ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಸಾವಿರ ಉದ್ಯೋಗ ಸೃಷ್ಟಿ ಗುರಿ: ಸಿ.ಎಂ ಸಿದ್ದರಾಮಯ್ಯ

Published 29 ಜನವರಿ 2024, 16:04 IST
Last Updated 29 ಜನವರಿ 2024, 16:04 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ 2028ರ ವೇಳೆಗೆ ಅನಿಮೇಷನ್‌, ವಿಷುಯಲ್‌ ಎಫೆಕ್ಟ್ಸ್‌, ಗೇಮ್ಸ್‌ ಮತ್ತು ಕಾಮಿಕ್ಸ್‌ (ಎವಿಜಿಸಿ) ವಲಯದಲ್ಲಿ ಸರ್ಕಾರವು 30 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸೋಮವಾರ ರಾಜ್ಯ ಎಲೆಕ್ಟ್ರಾನಿಕ್ಸ್‌, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಎಬಿಎಐಯಿಂದ ಆಯೋಜಿಸಿರುವ ಮೂರು ದಿನಗಳ ಗೇಮ್ಸ್‌, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಸಮ್ಮೇಳನ–2024ಕ್ಕೆ (ಜಿಎಎಫ್ಎಕ್ಸ್‌) ಚಾಲನೆ ನೀಡಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ 2012ರಲ್ಲಿಯೇ ಎವಿಜಿಸಿ ನೀತಿ ರೂಪಿಸಲಾಗಿದೆ. ಜಾಗತಿಕ ಮಟ್ಟದಲ್ಲಿ ಎವಿಜಿಸಿ–ಎಕ್ಸ್‌ಆರ್‌ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಅಗ್ರಸ್ಥಾನಕ್ಕೇರಿಸುವುದೇ ಸರ್ಕಾರದ ಗುರಿ. ಈ ವಲಯವು ಕೌಶಲ ಬೇಡುತ್ತದೆ.ಇದಕ್ಕೆ ಪೂರಕ ವಾತಾವರಣ ಸೃಷ್ಟಿಗೆ ಸರ್ಕಾರ ಕ್ರಮವಹಿಸಲಿದೆ ಎಂದು ತಿಳಿಸಿದರು.

ಎವಿಜಿಸಿ–ಎಕ್ಸ್‌ಆರ್‌ ತಂತ್ರಜ್ಞಾನದಲ್ಲಿ ಕರ್ನಾಟಕದಲ್ಲಿ ಜಾಗತಿಕವಾಗಿ ಮುಂಚೂಣಿ ಸ್ಥಾನಕ್ಕೇರಿವುದು ಸರ್ಕಾರದ ಗುರಿಯಾಗಿದೆ ಎಂದ ಅವರು, ರಾಜ್ಯದಲ್ಲಿ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ದೇಶದ ಶೇ 20ರಷ್ಟಿದೆ ಎಂದರು.

ಪ್ರತಿಭಾವಂತರಿಗೆ ಉತ್ತಮ ವೇದಿಕೆ ಒದಗಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ನಾಲ್ಕು ವರ್ಷದೊಳಗೆ ಈ ವಲಯದ ರಫ್ತನ್ನು ಶೇ 80ಕ್ಕೆ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದೇಶದಲ್ಲಿ ಎರಡನೇ ಅತಿದೊಡ್ಡ ವಲಯವಾಗಿ ಡಿಜಿಟಲ್‌ ಮಾಧ್ಯಮ ಬೆಳೆಯುತ್ತಿದೆ. 2021ರಲ್ಲಿ ಈ ವಲಯದಲ್ಲಿ ₹56 ಲಕ್ಷ ಕೋಟಿ ವಹಿವಾಟು ನಡೆದಿದೆ ಎಂದು ಮಾಹಿತಿ ನೀಡಿದರು.

ಸರ್ಕಾರವು 2023ರಲ್ಲಿ ಜೈವಿಕ ತಂತ್ರಜ್ಞಾನ, ಅನಿಮೇಷನ್‌, ವಿಷುವಲ್‌ ಎಫೆಕ್ಟ್‌, ಗೇಮಿಂಗ್‌ ಕ್ಷೇತ್ರದ ವಿಸ್ತರಣೆಗೆ ಸಂಬಂಧಿಸಿದಂತೆ ಕರಡು ನೀತಿ ರೂಪಿಸಿದೆ. ಐಟಿ–ವ್ಯಾ‍ಪಾರ ನಿರ್ವಹಣೆ ಉದ್ಯಮದಲ್ಲಿ ಕರ್ನಾಟಕವು ಜಾಗತಿಕವಾಗಿ ಮುಂಚೂಣಿ ಸ್ಥಾನಕ್ಕೇರಲು ಈ ನೀತಿ ನೆರವಾಗಲಿದೆ ಎಂದು ಆಶಿಸಿದರು.

ಎವಿಜಿಸಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಕೌಶಲ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಈ ಉದ್ಯಮದ ಸ್ಟಾರ್ಟ್‌ಅಪ್‌ಗಳಿಗೂ ಉತ್ತೇಜನ ಎಂದು ಹೇಳಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಎವಿಜಿಸಿ ತಂತ್ರಜ್ಞಾನದಿಂದ ಸಿನಿಮಾ ಕ್ಷೇತ್ರಕ್ಕೆ ಹೆಚ್ಚು ಅನುಕೂಲವಾಗುತ್ತಿದೆ. ನವೋದ್ಯಮ ಉದ್ಯಮಗಳ ಸ್ಥಾಪನೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಈ ಉದ್ಯಮದಲ್ಲಿ ಹೂಡಿಕೆಗೆ ಅಗತ್ಯವಿರುವ ನೆರವು ಮತ್ತು ಆರ್ಥಿಕ ನೆರವು ಕಲ್ಪಿಸಲು ಸರ್ಕಾರ ಸಿದ್ಧವಿದೆ’ ಎಂದು ತಿಳಿಸಿದರು.

ಕಿಯೋನಿಕ್ಸ್‌ ಅಧ್ಯಕ್ಷ ಶರತ್ ಬಚ್ಚೇಗೌಡ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕರೂಪ್‌ ಕೌರ್‌, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿತುಲ್‌ ಕುಮಾರ್‌, ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಕ್ರಿಸ್‌ ಗೋಪಾಲಕೃಷ್ಣ, ಇನ್‌ವೆಸ್ಟ್‌ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ನಿವೃತಿ ರಾಯ್‌ ಹಾಜರಿದ್ದರು.

ನವೋದ್ಯಮ ಉದ್ಯಮಗಳ ಸ್ಥಾಪನೆಯಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಎವಿಜಿಸಿ ತಂತ್ರಜ್ಞಾನದಿಂದ ಸಿನಿಮಾ ಕ್ಷೇತ್ರಕ್ಕೆ ಹೆಚ್ಚು ಅನುಕೂಲವಾಗುತ್ತಿದೆ.
–ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT