ತೊಂದರೆಯಾಗುತ್ತದೆ.

3) ಕ್ರೆಡಿಟ್ ಮಿಕ್ಸ್: ಸಾಲಗಳಲ್ಲಿ ಅಡಮಾನ ಸಹಿತ (ಸುರಕ್ಷಿತ) ಸಾಲಗಳು ಮತ್ತು ಅಡಮಾನ ರಹಿತ (ಸುರಕ್ಷಿತವಲ್ಲದ) ಸಾಲಗಳಿರುತ್ತವೆ. ಉದಾಹರಣೆಗೆ ಗೃಹ ಮತ್ತು ವಾಹನ ಸಾಲಗಳು ಅಡಮಾನ ಸಾಲಗಳ ವ್ಯಾಪ್ತಿಯಲ್ಲಿ ಬರುತ್ತವೆ. ಅದೇ ರೀತಿ, ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಅಡಮಾನ ರಹಿತ ಸಾಲಗಳಾಗುತ್ತವೆ. ಈ ಎರಡು ಬಗೆಯ ಸಾಲಗಳ ನಡುವೆ ಸಮತೋಲ ಇರಬೇಕು. ಅಡಮಾನ ರಹಿತ ಸಾಲಗಳನ್ನು ಹೆಚ್ಚಿಗೆ ಪಡೆದರೆ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮವಾಗುತ್ತದೆ.

4) ಸಾಲ ಮಿತಿ ಬಳಕೆ ಅನುಪಾತ: ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದು, ಅದು ₹ 5 ಲಕ್ಷ ಮಿತಿ ಹೊಂದಿದೆ ಎಂದು ಭಾವಿಸಿ. ನೀವು ಸುಮಾರು ₹ 2 ಲಕ್ಷ ತನಕ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದರೆ ಸಮಸ್ಯೆಯಿಲ್ಲ. ಆದರೆ ಅದಕ್ಕಿಂತ ಹೆಚ್ಚು ಹಣವನ್ನು ಕ್ರೆಡಿಟ್ ಕಾರ್ಡ್ ಮೂಲಕ ಬಳಕೆ ಮಾಡಿದರೆ ಸಮಸ್ಯೆಯಾಗುತ್ತದೆ. ಕ್ರೆಡಿಟ್ ಕಾರ್ಡ್ ಅತಿಯಾದ ಬಳಕೆಯಿಂದ ಸಾಲದ ಹೊರೆ ಹೆಚ್ಚುತ್ತದೆ. ಹೀಗಾದಾಗ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ.

ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು ಸೂತ್ರಗಳು
1) ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿಸಿ
2) ಅಗತ್ಯವಿರುವುದಕ್ಕೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಿ
3) ಸಾಲ ಪಡೆಯುವಾಗ ಅಡಮಾನ ಸಹಿತ ಸಾಲ ಮತ್ತು ಅಡಮಾನ ರಹಿತ ಸಾಲಗಳ ಮಿಶ್ರಣವಿರಲಿ
4) ಹೆಚ್ಚುವರಿ ಸಾಲದ ಅಗತ್ಯವಿದ್ದಾಗ ಎಚ್ಚರಿಕೆಯಿಂದ ಅದಕ್ಕೆ ಅರ್ಜಿ ಸಲ್ಲಿಸಿ
5) ಸಾಲಕ್ಕೆ ಖಾತರಿದಾರರಾಗಿದ್ದರೆ ಸಾಲ ಪಡೆದವರು ಮರುಪಾವತಿ ಮಾಡುವಂತೆ ನೋಡಿಕೊಳ್ಳಿ
6) ಕ್ರೆಡಿಟ್ ಸ್ಕೋರ್ ವರದಿಯನ್ನು ಆಗಾಗ ಪರಿಶೀಲನೆ ಮಾಡುವುದನ್ನು ಮರೆಯಬೇಡಿ
7) ಕ್ರೆಡಿಟ್ ರಿಪೋರ್ಟ್‌ನಲ್ಲಿ ತಪ್ಪುಗಳಿದ್ದರೆ ದೂರು ನೀಡಿ ಸರಿಪಡಿಸಿಕೊಳ್ಳಿ

ಕೊಂಚ ಚೇತರಿಕೆ ಕಂಡ ಷೇರುಪೇಟೆ
ಸತತ ನಾಲ್ಕು ವಾರಗಳಿಂದ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ಸೂಚ್ಯಂಕಗಳು ಕೊಂಚ ಚೇತರಿಕೆ ಕಂಡಿವೆ. ಮಾರ್ಚ್ 11ರಂದು ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸುಧಾರಿಸಿಕೊಂಡಿವೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 2.20ರಷ್ಟು ಹೆಚ್ಚಳ ಕಂಡಿದ್ದು , 55,550 ಅಂಶಗಳಲ್ಲಿ ವಹಿವಾಟು ಮುಗಿಸಿದೆ. 16,630 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ 50 ಸೂಚ್ಯಂಕ ಶೇ 2.37ರಷ್ಟು ಗಳಿಕೆ ಕಂಡಿದೆ.

ರಷ್ಯಾ–ಉಕ್ರೇನ್ ಯುದ್ಧ, ತೈಲ ಬೆಲೆ ಹೆಚ್ಚಳ, ಬೆಲೆ ಏರಿಕೆ, ಅಮೆರಿಕದ ಫೆಡರಲ್ ಬ್ಯಾಂಕ್‌ನಿಂದ ಬಡ್ಡಿ ದರ ಹೆಚ್ಚಳ ಸೇರಿದಂತೆ ಹಲವು ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಿದ್ದರೂ ಸೂಚ್ಯಂಕಗಳು ಸಮಾಧಾನಕರ ಬೆಳವಣಿಗೆ ಸಾಧಿಸಿವೆ.

ವಲಯವಾರು ಪ್ರಗತಿ ನೋಡಿದಾಗ ವಾರದ ಅವಧಿಯಲ್ಲಿ ಎಲ್ಲ ಪ್ರಮುಖ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡುಬಂದಿವೆ. ನಿಫ್ಟಿ ಫಾರ್ಮಾ ಸೂಚ್ಯಂಕ ಶೇ 6.3ರಷ್ಟು ಜಿಗಿದಿದೆ. ಬ್ಯಾಂಕ್ ಸೂಚ್ಯಂಕ ಶೇ 0.3ರಷ್ಟು ಹೆಚ್ಚಳವಾಗಿದೆ. ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 4ರಷ್ಟು ಚೇತರಿಸಿಕೊಂಡಿದೆ. ಆದರೆ ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 20,000 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಸುಮಾರು 38ಕ್ಕೂ ಹೆಚ್ಚು ಕಂಪನಿಗಳ ಷೇರುಗಳು ಗಳಿಕೆ ಕಂಡಿವೆ. ಸಿಪ್ಲಾ ಶೇ 12ರಷ್ಟು, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಶೇ 10ರಷ್ಟು, ಸನ್ ಫಾರ್ಮಾ ಶೇ 9ರಷ್ಟು, ಏಷ್ಯನ್ ಪೇಂಟ್ಸ್ ಶೇ 7ರಷ್ಟು, ಟಾಟಾ ಕನ್ಸ್ಯೂಮರ್ ಶೇ 6.94ರಷ್ಟು, ಒಎನ್‌ಜಿಸಿ ಶೇ 6.5ರಷ್ಟು, ಏರ್‌ಟೆಲ್ ಶೇ 6.29ರಷ್ಟು, ಗ್ರಾಸಿಮ್ ಶೇ 6ರಷ್ಟು ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 5.98ರಷ್ಟು ಹೆಚ್ಚಳ ಕಂಡಿವೆ. ಬ್ರಿಟಾನಿಯಾ ಶೇ 5ರಷ್ಟು, ಎಕ್ಸಿಸ್ ಬ್ಯಾಂಕ್ ಶೇ 3.5ರಷ್ಟು ಮತ್ತು ಐಷರ್ ಮೋಟರ್ಸ್ ಶೇ 2ರಷ್ಟು ಕುಸಿದಿವೆ.

ಮುನ್ನೋಟ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಯಾವ ತಿರುವು ಪಡೆಯಲಿದೆ ಎನ್ನುವುದು ಮಾರುಕಟ್ಟೆ ಮೇಲೆ ಪರಿಣಾಮ ಬೀರಲಿದೆ. ಷೇರು ಸೂಚ್ಯಂಕಗಳು ಸದ್ಯ ಸಕಾರಾತ್ಮಕವಾಗಿ ಕಂಡುಬಂದಿದ್ದರೂ ಮತ್ತೊಂದು ಕುಸಿತ ಉಂಟಾಗದು ಎನ್ನಲು ಸಾಧ್ಯವಿಲ್ಲ. ಇದಲ್ಲದೆ ಜಾಗತಿಕ ಮಾರುಕಟ್ಟೆಗಳು ಯಾವ ರೀತಿ ವರ್ತಿಸಲಿವೆ ಎನ್ನುವುದು ಕೂಡ ಮುಖ್ಯವಾಗಲಿದೆ‌.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT