ಸೋಮವಾರ, ಮಾರ್ಚ್ 27, 2023
28 °C

ಅರ್ಥವ್ಯವಸ್ಥೆಯಲ್ಲಿ ಹೆಚ್ಚಿದ ಸಂಘಟಿತ ವಲಯದ ಪಾಲು

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಡಿಜಿಟಲೀಕರಣಕ್ಕೆ ನೀಡಿದ ಆದ್ಯತೆ ಹಾಗೂ ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಗಿಗ್ ಅರ್ಥ ವ್ಯವಸ್ಥೆ ಪ್ರವರ್ಧಮಾನಕ್ಕೆ ಬಂದಿದ್ದರ ಪರಿಣಾಮವಾಗಿ ದೇಶದ ಒಟ್ಟು ಅರ್ಥ ವ್ಯವಸ್ಥೆಯು ಹೆಚ್ಚಿನ ಪ್ರಮಾಣದಲ್ಲಿ ಸಂಘಟಿತವಾಗಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ಅರ್ಥಶಾಸ್ತ್ರಜ್ಞರು ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

ದೇಶದ ಅರ್ಥ ವ್ಯವಸ್ಥೆಯಲ್ಲಿ (ಒಟ್ಟು ಜಿಡಿಪಿಯಲ್ಲಿ) ಈಗ ಅಸಂಘಟಿತ ವಲಯದ ಪಾಲು ಶೇಕಡ 15ರಿಂದ ಶೇ 20ರಷ್ಟು ಮಾತ್ರ ಇದ್ದಿರಬಹುದು. ಇದು 2018ರಲ್ಲಿ ಶೇ 52.4ರಷ್ಟು ಪಾಲು ಹೊಂದಿತ್ತು ಎಂದು ಎಸ್‌ಬಿಐನ ಮುಖ್ಯ ಅರ್ಥಶಾಸ್ತ್ರಜ್ಞ ಸೌಮ್ಯಕಾಂತಿ ಘೋಷ್ ಅವರು ಸಿದ್ಧಪಡಿಸಿರುವ ವರದಿಯು ಹೇಳಿದೆ.

2016ರ ನೋಟು ರದ್ದತಿ ತೀರ್ಮಾನದ ನಂತರದಲ್ಲಿನ ಹಲವು ಕ್ರಮಗಳು ಅರ್ಥವ್ಯವಸ್ಥೆಯ ಡಿಜಿಟಲೀಕರಣಕ್ಕೆ ವೇಗ ನೀಡಿವೆ. ಸಾಂಕ್ರಾಮಿಕವು ಗಿಗ್‌ ಅರ್ಥವ್ಯವಸ್ಥೆ ಪ್ರವರ್ಧಮಾನಕ್ಕೆ ಬರುವಂತೆ ಮಾಡಿದ್ದು ವ್ಯವಸ್ಥೆಯಲ್ಲಿನ ಹೆಚ್ಚೆಚ್ಚು ವಹಿವಾಟುಗಳು ಲೆಕ್ಕಕ್ಕೆ ಸಿಗುವಂತೆ ಮಾಡಿದೆ. ಬೇರೆ ದೇಶಗಳಿಗಿಂತ ಹೆಚ್ಚಿನ ವೇಗದಲ್ಲಿ ಇದು ಭಾರತದಲ್ಲಿ ಆಗಿದೆ ಎಂದು ಘೋಷ್ ಅವರು ವರದಿಯಲ್ಲಿ ಹೇಳಿದ್ದಾರೆ.

ಈಚೆಗೆ ಚಾಲನೆ ಪಡೆದ ಇ–ಶ್ರಮ್ ಪೋರ್ಟಲ್‌ ಸೇರಿದಂತೆ ಹಲವು ಕ್ರಮಗಳ ಪರಿಣಾಮವಾಗಿ ಕಳೆದ ಕೆಲವು ವರ್ಷಗಳಲ್ಲಿ ಕನಿಷ್ಠ ₹ 13 ಲಕ್ಷ ಕೋಟಿಯು ಸಂಘಟಿತ ಅರ್ಥ ವ್ಯವಸ್ಥೆಯ ಅಡಿಯಲ್ಲಿ ಬಂದಿವೆ ಎಂದು ವರದಿ ಹೇಳಿದೆ.

ಸಾಂಕ್ರಾಮಿಕದ ನಂತರದಲ್ಲಿ ಸಂಘಟಿತ ಆರ್ಥಿಕ ವಲಯವು ಶೇ 10ರಷ್ಟು ವಿಸ್ತರಣೆ ಕಂಡಿದೆ. ನೌಕರರ ಭವಿಷ್ಯನಿಧಿ ಸಂಘಟನೆಯು (ಇಪಿಎಫ್‌ಒ) ನೀಡುವ ಅಂಕಿ–ಅಂಶವನ್ನು ಉಲ್ಲೇಖಿಸಿರುವ ವರದಿಯು, 2017–18ರಿಂದ ಈ ವರ್ಷದ ಜುಲೈವರೆಗೆ ಒಟ್ಟು 36.6 ಲಕ್ಷ ಉದ್ಯೋಗಗಳು ಸಂಘಟಿತ ವಲಯಕ್ಕೆ ಬಂದಿವೆ ಎಂದು ಹೇಳಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿರುವ ‍ಪರಿಣಾಮವಾಗಿ ಕೃಷಿ ವಲಯದಲ್ಲಿನ ಶೇಕಡ 20ರಿಂದ ಶೇ 25ರಷ್ಟು ವಹಿವಾಟುಗಳು ಸಂಘಟಿತ ವಲಯಕ್ಕೆ ಬಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು