ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧೇಶ್ವರರ ಸಂಕ್ರಮಣದ ಜಾನುವಾರು ಜಾತ್ರೆಗೆ ತೆರೆ: ₹6 ಕೋಟಿ ವಹಿವಾಟು ಅಧಿಕೃತ..!

ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರು
Last Updated 24 ಜನವರಿ 2019, 19:30 IST
ಅಕ್ಷರ ಗಾತ್ರ

ವಿಜಯಪುರ:ಶತಮಾನದ ಐತಿಹ್ಯ ಹೊಂದಿರುವ ವಿಜಯಪುರದ ಆರಾಧ್ಯದೈವ ಸಿದ್ಧೇಶ್ವರರ ಸಂಕ್ರಮಣದ ಜಾನುವಾರು ಜಾತ್ರೆಗೆ ತೆರೆ ಬಿದ್ದಿದೆ. ವರ್ಷದಿಂದ ವರ್ಷಕ್ಕೆ ಈ ಜಾತ್ರೆಯ ವೈಭೋಗ ಕ್ಷೀಣಿಸುತ್ತಿದೆ.

ನಗರದ ಹೊರ ವಲಯದಲ್ಲಿನ ತೊರವಿ ಬಳಿ ಒಂದು ವಾರಕ್ಕೂ ಹೆಚ್ಚಿನ ಅವಧಿ ಜಾನುವಾರು ಜಾತ್ರೆ ನಡೆದಿತ್ತು. ನಿಗದಿತ ದಿನಕ್ಕೂ ಎರಡು ದಿನ ಮುಂಚೆಯೇ ಈ ಬಾರಿ ಜಾತ್ರೆ ಸಮಾರೋಪಗೊಂಡಿದೆ.

ಹಿಂದಿನ ವರ್ಷ ಜಮಾಯಿಸಿದ್ದ ರಾಸುಗಳ ಸಂಖ್ಯೆಗಿಂತ, ಈ ಬಾರಿ ಜಾನುವಾರು ಕಡಿಮೆ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರೂ; ಯಥಾಪ್ರಕಾರ ಎಪಿಎಂಸಿಯ 110 ಎಕರೆ ಪ್ರದೇಶವೂ ಸಾಲದೆ, ಮಗ್ಗುಲಲ್ಲೇ ಇರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲೂ ಜಮಾಯಿಸಿದ್ದವು.

ಜಾತ್ರೆಯ ಮೇಲುಸ್ತುವಾರಿ ಹೊಣೆ ಹೊತ್ತಿದ್ದ ಎಪಿಎಂಸಿ ಅಧಿಕಾರಿಗಳ ಅಧಿಕೃತ ಮಾಹಿತಿಯಂತೆ 9000ದಿಂದ 9,500 ಜಾನುವಾರುಗಳು ಜಾತ್ರೆಗೆ ಬಂದಿದ್ದು, ಇದರಲ್ಲಿ 1713 ಜಾನುವಾರುಗಳು ಮಾರಾಟವಾಗಿದ್ದು, ₹ 6 ಕೋಟಿ ವಹಿವಾಟು ನಡೆದಿದೆ ಎಂಬುದು ಖಚಿತಪಟ್ಟಿದೆ.

‘ಇದು ಅಧಿಕೃತ ಲೆಕ್ಕ. ಜಾನುವಾರು ಮಾರಾಟಕ್ಕೆ ಸಂಬಂಧಿಸಿದ್ದು ಮಾತ್ರ. ಅದೂ ದೂರದ ಭಾಗಗಳ ರೈತರು ಜಾನುವಾರುಗಳನ್ನು ಸಾಗಿಸುವಾಗ ಪೊಲೀಸರು ವಾಹನ ತಡೆದು ಪರಿಶೀಲಿಸಲಿಸುವ ಸಂದರ್ಭ, ತೋರಿಸಲು ಬೇಕಾದ ಅಧಿಕೃತ ರಸೀದಿ ಪಡೆಯಲು ಎಪಿಎಂಸಿ ಅಧಿಕಾರಿಗಳ ಬಳಿ ನೋಂದಾಯಿಸಿರುವ ಮಾಹಿತಿಯಷ್ಟೇ.

ಜಿಲ್ಲೆ ಸೇರಿದಂತೆ ನೆರೆ ಜಿಲ್ಲೆಯ ರೈತರು ಸಾಕಷ್ಟು ಪ್ರಮಾಣದಲ್ಲಿ ಜಾನುವಾರು ಖರೀದಿ ನಡೆಸಿದರೂ ಅಧಿಕೃತವಾಗಿ ನೋಂದಾಯಿಸಲ್ಲ. ಇವರೆಲ್ಲ ಸ್ಥಳೀಯರೇ ಆದ್ದರಿಂದ ಪೊಲೀಸರ ಕಿರಿಕಿರಿಯೂ ಹೆಚ್ಚಿಗೆ ಇರಲ್ಲ. ಸಬೂಬು ಹೇಳಿ ಹೋಗಬಹುದು ಎಂದು ಖರೀದಿ–ಮಾರಾಟ ರಸೀದಿ ಪಡೆಯದೆ ಹೋದವರು ಹಲವರಿದ್ದಾರೆ.

ಇಂಥವರ ಸಂಖ್ಯೆ ಅಧಿಕೃತ ಮಾಹಿತಿ ನೀಡಿದವರಿಗಿಂತ ಹೆಚ್ಚಿರಬಹುದು. ಇದನ್ನೂ ಪರಿಗಣಿಸಿದರೆ ಮಾರಾಟವಾದ ಜಾನುವಾರುಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಅವುಗಳ ಮೌಲ್ಯವೂ ಕೋಟಿಗಳ ಲೆಕ್ಕದಲ್ಲಿ ಏರುತ್ತದೆ’ ಎಂದು ವಿಜಯಪುರ ಎಪಿಎಂಸಿ ಕಾರ್ಯದರ್ಶಿ ವಿ.ರಮೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರಸಕ್ತ ಸಾಲಿನ ಜಾನುವಾರು ಜಾತ್ರೆಗೆ ನೆರೆ ಹೊರೆಯ ಜಿಲ್ಲೆಗಳು ಸೇರಿದಂತೆ, ಮಹಾರಾಷ್ಟ್ರದ ಗಡಿಭಾಗದ ಜಿಲ್ಲೆಗಳನ್ನೂ ಒಳಗೊಂಡಂತೆ ಅಂದಾಜು 9000ದಿಂದ 9500ಕ್ಕೂ ಹೆಚ್ಚು ಜಾನುವಾರುಗಳು ಬಂದಿದ್ದವು. ವಾರದ ಅವಧಿ ಎಪಿಎಂಸಿ ನೇತೃತ್ವದಲ್ಲಿ ಜಾತ್ರಾ ಸಮಿತಿ ವತಿಯಿಂದ ಜಾನುವಾರುಗಳಿಗೆ ನೀರು, ರಾತ್ರಿ ವೇಳೆ ರೈತರಿಗೆ ಬೆಳಕಿನ ಜತೆ ಮನೋರಂಜನಾ ವ್ಯವಸ್ಥೆ, ಚಿಕಿತ್ಸೆ, ರೈತರಿಗೆ ಮಾಹಿತಿ, ಕೃಷಿ ಉಪಕರಣಗಳ ಮಳಿಗೆಗಳು ಸೇರಿದಂತೆ ಇತರೆ ಅಗತ್ಯವಿದ್ದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು’ ಎಂದು ಅವರು ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಭಾರಿ ಇಳಿಮುಖ

ಜಾನುವಾರು ಜಾತ್ರೆಯ ವೈಭವ ವರ್ಷದಿಂದ ವರ್ಷಕ್ಕೆ ಇಳಿಮುಖಗೊಳ್ಳುತ್ತಿದೆ. ವಹಿವಾಟಿನ ಮೊತ್ತವೂ ಪಾತಾಳಮುಖಿಯಾಗುತ್ತಿದೆ ಎನ್ನುವುದನ್ನು ವಿಜಯಪುರ ಎಪಿಎಂಸಿಯ ಅಂಕಿ–ಅಂಶಗಳು ದೃಢೀಕರಿಸುತ್ತವೆ.

2015ರಲ್ಲಿ 35,000ಕ್ಕೂ ಹೆಚ್ಚು ಜಾನುವಾರು ಜಾತ್ರೆಯಲ್ಲಿ ಜಮಾಯಿಸಿದ್ದವು. 3182 ಜಾನುವಾರುಗಳು ಆಗ ಮಾರಾಟವಾಗಿದ್ದು, ₹ 11.13 ಕೋಟಿ ವಹಿವಾಟು ನಡೆದಿತ್ತು. 2017ರಲ್ಲಿ 23,000ಕ್ಕೂ ಹೆಚ್ಚು ಜಾನುವಾರು ಜಮಾಯಿಸಿದ್ದು, 2212 ಮಾರಾಟವಾಗಿದ್ದವು. ವಹಿವಾಟು ₹ 8.18 ಕೋಟಿಯಷ್ಟು ನಡೆದಿತ್ತು.

2018ರಲ್ಲಿ 16,000 ಜಾನುವಾರು ಜಮಾಯಿಸಿದ್ದು, 2013 ಮಾರಾಟವಾಗಿದ್ದವು. ವಹಿವಾಟು ₹ 8 ಕೋಟಿಯಷ್ಟು ಮಾತ್ರ ದಾಖಲಾಗಿದೆ. ಈ ಬಾರಿ 9,500 ಜಾನುವಾರು ಜಾತ್ರೆಗೆ ಬಂದಿದ್ದು, 1713 ಮಾರಾಟವಾಗಿವೆ. ₹ 6 ಕೋಟಿ ವಹಿವಾಟು ನಡೆದಿದೆ.

ಈ ಅಂಕಿ ಅಂಶಗಳ ಅವಲೋಕನ ನಡೆಸಿದರೆ, ಜಾನುವಾರು ಜಾತ್ರೆಗೆ ರಾಸು ಜಮಾಯಿಸುವುದು, ಮಾರಾಟವಾಗುವುದು, ವಹಿವಾಟು ನಡೆಯುವುದು ವರ್ಷದಿಂದ ವರ್ಷಕ್ಕೆ ತೀವ್ರ ಗತಿಯಲ್ಲಿ ಕುಸಿತಗೊಳ್ಳುತ್ತಿರುವುದು ಗಮನಕ್ಕೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT